ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವತರಿಸಿವೆ ತಾಂತ್ರಿಕ ಇರುವೆ!

Last Updated 7 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹುಟ್ಟಿನಿಂದ ಸಾವಿನವರೆಗೂ ಸದಾ ದುಡಿಮೆಯಲ್ಲೇ ತೊಡಗಿರುವ ಇರುವೆಗಳು ಇದೇ ಕಾರಣಕ್ಕಾಗಿ ಜರ್ಮನಿಯ ತಂತ್ರಜ್ಞರ ಗಮನ ಸೆಳೆದಿವೆ. ಇರುವೆಯಂತಹ ಕಾರ್ಮಿಕರು ನಮ್ಮ ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ ಇದ್ದರೆ ಎಷ್ಟೊಂದು ಒಳ್ಳೆಯದು? ಎಂಬ ವಿಚಾರ ತಂತ್ರಜ್ಞರನ್ನು ಕಾಡಿದೆ.  ಈ ತಂತ್ರಜ್ಞರ ಆಲೋಚನೆಯ ಫಲವಾಗಿಯೇ ಜರ್ಮನ್‌ನಲ್ಲಿ ಈಗ ತಾಂತ್ರಿಕ ನೈಪುಣ್ಯದ ಇರುವೆಗಳ ಸೃಷ್ಟಿಯಾಗಿದೆ. ಈ ಬಗ್ಗೆ ಸುಭಾಷ ಯಾದವಾಡ ಇಲ್ಲಿ ವಿವರಿಸಿದ್ದಾರೆ.

ರುವೆ ಗಾತ್ರದಲ್ಲಿ ಕಿರಿದಾದರೂ ಬಹಳ ಕ್ರಿಯಾಶೀಲ ಜೀವಿ.  ಪರಸ್ಪರ ಸಹಕಾರ, ಸಂಘಟಿತ ಜೀವನಶೈಲಿಗೆ ಇರುವೆಗಳು ಒಂದು ಉತ್ತಮ ಉದಾಹರಣೆ.

ಹುಟ್ಟಿನಿಂದ ಸಾಯುವವರೆಗೂ ಅವು ಯಾವ ತಕರಾರನ್ನೂ ಮಾಡದೇ ಸದಾ ದುಡಿತದಲ್ಲಿ ನಿರತವಾಗಿರುತ್ತವೆಯಂತೆ.  ಒಗ್ಗೂಡಿ ದುಡಿಯುವ ಆ ಜೀವಿಗಳು, ಜರ್ಮನಿಯ ತಾಂತ್ರಿಕ ಸಂಶೋಧಕರ ಗಮನ ಸೆಳೆದಿವೆ.

ಇರುವೆಯಂತಹ ಕಾರ್ಮಿಕರು ನಮ್ಮ ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ ಇದ್ದರೆ ಎಷ್ಟೊಂದು ಒಳ್ಳೆಯದು? ಎಂಬ ವಿಚಾರ ಅವರನ್ನು ಕಾಡಿದೆ.  ಅಷ್ಟೇ ಅಲ್ಲ, ಅದರ ಪರಿಣಾಮವಾಗಿಯೇ ಜರ್ಮನ್ ದೇಶದಲ್ಲಿ ಈಗ ಕೃತಕ ಇರುವೆಗಳ ಸೃಷ್ಟಿಯಾಗಿದೆ.

ಈ ಕೃತಕ ತಾಂತ್ರಿಕ ಪುಟಾಣಿ ಜೀವಿಗಳು ಆಕಾರದಲ್ಲಿ ಇರುವೆಗಳಂತೆಯೇ ಇವೆಯಾದರೂ, ಗಾತ್ರದಲ್ಲಿ ಇರುವೆಗಳಿಗಿಂತ ದೊಡ್ಡವು.  ಅವುಗಳ ಗಾತ್ರ ಮನುಷ್ಯನ ಮುಷ್ಟಿಯಷ್ಟು ದೊಡ್ಡದು.

ಪೆಸ್ಟೋ ಎಂಬ ಜರ್ಮನ್ ಎಂಜನಿಯರಿಂಗ್‌ ಸಂಸ್ಥೆ ಈ ಕೃತಕ ಇರುವೆಗಳನ್ನು ಸೃಷ್ಟಿಸಿದೆ. ಪ್ಲಾಸ್ಟಿಕ್ ಹಾಗೂ ಹಗುರವಾದ ಲೋಹಗಳನ್ನು ಬಳಸಿ, 3ಡಿ  ತಂತ್ರಜ್ಞಾನದ ಮುದ್ರಣಯಂತ್ರ ಮೂಲಕ ಈ ಇರುವೆಗಳನ್ನು ಸಿದ್ಧಪಡಿಸಲಾಗಿದೆ.

ಈ ತಾಂತ್ರಿಕ ಇರುವೆಗಳ ಮೇಲ್ಭಾಗದಲ್ಲಿ ಸೂಕ್ಷ್ಮ ವಿದ್ಯುತ್ ಸರ್ಕಿಟ್‌ಗಳನ್ನು ಜೋಡಿಸಲಾಗಿದೆ.  ಅವುಗಳ ಕಾಲಿಗೆ ಗ್ರಿಪ್ಪರ್ಸ ಹಾಗೂ ಬಾಯಿಗೆ ಗರಗಸದಂತಹ ಹಲ್ಲುಗಳನ್ನು ಅಳವಡಿಸಲಾಗಿದೆ. 

ಈ ತಾಂತ್ರಿಕ ಇರುವೆಗಳನ್ನು ರೋಬೋಟಿಕ್ ಆ್ಯಂಟ್ಸ್‌ ಹಾಗೂ ಬಯೋನಿಕ್ ಆ್ಯಂಟ್ಸ್‌ ಎಂದೂ ಕರೆಯಲಾಗುತ್ತದೆ.  ಇವು, ಸಹಕಾರಿ ಮನೋಭಾವವನ್ನು ತಂತ್ರಜ್ಞಾನದಲ್ಲಿ ತುಂಬಿ ತಯಾರಿಸಿದ ಮೊಟ್ಟ ಮೊದಲ ರೋಬೊ (ಯಾಂತ್ರಿಕ ಜೀವಿ) ಎಂದು ಪೆಸ್ಟೊ‌ ಸಂಸ್ಥೆಯ ಡಾ. ಇಂಗ್ ಹೆನ್ರಿಚ್ ಪ್ರಾಂಟ್‌ಜೆಕ್ ಹೇಳುತ್ತಾರೆ.

ಅವರು ಆ ಸಂಸ್ಥೆಯಲ್ಲಿ ಭವಿಷ್ಯದ ಕಲ್ಪನಾ ಯೋಜನೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಾಂತ್ರಿಕ ಇರುವೆಯ ಎರಡೂ ಕಣ್ಣುಗಳಲ್ಲಿ ಪುಟ್ಟ ಕ್ಯಾಮೆರಾಗಳಿವೆ.  ದೇಹದ ಬೇರೆ ಬೇರೆ ಭಾಗಗಳಲ್ಲಿ ಸೆನ್ಸರ್‌ಗಳೂ ಇವೆ.  ಅವು ನಿಖರವಾಗಿ ವಸ್ತುಗಳನ್ನು ಹಾಗೂ ಅಲ್ಲಿ ಮಾಡಬೇಕಾದ ಕಾರ್ಯವನ್ನೂ ಗುರುತಿಸುತ್ತವೆ. ಪ್ರತಿ ಇರುವೆಯೂ ಸಮಯಾನುಸಾರ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುತ್ತದೆ.

ಆ ಗುಂಪಿನಲ್ಲಿರುವ ಎಲ್ಲ ಇರುವೆಗಳ ಮಧ್ಯೆಯೂ ಒಂದು ಬಗೆಯ ಸಹಕಾರ-ಸಂವಹನ ಏರ್ಪಾಡಾಗುತ್ತದೆ.  ಅದಕ್ಕಾಗಿ ನಿಸ್ತಂತು ಸಂಪರ್ಕ ಜಾಲವನ್ನು, ಆ ಇರುವೆಗಳು ಕಾರ್ಯಮಾಡುವ ಸ್ಥಳದಲ್ಲಿ ಜೋಡಿಸಲಾಗಿದೆ.  ಅವುಗಳೆಲ್ಲ ಉದ್ದೇಶಿತ ಕಾರ್ಯಕ್ಕೆ ಅನುಗುಣವಾಗಿಯೇ, ಯಾವ ಗೊಂದಲ-ಘರ್ಷಣೆಯೂ ಇಲ್ಲದೇ ಕಾರ್ಯ ನಿರ್ವಹಿಸುತ್ತವೆ. ಅವು ತಮಗೆ ಒಪ್ಪಿಸಿದ ಕಾರ್ಯವನ್ನು ಕೊಂಚವೂ ವ್ಯತ್ಯಾಸ ಇಲ್ಲದಂತೆ ಪರಿಪೂರ್ಣವಾಗಿ ಮಾಡಿ ಮುಗಿಸುತ್ತವೆ.

ತಾಂತ್ರಿಕ ಇರುವೆಗಳ ಸಂಶೋಧನೆಯಿಂದಾಗಿ ಮಾನವ ಕಾರ್ಮಿಕರಲ್ಲಿ ಒಂದು ಬಗೆಯ ಅಳುಕು-ಆತಂಕ ಶುರುವಾಗಿದೆಯಂತೆ.  ಮುಂದೊಂದು ದಿನ ವಿಜ್ಞಾನಿಗಳು ಕಾರ್ಮಿಕ ರೋಬೊಗಳನ್ನು ನಿರ್ಮಿಸಿ ತಮ್ಮ ಕೆಲಸವನ್ನೇ ಕಸಿದುಕೊಳ್ಳುತ್ತಾರೆಯೇನೋ ಎಂಬ ಆತಂಕ ಕಾರ್ಮಿಕ ಸಮುದಾಯದ್ದಾಗಿದೆ.

ಪೆಸ್ಟೋ ಕಂಪೆನಿ, ತಾಂತ್ರಿಕ ಇರುವೆಗಳ ಜೊತೆಗೆ ತಾಂತ್ರಿಕ ಪತಂಗಗಳನ್ನೂ ನಿರ್ಮಿಸಿದೆ. ಇರುವೆಗಳು ನೆಲದ ಮೇಲೆ ಕಾರ್ಯ ನಿರ್ವವಹಿಸಿದರೆ, ಪತಂಗಗಳು ಹಾರಾಡುತ್ತಾ ಎತ್ತರದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT