ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹನೆಯ ರಾಜಕಾರಣ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪ್ರಜಾಪ್ರಭುತ್ವದ ಪರಂಪರೆಗೆ  ಅನ್ಯವಾದ ಅಸಹನೆಯ ರಾಜಕಾರಣ ತನ್ನ ಕೋರೆದಾಡೆಗಳನ್ನು ಪ್ರದರ್ಶಿಸಲು ಆರಂಭಿಸಿದ್ದಕ್ಕೆ ಸ್ವತಂತ್ರ ಭಾರತ­­ದಷ್ಟೇ ಸುದೀರ್ಘವಾದ ಇತಿಹಾಸವಿದೆ. ಕಲಾಕೃತಿಗಳ ನಾಶ, ಪುಸ್ತಕ­ಗಳ ನಿಷೇಧ, ಬಹುತ್ವದ ಸಾಂಸ್ಕೃತಿಕ ಸಂಕೇತಗಳನ್ನು ನಿರ್ದಿಷ್ಟ ಮತ–ಧರ್ಮ­ಗಳಿಗೆ ಸೀಮಿತಗೊಳಿಸುವುದರಲ್ಲಿ ತೊಡಗಿಕೊಂಡಿದ್ದ ಅಸಹನೆಯ ರಾಜ­ಕಾ­ರಣ ಈಗ ಮತ್ತೊಂದು ಮಜಲಿಗೆ ತಲುಪಿದೆ.

ಸಾಹಿತಿಗಳು, ಬರಹ­ಗಾರರು ಮತ್ತು ಕಲಾವಿದರಂಥ ಸಾರ್ವಜನಿಕ ವ್ಯಕ್ತಿತ್ವವಿರುವವರು ತಮ್ಮ ರಾಜಕೀಯ ನಿಲುವುಗಳನ್ನು ಬಹಿರಂಗವಾಗಿ ಪ್ರತಿಪಾದಿಸುವುದನ್ನೂ ತಪ್ಪು ಎನ್ನುತ್ತಿದೆ. ಇತ್ತೀಚೆಗೆ ಹಿರಿಯ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಗಿರೀಶ ಕಾರ್ನಾಡ್, ಚಿಂತಕ ಜಿ.ಕೆ. ಗೋವಿಂದ ರಾವ್, ನಾಟಕಕಾರ ಕೆ.ಮರುಳ­ಸಿದ್ಧಪ್ಪ ಮುಂತಾದವರು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಜಾತ್ಯತೀತ­ತೆಯನ್ನು ಉಳಿಸುವುದಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು ಎಂಬ ಅಭಿ­ಪ್ರಾಯ ವ್ಯಕ್ತಪಡಿಸಿದ್ದರು.

ಈ ನಿಲುವಿನ ಹಿಂದೆ ಅವರ ವೈಯಕ್ತಿಕ ರಾಜ­ಕೀಯ ಆಯ್ಕೆ­ಗಳು ಕೆಲಸ ಮಾಡಿದ್ದವು. ಈ ತನಕದ ಸಾಹಿತ್ಯಿಕ ಮತ್ತು ಸಾರ್ವ­ಜನಿಕ ಬದುಕಿ­ನಲ್ಲಿ ಅವರು ಪ್ರತಿಪಾದಿಸುತ್ತಾ ಬಂದಿದ್ದ ನಿಲುವುಗಳನ್ನೇ ಇಲ್ಲಿಯೂ ಹೇಳಿದ್ದರು. ಇದನ್ನು ವಿಮರ್ಶಿಸುವ ಮತ್ತು ಪ್ರತಿವಾದ ಮಂಡಿಸುವ ಹಕ್ಕು ರಾಜ­ಕೀಯ ಪಕ್ಷಗಳೂ ಸೇರಿದಂತೆ ಭಾರತದ ಎಲ್ಲಾ ಪೌರ­ರಿಗೂ ಇದೆ. ಆದರೆ ಬಿಜೆಪಿಯ ಹಲವು ಮುಖಂಡರು ಈ ಸಾಹಿತಿಗಳ ನಿಲುವಿಗೆ ಪ್ರತಿಕ್ರಿ­ಯಿಸುತ್ತಿರುವ ಬಗೆ ಕೀಳು ಮಟ್ಟದ್ದಾಗಿದೆ. ಅಭಿಪ್ರಾಯ ಭೇದ­ವನ್ನು ಮುಂದಿ­ಡು­ವುದಕ್ಕೂ, ಭಿನ್ನಾಭಿಪ್ರಾಯವನ್ನು ದಮನಿಸುವುದಕ್ಕೂ ವ್ಯತ್ಯಾಸವೇ ಇಲ್ಲ ಎಂಬಂತೆ ಈ ಪ್ರತಿಕ್ರಿಯೆಗಳಿವೆ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವವುಳ್ಳ ನಾಯಕರಿಂದಲೂ ಅಸಹನೆಯ ರಾಜಕಾರಣದ ಅತ್ಯುತ್ತಮ ಉದಾಹರಣೆಯಾಗುವಂತಹ ಮಾತು ಬರುತ್ತಿರುವುದು  ದುರದೃಷ್ಟಕರ.

ಸಾಹಿತಿಗಳು ರಾಜಕೀಯ ನಿಲುವನ್ನು ಇಟ್ಟುಕೊಂಡಿರುವುದೇ ತಪ್ಪು. ಇದ್ದರೂ ಅದನ್ನು ಬಹಿರಂಗವಾಗಿ ಹೇಳಬಾರದು ಎಂದೆಲ್ಲಾ ಮಾತನಾಡು­ತ್ತಿ­ರುವ ಬಿಜೆಪಿ ನಾಯಕರು ಅವರ ಪಕ್ಷವನ್ನು ಬೆಂಬಲಿಸುವ ಸಾಹಿತಿಗಳು, ಬರಹ­ಗಾರರು ಮತ್ತು ಪತ್ರಕರ್ತರಿದ್ದಾರೆ ಎಂಬುದರ ಕುರಿತಂತೆ ಜಾಣ ಮರೆ­ವನ್ನು ನಟಿಸುತ್ತಾರೆ. ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಸಂಶೋಧಕ ಎಂ.ಚಿದಾನಂದಮೂರ್ತಿ ಮುಂತಾದವರು ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿಯೇ ಸರಿ ಎಂಬಂಥ ಮಾತು ಆಡಿದ್ದಾರೆ.

ಈ ಸಂದರ್ಭದಲ್ಲಿ ಸಾಹಿತಿ­ಗಳು ಹೀಗೆಲ್ಲಾ ಮಾತನಾಡಬಾರದೆಂದು ಬಿಜೆಪಿಗೆ ಅನ್ನಿಸಿದ್ದಿಲ್ಲ. ಅಷ್ಟೇಕೆ ಬಿಜೆಪಿ­ಯನ್ನು ವಿರೋಧಿಸುವ ಯಾವ ಪಕ್ಷವೂ ಈ ಸಾಹಿತಿಗಳನ್ನು ವೈಯಕ್ತಿಕ­ವಾಗಿ ನಿಂದಿಸುವ ಮಟ್ಟಕ್ಕೆ ಇಳಿದ ಉದಾಹರಣೆಗಳೂ ಇಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು ನಿವೃತ್ತರಾದವರೂ ಸಕ್ರಿಯ ರಾಜಕಾರ­ಣಕ್ಕೆ ಬಂದು ತಮ್ಮ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ ಮತ್ತು ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯಿಂದಲೇ ಉದಾಹರಣೆಗಳನ್ನು ತೆಗೆ­ದು­ಕೊಳ್ಳಬಹುದು.

ಇಷ್ಟಾಗಿಯೂ ತಮ್ಮ ಪಕ್ಷದ ರಾಜಕೀಯ ನಿಲುವು­ಗಳನ್ನು ಸಾಹಿತಿಗಳು ಪ್ರಶ್ನಿಸಿದಾಕ್ಷಣ ಬಿಜೆಪಿಯ ಕೆಲವು ನಾಯಕರು  ಅಪ್ರ­ಬುದ್ಧ ಮತ್ತು ಕೀಳುಮಟ್ಟದ ಟೀಕೆಗಳಲ್ಲಿ ತೊಡಗಿರುವುದು ಚೋದ್ಯದ ಸಂಗತಿ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಆಡಳಿತ ನಡೆಸಿದ ಅನುಭವವಿರುವ ಬಿಜೆಪಿಯಂಥ ಪಕ್ಷವನ್ನು ಪ್ರತಿನಿಧಿಸುತ್ತಿರುವ ಮುಖಂಡರಿಗೆ ಭಿನ್ನಾಭಿಪ್ರಾಯ­ಗಳನ್ನು ಮುಕ್ತವಾಗಿ ಸ್ವೀಕರಿಸಬೇಕು ಎಂಬುದನ್ನು ಯಾರಾದರೂ ಹೇಳಿಕೊಡುವ ಅಗತ್ಯ ಉದ್ಭವಿಸಬಾರದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT