ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆಗೆ ‘ಗಾಂಧಿ ಮಾರ್ಗ’ ಉತ್ತರ: ಲೀಲಾ ಅಭಿಮತ

Last Updated 29 ನವೆಂಬರ್ 2015, 19:24 IST
ಅಕ್ಷರ ಗಾತ್ರ

ಬೆಂಗಳೂರು: ಅಸಹಿಷ್ಣುತೆಯ ಇಂದಿನ ಕಾಲಘಟ್ಟದಲ್ಲಿ ಗಾಂಧಿ ಮಾರ್ಗವೇ ಪರಿಹಾರ ಎಂಬ ಅಭಿಪ್ರಾಯ ಭಾನುವಾರ ಇಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಮಹಾದೇವಪ್ಪ ಮೈಲಾರ ಅವರ ದತ್ತಿ ಕಾರ್ಯಕ್ರಮದಲ್ಲಿ  ವ್ಯಕ್ತವಾಯಿತು. ಗಾಂಧಿವಾದಿ ಲೀಲಾ ಅಪ್ಪಾಜಿ ಮಾತನಾಡಿ, ‘ಅಸಹಿಷ್ಣುತೆಯ ಇಂದಿನ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿ ನಡೆಯುವುದೇ ಅದಕ್ಕಿರುವ ಪರಿಹಾರ’ ಎಂದು ಅಭಿಪ್ರಾಯಪಟ್ಟರು.

‘ಇಡೀ ಜಗತ್ತಿಗೆ ಸಹಿಷ್ಣುತೆಯ ತತ್ವ ಬೋಧಿಸಿದವರು ಗಾಂಧೀಜಿ. ಸತ್ಯ ಮತ್ತು ಅಹಿಂಸೆ ಮೂಲಕ ಎಂತಹವರ ಮನಸ್ಸನ್ನೂ ಗೆಲ್ಲಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಹಿಂಸೆಯನ್ನು ಒಂದು ಸಿದ್ಧಾಂತವಾಗಿ ಬದಲಾಯಿಸಿದ ಮಹಾನ್‌ ವ್ಯಕ್ತಿ’ ಎಂದರು.

‘ಇಂದಿನ ಕಾಲಘಟ್ಟದಲ್ಲಿ ಇಡೀ ಜಗತ್ತನ್ನು ಪ್ರೇರೇಪಿಸಬಲ್ಲ ವ್ಯಕ್ತಿ ಯಾರೆಂದೂ ಅಮೆರಿಕದಲ್ಲಿ ಇತ್ತೀಚೆಗೆ ಸರ್ವೇ ನಡೆಸಲಾಗಿತ್ತು. ಅದರಲ್ಲಿ ಹೆಚ್ಚಿನವರ ಉತ್ತರ ಗಾಂಧಿ ಎಂದಾಗಿತ್ತು. ಹಾಗಾಗಿ ಇಂದಿಗೂ ಗಾಂಧೀಜಿ ಮತ್ತು ಅವರ ತತ್ವಗಳು ಹೆಚ್ಚು ಪ್ರಸ್ತುತ’ ಎಂದು ತಿಳಿಸಿದರು.

‘ಗಾಂಧೀಜಿ ಅವರು ಮನಸ್ಸು ಮಾಡಿದರೆ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರನ್ನು ಉಳಿಸಬಹುದಿತ್ತು. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಸಹಕರಿಸಿದ್ದರೆ ದೇಶಕ್ಕೆ ಇನ್ನೂ  ಬೇಗ ಸ್ವಾತಂತ್ರ್ಯ ಸಿಗುತ್ತಿತ್ತು ಎನ್ನುವುದು ಸೇರಿದಂತೆ ಹೀಗೆ ಅನೇಕ ಸುಳ್ಳು ವಿಚಾರಗಳನ್ನು ಹೇಳಿ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಗಾಂಧಿಯನ್ನು ಅಪಹಾಸ್ಯ ಮಾಡುವ ಸ್ಥಳದಲ್ಲಿ ಅವರ ತತ್ವ ಅನುಸರಿಸುವ ಮೂಲಕ ಉತ್ತರ ನೀಡಬೇಕು’ ಎಂದು ಹೇಳಿದರು.

‘ಗಾಂಧೀಜಿಯವರು ತಮ್ಮ ನಡೆ–ನುಡಿ ಮೂಲಕ ಅನೇಕ ಜನರನ್ನು ತಮ್ಮತ್ತ ಆಕರ್ಷಿಸಿದ್ದರು. ಅಂತಹವರಲ್ಲಿ ಕರ್ನಾಟಕದ ಮೈಲಾರ ಮಹಾದೇವಪ್ಪ ಕೂಡ ಒಬ್ಬರು. ಅವರು ಗಾಂಧೀಜಿ ಒಡನಾಡಿಯಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು’ ಎಂದರು.

‘ಮಹಾದೇವಪ್ಪ ಅವರು ತಮ್ಮ ಹನ್ನೆರಡನೇ ವಯಸ್ಸಿನಲ್ಲೆ ಶಾಲೆ ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು’ ಎಂದು ನೆನಪಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ. ಮುರಿಗೆಪ್ಪ ಮಾತನಾಡಿ, ‘ಅಸಹಿಷ್ಣುತೆಯ ಇಂದಿನ ಸಂದರ್ಭದಲ್ಲಿ ಗಾಂಧಿ ಮಾರ್ಗದಲ್ಲಿ ನಡೆಯುವುದು ಅಗತ್ಯ’ ಎಂದರು.

‘ಮೈಲಾರ ಮಹಾದೇವಪ್ಪನವರು ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ರೈತರಿಗಾಗಿಯೂ ಹೋರಾಡಿದ್ದರು. ಅವರ ಬಗ್ಗೆ ಪಠ್ಯಗಳಲ್ಲಿ ಸೇರಿಸಬೇಕು’ ಎಂದರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಬಿ.ಜಿ. ಬಣಕಾರ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಮೈಲಾರ ಮಹಾದೇವಪ್ಪ  ತಾವು ಪಾಲ್ಗೊಂಡಿದ್ದಲ್ಲದೆ ಪತ್ನಿಯನ್ನು ಆ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದರು’ ಎಂದರು.

‘ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹಾದೇವಪ್ಪನವರ ಕೊಡುಗೆ ಅಪಾರ. ಅವರ ಬಗ್ಗೆ ಎಷ್ಟು ಪ್ರಚಾರ ಆಗಬೇಕಿತ್ತೊ ಆಗಿಲ್ಲ. ಈಗಲಾದರೂ ಆ ಕೆಲಸವಾಗಬೇಕು’ ಎಂದು ಹೇಳಿದರು.

‘ಇಂದು ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿರುದ್ಧ ಹೋರಾಟ ನಡೆಸಬೇಕಾಗಿದೆ’ ಎಂದೂ ತಿಳಿಸಿದರು. ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಹುತಾತ್ಮ ಮಹಾದೇವಪ್ಪ ಮೈಲಾರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾವೇರಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದಲ್ಲಿ ಈ ದತ್ತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT