ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ­ ನಿವಾರಣೆಗೆ ಶ್ರಮಿಸಿ

ಮಾದಾರ ಗುರು ಪೀಠದ ಬಸವಮೂರ್ತಿ ಸ್ವಾಮೀಜಿ ಹೇಳಿಕೆ
Last Updated 31 ಆಗಸ್ಟ್ 2015, 9:31 IST
ಅಕ್ಷರ ಗಾತ್ರ

ಕೋಲಾರ: ‘ಭಾರತ ಇಡೀ ವಿಶ್ವಕ್ಕೆ ಶಾಂತಿ ಮತ್ತು ನೆಮ್ಮದಿ ಕೊಡುವ ದೇಶ ಎಂಬುದನ್ನು ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿಕೊಂಡಿವೆ’ ಎಂದು ಚಿತ್ರದುರ್ಗ ಮಾದಾರ ಗುರು ಪೀಠದ ಬಸವಮೂರ್ತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ನರಸಾಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಏರ್ಪಡಿಸಿದ್ದ ಹೋಬಳಿ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವದ ಎಲ್ಲಾ ಧರ್ಮಗಳನ್ನು ಒಂದುಗೂಡಿಸಲು, ಕಲೆ ಮತ್ತು ಸಂಸ್ಕೃತಿ ಕಾಪಾಡಲು, ಮನುಷ್ಯರನ್ನು ದೈವತ್ವಕ್ಕೆ ಏರಿಸುವ ಶಕ್ತಿ ಸಾಮರ್ಥ್ಯ ಹಿಂದೂ ಧರ್ಮಕ್ಕಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ­ ಹೋಗಲಾಡಿ­ಸಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಭಾರತ ದೇಶ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಜಾತಿ ಎಂಬುದು ಇಲ್ಲಿನ ಜನರು ಮಾಡುವ ಕುಲಕಸುಬುಗಳ ಮೇಲೆ ಆಧಾರವಾಗಿದೆ. ಆದರೆ ನಮ್ಮಲ್ಲಿರುವ ತಾರತಮ್ಯಗಳಿಂದ ಮನಸ್ತಾಪ ಉಂಟಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳಿಗೆ ತಾವೆಲ್ಲ ಒಂದೇ ಎಂಬ ಒಗ್ಗಟ್ಟಿನ ಉತ್ತರ ಕೊಡಬೇಕು. ಮಾನವೀಯತೆ ಉಳಿಸುವ ಪ್ರಯತ್ನ ಮಾಡಬೇಕು. ದೇಶ ಎದುರಿಸುತ್ತಿರುವ ಅಪಾಯಕಾರಿ ಆರ್ಥಿಕ ನೀತಿ ವಿರುದ್ಧ ಹೋರಾಟ ರೂಪಿಸಬೇಕು ಎಂದರು.

ಹಿಂದೂಗಳೆಲ್ಲಾ ಸಹೋದರರು ಎಂಬ ಘೋಷ ವಾಕ್ಯದಡಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಮುನ್ನಡೆಯುತ್ತಿದ್ದು, ಸಮಾಜದ ಅಸಮಾನತೆ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಕಾರ್ಯನಿರ್ವಹಿಸಲಿವೆ. ರಾಷ್ಟ್ರದಲ್ಲಿ ನಿರ್ಭೀತಿಯ ವಾತಾವರಣ ಸೃಷ್ಟಿಸಲು ಯುವಕರು ಪಾಲುದಾರರಾಗಬೇಕು. ಯುವ­ಶಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಶಕ್ತಿಯುತವಾಗಿ ಹೊರಬರಬೇಕು. ಈ ನಿಟ್ಟಿನಲ್ಲಿ ಯುವಕರು ಸಂಘಟಿತರಾಗಬೇಕು ಎಂದು ಭಜರಂಗದಳದ ಕ್ಷೇತ್ರ ಸಂಚಾಲಕ ಸೂರ್ಯನಾರಾಯಣ ಅವರು ಹೇಳಿದರು.

ದೇಶದ್ರೋಹಿಗಳಿಗೆ ಉತ್ತರ ನೀಡಲು ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಒಂದುಗೂಡಿ ಕಾರ್ಯನಿರ್ವಹಿಸುತ್ತಿವೆ. ಹಿಂದೂ ಧರ್ಮ, ಹಿಂದೂಗಳಿಗೆ ಆಪತ್ತು ಬಂದಾಗ ಈ ಎರಡೂ ಸಂಘಟನೆಗಳು ಕಾರ್ಯನಿರ್ವಹಿಸಲು ಸಿದ್ಧ ಇವೆ. ಹಿಂದೂಗಳನ್ನು ಮತಾಂತರ ಮಾಡುವ ಹಾಗೂ ಹಿಂದೂ ಯುವತಿಯರನ್ನು ಮನವೊಲಿಸಿ ಮದುವೆ ಮಾಡಿಕೊಂಡು ಮತಾಂತರ ಮಾಡುವುದರ ವಿರುದ್ಧ ಇನ್ನಷ್ಟು ಪ್ರಬಲ ಹೋರಾಟ ಹಮ್ಮಿಕೊಳ್ಳಲಿವೆ. ಹಳ್ಳಿಗಳಲ್ಲಿ ಸಂಘಟನೆ ನಡೆಸಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಗೋಪಾಲ್ ತಿಳಿಸಿದರು.

ಇನ್ನು ಮುಂದೆ ಈ ನೆಲದಲ್ಲಿ ಗೋಹತ್ಯೆ ಮತ್ತು ಪ್ರೀತಿ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಅಪಹರಿಸಲು ವಿಶ್ವ ಹಿಂದೂ ಪರಿಷತ್‌ ಅವಕಾಶ ನೀಡುವುದಿಲ್ಲ. ಮಾತೃ ಧರ್ಮಕ್ಕೆ ವಾಪಸಾಗುವವರಿಗೆ ಎಲ್ಲಾ ಸೌಲಭ್ಯ ಒದಗಿಸಿಕೊಡಲಾಗುತ್ತದೆ. ಮತಾಂತರಗೊಂಡು ಅಲ್ಲಿ ಸಂಕಷ್ಟ ಅನುಭವಿಸುವುದಕ್ಕಿಂತ ಮಾತೃ ಧರ್ಮಕ್ಕೆ ಆಗಮಿಸಿ ಹಿಂದೂ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರುವಂತಹ ಪೂಜನೀಯ ಗೋವುಗಳನ್ನು ಹತ್ಯೆಗೆ ಪ್ರಚೋದನಾತ್ಮಕವಾಗಿ ಒಂದು ವರ್ಗ ಕೈಯಿಕ್ಕುತ್ತಿದೆ ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಅಧ್ಯಕ್ಷ ರಘುರಾಮರೆಡ್ಡಿ, ಸಂಚಾಲಕ ಬಾಬು ಮತ್ತಿರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT