ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶೋಕ ಮಾನವ ಧರ್ಮ ಪ್ರತಿಪಾದಕ

ಪ್ರಜಾವಾಣಿ ವಾರ್ತೆ
Last Updated 8 ಫೆಬ್ರುವರಿ 2016, 10:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಶೋಕ ಬೌದ್ಧ ಧರ್ಮಿಯನಾದರು ಸಹ ಸರ್ವಧರ್ಮ ಸಹಿಷ್ಣು ಆಗಿದ್ದನು. ಅಲ್ಲದೆ, ಮಾನವ ಧರ್ಮ ಪ್ರತಿಪಾದಿಸುವ ಮೂಲಕ ಸಮಾಜಮುಖಿಯಾದ ನೈತಿಕ ಮೌಲ್ಯ ಗಳನ್ನೇ ಎತ್ತಿ ಹಿಡಿದು ಇತರರಿಗೂ ಮಾದರಿಯಾದ ಎಂದು ಬೆಂಗಳೂರಿನ ಶಾಸನತಜ್ಞ ಡಾ.ಎಚ್.ಎಸ್‌.ಗೋಪಾಲ ರಾವ್ ತಿಳಿಸಿದರು.

ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ – ಸಂಸ್ಕೃತಿ – ಸಂಶೋಧನೆಗಳ ವಿಚಾರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ – 7 ಕಾರ್ಯಕ್ರಮದಲ್ಲಿ ‘ಕರ್ನಾಟಕದ ಅಶೋಕನ ಶಾಸನಗಳು ಸಮಾಜೋ – ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆ’ ವಿಷಯ ಕುರಿತು ಅವರು ಮಾತನಾಡಿದರು.

ಕಳಿಂಗ ಯುದ್ಧದ ಬಳಿಕ ಬೌದ್ಧ ಮತ ಪ್ರಚಾರಗೊಳಿಸುವುದರಲ್ಲಿ ತೊಡಗಿ ಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಆದರೂ, ತನ್ನ ಶಾಸನಗಳಲ್ಲಿ ಎಲ್ಲಿಯೂ ಬುದ್ಧನ ಬಗ್ಗೆ ಉಲ್ಲೇಖ ಮಾಡಲಿಲ್ಲ ಎಂದರು.

ಅಹಿಂಸೆ, ಪರಮತ ಸಹಿಷ್ಣುತೆ, ಮಾತಾಪಿತರಿಗೆ ವಿಧೇಯತೆ, ಧಾರ್ಮಿಕ ಗುರುಗಳು, ಆಚಾರ್ಯರುಗಳಲ್ಲಿ ಗೌರವ, ಮಿತ್ರರಿಗೆ ಔದಾರ್ಯ, ಸೇವಕ ವರ್ಗದವರೊಂದಿಗೆ ಮಾನವೀಯ ನಡವಳಿಕೆ ಜತೆಗೆ ಎಲ್ಲರೊಂದಿಗೂ ಉದಾರ ಪ್ರವೃತ್ತಿಯಿಂದ ನಡೆದುಕೊಳ್ಳುತ್ತಿದ್ದನು ಎಂಬುದು ಅವನ ಶಾಸನಗಳಿಂದ ತಿಳಿದು ಬಂದಿದೆ ಎಂದರು.

ಉತ್ತಮ ರಾಜತಾಂತ್ರಿಕ ವ್ಯವಸ್ಥೆ ರೂಪಿಸಿದ್ದ ಅಶೋಕ, ಆಚಾರ – ವಿಚಾರ, ಧರ್ಮ – ಸಿದ್ಧಾಂತ, ಆಹಾರ ಕ್ರಮಕ್ಕೆ ಎಂದಿಗೂ ಅಡ್ಡಿ ಪಡಿಸಲಿಲ್ಲ. ಎಲ್ಲ ಧರ್ಮವನ್ನು ಪ್ರೀತಿಸುವ ಗುಣ ಹೊಂದಿದ್ದನು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ 17 ಶಾಸನಗಳು: ಅಶೋಕನ ಒಟ್ಟು 155 ಶಾಸನಗಳು ಲಭ್ಯವಾಗಿದ್ದು, ಅದರಲ್ಲಿ 17 ನಮ್ಮ ರಾಜ್ಯದಲ್ಲಿ ದೊರೆತಿವೆ. ಅದರಲ್ಲಿ ಮೂರು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗರಾಮೇಶ್ವರದಲ್ಲಿವೆ. ಶಾಸನಗಳೆಲ್ಲ ಬ್ರಾಹ್ಮಿ ಮತ್ತುಖರೋಷ್ಠಿ ಲಿಪಿಗಳಲ್ಲಿವೆ. ಬ್ರಾಹ್ಮಿ ಬರಹವನ್ನು ಎಡಗಡೆಯಿಂದ ಬಲಗಡೆಗೂ ಖರೋಷ್ಠಿಯನ್ನು ಈಗಿನ ಉರ್ದು ಭಾಷೆಯಂತೆ ಬಲದಿಂದ ಎಡಕ್ಕೂ ಓದಬೇಕು. ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನದ ಕೊನೆಯ ಪಂಕ್ತಿ ಖರೋಷ್ಠಿಯಲ್ಲಿದೆ ಎಂದು ವಿವರಿಸಿದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಇತಿಹಾಸ ಕೂಟದ ಸಂಚಾಲಕ ಡಾ.ಎಚ್‌.ಗುಡ್ಡದೇಶ್ವರಪ್ಪ, ನಿರ್ದೇಶಕ ಪ್ರೊ.ಲಕ್ಷ್ಮಣ್ ತೆಲಗಾವಿ, ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ಪ್ರೊ.ಕೆ.ಸಜ್ಜಾತ್‌, ಹಿರಿಯ ನಾಗರಿಕರಾದ ವೆಂಕಣ್ಣಾಚಾರ್‌, ಮೃತ್ಯುಂಜಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT