ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಲಂಬನೆ, ಅಭಿಮಾನಗಳ ಸುತ್ತ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

 ಜೀವನ ಸಂಗಾತಿಯನ್ನು ಶಾಶ್ವತವಾಗಿ ಕಳೆದುಕೊಂಡಾಗ ಹೆಣ್ಣಿನ ಮನಸ್ಥಿತಿ ಹೇಗಿರುತ್ತದೆ? ಅವಳು ಬದುಕನ್ನು ಹೇಗೆ ಎದುರಿಸುತ್ತಾಳೆ? ಈ ಪ್ರಶ್ನೆಗಳು ಹಲವು ಬಾರಿ ಕಾಡಿದ್ದಿದೆ. ತಕ್ಷಣ ನನಗೆ ನೆನಪಾಗುವುದು ನಾನು ಅತಿ ಹತ್ತಿರದಿಂದ ಕಂಡ ಜಯಾ.

ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ನಾಲ್ಕು ಜನ ಸಹೋದರರ ಮುದ್ದಿನ ತಂಗಿಯಾಗಿ ಬೆಳೆದವಳು. ಮೃದು ಸ್ವಭಾವದ ಸೂಕ್ಷ್ಮ ಮನಸ್ಸಿನವಳು. ವಿವಾಹಾನಂತರ ಒಂದು ಚಿಕ್ಕ ಹಳ್ಳಿಯಲ್ಲಿ ಬದುಕು ಪ್ರಾರಂಭಿಸಿದಾಗ ಅಲ್ಲಿಯ ಒರಟು ಜನ, ಹಳೇ ಕಾಲದ ಮನೆ, ಅತಿ ಹೆಚ್ಚು ಅನಿಸುವಂತಹ ಸಂಪ್ರದಾಯಗಳು ಇವಳನ್ನ ಮತ್ತಷ್ಟು ಸೂಕ್ಷ್ಮಮತಿಯಾಗಿಸಿತು. ಎಲ್ಲ ವಿಷಯಕ್ಕೂ ಪತಿಯ ಮೇಲೆ ಅವಲಂಬಿತಳಾದಳು. ಅವರಿಗೂ ಅದು ಖುಷಿ ಕೊಡುತ್ತಿತ್ತು. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಬೆಳೆದು ಅವರ ಗಂಡಂದಿರ ಮನೆ ಸೇರಿದ ನಂತರ ಇವಳ ಪತಿಯ ಮೇಲಿನ ಅವಲಂಬನೆ ಮತ್ತಷ್ಟು ಜಾಸ್ತಿಯಾಯಿತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಅವರು ಹೃದಯಾಘಾತದಿಂದ ಕಣ್ಮುಚ್ಚಿದಾಗ ಅವಳ ಸ್ಥಿತಿ ಶೋಚನೀಯವಾಯಿತು. ಪತಿಯಿಂದಲೇ ತನ್ನ ಅಸ್ತಿತ್ವ ಎಂದು ಭಾವಿಸಿದವಳಿಗೆ ಈ ಸತ್ಯವನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಪತಿಯನ್ನು ಕಳೆದುಕೊಂಡ ದುಃಖ, ಸೌಭಾಗ್ಯದ ಲಕ್ಷಣಗಳನ್ನು ಕಳಚಬೇಕಲ್ಲಾ ಎಂಬ ನೋವು ಒಂದು ಕಡೆ-ಇದೆಲ್ಲದರ ನಡುವಿನ ಹೋರಾಟದಲ್ಲಿ ಯಾರೆಷ್ಟೇ ಹೇಳಿದರೂ ಪತಿಯಿಲ್ಲದ ತನ್ನ ಬದುಕು ವ್ಯರ್ಥ ಎಂಬ ನಿರ್ಧಾರಕ್ಕೆ ಅಂಟಿಕೊಂಡಿದ್ದ ಜಯಾ ತನ್ನ ಐವತ್ತನೇ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಹಿಂದೆ ಬಿಟ್ಟು, ಪತಿ ನಿಧನವಾದ ಕೇವಲ ಒಂದು ವರ್ಷದಲ್ಲಿ ಇಹಲೋಕ ತ್ಯಜಿಸಿದಳು.

ಇದೇ ಸಂದರ್ಭದಲ್ಲಿ ನನಗೆ ನೆನಪಾಗುವವರು ಇತ್ತೀಚೆಗೆ ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ತೀರಿಕೊಂಡ ಸರಸಮ್ಮ. ಅತಿ ಬಡತನ ತುಂಬು ಕುಟುಂಬದಲ್ಲಿ ಬೆಳೆದ ಆಕೆ ಬದುಕುವುದಕ್ಕೆ ಹೋರಾಡಲೇ ಬೇಕೆಂಬ ಸತ್ಯವನ್ನು ಚಿಕ್ಕ ವಯಸ್ಸಿನಲ್ಲೇ ಅರಿತಿದ್ದಳು. ಅನಕ್ಷರಸ್ಥೆಯಾದ ಆಕೆ ಮದುವೆಯಾಗಿದ್ದು ತನ್ನಷ್ಟೇ ಬಡವ್ಯಕ್ತಿಯನ್ನು. ಇಡೀ ಮನೆಯನ್ನ್ನು ತೂಗಿಸಬೇಕಾದ ಜವಾಬ್ದಾರಿ ಈಕೆಯದು. ಇವರದು ಅನುರೂಪ ದಾಂಪತ್ಯ. ಅವಳ ಎಪ್ಪತ್ತನೆಯ ವಯಸ್ಸಿನಲ್ಲಿ ಪತಿ ತೀರಿಕೊಂಡಾಗ ಎಲ್ಲರೂ ಅನುಕಂಪ ಸೂಚಿಸುವವರೇ. ಮಕ್ಕಳೆಲ್ಲಾ ತಮ್ಮ ಮನೆಗೆ ಬರುವಂತೆ ಕರೆದರೂ ಯಾರ ಮನೆಗೂ ಹೋಗದೆ ಒಂದು ಪುಟ್ಟ ಮನೆ ಬಾಡಿಗೆ ಹಿಡಿದು ತನ್ನ ಸೌಭಾಗ್ಯ ಲಕ್ಷಣವೊಂದನ್ನೂ ತೆಗೆಯದೆ ಮಿಕ್ಕ ಜೀವನ ಸಾಗಿಸಿದಾಗ ಎಲ್ಲರಿಗೂ ಅಚ್ಚರಿ. ಅವಳ ಮಗಳು ತಾಯಿಯ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಾ ‘ಬ್ಯಾಂಕಿನಿಂದ ದುಡ್ಡು ತಂದು ಕೊಡಲೇ’ ಎಂದು ಕೇಳಿದಾಗ ಸರಸಮ್ಮನ ಉತ್ತರ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿತು. ಪತಿ ನಿವೃತ್ತರಾದ ನಂತರ ಅವರಿಬ್ಬರೂ ತಮ್ಮಲ್ಲಿ ಮೊದಲು ಯಾರು ಪ್ರಪಂಚ ಬಿಟ್ಟು  ಹೋದರೂ ಇನ್ನೊಬ್ಬರು ಕಳೆದುಕೊಂಡವರ ನೆನಪಿನಲ್ಲಿ ಕೊರಗದೆ ಸ್ವಾವಲಂಬಿಗಳಾಗಿ ಬದುಕುವುದು ಹೇಗೆ ಎಂದು ಆಲೋಚಿಸಿದ್ದರಂತೆ. ಪತಿ ತನ್ನ ಪತ್ನಿಗೆ ಹಣಕಾಸಿನ ವಿಚಾರಕ್ಕೆ ಅಕ್ಷರಸ್ಥೆಯಾಗುವುದು ಅತಿ ಅವಶ್ಯಕವೆಂದು ಅರಿತು ಆಕೆಯನ್ನು ಬ್ಯಾಂಕಿಗೆ ಕರೆದೊಯ್ದು ಮ್ಯಾನೇಜರ್‌ಗೆ ಪರಿಚಯಿಸಿ ಇನ್ನು ಮುಂದೆ ತನ್ನ ಪತ್ನಿ ಹೆಬ್ಬೆಟ್ಟಲ್ಲಾ, ಅವಳಿಗೆ ಸಹಿಮಾಡಲು ಬರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ತಾವು ತಮ್ಮ ಪತ್ನಿಯಿಂದ ಅಡುಗೆ ಮಾಡಲು ಕಲಿತಿದ್ದಾರೆ. ನಿಧಾನವಾಗಿ ಪತ್ನಿಯೇ ಹಣ ಪಡೆಯುವುದನ್ನು ಕಲಿಸಿದ್ದಾರೆ.

ಇದನ್ನು ನೋಡಿದ ನನಗೆ ವಿದ್ಯಾವಂತೆಯಾದ ಜಯಾ ಪತಿಯ ಅಗಲಿಕೆಯ ನಂತರ ಕುಸಿದು ಹೋದ ಪ್ರಸಂಗ ನೆನಪಿಗೆ ಬಂದಿತು. ಪತಿ- ಪತ್ನಿಯರು ಒಬ್ಬರ ನಿಧನಾನಂತರ ಮತ್ತೊಬ್ಬರು ಬದುಕನ್ನು ಎದುರಿಸುವ ಬಗ್ಗೆ ಚಿಂತನೆ ನಡೆಸಿದ್ದು ಅಕ್ಷರಸ್ಥರಲ್ಲದ ದಂಪತಿ ನೋಡಿದಾಗ ಅಚ್ಚರಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT