ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವೆ ಮರಳು ಗಣಿಗಾರಿಕೆಗೆ ಕಡಲ್ಕೊರೆತ ತೀವ್ರ

ಅಕ್ರಮ ಮರಳು ಗಣಿಗಾರಿಕೆ
Last Updated 8 ಜೂನ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಜಿಲ್ಲೆಯ ನದಿಗಳ ಒಡಲನ್ನು ಬರಿದು ಮಾಡುತ್ತಿದೆ. ಅದರಲ್ಲೂ ಅಳಿವೆ ಬಳಿ ನಡೆಯುವ ಮರಳು ಗಣಿಗಾರಿಕೆಯು ಕಡಲ್ಕೊರೆತ ಸಮಸ್ಯೆ ತೀವ್ರಗೊಳ್ಳುವುದಕ್ಕೂ ಕಾರಣವಾಗುತ್ತಿದೆ. ಜತೆಗೆ ಅಳಿವೆಯ ಜೀವವೈವಿಧ್ಯಕ್ಕೂ ಕುತ್ತು ತಂದೊಡ್ಡಿದೆ.

ಮಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಮರಳಿಗೆ ಇಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇಲ್ಲಿನ ಬೇಡಿಕೆಯ ಅಷ್ಟೂ ಮರಳು ಪೂರೈಕೆಯಾಗುವುದು ಜಿಲ್ಲೆಯ ನೇತ್ರಾವತಿ, ಫಲ್ಗುಣಿ ಹಾಗೂ ನಂದಿನಿ ನದಿಗಳಿಂದ. ನೇತ್ರಾವತಿ ನದಿಯಲ್ಲಿ ಅಳಿವೆಬಾಗಿಲಿನಿಂದ ತುಂಬೆಯವರೆಗಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಸಾವಿರಕ್ಕೂ ಅಧಿಕ ದೋಣಿಗಳು ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿವೆ.

ನಿರ್ದಿಷ್ಟ ಪ್ರದೇಶದಲ್ಲಿ ನದಿಯಿಂದ ಮರಳು ತೆಗೆಯುವ ತಾತ್ಕಾಲಿಕ ಪರವಾನಗಿ ಪಡೆಯಬೇಕು. ನದಿಯಲ್ಲಿ ಮರಳಿನ ಲಭ್ಯತೆ ನೋಡಿಕೊಂಡು ಗಣಿ ಮತ್ತು ಭೂವಿಜ್ಞಾನ ಇಲಾಖೆ ತಿಂಗಳಿಗೆ 10 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾಯಿ ರಾಜಧನವನ್ನು ನಿಗದಿಪಡಿಸುತ್ತದೆ.

ಜಿಲ್ಲೆಯ ನೇತ್ರಾವತಿ, ಫಲ್ಗುಣಿ, ನಂದಿನಿ, ಕುಮಾರಧಾರ ಮೊದಲಾದ ನದಿಗಳಲ್ಲಿ 50ಕ್ಕೂ ಅಧಿಕ ಕಡೆ ಮರಳು ತೆಗೆಯುವ ಸ್ಥಳಗಳನ್ನು ಇಲಾಖೆ ಗುರುತಿಸಿದೆ. ನದಿಪಾತ್ರದಿಂದ ಮರಳನ್ನು ಸಾಗಿಸುವ ಲಾರಿಗಳು ಪ್ರತಿ ಟ್ರಿಪ್‌ಗೆ 350 ರೂಪಾಯಿ (ಪ್ರತಿ ಟನ್ ಮರಳಿಗೆ 35 ರೂಪಾಯಿಯಂತೆ) ರಾಜಧನವನ್ನು ಪ್ರತ್ಯೇಕವಾಗಿ ಪಾವತಿಸಬೇಕು.

ಜಿಪಿಎಸ್ ಕಣ್ಗಾವಲು: `ಮರಳು ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಿರುವುದು ಕಡ್ಡಾಯ. ಜಿಪಿಎಸ್ ಇಲ್ಲದ ಲಾರಿಗಳಿಗೆ ಮರಳು ಸಾಗಾಟಕ್ಕೆ ಪರವಾನಗಿ ನೀಡುವುದೇ ಇಲ್ಲ. ಜಿಪಿಎಸ್ ನೆರವಿನಿಂದ ಈ ಲಾರಿಗಳು ಎಷ್ಟು ಬಾರಿ ಮರಳು ಸಾಗಿಸಿವೆ ಎಂದು ಪತ್ತೆ ಹಚ್ಚಬಹುದು.

ಪರವಾನಗಿ ಇಲ್ಲದೆ ಮರಳು ಸಾಗಿಸಿದರೆ ಹಾಗೂ ಜಿಪಿಎಸ್ ಹೊಂದಿರುವ ಲಾರಿಗಳು ಷರತ್ತು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ' ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಹರೀಶ್.

ಈ ವ್ಯವಸ್ಥೆಯಲ್ಲಿ ಮರಳುಗಾರಿಕೆ ಮೇಲೆ ನಿಯಂತ್ರಣವಿರುವಂತೆ ಕಂಡು ಬಂದರೂ ಶೇ 50ಕ್ಕಿಂತ ಹೆಚ್ಚು ಗಣಿಗಾರಿಕೆ ಅಕ್ರಮವಾಗಿಯೇ ನಡೆಯುತ್ತದೆ. ರಾಜಧನ ಪಾವತಿಯನ್ನು ತಪ್ಪಿಸುವ ಸಲುವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರು ನಾನಾ ತಂತ್ರಗಳನ್ನು ಅಳವಡಿಸುತ್ತಿದ್ದಾರೆ.

ಜಿಪಿಎಸ್ ಅಳವಡಿಸದ ಲಾರಿಗಳಲ್ಲಿ ಸಾಗಿಸಲಾಗುವ ಮರಳಿನ ಮೇಲೆ ನಿಗಾ ಇಡಲು ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ. ಲಾರಿ ಮಾಲೀಕರು ಹಾಗೂ ಜಿಪಿಎಸ್ ಒದಗಿಸಿರುವ ಸಂಸ್ಥೆಯ ಒಪ್ಪಂದ ಪ್ರಕಾರ ಈ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಜಿಪಿಎಸ್ ವ್ಯವಸ್ಥೆಯ ಮೇಲೂ ಇಲಾಖೆಗೆ ಸಂಪೂರ್ಣ ಹತೋಟಿ ಇಲ್ಲ. ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದೆ ಎಂಬುದನ್ನು ಇಲಾಖೆಯ ಉಪ ನಿರ್ದೇಶಕರೇ ಒಪ್ಪಿಕೊಳ್ಳುತ್ತಾರೆ.

ಯಂತ್ರ ಬಳಕೆ: ಕರಾವಳಿ ಪ್ರದೇಶದಲ್ಲಿ ಯಂತ್ರೋಪಕರಣ ಬಳಸಿ ಮರಳು ಗಣಿಗಾರಿಕೆ ನಡೆಸುವಂತಿಲ್ಲ. ಆದರೆ, ಜಿಲ್ಲೆಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲೆಯ ಹಲವೆಡೆ ಹೂಳೆತ್ತುವ (ಡ್ರೆಜ್ಜಿಂಗ್) ಯಂತ್ರವನ್ನು ಬಳಸಿ (ನೀರು ತುಂಬಿರುವ ಕಡೆ) ಭಾರಿ ಪ್ರಮಾಣದ ಮರಳು ತೆಗೆಯುವ ಮೂಲಕ ನದಿಯ ಒಡಲನ್ನು ಬರಿದು ಮಾಡುತ್ತಿದ್ದಾರೆ.

ಇನ್ನು ಕೆಲವೆಡೆ ಮರಳು ತೆಗೆಯಲು ಜೆಸಿಬಿ ಬಳಸಲಾಗುತ್ತಿದೆ. ಅಡೂರು, ತುಂಬೆ, ಪಾಣೆಮಂಗಳೂರು, ಬಡಗ ಬೆಳ್ಳೂರು, ಅಡ್ಡೂರು, ಸಜಿಪ ತಲೆಮೊಗರು, ಕರಿಯಂಗಳ, ಗುರುಪುರ, ಶಂಭೂರು, ಅಡ್ಯಾರ್ ಪ್ರದೇಶಗಳಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುವುದನ್ನು ಅಧಿಕಾರಿಗಳೇ ಪತ್ತೆ ಹಚ್ಚಿದ್ದಾರೆ. ಅಡ್ಡೂರು ಮುಳ್ಳೂರುಪಟ್ನದಲ್ಲಿ ಜೆಸಿಬಿ ಯಂತ್ರ ಬಳಸಿ ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ  ಏಪ್ರಿಲ್ ಅಂತ್ಯದಲ್ಲಿ ದಾಳಿ ನಡೆಸಿದ ಅಧಿಕಾರಿಗಳು 12 ಲಾರಿ, ಎರಡು ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದರು. 

3 ಕೋಟಿ ರಾಜಧನ: ಕಳೆದ ವರ್ಷ ಇಲಾಖೆ ಪರವಾನಗಿ ನೀಡುವ ಮೂಲಕ ಸಂಗ್ರಹಿಸಿದ ರಾಜಧನ 3.36 ಕೋಟಿ ರೂಪಾಯಿ. ಅಕ್ರಮ ಮರಳು ಗಣಿಗಾರಿಕೆಗೆ ವಿಧಿಸಿದ ಒಟ್ಟು ದಂಡ 67.19 ಲಕ್ಷ ರೂಪಾಯಿ (ರಾಯಧನದ ಶೇ 20ರಷ್ಟು). ಈ ವರ್ಷ ಮೇ ತಿಂಗಳವರೆಗೆ 26.66 ಲಕ್ಷ ರೂಪಾಯಿ ರಾಜಧನ ಬಂದಿದೆ. ಇದುವರೆಗೆ 10.58 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು ದಂಡ ವಿಧಿಸುವ ಮೂಲಕ ಸಂಗ್ರಹಿಸಲಾಗಿದೆ.

ಈ ಅಂಕಿ-ಅಂಶಗಳೇ ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಯ ಪ್ರಮಾಣ ಎಷ್ಟಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತವೆ. `ಮಾರುಕಟ್ಟೆಯಲ್ಲಿ ಒಂದು ಲಾರಿ ಲೋಡ್ ಮರಳು ಎರಡೂವರೆ ಸಾವಿರ ರೂಪಾಯಿಯಿಂದ ಮೂರುವರೆ ಸಾವಿರ ರೂಪಾಯಿವರೆಗೆ ಮಾರಾಟವಾಗುತ್ತದೆ.

ಜಿಲ್ಲೆಯಲ್ಲಿ ಜಿಪಿಎಸ್ ಅಳವಡಿಸಿದ ಒಂದು ಸಾವಿರಕ್ಕೂ ಅಧಿಕ ಲಾರಿಗಳಿವೆ. ಈ ಪೈಕಿ ಅಂದಾಜು 300 ಲಾರಿಗಳು ಮರಳು ಸಾಗಣೆಯಲ್ಲಿ ತೊಡಗಿಸಿಕೊಂಡಿವೆ' ಎನ್ನುತ್ತಾರೆ ಮರಳು ಸಾಗಾಟ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸತ್ಯಪಾಲ ರೈ. ಈ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಒಂದು ದಿನದ ಮರಳು ವಹಿವಾಟೇ 50 ಲಕ್ಷ ರೂಪಾಯಿ ದಾಟುತ್ತದೆ. ಇನ್ನುಳಿದ ಹಣ ಎಲ್ಲಿಗೆ ಹೋಗುತ್ತದೆ ಎಂಬುದು ಯಕ್ಷಪ್ರಶ್ನೆ.

ಕೇರಳಕ್ಕೆ: ಈ ಹಿಂದೆ ಕೇರಳದ ನದಿಗಳಲ್ಲಿ ಮರಳು ಗಣಿಗಾರಿಕೆ ನಿಷೇಧಿಸಿದ್ದರಿಂದ ಕರಾವಳಿಯ ಮರಳನ್ನು ಕಾಸರಗೋಡಿನತ್ತ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕೇರಳ ಸರ್ಕಾರ ಒಂದು ವರ್ಷದಿಂದ ಈಚೆಗೆ ಅಲ್ಲಿನ ನದಿಗಳಲ್ಲಿ ಮರಳು ತೆಗೆಯಲು ಅನುಮತಿ ನೀಡಿದೆ. ಹಾಗಾಗಿ ಅಕ್ರಮ ಸಾಗಣೆ ಕಡಿಮೆಯಾಗಿದೆ. ಆದರೆ ಕೇರಳದ ಗಡಿಪ್ರದೇಶದ ಕೆಲವು ಊರುಗಳಿಗೆ ಈಗಲೂ ಜಿಲ್ಲೆಯಿಂದ ಮರಳು ಅಕ್ರಮವಾಗಿ ಸಾಗಣೆಯಾಗುತ್ತಿದೆ.

ಮರಳು ಗಣಿಗಾರಿಕೆಯಿಂದ ಕಡಲ ಕಿನಾರೆಗೆ ಆಪತ್ತು
`ನದಿ ನೀರು ಸಮುದ್ರಕ್ಕೆ ಸೇರುವಾಗ ಸಾಕಷ್ಟು ಮರಳನ್ನು ಕೂಡ ಕೊಂಡೊಯ್ಯುತ್ತದೆ. ಈ ಮರಳು ಅಲೆಗಳ ಮೂಲಕ ಮತ್ತೆ ಕಡಲ ತೀರಕ್ಕೆ ಸೇರುತ್ತದೆ. ಇದು ಕಡಲ್ಕೊರೆತವನ್ನು ತಡೆಯುವ ಮೂಲಕ ಕಡಲ ಕಿನಾರೆಯಯನ್ನು ಸುರಕ್ಷಿತವಾಗಿಡುತ್ತದೆ. ಅಳಿವೆಗಳಲ್ಲಿ ಮರಳು ಗಣಿಗಾರಿಕೆ ನಡೆಸುವುದರಿಂದ ಕಡಲ್ಕೊರೆತ ಹೆಚ್ಚುತ್ತದೆ' ಎನ್ನುತ್ತಾರೆ ಮಂಗಳೂರು ವಿಶ್ವವಿದ್ಯಾಲಯದ ಸಾಗರ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎಸ್.ಜಯಪ್ಪ.

`ಜೀವವೈವಿಧ್ಯದ ದೃಷ್ಟಿಯಿಂದ ಅಳಿವೆಗಳು ಸೂಕ್ಷ್ಮ ಪ್ರದೇಶಗಳು. ಉಪ್ಪುನೀರಿನ ಅನೇಕ ಮೀನುಗಳ ಸಂತಾನಾಭಿವೃದ್ಧಿ ಅಳಿವೆ ಪ್ರದೇಶದಲ್ಲಿ ನಡೆಯುತ್ತದೆ. ಥಿಲಪಿಯಾ ಜಾತಿಯ ಮೀನುಗಳು ನದಿಯ ತಳದ ಮರಳಿನಲ್ಲಿ ಗುಂಡಿ ತೋಡಿ, ಮೊಟ್ಟೆ ಇಟ್ಟು ಮರಿಮಾಡುತ್ತವೆ. ಮರಳು ಗಣಿಗಾರಿಕೆಯಿಂದ ಮೀನುಗಳ ಆಹಾರವಾದ ಪ್ಲಾಂಕ್ಟಾನ್‌ಗಳಿಗೆ ಹಾಗೂ ತಳದ (ಬೆಂಥಿಕ್) ಜೈವಿಕ ವ್ಯವಸ್ಥೆಗಳಿಗೂ ಹಾನಿಯಾಗುತ್ತದೆ. ಅನೇಕ ಜಾತಿಯ ಮೀನುಗಳ ಸಂತಾನಾಭಿವೃದ್ಧಿಗೆ ಸಹಕರಿಸುವ ಕಾಂಡ್ಲಾವನಗಳ ಬೆಳವಣಿಗೆಗೂ ಇದು ಮಾರಕ ಎನ್ನುತ್ತಾರೆ' ಮಂಗಳೂರಿನ ಮೀನುಗಾರಿಕಾ ವಿದ್ಯಾಲಯದ ಪ್ರಾಧ್ಯಾಪಕರೊಬ್ಬರು.

ಉಪ್ಪುಮಿಶ್ರಿತ ಮರಳಿನಿಂದ ಕಟ್ಟಡಕ್ಕೆ ಹಾನಿ: ಅಳಿವೆ ಪ್ರದೇಶಗಳಲ್ಲಿ ನದಿಯಲ್ಲಿ ಉಪ್ಪುನೀರಿನಿಂದ ತೆಗೆದ ಮರಳು ಕಟ್ಟಡ ನಿರ್ಮಾಣಕ್ಕೆ ಯೋಗ್ಯವಲ್ಲ. ಮರಳಿನಲ್ಲಿ ಉಪ್ಪಿನಂಶವಿದ್ದರೆ ಕಟ್ಟಡದ ಬಾಳಿಕೆ ಕಡಿಮೆಯಾಗುತ್ತದೆ. ಕಾಂಕ್ರೀಟ್‌ಗೆ ಬಳಸುವ ಕಬ್ಬಿಣದ ಸರಳುಗಳಿಗೆ ಬೇಗ ತುಕ್ಕು ಹಿಡಿಯುತ್ತದೆ. ಕಟ್ಟಡದ ಬಾಳಿಕೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ಯೋಜನಾ ನಿರ್ದೇಶಕ ಪ್ರಕಾಶ್ ಬಿ.

ಮಂಗಳೂರು ನಗರದ ಕಟ್ಟಡ ನಿರ್ಮಾಣಕ್ಕೆ ಪೂರೈಕೆಯಾಗುವ ಮರಳು ಅಡ್ಯಾರ್, ಕಣ್ಣೂರು, ಮರವೂರು, ಕೂಳೂರು ಮೊದಲಾದ ಅಳಿವೆ ಪ್ರದೇಶಗಳಲ್ಲಿ ತೆಗೆದುದೇ ಆಗಿದೆ. ಇದು ನಗರದ ಬಹುಮಹಡಿ ಕಟ್ಟಡಗಳ ಬಾಳಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಎಚ್ಚರಿಸುತ್ತಾರೆ.

ದಂಧೆಕೋರರಿಗೆ ರಾಜಕೀಯ ಶ್ರೀರಕ್ಷೆ
ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಚೇಲಾಗಳೇ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಸ್ವತಃ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಾಜಿ ಸಚಿವರೊಬ್ಬರು ಅಕ್ರಮ ಮರಳು ಗಣಿಗಾರಿಕೆ ನಡೆಸುವವರಿಗೆ ಬೆಂಗಾವಲಾಗಿದ್ದರು ಎಂಬ ಆರೋಪವೂ ಇದೆ.

ಮಂಗಳೂರಿನ ಪಾಲಿಕೆ ಸದಸ್ಯರೊಬ್ಬರು ಬೇನಾಮಿಯಾಗಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವುದು ಅಧಿಕಾರಿಗಳಿಗೂ ತಿಳಿಯದ ವಿಚಾರವೇನಲ್ಲ. ಬಹುತೇಕ ಕಡೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವುದು ಆಯಾ ಗ್ರಾಮ ಪಂಚಾಯಿತಿ ಮಟ್ಟದ ರಾಜಕೀಯ ನಾಯಕರು. ಹಾಗಾಗಿ ಅಧಿಕಾರಿಗಳಿಗೂ ಮರಳು ಗಣಿಗಾರಿಕೆಯಲ್ಲಿ ನಡೆಯುವ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳಿಗೆ ಹಲ್ಲೆಯ ಭೀತಿ: ಮರಳುಗಾರಿಕೆ ನಡೆಯುವ ಸ್ಥಳಕ್ಕೆ ದಾಳಿ ಮಾಡುವುದಕ್ಕೂ ಅಧಿಕಾರಿಗಳಿಗೆ ಎಂಟೆದೆ ಬೇಕು ಎಂಬ ಸ್ಥಿತಿ ಇದೆ. ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರಿನಲ್ಲಿ ಕಳೆದ ವರ್ಷ ಅಕ್ರಮ ಮರಳು ದಾಸ್ತಾನು ಇಟ್ಟಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದ ಉಪ ತಹಶೀಲ್ದಾರ್ ಮೇಲೆ ಹಲ್ಲೆ ನಡೆದಿತ್ತು.

ಉಪತಹಶೀಲ್ದಾರ್ ಅವರ ಜೀಪಿಗೆ ಬೇರೊಂದು ವಾಹನದಿಂದ ಅಪಘಾತ ನಡೆಸುವ ಯತ್ನವೂ ನಡೆದಿತ್ತು. ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡಕ್ಕೆ ದಂಧೆಕೋರರು ದಾರಿ ಬಂದ್ ಮಾಡಿ ದಿಗ್ಬಂಧನ ವಿಧಿಸಿದ್ದರು.  `ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಪತ್ತೆ ಹಚ್ಚಲೆಂದೇ ಅಧಿಕಾರಿಗಳ ಸಂಚಾರಿ ತಂಡಗಳಿವೆ. ಇಂತಹ ಘಟನೆಗಳು ನಡೆದ ಬಳಿಕ ನಾವು ಪೊಲೀಸ್ ಇಲಾಖೆಯ ನೆರವಿಲ್ಲದೇ ಸ್ಥಳಕ್ಕೆ ದಾಳಿ ನಡೆಸುವುದಿಲ್ಲ' ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.

`ಅನೇಕ ಕಡೆ ಅಕ್ರಮ ಮರಳು ಗಣಿಗಾರಿಕೆ ನಡೆಸುವವರು ಪೊಲೀಸ್ ಇಲಾಖೆಯ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿರುತ್ತಾರೆ. ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಮರಳು ಗಣಿಗಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ಬಚ್ಚಿಡುತ್ತಾರೆ. ಅಧಿಕಾರಿಗಳು ಬರಿಗೈಯಲ್ಲಿ ಮರಳಬೇಕಾಗುತ್ತದೆ.

ಕೆಲವೊಮ್ಮೆ ಇಲಾಖೆಯವರಿಂದಲೇ ಮಾಹಿತಿ ಸೋರಿಕೆ ಆಗುತ್ತದೆ' ಎನ್ನುತ್ತಾರೆ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಹೋರಾಟ ನಡೆಸುತ್ತಿರುವ ರಫೀಕ್ ಪಾವೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT