ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಿಷ್ಣುತೆ- ಯಾರ ಕುರಿತಾಗಿ?

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪ್ರಿಯ ಅಮೀರ್ ಖಾನ್,
ದೇಶದ ಶ್ರೇಷ್ಠ ಕಲಾವಿದನಾಗಿ, ಸೃಜನಶೀಲ, ಸೂಕ್ಷ್ಮ ಮನಸ್ಕರಾಗಿ, ಹಲವು ಹೊಸತುಗಳನ್ನು ಹೊಸ ತೆರದಲ್ಲಿ ಕಟ್ಟಿಕೊಡಬಲ್ಲವರಾಗಿ ಈ ದೇಶಕ್ಕೆ ಅನೇಕ ವೈಚಾರಿಕ, ಪ್ರಬುದ್ಧ ಹಾಗೂ ಮನರಂಜನೆಯ ಅಪ್ಪಟ ದೇಸಿ ಚಿತ್ರಗಳನ್ನು ಕೊಟ್ಟಿದ್ದೀರಿ. ನಿಮ್ಮ ಭಾರತೀಯತೆಯ ಕುರಿತಾಗಲಿ, ಶ್ರೇಷ್ಠ ನಟನಾ ಕೌಶಲದ ಕುರಿತಾಗಲಿ ಯಾರಿಗೂ ಅನುಮಾನವಿಲ್ಲ. ನಿಮ್ಮ ‘ಲಗಾನ್’ ಚಿತ್ರವನ್ನು ದೇಶದ ಅತಿರಥ ಮಹಾರಥರಲ್ಲೊಬ್ಬರಾದ ವಾಜಪೇಯಿಯಂತಹವರು ನೋಡಿ, ಮೆಚ್ಚು ನುಡಿಗಳನ್ನಾಡಿದ್ದು ಆತ್ಯಂತಿಕ ಸತ್ಯ. ಅಲ್ಲಿ ಎತ್ತಿ ಹಿಡಿಯಲಾದ ‘ರಾಷ್ಟ್ರೀಯತೆ’, ‘ರಾಷ್ಟ್ರೀಯ ಭಾವೈಕ್ಯ’ದ ಮೌಲ್ಯಗಳು ಭಾರತೀಯರ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿಯೇ ಇವೆ. ಹಾಗಿರುವಾಗ...

ಇಡೀ ದೇಶವೇ ನಿಮ್ಮ ಕುರಿತು ಹೆಮ್ಮೆ, ಅಭಿಮಾನವನ್ನು ಹೊಂದಿದೆ. ನಿಮ್ಮನ್ನು ಗೌರವದಿಂದ ನಡೆಸಿಕೊಂಡಿದೆ. ಅದಕ್ಕೆ ಸಾಕ್ಷಿಯಾಗಿ ನೀವು ಯಶಸ್ಸಿನ ಏಣಿಯ ಹಲವು ಮೆಟ್ಟಿಲುಗಳನ್ನು ಇದೇ ದೇಶದಲ್ಲೇ ಏರಿದ್ದೀರಿ. ಈಗ ಒಂದು ಎತ್ತರದ ನಿಚ್ಚಣಿಕೆಯಲ್ಲಿ ನಿಂತಿದ್ದೀರಿ. ಭಾರತ, ಪಾಕಿಸ್ತಾನ ವಿಭಜನೆಯಾದಾಗ ಇಲ್ಲಿ ಉಳಿದವರು ಅಪ್ಪಟ ಭಾರತೀಯರೆಂಬ ಸರಳ  ಸತ್ಯ ದೇಶದ ಸಣ್ಣ ಮಗುವಿಗೂ ಗೊತ್ತು. ಅದಕ್ಕಾಗಿ ಸಂವಿಧಾನವನ್ನು ಓದಬೇಕಿಲ್ಲ. ಹಿಂದೂಗಳು ಎಷ್ಟು ಭಾರತೀಯರೋ ಮುಸ್ಲಿಮರೂ ಅಷ್ಟೇ ಈ ದೇಶದವರು, ಹಾಗೇ ಕ್ರೈಸ್ತ, ಪಾರ್ಸಿ, ಜೈನ, ಬೌದ್ಧರು. ಈ ದೇಶದ ನೆಲ ಜಲ ಸಂಸ್ಕೃತಿಯ ಮೇಲೆ ಎಲ್ಲರೂ ಸಮಾನ ಹಕ್ಕುದಾರರೆ. ಹಾಗಿರುವಾಗ...

ಬಹುತ್ವ ಸಂಸ್ಕೃತಿಯ ಈ ದೇಶದ ಇತಿಹಾಸದುದ್ದಕ್ಕೂ ಹಲವು ಕಾರಣಗಳಿಗೆ ಹಲವು ಜನಾಂಗೀಯ ಕೋಮುಗಲಭೆಗಳಾಗಿರಬಹುದು. ಒಂದು ಮಡಿಕೆಯಲ್ಲಿ ವಿವಿಧ ಧಾನ್ಯಗಳನ್ನು ಸಮಾನ ಸಂವಿಧಾನ ಹಕ್ಕುಗಳುಳ್ಳ ಶಾಖದುರಿಯಲ್ಲಿ ಕುದಿಸುವಾಗ ಯಾವುದೋ ಧಾನ್ಯ ಬೇಗ ಬೆಂದಿರಬಹುದು. ಮತ್ತೆ ಕೆಲವು ಅರೆಬೆಂದವು ಮತ್ತೆ ಕೆಲವು ಬೇಯಲಾರದ ಕಳ್ಳಗಾಳುಗಳು! ಬೇಯದ ಕಲ್ಲುಗಾಳುಗಳನ್ನು ತೆಗೆದು ಪಕ್ಕಕ್ಕೆ ಇಡಬೇಕಲ್ಲದೆ ಬಹುತ್ವದ ಪ್ರತಿನಿಧಿ ಮಡಿಕೆಯನ್ನು ದೂಷಿಸುವುದು ಎಷ್ಟು ಸರಿ? 

ಭಾರತದ ಹತ್ತು ಹಲವು ಸಾಂಸ್ಥಿಕ ಆಗೋಣಗಳಿಗೆ ಪ್ರಾತಿನಿಧಿಕ ಪ್ರತಿಷ್ಠಿತ ರಾಯಭಾರಿಯಾಗಿರುವ ನೀವು ಏನಾದರೂ ‘ಅಸಹಿಷ್ಣುತೆಯ’ ಮಿಥ್ಯಾವಾದಕ್ಕೆ ಬಲಿಯಾಗಿ ಬಿಟ್ಟಿರೇನೋ ಎಂದು ಆತಂಕವಾಗುತ್ತದೆ. ಲಾಗಾಯ್ತಿನಿಂದ ಸಂಭವಿಸುತ್ತಿರುವ ಅನೇಕ ಘರ್ಷಣೆಗಳಿಗೆ, ಕ್ರೌರ್ಯ, ಹಿಂಸೆಗಳಿಗೆ ಯಾವುದೇ ಒಂದು ನಿರ್ದಿಷ್ಟ ಜನಾಂಗ ಅಥವಾ ರಾಜಕೀಯ ಪಕ್ಷ ಕಾರಣವೆನ್ನುವುದು ಮೌಢ್ಯವಲ್ಲದೆ ಬೇರೇನೂ ಅಲ್ಲ. ಒಮ್ಮೆ ಒಂದು ಜನಾಂಗದ ಕೋಮಿನ ಕೈ ಮೇಲಾದರೆ ಮತ್ತೊಮ್ಮೆ ಮತ್ತೊಬ್ಬರು ವಿಜೃಂಭಿಸುತ್ತಾರೆ. ಹಿಂದೆಯೂ ಬಹಳಷ್ಟು, ಈಗ ನಡೆಯುತ್ತಿದೆ ಎನ್ನಲಾಗುವಂತಹದ್ದು ನಡೆದಿರಬಹುದು. ಎಲ್ಲೋ ಒಂದೆಡೆ ಭುಗಿಲೆದ್ದು ಮತ್ತೆ ತಣ್ಣಗಾಗಿರಬಹುದು.

ಆದರೆ ಈಚಿನ ದಿನಗಳಲ್ಲಿ ನಡೆಯುತ್ತಿರುವ ವಾದ-ವಿವಾದ, ಚರ್ಚೆಗಳು ಏಕಮುಖಿಯಾಗಿ, ಒಂದು ನಿರ್ದಿಷ್ಟ ಉದ್ದೇಶದಿಂದ ಯಾರದೋ  ವಿರುದ್ಧ ವ್ಯವಸ್ಥಿತ ಸಂಚೊಂದು ರೂಪುಗೊಂಡು, ದೇಶದಲ್ಲಿ ಆಶಾಂತಿಯನ್ನು ಹರಡುವ ಪಿತೂರಿಯೆಂದು ಪ್ರಜ್ಞಾವಂತ ನಾಗರಿಕರಿಗೆ ದಟ್ಟವಾಗಿ ಅನ್ನಿಸುತ್ತಿದೆ. ಅಸಹಿಷ್ಣುತೆ ಜನಾಂಗೀಯ ದ್ವೇಷವೊ, ಕೋಮು ವೈಷಮ್ಯವೊ ಎಂಬಂತೆ ಮೇಲ್ನೋಟಕ್ಕೆ ತೋರಿ ಬರುವಂತಹ ವರದಿಗಳು ಅಂತರಂಗದಲ್ಲಿ ಬೇರೆಯೇ ಆಗಿ ಧ್ವನಿಸುತ್ತಿವೆ. ಅಸಹಿಷ್ಣುತೆ ಸಾಮಾಜಿಕ ರಂಗದಲ್ಲೋ ಸಾಂಸ್ಕೃತಿಕ ಜೀವನದಲ್ಲೋ ಅಥವಾ ರಾಜಕೀಯ ಷಡ್ಯಂತ್ರದ ಪ್ರತಿಫಲನವೋ ಎಂಬಲ್ಲಿ ಸಂದೇಹಗಳೇಳುತ್ತವೆ.

ನಿಶಿತವಾದ ಬಾಣಗಳನ್ನು ಒಂದೇ ಗುರಿಯೆಡೆ ಸತತವಾಗಿ ಪ್ರಯೋಗಿಸಿದಂತೆ ಈ ಪರಿಸ್ಥಿತಿ. ಇರಲಿ ನನ್ನ ಉದ್ದೇಶ ಅದಲ್ಲ. ಭಾರತದ ಘನತೆ, ಗೌರವವನ್ನು  ಸಾರ್ವತ್ರಿಕವಾಗಿ ವಿಶ್ವ ಮಾರುಕಟ್ಟೆಯಲ್ಲಿ ಹರಾಜಿಗಿಡುವಂಥ ‘ನನ್ನ ಮಡದಿ ನಾವು ಊರು ಬಿಡಬೇಕಾಗಬಹುದೆನ್ನುತ್ತಾಳೆ, ನಮ್ಮ ಮಕ್ಕಳ ಕ್ಷೇಮಕ್ಕಾಗಿ’ ಎನ್ನುವಂಥ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ. ನೀವು ಊರು ಬಿಡುವಂಥ ಯಾವ ಬಾಹ್ಯ, ಆಂತರಿಕ ಕಿರುಕುಳ, ಒತ್ತಡಗಳು ನಡೆದಿರುವುದು ಭಾರತೀಯರಿಗೆ ತಿಳಿದಿಲ್ಲ. ಅಂತಹುದೇನಾದರೂ ಇದ್ದರೆ ದಯವಿಟ್ಟು ತಿಳಿಯಪಡಿಸಿ. ತಿಳಿದುಕೊಳ್ಳುವ ಹಕ್ಕುಬಾಧ್ಯತೆ ಈ ದೇಶಕ್ಕಿದೆ. ಅಂತಹುದ್ದೇನೂ ಇಲ್ಲವಾದಲ್ಲಿ ನೀವು ಇನ್ನೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಿ.

ನಮ್ಮ ದೇಶವನ್ನು ಅವಮಾನಿಸುವ ಇಂತಹ ಮಾತುಗಳು ನಮ್ಮನ್ನೆಲ್ಲ ಗಾಸಿಗೊಳಿಸುವುದು ಮಾತ್ರವಲ್ಲ ಸಮಾಜವನ್ನು ಅಶಾಂತಿ, ಆತಂಕಕ್ಕೆ ತಳ್ಳುತ್ತವೆ. ದೇಶದಲ್ಲಿ ಅಸಾಮರಸ್ಯದ ಬಿರುಕುಗಳೇಳುತ್ತಿರುವ ಬಿಕ್ಕಟ್ಟಿನ ಈ ಹೊತ್ತಿನಲ್ಲಿ ಬೇಕಿರುವುದು ಬೆಸೆಯುವ ಚಿಂತನೆಗಳೇ ಹೊರತು, ದೇಶ ಬಿಟ್ಟೋಡುವ, ಓಡಿಸುವ ಮಾತುಗಳಲ್ಲ. ಅಕಸ್ಮಾತ್ ಹಾಗೇನಾದರೂ ತೊಂದರೆಯಾದಲ್ಲಿ, ಹಾಲನ್ನದ ತಟ್ಟೆಯಲ್ಲಿ ಸಿಕ್ಕ ಪುಟ್ಟ ಕಲ್ಲೊಂದನ್ನು ಹೊರಗೆಸೆದು ಊಟ ಮಾಡಬೇಕಲ್ಲದೆ ತಟ್ಟೆಯನ್ನು ಎಸೆಯುವುದಲ್ಲ! ನೀವು ನಮ್ಮೊಡನೆ ಸದಾ ಇರಬೇಕು. ದೇಶವನ್ನು ಕಟ್ಟುವ ಕಾಯಕಕ್ಕೆ ನಿಸ್ಪೃಹವಾಗಿ ಅರ್ಪಿಸಿಕೊಳ್ಳಬೇಕು ಎಂಬ ಆಶಯದಿಂದ ಈ ಪತ್ರ ಬರೆದಿದ್ದೇನೆ.
–ಉಷಾ ನರಸಿಂಹನ್,
ಮೈಸೂರು
***

ಉಗ್ರರು ಕೆರಳಬೇಕು
ಅಮೀರ್ ಖಾನ್ ಅವರ ಅಭಿಪ್ರಾಯದ ವಿರುದ್ಧ ಎದ್ದಿರುವ ಆಕ್ರೋಶ ಅನಿರೀಕ್ಷಿತವೇನಲ್ಲ. ಅವರು ಏನು ಹೇಳಿದ್ದಾರೆ ಎಂಬುದಕ್ಕಿಂತ ಅವರ ಧರ್ಮವನ್ನೋ, ಇನ್ನಾವುದೋ ವೈಯಕ್ತಿಕ ಹಿನ್ನೆಲೆಯನ್ನೋ ಮುಖ್ಯವಾಗಿಸಿಕೊಂಡಂತಿದೆ. ಅಮೀರ್ ಖಾನ್ ಮಾತುಗಳನ್ನು ಮೊದಲು ವರದಿ ಮಾಡಿದವರು ಹಾಗೂ ಅವನ್ನು ಸರಿಯಾಗಿ ಮನಸ್ಸಿನೊಳಗೆ ಬಿಟ್ಟುಕೊಳ್ಳಲೂ ಹೋಗದವರು ಇದೊಂದು ವಿವಾದವಾಗಲು ಕಾರಣವೆಂಬುದು ಸ್ಪಷ್ಟವೆನಿಸುತ್ತಿದೆ.

ಒಂದಂತೂ ಸತ್ಯವೆನಿಸುತ್ತಿದೆ. ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿರುವವರಾರೂ ಅಮೀರ್‌ ಖಾನ್ ಮಾತುಗಳನ್ನು ಸ್ವತಃ ಕೇಳಿಸಿಕೊಂಡಿಲ್ಲ. ಸಮಯ ಸಾಧಕರು ಎಬ್ಬಿಸಿದ ಹುಯಿಲಿಗೆ ತಾವೂ ಬಲಿಯಾಗಿ, ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ಅಮೀರ್ ಖಾನ್ ಸ್ಪಷ್ಟವಾಗಿ ನುಡಿದ ಮಾತುಗಳ ಸಾರ ಇದು: ‘ನನ್ನ ಪತ್ನಿಯ ಮಾತುಗಳನ್ನು ಕೇಳಿ ನಾನು ಆತಂಕಗೊಂಡೆ. ಹಾಗೆಂದು ಭಾರತ ಬಿಟ್ಟು ಹೋಗುವ ಅಭಿಪ್ರಾಯವಿಲ್ಲ.

ಭಾರತದಲ್ಲಿ ಜರುಗುತ್ತಿರುವ ಅಸಹಿಷ್ಣು ನಡೆಗಳ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಎಲ್ಲರಲ್ಲಿ ಭರವಸೆ ಮೂಡಿಸಬೇಕು. ಕಾಂಗ್ರೆಸ್ ಇದ್ದಾಗಲೂ ಇಂಥ ಪ್ರಕರಣಗಳಾಗಿದ್ದವು. ಉಗ್ರರು ಎಸಗುತ್ತಿರುವ ಅಮಾಯಕರ ಹತ್ಯೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು...’ -ಹೀಗೆ. ಇವುಗಳಲ್ಲಿ ಹೊಸದಾಗಲೀ, ದೇಶ ವಿದ್ರೋಹವಾಗಲೀ ಏನೂ ಇಲ್ಲ. ಹಾಗೆ ನೋಡಿದರೆ, ಇಂಥ ಮಾತುಗಳಿಂದ ಐಎಸ್ ಉಗ್ರರು ಕೆರಳಬೇಕು; ಭಾರತೀಯರಲ್ಲ.
–ಡಾ. ಟಿ.ಗೋವಿಂದರಾಜು,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT