ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸದ್‌ಗೆ ಐದು ವರ್ಷ ನಿಷೇಧ

ಉಡುಗೊರೆ ಪಡೆದ ವಿವಾದದಲ್ಲಿ ಸಿಲುಕಿದ್ದ ಅಂಪೈರ್‌
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಐಪಿಎಲ್ ಪಂದ್ಯಗಳ ವೇಳೆ ಬುಕ್ಕಿಗಳಿಂದ ಉಡು ಗೊರೆಗಳನ್ನು ಪಡೆದ ಆರೋಪ ಎದು ರಿಸುತ್ತಿದ್ದ  ಪಾಕಿಸ್ತಾನದ ಅಂಪೈರ್ ಅಸದ್ ರೌಫ್‌ ಅವರಿಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಶಿಸ್ತು ಸಮಿತಿ ಐದು ವರ್ಷ ನಿಷೇಧ ಹೇರಿದೆ.

59 ವರ್ಷದ ಅಸದ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಎಲೈಟ್‌ ಸಮಿತಿಯ ಅಂಪೈರ್‌ ಆಗಿದ್ದರು.  2013ರ ಐಪಿಎಲ್‌ ವೇಳೆ ಉಡುಗೊರೆ ಪಡೆದ ಆರೋಪಕ್ಕೆ ಸಿಲುಕಿದ್ದರು. ಈಗ ಆರೋಪ ಸಾಬೀತಾಗಿ ರುವ ಕಾರಣ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಸಮಿತಿ ಶುಕ್ರವಾರ ಇಲ್ಲಿ ಸಭೆ ಸೇರಿತ್ತು.

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ಅಸದ್ 71 ಪ್ರಥಮ ದರ್ಜೆಗಳಿಂದ ಒಟ್ಟು 3423 ರನ್‌ಗಳನ್ನು ಕಲೆ ಹಾಕಿದ್ದಾರೆ. 40 ಲೀಸ್ಟ್‌ ‘ಎ’ ಪಂದ್ಯಗಳನ್ನು ಆಡಿದ್ದಾರೆ. ಇವರ ವಿರುದ್ಧ ಆರೋಪ ಕೇಳಿ ಬಂದಾಗ ಐಸಿಸಿ ಎಲೈಟ್‌ ಸಮಿತಿಯಿಂದ ಕೈಬಿಟ್ಟಿತ್ತು.

2000ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯಕ್ಕೆ ಅಸದ್ ಅಂಪೈರಿಂಗ್ ಮಾಡಿದ್ದರು. 49 ಟೆಸ್ಟ್‌, 98 ಏಕದಿನ ಮತ್ತು 23  ಅಂತರ ರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಿಗೆ ಅಂಪೈರ್ ಜವಾಬ್ದಾರಿ ನಿಭಾಯಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ರಚಿ ಸಲಾಯಿತ್ತು. ಬಿಸಿಸಿಐ ಅಧ್ಯಕ್ಷ ಶಶಾಂಕ್‌ ಮನೋಹರ್‌ ಸಮಿತಿಯ ಮುಖ್ಯಸ್ಥರಾಗಿದ್ದರು. ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ನಿರಂಜನ್‌ ಷಾ ಅವರು ಸಮಿತಿ ಯಲ್ಲಿದ್ದರು.

‘ಅಸದ್‌ ವಿರುದ್ಧ ಆರೋಪ ಕೇಳಿ ಬಂದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಅವರು ಬರಲಿಲ್ಲ. ಆದರೆ ಪತ್ರ ಬರೆದು ವಿವರಣೆ ನೀಡಲು ಕಾಲಾವಕಾಶ ನೀಡಬೇಕೆಂದು ಕೋರಿ ದ್ದರು. ಆದ್ದರಿಂದ  ಜನವರಿ 15ರ ವರೆಗೆ ಸಮಯ ಕೊಟ್ಟಿದ್ದೆವು. ಆಗಲೂ ಅವ ರಿಂದ ಸಹಕಾರ ದೊರೆತಿರಲಿಲ್ಲ. ಮತ್ತೆ ಸಮಿತಿಯೇ  ಎರಡು ವಾರ ಸಮಯ ನೀಡಿತ್ತು. ಮತ್ತೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಿಷೇಧ ಶಿಕ್ಷೆ ಹೇರಲು ತೀರ್ಮಾನಿಸಲಾಯಿತು.  ಅಧಿ ಕೃತ ಕ್ರಿಕೆಟ್‌ ಮಂಡಳಿಗಳು ನಡೆಸುವ ಯಾವ ಟೂರ್ನಿಗಳಲ್ಲಿಯೂ ಆಡು ವಂತಿಲ್ಲ. ಅಂಪೈರಿಂಗ್ ಕೂಡ ಮಾಡು ವಂತಿಲ್ಲ’ ಎಂದು ಬಿಸಿಸಿಐ ಪ್ರಕಟಣೆ ಯಲ್ಲಿ ತಿಳಿಸಿದೆ.

ಸ್ಪಾಟ್‌ ಫಿಕ್ಸಿಂಗ್ ಚಟುವಟಿಕೆಗಳಲ್ಲಿ ಅಸದ್ ಕೂಡ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಾಗ ಮುಂಬೈ ಪೊಲೀಸರು ಈ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿ ಕೊಂಡಿದ್ದರು.

ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದ ಆಫ್‌ ಸ್ಪಿನ್ನರ್  ಹರಿಯಾಣದ ಅಜಿತ್‌ ಚಾಂಡಿಲಾಗೆ ಬಿಸಿಸಿಐ ಆಜೀವ ನಿಷೇಧ ಮತ್ತು ಮುಂಬೈನ ಬ್ಯಾಟ್ಸ್‌ಮನ್‌ ಹಿಕೇನ್‌ ಷಾಗೆ ಐದು ವರ್ಷ ನಿಷೇಧ ಹೇರಿತ್ತು. ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಆಟಗಾರ ಚಾಂಡಿಲಾ ಬೆಟ್ಟಿಂಗ್ ನಡೆಸಲು ಬುಕ್ಕಿಗಳು ಜೊತೆ ಸಂಪರ್ಕ ಹೊಂದಿದ್ದು ತನಿಖೆಯಿಂದ ಸಾಬೀತಾ ಗಿತ್ತು. ಈ ಎಲ್ಲಾ ಪ್ರಕರಣಗಳ ಬಗ್ಗೆ ಮೂವರು ಸದಸ್ಯರನ್ನು ಒಳಗೊಂಡ ಬಿಸಿಸಿಐ ಶಿಸ್ತು ಸಮಿತಿ ವಿಚಾರಣೆ ನಡೆಸಿತ್ತು.

ಬಿಸಿಸಿಐ ವಿರುದ್ಧ ವಾಗ್ದಾಳಿ(ಕರಾಚಿ ವರದಿ): ಐದು ವರ್ಷ ನಿಷೇಧ ಶಿಕ್ಷೆ ಹೇರಿರುವ ಬಿಸಿಸಿಐ ವಿರುದ್ಧ ಅಸದ್ ರೌಫ್‌ ವಾಗ್ದಾಳಿ ನಡೆಸಿದ್ದಾರೆ.

‘ನನ್ನ ಮೇಲಿನ ಆರೋಪಗಳಿಗೆ ಪುರಾವೆಗಳು ಇಲ್ಲದಿದ್ದರೂ ಮಂಡಳಿ ಶಿಕ್ಷೆ ವಿಧಿಸಿದೆ. ಈ ಆರೋ ಪಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಆದರೂ ನಿಷೇಧ ಹೇರಲು ಬಿಸಿ ಸಿಐಗೆ ಆಗಲಿ ಹಾಗೂ ಐಪಿಎಲ್‌ ಗಾಗಲಿ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದ್ದಾರೆ.

‘ನನ್ನ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು  ಬಿಸಿಸಿಐ ಮತ್ತು ಐಪಿಎಲ್‌ ಮಂಡಳಿ ತನಿಖಾ ಅಧಿಕಾರಿಯನ್ನು ನೇಮಿಸಿದ್ದವು. ನಾನು ಯಾವ ಅಪರಾಧವನ್ನೂ ಮಾಡಿಲ್ಲ.  ಪಂದ್ಯಗಳಿಗೆ ಅಂಪೈ ರಿಂಗ್ ಮಾಡುವ ಜವಾಬ್ದಾರಿ ಮುಗಿದ ಮರುದಿನವೇ ಭಾರತ ದಿಂದ ಹೊರಟು ಬಂದಿದ್ದೇನೆ’  ಎಂದು ಅಸದ್ ಹೇಳಿದ್ದಾರೆ.

ಇವರ ವಿರುದ್ಧ ಆರೋಪ ಕೇಳಿ ಬಂದಿದ್ದ ಕಾರಣ 2013ರ ಚಾಂಪಿ ಯನ್ಸ್ ಟ್ರೋಫಿಗೆ ಕಾರ್ಯ ನಿರ್ವಹಿ ಸಲು ಅವಕಾಶ ಕೊಟ್ಟಿರಲಿಲ್ಲ. ಅಸದ್‌ ವಿರುದ್ಧ ತನಿಖೆ ನಡೆಯುತ್ತಿರುವ ಕಾರಣ ಅವರನ್ನು ಅಂಪೈರ್‌ ಕೆಲಸಕ್ಕೆ ನಿಯೋಜಿಸಬಾರದು ಎಂದು ಐಸಿಸಿಗೆ ಬಿಸಿಸಿಐ ತಿಳಿಸಿತ್ತು.

‘ಜೀನ್ಸ್‌, ಟಿ ಶರ್ಟ್‌ ಹಾಗೂ ಕ್ಯಾಪ್‌ ಹೀಗೆ ಸಣ್ಣ ಸಣ್ಣ ಉಡುಗೊರೆ ಗಳನ್ನು ಪಡೆದಿದ್ದಾರೆ.  ಇದೇನು ದೊಡ್ಡ ವಿಷಯವಲ್ಲ ಎಂದು ಸ್ವತಃ  ಕೋರ್ಟ್‌ ಹೇಳಿದೆ.    ಇದೆಲ್ಲವೂ ನನ್ನ ವಿರುದ್ಧ ನಡೆದ ವ್ಯವಸ್ಥಿತ ಕುತಂತ್ರ’ ಎಂದೂ ಅವರು ಆರೋಪಿಸಿದ್ದಾರೆ.

ಬಿಸಿಸಿಐ ನಿರ್ಧಾರದ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

‘ನಿಷೇಧ ಹೇರಿ ನನ್ನ ಘನತೆಗೆ ಧಕ್ಕೆ ತಂದಿದೆ. ವಕೀಲರ ಮೂಲಕ ಬಿಸಿಸಿಐ ಕಚೇರಿಗೆ ಹೋಗುತ್ತೇನೆ. ಈ ಘಟನೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯೇ ಯೋಚಿಸಿಲ್ಲ. ಇಷ್ಟೆಲ್ಲಾ ನಿರ್ಧಾರ ತಗೆದುಕೊಳ್ಳಲು ಭಾರತ ಕ್ರಿಕೆಟ್‌ ಆಡಳಿತಕ್ಕೆ ಅಧಿಕಾರ ಕೊಟ್ಟಿ ದ್ದಾದರೂ ಯಾರು’ ಎಂದು ಪಾಕಿಸ್ತಾನದ ಅಂಪೈರ್‌ ಕೇಳಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಸಿಕ್ಕಿ ಬಿದ್ದಿ ರುವ ಬಾಲಿವುಡ್‌ ನಟ ವಿಂದೂ ದಾರಸಿಂಗ್‌ ಜೊತೆ ಅಸದ್ ಸಂಪರ್ಕ ಹೊಂದಿದ್ದ ಆರೋಪ ಎದುರಿಸುತ್ತಿ ದ್ದರು. ಅಸದ್‌ 2006ರಲ್ಲಿ ಎಲೈಟ್‌ ಅಂಪೈರ್ ಆಗಿ ಬಡ್ತಿ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT