ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಾ ರಖಾ ‘ಫತ್ವಾ’ ರೆಹಮಾನ್‌!

Last Updated 26 ಸೆಪ್ಟೆಂಬರ್ 2015, 19:35 IST
ಅಕ್ಷರ ಗಾತ್ರ

ಗಾಯಕ, ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ, ರೆಕಾರ್ಡ್‌ಗಳ ನಿರ್ಮಾಪಕ, ಸಂಗೀತ ಸಂಯೋಜಕ, ಸಂಗೀತ ನಿರ್ವಾಹಕ ಅಲ್ಲಾ ರಖಾ ರೆಹಮಾನ್ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಫತ್ವಾ ಹೊರಡಿಸಿದವರು ಮುಂಬೈಯ ಹಾಜಿ ಅಲಿ ದರ್ಗಾ ಮಸೀದಿಯ ಇಮಾಮ್‌– ಮುಫ್ತಿ ಮೊಹಮ್ಮದುಲ್‌ ಅಖ್ತರುಲ್‌ ಖಾದ್ರಿ. ಫತ್ವಾ ಹೊರಡಿಸಬೇಕೆಂದು ಒತ್ತಡ ಹೇರಿದವರು ಮುಂಬೈಯ ರಝಾ ಅಕಾಡೆಮಿಯ ಸಯೀದ್ ನೂರಿ. ಅವರ ಪ್ರಕಾರ, ರೆಹಮಾನ್‌ ಮಾಡಿರುವ ತಪ್ಪು ಏನೆಂದರೆ, ‘ಮುಹಮ್ಮದ್‌: ದಿ ಮೆಸೆಂಜರ್‌ ಆಫ್‌ ಗಾಡ್‌’ ಎಂಬ ಇಂಗ್ಲಿಷ್‌/ ಅರೆಬಿಕ್‌/ ಪರ್ಶಿಯನ್‌ ಸಿನಿಮಾಕ್ಕೆ ಸಂಗೀತ ನೀಡಿದ್ದು.

ಇರಾನಿನ ನಿರ್ದೇಶಕ ಮಾಜಿದ್‌ ಮಾಜಿದಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಇಸ್ಲಾಮಿನ ಪ್ರವಾದಿಯನ್ನು ಅವಹೇಳನ ಮಾಡಲಾಗಿದೆ ಎನ್ನುವುದು ಫತ್ವಾ ಹೊರಡಿಸಿದವರ ತೀರ್ಮಾನ. ಫತ್ವಾ ಎಂದರೆ ಏನು? ಅದನ್ನು ಯಾರು ಬೇಕಾದರೂ ಹೊರಡಿಸಬಹುದೆ?  ಬೇಕೆಂದಾಗಲೆಲ್ಲ  ಹೊರಡಿಸಬಹುದೆ? ಫತ್ವಾ ಅನುಸರಿಸುವವರು  ಯಾರು?  ಯಾರಾದರೊಬ್ಬ ಮುಫ್ತಿ ಫತ್ವಾ ಹೊರಡಿಸಿದರೆ ಅದನ್ನು ಎಲ್ಲ ಮುಸ್ಲಿಮರೂ ಅನುಸರಿಸಬೇಕೆ? ಬಹುತೇಕ ಸಂದರ್ಭಗಳಲ್ಲಿ ಈ ಪ್ರಶ್ನೆಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮೌಲ್ವಿ ಹೇಳಿದ್ದೆಲ್ಲವೂ ಫತ್ವಾ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ಹಾಗೆಯೇ ಮೌಲ್ವಿ ಹೇಳಿದ್ದನ್ನು ಎಲ್ಲ ಮುಸ್ಲಿಮರೂ ಅನುಸರಿಸುತ್ತಾರೆ ಎಂದು ಉಳಿದವರು ನಂಬುತ್ತಾರೆ.

ಫತ್ವಾ ಎಂದರೆ ಒಂದು ಧಾರ್ಮಿಕ ಆದೇಶ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿ ಇಸ್ಲಾಮ್‌ ಕರ್ಮಶಾಸ್ತ್ರ (ಫಿಖ್ಹ್‌) ಏನು ಹೇಳುತ್ತದೆ ಎನ್ನುವುದರ ಬಗ್ಗೆ ಅನುಮಾನ ಉಂಟಾದಾಗ, ಅದನ್ನು ಮುಫ್ತಿಯೊಬ್ಬರು ಖುರಾನ್‌ ಮತ್ತು ಹದೀಸ್‌ (ಪ್ರವಾದಿ ನಡವಳಿಕೆ) ಆಧಾರದಲ್ಲಿ ವ್ಯಾಖ್ಯಾನ ಮಾಡಬಹುದು. ಅದುವೇ ಫತ್ವಾ. ಫತ್ವಾವನ್ನು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹೊರಡಿಸಬಹುದೇ ಹೊರತು, ಒಬ್ಬ ವ್ಯಕ್ತಿಯ ವಿರುದ್ಧ ಹೊರಡಿಸುವಂತಿಲ್ಲ. ಒಬ್ಬ ಮುಫ್ತಿ ಹೊರಡಿಸಿದ ಫತ್ವಾದ ವಿರುದ್ಧ ಇನ್ನೊಬ್ಬ ಮುಫ್ತಿ ಇನ್ನೊಂದು ಫತ್ವಾ ಹೊರಡಿಸಬಹುದು. ಪ್ರತಿಯೊಬ್ಬ ಮುಫ್ತಿಗೂ ಅವರದ್ದೇ ಆದ ಮಸೀದಿಯ ವ್ಯಾಪ್ತಿ ಇದೆ.

ಆ ಮಸೀದಿಯ ಅನುಯಾಯಿಗಳು ಆ ಫತ್ವಾವನ್ನು ಅನುಸರಿಸಬಹುದು. ಇಲ್ಲ ಕೈಬಿಡಬಹುದು. ಯಾರಾದರೂ ಅದನ್ನು ಅನುಸರಿಸದಿದ್ದರೆ, ಅವರನ್ನು ಶಿಕ್ಷಿಸುವಂತಿಲ್ಲ. ಭಾರತದಂತಹ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಫತ್ವಾವನ್ನು ಪ್ರಶ್ನಿಸಿ ಕೋರ್ಟಿಗೂ ಹೋಗಬಹುದು. ಯಾವುದೇ ಫತ್ವಾ ಹೊರಡಿಸಿದ ಮುಫ್ತಿ ತೀರಿಹೋದರೆ ಆ ಫತ್ವಾ ಕೂಡಾ ತೀರಿಹೋಗುತ್ತದೆ. ಇದು ಫತ್ವಾ ಬಗ್ಗೆ ಇರುವ ಇಸ್ಲಾಮೀ ವ್ಯಾಖ್ಯಾನ. ಒಂದು ವಿಷಯ ಸ್ಪಷ್ಟ. ಮುಂಬೈಯ ಹಾಜಿ ಅಲಿ ದರ್ಗಾ ಮಸೀದಿಯ ಮುಫ್ತಿ ಫತ್ವಾ ಹೊರಡಿಸಿದರೆ, ಅದನ್ನು ಅದೇ ಮುಂಬೈಯ ಪಕ್ಕದ ಮಸೀದಿಯ ಜನರೂ ಅನುಸರಿಸಬೇಕೆಂದಿಲ್ಲ.

ಪರಿಸ್ಥಿತಿ ಹೀಗಿರುವಾಗ, ಚೆನ್ನೈ ಸಂಜಾತ, ದಿನ ಬೆಳಗಾದರೆ ಕೆಲಸದ ನಿಮಿತ್ತ ಮುಂಬೈ, ಲಂಡನ್‌, ನ್ಯೂಯಾರ್ಕ್, ಪ್ಯಾರಿಸ್‌ ಎಂದು ಓಡಾಡುತ್ತಿರುವ ಎ.ಆರ್‌. ರೆಹಮಾನ್‌ ಅವರಾದರೂ ಹೇಗೆ ಅನುಸರಿಸುವುದು? ಅಂದಹಾಗೆ, ಮುಂಬೈಯ ಈ ಮುಫ್ತಿ, ಈ ಚಿತ್ರದ ನಿರ್ಮಾಪಕರ ವಿರುದ್ಧವೂ ಫತ್ವಾ ಹೊರಡಿಸಿದ್ದಾರೆ. ತಮಾಷೆಯೆಂದರೆ, ಈ ಚಿತ್ರದ ನಿರ್ಮಾಣ ಮಾಡಿದ್ದು ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್ ಇರಾನ್‌ ಸ್ವಾಮ್ಯದ ಕಂಪೆನಿ! ಅಂದರೆ ಇರಾನ್‌ ಸರ್ಕಾರ. ಯಾವುದೋ ದೇಶದ ಸರ್ಕಾರದ ವಿರುದ್ಧವೇ ಮುಂಬೈಯ ಸಮುದ್ರದ ಮಧ್ಯೆ ಇರುವ ಸಣ್ಣ ಮಸೀದಿಯೊಂದರ ಮುಫ್ತಿ ಫತ್ವಾ ಹೊರಡಿಸುತ್ತಾರೆಂದರೆ, ಅವರು ನಿಜಕ್ಕೂ ಬಹಳ ‘ಪವರ್‌ಫುಲ್‌’ ಮೌಲ್ವಿಯೇ ಇರಬೇಕು!

ಒಂದು ಕಾಲದಲ್ಲಿ ಜಗತ್ತಿನ ಅತ್ಯಂತ ಕುಖ್ಯಾತ ಫತ್ವಾ ಹೊರಡಿಸಿದ್ದೇ ಇರಾನ್‌ ಸರ್ಕಾರ. ಅದು ಅಯಾತುಲ್ಲ ಖೊಮೇನಿ ಕಾಲದಲ್ಲಿ, ಲೇಖಕ ಸಲ್ಮಾನ್‌ ರಶ್ದಿ ವಿರುದ್ಧ. ಪ್ರವಾದಿಗೆ ಅವಹೇಳನ ಮಾಡಿದ ರಶ್ದಿ  ಅವರ ತಲೆ ತಂದರೆ ಇಂತಿಷ್ಟು ಬಹುಮಾನ ಕೊಡುತ್ತೇವೆ ಎಂದು ಖೊಮೇನಿ ಘೋಷಣೆ ಮಾಡಿದ. ರಶ್ದಿ ಅವರು ಬರೆದ ‘ಸಟಾನಿಕ್ ವರ್ಸಸ್’ ಕಾದಂಬರಿಯಲ್ಲಿ ಇಸ್ಲಾಮಿನ ಕೊನೆಯ ಪ್ರವಾದಿ ಮುಹಮ್ಮದರ ಬಗ್ಗೆ ಅವಹೇಳನ ಮಾಡಲಾಗಿದೆ ಎನ್ನುವುದು ಆಗಿನ ಫತ್ವಾಕ್ಕೆ ಕಾರಣವಾಗಿತ್ತು. ಒಂದು ದೇಶದ ಸರ್ಕಾರವೇ ಆ ಫತ್ವಾಕ್ಕೆ ಬೆಂಬಲವಾಗಿ ನಿಂತಿದ್ದರಿಂದ ಸಲ್ಮಾನ್‌ ರಶ್ದಿ ಇಂಗ್ಲೆಂಡಿನ ಸ್ಕಾಟ್ಲೆಂಟ್‌ಯಾರ್ಡ್‌ ಪೊಲೀಸರ ಬೆಂಗಾವಲಿನಲ್ಲಿ ಎಷ್ಟೋ ವರ್ಷಗಳ ಕಾಲ ತಲೆಮರೆಸಿಕೊಂಡು ಓಡಾಡಬೇಕಾಯಿತು.

ಆ ಬಳಿಕ ಯೂಪ್ರೆಟಿಸ್‌ – ಟೈಗ್ರಿಸ್‌ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಆದರೆ ಆ ಫತ್ವಾದ ಪರಿಣಾಮವಾಗಿ ಆ ಕಾದಂಬರಿಯನ್ನು ಹಲವು ದೇಶಗಳು ಮುಟ್ಟುಗೋಲು ಹಾಕಿಕೊಂಡವು. ಈಗಲೂ ಸಲ್ಮಾನ್‌ ರಶ್ದಿ ಕೆಲವು ದೇಶಗಳಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ. ಈಗ ರೆಹಮಾನ್‌ ವಿಷಯಕ್ಕೆ ಬರೋಣ. ರೆಹಮಾನ್ ಮೂಲ ಹೆಸರು ಎ.ಎಸ್‌. ದಿಲೀಪ್‌ ಕುಮಾರ್‌. ಅವರ ತಂದೆ ಆರ್‌.ಕೆ. ಶೇಖರ್‌, ತಾಯಿ ಕರೀಮಾ ಬೇಗಂ. ಸಣ್ಣ ವಯಸ್ಸಿನಲ್ಲೇ ತಂದೆ ತೀರಿಹೋದ ಬಳಿಕ ಅಮ್ಮನ ಆಶ್ರಯದಲ್ಲೇ ಬೆಳೆದಾತ ರೆಹಮಾನ್‌. ತನ್ನ 23ರ ಹರೆಯದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ಸೂಫಿಸಂ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ರೆಹಮಾನ್‌, ತನ್ನ ಧಾರ್ಮಿಕ ಒಲವಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಕಡಿಮೆಯೇ.

1995ರಲ್ಲಿ ಸಾಯಿರಾ ಬಾನು ಅವರನ್ನು ಮದುವೆಯಾದ ಅವರು, ಈಗ ಮೂರು ಮಕ್ಕಳ ತಂದೆ. ಖತೀಜಾ, ರಹೀಮಾ ಮತ್ತು ಮಗ ಅಮೀನ್‌. ರೆಹಮಾನ್‌ ಪತ್ನಿ ಮತ್ತು ಮಗ ಕೂಡಾ ಸಿನಿಮಾದಲ್ಲಿ ಹಾಡಿದ್ದಿದೆ. (ರೆಹಮಾನ್‌ ದೊಡ್ಡ ಅಕ್ಕ ರೀಹಾನಾ ಅವರ ಮಗ ಜಿ.ವಿ. ಪ್ರಕಾಶ್‌ ಕುಮಾರ್‌, ‘ಜೆಂಟಲ್‌ಮ್ಯಾನ್‌’ ತಮಿಳು ಚಿತ್ರಕ್ಕೆ ಹಾಡಿದ ‘ಚುಕುಬುಕು ರೈಲೇ’ ಹಾಡು ಅತ್ಯಂತ ಜನಪ್ರಿಯವಾಗಿತ್ತು). ರೆಹಮಾನ್‌ ವಿರುದ್ಧ ಫತ್ವಾ ನೀಡಲು ಕಾರಣವಾದ ಸಿನಿಮಾ ‘ಮುಹಮ್ಮದ್‌: ದಿ ಮೆಸೆಂಜರ್‌ ಆಫ್‌ ಗಾಡ್‌’ ನಿರ್ದೇಶನ ಮಾಡಿದ ಮಾಜಿದ್ ಮಾಜಿದಿ, ಜಗತ್ತು ಅತ್ಯಂತ ಬೆರಗುಗಣ್ಣಿನಿಂದ ನೋಡುತ್ತಿರುವ ಪ್ರತಿಭಾವಂತ ಸಿನಿಮಾ ನಿರ್ದೇಶಕ.

ವೈಯಕ್ತಿಕವಾಗಿ ಧರ್ಮಭೀರು. 2006ರಲ್ಲಿ ನಾಟ್‌ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಇವರ ‘ದಿ ವಿಲ್ಲೋ ಟ್ರೀ’ ಸಿನಿಮಾ ಪ್ರದರ್ಶನ ಕಾಣಬೇಕಿತ್ತು. ಆದರೆ ಆಗ ಪ್ರವಾದಿ ಮುಹಮ್ಮದರನ್ನು ಅವಹೇಳನ ಮಾಡಿದ ಕಾರ್ಟೂನ್‌ ವಿವಾದದ ಹಿನ್ನೆಲೆಯಲ್ಲಿ ಪ್ರತಿಭಟನೆಯಾಗಿ ಆ ಪ್ರದರ್ಶನದಿಂದ ತನ್ನ  ಸಿನಿಮಾವನ್ನು ಹಿಂತೆಗೆದುಕೊಂಡಾತ.  ಅವರ ಸಿನಿಮಾಗಳನ್ನು ಮುಗಿಬಿದ್ದು ನೋಡುವ ದೊಡ್ಡ ಪ್ರೇಕ್ಷಕವರ್ಗ ಜಗತ್ತಿನಾದ್ಯಂತ ಇದೆ. ಪ್ರವಾದಿ ಕುರಿತ ಈ ಸಿನಿಮಾಕ್ಕೆ ಅವರು ಏಳು ವರ್ಷಗಳಿಂದ ದುಡಿದಿದ್ದಾರೆ. ಇರಾನ್‌ ಸರ್ಕಾರ, ಸುಮಾರು 35 ದಶಲಕ್ಷ ಡಾಲರ್‌ ಹಣ ಸುರಿದಿದೆ. ಇರಾನ್‌ನಲ್ಲಿ ನಿರ್ಮಾಣಗೊಂಡ ಅತ್ಯಂತ ದುಬಾರಿ ಚಲನಚಿತ್ರವಿದು.  ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮಾಂಟ್ರಿಯಲ್‌ ಚಲನಚಿತ್ರೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಈ ಸಿನಿಮಾ, ಈಗಾಗಲೆ ಇರಾನ್‌ನಲ್ಲೂ ಹಲವು ಆಯ್ದ ಪ್ರದರ್ಶನಗಳನ್ನು ಕಂಡಿದೆ. 

ಅಷ್ಟಾಗಿಯೂ ಶ್ರದ್ಧಾವಂತ ಮುಸ್ಲಿಮರಲ್ಲಿ ಈ ಸಿನಿಮಾದ ಬಗ್ಗೆ ಹಲವು ಅನುಮಾನಗಳಿವೆ. ಇಸ್ಲಾಮಿನಲ್ಲಿ ಅಲ್ಲಾಹನ ಹೊರತು ಇನ್ಯಾರೂ ಆರಾಧ್ಯರಿಲ್ಲ. ಜಗದ್ಗುರುಗಳ ಕಲ್ಪನೆಯೂ ಇಲ್ಲ. ಹಜ್ರತ್‌ ಆದಂ ಮನುಕುಲದ ಮೊದಲ ಪ್ರವಾದಿ ಮತ್ತು ಹಜ್ರತ್‌ ಮುಹಮ್ಮದ್‌ ಕೊನೆಯ ಪ್ರವಾದಿ ಎಂದು ಮುಸ್ಲಿಮರು ನಂಬುತ್ತಾರೆ. ಪ್ರವಾದಿಗಳೂ ಎಲ್ಲರಂತೆ ಮನುಷ್ಯರು, ಅವರಿಗೂ ಸಾವಿದೆ. ತಮ್ಮ ಉನ್ನತ ಚಾರಿತ್ರ್ಯದ ಮೂಲಕ ಆಯಾ ಕಾಲದಲ್ಲಿ ಅವರು ಸಮುದಾಯದ ಪ್ರವಾದಿತ್ವ ವಹಿಸಿದ್ದರು. ಜನರು ಅವರನ್ನು ದೇವರನ್ನಾಗಿಸಿ ಪೂಜಿಸಬಾರದೆಂದೇ ಇಸ್ಲಾಮಿನಲ್ಲಿ ಯಾವುದೇ ಪ್ರವಾದಿಯ ಚಿತ್ರ ಬಿಡಿಸುವುದನ್ನಾಗಲೀ, ಪುತ್ಥಳಿ ನಿರ್ಮಿಸುವುದನ್ನಾಗಲೀ ನಿಷೇಧಿಸಲಾಗಿದೆ. ಇತಿಹಾಸದ ಪುಸ್ತಕಗಳಲ್ಲಿ ಪ್ರವಾದಿಗಳ ಶಬ್ದಚಿತ್ರವಷ್ಟೇ ಲಭಿಸುತ್ತದೆ.

ಚಿತ್ರ ಬಿಡಿಸುವುದೇ ನಿಷೇಧವಾಗಿರುವಾಗ ಪ್ರವಾದಿ ಮುಹಮ್ಮದ್‌ ಅವರ ಬಗ್ಗೆ ಸಿನಿಮಾ ಮಾಡಬಹುದೇ ಎನ್ನುವುದು ಸಾಮಾನ್ಯ ಮುಸ್ಲಿಮರ ಮನಸ್ಸಿನಲ್ಲಿರುವ ಆತಂಕ. ಈ ಹಿನ್ನೆಲೆಯಲ್ಲಿಯೇ ಸುನ್ನಿ ಮುಸ್ಲಿಂ ವಿದ್ವಾಂಸರ ಗುಂಪು ಈ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾದ ಕೇಂದ್ರ ಮಸೀದಿಯ ಮುಫ್ತಿ ಅಬ್ದುಲ್‌ ಅಝೀಝ್‌ ಅವರು ಸಿನಿಮಾದ ವಿರುದ್ಧ ದನಿ ಎತ್ತಿದ್ದಾರೆ. ಮಾಜಿದ್ ಮಜೀದಿಯವರ ಸಿನಿಮಾ ‘ಮುಹಮ್ಮದ್‌: ದಿ ಮೆಸೆಂಜರ್‌ ಆಫ್ ಗಾಡ್‌’ ಎಲ್ಲ ಸಿನಿಮಾಗಳಂತಿಲ್ಲ ಎನ್ನುವುದು ಆ ಸಿನಿಮಾ ನೋಡಿದ ವಿಮರ್ಶಕರ ಅಭಿಪ್ರಾಯ. ‘ಅದೊಂದು ಸಾಂಪ್ರದಾಯಕ ಮಾದರಿಯ ಸಿನಿಮಾ ಅಲ್ಲ. ಆತ್ಮಕಥೆಯ ಮಾದರಿಯಲ್ಲಿದೆ. ಹಾಗೆಂದು ಚಾರಿತ್ರಿಕ ಕೃತಿಯೂ ಅಲ್ಲ. ಹೆಚ್ಚೆಂದರೆ ಒಂದು ಮಹಾಕಾವ್ಯದಂತಿದೆ’ ಎನ್ನುವುದು ಒಟ್ಟು ವಿಮರ್ಶೆಗಳ ಸಾರ.

 ಸಿನಿಮಾದ ಕಥೆ ಹೀಗಿದೆ: ಹಬಾಶಾದ ದೊರೆ ಅಬ್ರಹಾ, ಸಾವಿರಾರು ಸೈನಿಕರು, ನೂರಾರು ಆನೆಗಳು, ಕುದುರೆ­ಗಳೊಂದಿಗೆ ಮಕ್ಕಾ ನಗರಕ್ಕೆ ಮುತ್ತಿಗೆ ಹಾಕುತ್ತಾನೆ. ಆನೆ­ಗಳನ್ನು ನುಗ್ಗಿಸಿ ಮಕ್ಕಾದ ಕೇಂದ್ರ  ಪ್ರಾರ್ಥನಾಲಯ ಕಾಬಾವನ್ನು ನಾಶ ಮಾಡುವುದು ಆತನ ಉದ್ದೇಶವಾಗಿತ್ತು. ಆದರೆ ಆತನ ಉದ್ದೇಶ ಸಫಲವಾಗುವುದಿಲ್ಲ, ಸಾವಿರಾರು ಹಕ್ಕಿಗಳು ಎಲ್ಲಿಂದಲೋ ಹಾರಿಬಂದು ಆತನ ಸೈನ್ಯದ ಮೇಲೆ ಸುಣ್ಣದ ಕಲ್ಲುಗಳನ್ನು ಎಸೆದು ಕೊನೆಗೆ ಆತನ ಸೈನ್ಯವೇ ನಾಶವಾಯಿತು.

ಈ ಬಗ್ಗೆ ಕುರಾನಿನ ಸೂರಾ ಅಲ್ ಫೀಲ್‌ನಲ್ಲಿ ‘ನಿಮಗೆ ಆನೆಯವರ ಬಗ್ಗೆ ಗೊತ್ತಿಲ್ಲವೆ...?’ ಎಂಬ ಪ್ರಸ್ತಾಪವಿದೆ. ಇದನ್ನೇ ಮಾಜಿದ್ ಮಜೀದಿ ಸಿನಿಮಾದಲ್ಲಿ ತೋರಿಸಿದ್ದಾರೆ. ಈ ಘಟನೆಯಾದ ತಿಂಗಳ ಬಳಿಕ ಮಕ್ಕಾದಲ್ಲಿ ಮುಹಮ್ಮದರ ಜನನ­ವಾಯಿತು. ಮುಹಮ್ಮದರ ಒಂದನೇ ವರ್ಷದಿಂದ 13ನೇ ವರ್ಷದವರೆಗಿನ ಬಾಲ್ಯವನ್ನು ಈ ಸಿನಿಮಾದಲ್ಲಿ ತೋರಿ­ಸಲಾಗಿದೆ. 171  ನಿಮಿಷಗಳ ಅವಧಿಯ ಈ ಸಿನಿ­ಮಾದ ಮೊದಲನೇ ಭಾಗವಷ್ಟೇ ಈಗ ತಯಾರಾಗಿದೆ. ಇನ್ನೂ ಎರಡು ಭಾಗಗಳು ಬರಲಿವೆ ಎಂದಿದ್ದಾರೆ ನಿರ್ದೇಶಕ ಮಾಜಿದಿ.

ಈ ಸಿನಿಮಾದಲ್ಲಿ ಪ್ರವಾದಿ ಮುಹಮ್ಮದರ ಪಾತ್ರಧಾರಿ ಯಾರು ಎನ್ನುವ ಕುತೂಹಲ ಸಹಜವೇ. ಆತ್ಮಚರಿತ್ರೆ ಮಾದರಿಯ ಇಡೀ ಸಿನಿಮಾದಲ್ಲಿ ಪ್ರವಾದಿ ಪಾತ್ರಧಾರಿಯನ್ನು ಎಲ್ಲೂ ಸ್ಪಷ್ಟವಾಗಿ ತೋರಿಸಿಲ್ಲ. ಬಿಳಿ ಬಟ್ಟೆ ಹೊದ್ದುಕೊಂಡ ವ್ಯಕ್ತಿಯ ಬೆನ್ನು ಮಾತ್ರ ತೋರಿಸಲಾಗಿದೆ. ಚಿಕ್ಕ ಮಗು ಹುಟ್ಟಿದಾಗ ಅಂಗೈ ಮತ್ತು ಪಾದಗಳು ಮಾತ್ರ ಕಾಣುವಂತೆ ಬಿಳಿ ಬಟ್ಟೆಯಲ್ಲಿ ಹೊದ್ದಿರುವ ಮಗುವನ್ನು   ತೋರಿಸಲಾಗಿದೆ. ‘ಸಿನಿಮಾಗಳ ಬಗ್ಗೆ ನಮ್ಮ ದೇಶದಲ್ಲಿ ನಿರ್ದಿಷ್ಟ ನೀತಿನಿಯಮಗಳಿವೆ. ಅದರ ಪ್ರಕಾರವೇ ಈ ಸಿನಿಮಾ ನಿರ್ಮಿಸಲಾಗಿದೆ. ವ್ಯಕ್ತಿಪೂಜೆ ಮತ್ತು ಮೂರ್ತಿಪೂಜೆಯನ್ನು ಖಡಾಖಂಡಿತವಾಗಿ ವಿರೋಧಿಸಿರುವ ಇಸ್ಲಾಮಿನ ತತ್ವಗಳಿಗೆ ನಿಷ್ಠವಾಗಿಯೇ ಈ ಸಿನಿಮಾ ಇದೆ’ ಎನ್ನುವುದು ಇರಾನ್‌ ಸರ್ಕಾರದ ವಿದೇಶಾಂಗ ವಕ್ತಾರರ ವಿವರಣೆ.

ಸುನ್ನಿ ಮುಸ್ಲಿಂ ಲೋಕದಲ್ಲಿ ಸಾಕಷ್ಟು ಮಾನ್ಯತೆ ಹೊಂದಿರುವ ಈಜಿಪ್ಟಿನ ಕೈರೋದ ಅಲ್‌ ಅಝರ್‌ ಯೂನಿವರ್ಸಿಟಿಯ ವಿದ್ವಾಂಸ­ರೊಬ್ಬರು ಈ ಸಿನಿಮಾದ ಬಗ್ಗೆ ಆಕ್ಷೇಪವೊಂದನ್ನು ಎತ್ತಿದ್ದಾರೆ. ‘ಸಿನಿಮಾದಲ್ಲಿ ಮುಹಮ್ಮದರ ಪಾತ್ರ ವಹಿಸಿರುವ ನಟ, ನಾಳೆ ಇನ್ನೊಂದು ಸಿನಿಮಾದಲ್ಲಿ ಕ್ರಿಮಿನಲ್‌ ಪಾತ್ರಧಾರಿಯ ನಟನೆ ಮಾಡಬಹುದು. ಆಗ ಪ್ರವಾದಿಯ ಬಗ್ಗೆ ಜನರ ಅನಿಸಿಕೆ ಏನಿರುತ್ತದೆ? ಈ ಸಿನಿಮಾ ಮಾಡಿದ್ದೇ ತಪ್ಪು’ ಎಂದವರು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಧರ್ಮನಿರಪೇಕ್ಷ ರಾಷ್ಟ್ರವೆಂದು ಸಂವಿಧಾನದಲ್ಲಿ ಹೇಳಿಕೊಂಡಿರುವ ಭಾರತದಲ್ಲಿ ರೆಹಮಾನ್‌ ಮತ್ತು ಸಿನಿಮಾದ ಬಗ್ಗೆ ಚಿತ್ರವಿಚಿತ್ರ ಪ್ರತಿಕ್ರಿಯೆಗಳು ಶುರುವಾಗಿವೆ.

ಫತ್ವಾ ಹೊರಡಿಸುವ ಮೂಲಕ ರೆಹಮಾನ್‌ ವಿರುದ್ಧ ಒಂದು ವರ್ಗದ ಜನರನ್ನು ಎತ್ತಿಕಟ್ಟುವ ಪ್ರಯತ್ನಗಳು ಆರಂಭವಾಗಿವೆ. ಈ ಮಧ್ಯೆ ವಿಶ್ವ ಹಿಂದೂ ಪರಿಷತ್ತಿನ ಮುಖಂಡರೊಬ್ಬರು, ‘ರೆಹಮಾನ್‌ ಅವರು ಫತ್ವಾಗೆ ಹೆದರಬೇಕಿಲ್ಲ. ಅವರಿಗೆ ನಾವು ರಕ್ಷಣೆ ಕೊಡುತ್ತೇವೆ’ ಎಂದಿದ್ದಾರೆ. ‘ರೆಹಮಾನ್‌ ಅವರು ಹಿಂದೂ ಆಗಿದ್ದವರು. ಈಗ ಇಸ್ಲಾಮನ್ನು ತೊರೆದು ಮರಳಿ ಹಿಂದೂ ಧರ್ಮಕ್ಕೆ ಬರುವುದಾದರೆ ತೆರೆದ ಹಸ್ತಗಳಿಂದ ಸ್ವಾಗತಿಸುತ್ತೇವೆ. ಅವರ ಘರ್‌ವಾಪಸಿಗೆ ಇದು ಸಕಾಲ’ ಎಂದು ಹೇಳಿರುವ ವಿಶ್ವ ಹಿಂದೂ ಪರಿಷತ್‌ ವಕ್ತಾರ, ವಿವಾದಕ್ಕೆ ಹೊಸ ತಿರುವು ನೀಡಲು ಯತ್ನಿಸಿದ್ದಾರೆ.

ರೆಹಮಾನ್ ವಿರುದ್ಧ ಫತ್ವಾ ಹೊರಡಿಸಲು ಕಾರಣರಾದ ರಝಾ ಅಕಾಡೆಮಿಯ ಸಯೀದ್ ನೂರಿ, ಪತ್ರಿಕಾ ಮಾಧ್ಯಮದ ಮೂಲಕ ಸಂಗೀತ ನಿರ್ದೇಶಕ ರೆಹಮಾನ್‌ ಅವರಿಗೆ ಕೇಳಿರುವ ಪ್ರಶ್ನೆಯೊಂದು ಕುತೂಹಲಕರವಾಗಿದೆ: ‘‘ಈ ಸಿನಿಮಾಗೆ ಸಂಗೀತ ನೀಡುವ ಮೂಲಕ ರೆಹಮಾನ್‌ ಇಸ್ಲಾಮಿನ ಪ್ರವಾದಿಗೆ ಅವಮಾನ ಮಾಡಿದ್ದಾರೆ. ಮರಣ ಹೊಂದಿದ ಬಳಿಕ ನಿರ್ಣಾಯಕ ದಿನದಂದು ಅಲ್ಲಾಹನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕೆಂಬ ಭಯ ರೆಹಮಾನ್‌ ಅವರಿಗಿಲ್ಲವೆ?’’ ಎಂದು ಸಯೀದ್ ನೂರಿ ಪ್ರಶ್ನಿಸಿದ್ದಾರೆ.

ರೆಹಮಾನ್‌ ಯಾವತ್ತೂ ತಮ್ಮ ವಿರುದ್ಧದ ಟೀಕೆಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿದವರಲ್ಲ. ಪತ್ರಕರ್ತರು ಏನನ್ನಾದರೂ ಕೆದಕಿ ಕೇಳಿದರೂ ಮುಗುಳ್ನಕ್ಕು ಸುಮ್ಮನಾಗುವುದೇ ಜಾಸ್ತಿ. ಆದರೆ ಸಯೀದ್‌ರ ಈ ಪ್ರಶ್ನೆಗೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ರೆಹಮಾನ್‌ ಅತ್ಯಂತ ಭಾವುಕ ಉತ್ತರ ನೀಡಿದ್ದಾರೆ. ‘‘ನಾನು ಒಳ್ಳೆಯ ವಿಶ್ವಾಸ ಇಟ್ಟುಕೊಂಡೇ ಈ ಸಿನಿಮಾಕ್ಕೆ ಸಂಗೀತ ನೀಡಿದ್ದೇನೆ. ಯಾರನ್ನೂ ಅವಹೇಳನ ಮಾಡುವ ದೃಷ್ಟಿಯಿಂದ ಅಲ್ಲ. ಮರಣ ಹೊಂದಿದ ಬಳಿಕ ನಿರ್ಣಾಯಕ ದಿನದಂದು ಅಲ್ಲಾಹನು– ನಿನಗೆ ವಿಶ್ವಾಸ, ಪ್ರತಿಭೆ, ಕೀರ್ತಿ, ಹಣ, ಆರೋಗ್ಯ ಎಲ್ಲವನ್ನೂ ಕೊಟ್ಟಿದ್ದೇನೆ. ನನ್ನ ಪ್ರವಾದಿಯ ಕುರಿತ ಸಿನಿಮಾಕ್ಕೆ ಏಕೆ ಸಂಗೀತ ನೀಡಲಿಲ್ಲ ಎಂದು ಪ್ರಶ್ನಿಸಿದರೆ, ನಾನು ಏನೆಂದು ಉತ್ತರಿಸಬೇಕಿತ್ತು?’’ ಎನ್ನುವುದು ರೆಹಮಾನ್ ಕೇಳಿರುವ ಮರುಪ್ರಶ್ನೆ!

ಫತ್ವಾ ಕುರಿತು ನೀಡಿರುವ ತಮ್ಮ ಸುದೀರ್ಘ ಪ್ರತಿಕ್ರಿಯೆಯಲ್ಲಿ ರೆಹಮಾನ್‌ ನಿಜಕ್ಕೂ ಅತ್ಯಂತ ಮಾನವೀಯವಾಗಿ ಮಾತನಾಡಿದ್ದಾರೆ. ‘‘ನಾನು ಇಸ್ಲಾಮಿನ ಪಂಡಿತ ಅಲ್ಲ. ನನ್ನದು ಮಧ್ಯಮ ಪಂಥ. ನಾನು ಭಾಗಶಃ ಸಂಪ್ರದಾಯವಾದಿ, ಭಾಗಶಃ ವಿಚಾರವಾದಿ. ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶಗಳೆರಡರಲ್ಲೂ ವಾಸವಿರುವ ನಾನು ಜಗತ್ತಿನ ಎಲ್ಲ ಜನರನ್ನೂ– ಅವರ ನಿಲುವುಗಳೇನೇ ಇದ್ದರೂ– ಮನಸಾರೆ ಪ್ರೀತಿಸುತ್ತೇನೆ. ನಾನು ಈ ಚಿತ್ರದ ನಿರ್ಮಾಪಕನೂ ಅಲ್ಲ, ನಿರ್ದೇಶಕನೂ ಅಲ್ಲ. ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗುಂಟಾದ ಆಧ್ಯಾತ್ಮಿಕ ಅನುಭವ ನನ್ನ ತೀರಾ ವೈಯಕ್ತಿಕ ವಿಷಯ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಸಿನಿಮಾದ ಉದ್ದೇಶವೇ ಮನುಕುಲದ ಒಗ್ಗಟ್ಟು, ತಪ್ಪುಕಲ್ಪನೆಗಳ ನಿವಾರಣೆ ಮತ್ತು ಪ್ರವಾದಿಯವರ ಕರುಣಾಮಯಿ ವ್ಯಕ್ತಿತ್ವದ, ಬದುಕಿನ ಸಂದೇಶವನ್ನು ಎಲ್ಲ ಜನರಿಗೆ ತಲುಪಿಸುವುದು’’ ಎಂದಿದ್ದಾರೆ ರೆಹಮಾನ್‌. 

ರೆಹಮಾನ್ ಅವರ ಈ ಹೇಳಿಕೆ ಮುಂಬೈಯ ಮುಫ್ತಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ನಾಯಕ ಇಬ್ಬರಿಗೂ ಏಕಕಾಲದಲ್ಲಿ ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದಂತಿದೆ. ‘ಗೋಡೆ’ಯ ಮೇಲಿನ ಈ ಬರಹವನ್ನು ಓದಿ ಅರ್ಥೈಸುವ ಸಾಮರ್ಥ್ಯ ಅವರಿಬ್ಬರಿಗೂ ಇಲ್ಲವಾದಂತಿದೆ. ಜಗತ್ತಿನ ಸಂಗೀತ ಕ್ಷೇತ್ರದಲ್ಲಿ ರೆಹಮಾನ್‌ ಇವತ್ತು ಅತಿದೊಡ್ಡ ಸಾಧಕ. ಎರಡು ಆಸ್ಕರ್‌ ಪ್ರಶಸ್ತಿಗಳು, ಎರಡು ಗ್ರಾಮ್ಮಿ, ಒಂದು ಬಾಫ್ಟಾ ಪ್ರಶಸ್ತಿ, ಒಂದು ಗೋಲ್ಡನ್‌ ಗ್ಲೋಬ್‌, ಭಾರತದಲ್ಲಿ ನಾಲ್ಕು ಸಲ ರಾಷ್ಟ್ರೀಯ ಪ್ರಶಸ್ತಿ, 15 ಫಿಲಂಫೇರ್‌ ಪ್ರಶಸ್ತಿಗಳು, 13 ದಕ್ಷಿಣ ಭಾರತದ ಫಿಲಂಫೇರ್‌ ಪ್ರಶಸ್ತಿಗಳು– ಹೀಗೆ ರೆಹಮಾನ್ ಪ್ರತಿಯೊಂದು ಪ್ರಶಸ್ತಿ ಗಳಿಸಿದಾಗಲೂ ಭಾರತೀಯರು ಜಾತಿ-ಧರ್ಮಗಳ ಗೊಡವೆಯಿಲ್ಲದೆ ಹೆಮ್ಮೆ ಪಟ್ಟಿದ್ದಾರೆ; ಸಂತೋಷದಿಂದ ಕುಣಿದಾಡಿದ್ದಾರೆ. 2009ರಲ್ಲೇ ಪ್ರತಿಷ್ಠಿತ ‘ಟೈಮ್‌’ ನಿಯತಕಾಲಿಕದ ‘ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ರೆಹಮಾನ್‌.


ಜಗತ್ತಿನ ಯಾವ ದೇಶಕ್ಕೆ ಹೋದರೂ, ಅಲ್ಲಿ ತಮ್ಮ ಕಾರ್ಯಕ್ರಮದಲ್ಲಿ ‘ವಂದೇ ಮಾತರಂ’ ಹಾಡುವ ರೆಹಮಾನ್‌, ಮರಳಿ ಪದೇ ಪದೇ ಈ ದೇಶಕ್ಕೆ ವಾಪಸಾಗುತ್ತಾರೆ. ಇಡೀ ದೇಶವೇ ಅವರ ಘರ್‌ (ಮನೆ)  ಆಗಿರುವಾಗ, ‘ಘರ್‌ವಾಪಸೀ ಆಗಿ’ ಎಂದು ದುಂಬಾಲು ಬೀಳುವವರ ಧೋರಣೆಗೆ ಏನನ್ನೋಣ? 

ಫತ್ವಾ ಎಂದರೆ ಯಾರದೋ ಕೊಲೆಗೆ ಹೊರಡಿಸುವ ಮರಣದಂಡನೆಯ ತೀರ್ಮಾನ ಅಲ್ಲ. ಅದೊಂದು ಧಾರ್ಮಿಕ ವ್ಯಾಖ್ಯಾನ ಅಷ್ಟೆ. ಫತ್ವಾ ಎನ್ನುವುದರ ಅರ್ಥವೇ ಗೊತ್ತಿಲ್ಲದ ಮಾಧ್ಯಮಗಳು ಸುದ್ದಿಯನ್ನು ವೈಭವೀಕರಿಸಿ, ಭಯಾನಕ ವಾತಾವರಣವೊಂದನ್ನು ಸೃಷ್ಟಿಸುತ್ತವೆ. ಆ ವೈಭವೀಕೃತ ಸುದ್ದಿಯ ಅಲೆಯಲ್ಲಿ ಪರ-ವಿರೋಧ ವಾದವಿವಾದಗಳು ಮುಂದುವರಿಯುತ್ತವೆ. ತಾನಾಯಿತು, ತನ್ನ ಸಂಗೀತ ಲೋಕವಾಯಿತು ಎಂದು ನೆಮ್ಮದಿಯಾಗಿರುವ ರೆಹಮಾನ್‌ರನ್ನೂ ಈ ಫತ್ವಾ ಎಷ್ಟೊಂದು ಕಾಡಿದೆಯೆಂದರೆ, ಅವರು ಟ್ವಿಟ್ಟರ್‌ನಲ್ಲಿ ಸುದೀರ್ಘ ವಿವರಣೆ ಕೊಡಬೇಕಾಗಿದೆ.

ಮುಂದಿನ ದಿನಗಳಲ್ಲಿ ಈ ಸಿನಿಮಾ ಶಿಯಾ-ಸುನ್ನಿ ಸಂಘರ್ಷಕ್ಕೆ ಒಂದು ನೆಪವಾಗುವ ಸಾಧ್ಯತೆಯೂ ಇದೆ. ಆದರೆ ನಿರ್ದೇಶಕ ಮಾಜಿದಿ, ‘ಪ್ರವಾದಿ ಮುಹಮ್ಮದರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಸದಾ ಹೀಗಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ಸಿನಿಮಾದ ಮೂಲಕ ಉತ್ತರ ನೀಡಿದ್ದೇನೆ. ಪ್ರವಾದಿಯ ಅವಹೇಳನ ಮಾಡಿದ್ದನ್ನು ಪ್ರತಿಭಟಿಸುವುದಕ್ಕಿಂತ ನಾನೇ ಪ್ರವಾದಿಯವರ ಬಗ್ಗೆ ಸಿನಿಮಾ ತೆಗೆದು ಜಗತ್ತಿಗೆ ಅವರು ಯಾರೆಂದು ಪರಿಚಯಿಸುವುದು ಒಳ್ಳೆಯದಲ್ಲವೆ?’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಧರ್ಮ, ದೇವರು, ಪೂಜೆ, ಪ್ರಾರ್ಥನೆಗಳೆಲ್ಲ ನಡುರಸ್ತೆಗೆ ಇಳಿದು ಅಡ್ಡಾದಿಡ್ಡಿ ಸಂಚರಿಸುತ್ತಿರುವ ಇಳಿಹೊತ್ತಿದು. ಹೃದಯದಲ್ಲಿರುವ ಕಲ್ಮಶಗಳನ್ನೆಲ್ಲ ತೊಳೆದು ಹೊಳೆಯಿಸಬೇಕಾದ ಧರ್ಮ, ಕಣ್ಣುಗಳಿಗೆ ಪೊರೆ ಕಟ್ಟಿ ಕೀವು ಇಳಿಸುತ್ತಿದೆ. ಇಲ್ಲಿ ಎಲ್ಲರೂ ಧರ್ಮರಕ್ಷಕರೇ; ಆದರೆ ಕಿಲುಬುಗಟ್ಟುತ್ತಿರುವ ಅವರವರ ಆತ್ಮಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಅನುಭಾವಿ ಕವಿ ರೂಮಿಯ ಕವಿತೆಯೊಂದು ನೆನಪಾಗುತ್ತದೆ- ‘ರೆಕ್ಕೆಗಳೊಂದಿಗೆ ಹುಟ್ಟಿದವರು ನೀವು; ಅದೇಕೆ ಜೀವನಪೂರ್ತಿ ತೆವಳಿಕೊಂಡೇ ನಡೆಯುತ್ತೀರಿ?’.

*

ಈ ಚಿತ್ರದಲ್ಲಿ ಕೆಲಸ ಮಾಡುವಾಗ ನನಗುಂಟಾದ ಆಧ್ಯಾತ್ಮಿಕ ಅನುಭವ ನನ್ನ ತೀರಾ ವೈಯಕ್ತಿಕ ವಿಷಯ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಸಿನಿಮಾದ ಉದ್ದೇಶವೇ ಮನುಕುಲದ ಒಗ್ಗಟ್ಟು, ತಪ್ಪುಕಲ್ಪನೆಗಳ ನಿವಾರಣೆ ಮತ್ತು ಪ್ರವಾದಿಯವರ ಕರುಣಾಮಯಿ ವ್ಯಕ್ತಿತ್ವದ, ಬದುಕಿನ ಸಂದೇಶವನ್ನು ಎಲ್ಲ ಜನರಿಗೆ ತಲುಪಿಸುವುದು.
– ರೆಹಮಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT