ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹ್ಮದ್‌ ಪಟೇಲ್‌ ಮೇಲೆ ಅನುಮಾನ

ಸೋನಿಯಾ ವಿರುದ್ಧ ನೇರ ಸಾಕ್ಷ್ಯ ಇಲ್ಲ: ಇಟಲಿ ನ್ಯಾಯಾಧೀಶರ ಹೇಳಿಕೆ
Last Updated 3 ಮೇ 2016, 19:30 IST
ಅಕ್ಷರ ಗಾತ್ರ

ವದೆಹಲಿ: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದಕ್ಕಾಗಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ವಿರುದ್ಧ ಯಾವುದೇ ‘ನೇರ ಸಾಕ್ಷ್ಯ’ ಇಲ್ಲ ಎಂದು ಇಟಲಿಯ ನ್ಯಾಯಾಧೀಶ ಮಾರ್ಕೊ ಮೈಗಾ ಹೇಳಿದ್ದಾರೆ.

ಆದರೆ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ‘ಈ ಹಗರಣದ ಪ್ರಮುಖ ವ್ಯಕ್ತಿಯಾಗಿರುವ ಸಾಧ್ಯತೆಯಿದೆ’ ಎಂದಿದ್ದಾರೆ.
‘ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳು ದೊರೆತಿಲ್ಲ. ಆದ್ದರಿಂದ ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲು ಸಾಧ್ಯವಾಗಿಲ್ಲ’ ಎಂದು ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ಮೈಗಾ ಹೇಳಿದ್ದಾರೆ.

‘ಈ ಹಗರಣದಲ್ಲಿ ಸೋನಿಯಾ ಭಾಗಿಯಾಗಿರುವುದನ್ನು ಸಾಬೀತುಪಡಿಸುವಂತಹ ಸಾಕ್ಷ್ಯ ದೊರೆತಿಲ್ಲ. ಫ್ಯಾಕ್ಸ್‌ವೊಂದರಲ್ಲಿ ಅವರ ಬಗ್ಗೆ ಪ್ರಸ್ತಾಪವಿತ್ತು. ಫ್ಯಾಕ್ಸ್‌ನಲ್ಲಿದ್ದ ವಿವರಗಳನ್ನು ಭಾಷಾಂತರಿಸಿ ಕ್ರಿಶ್ಚಿಯನ್‌ ಮೈಕಲ್‌ಗೆ (ಒಪ್ಪಂದದ ಮಧ್ಯವರ್ತಿ) ಕಳುಹಿಸಲಾಗಿತ್ತು. ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಖರೀದಿಸಲಾದ ಹೆಲಿಕಾಪ್ಟರ್‌ನಲ್ಲಿ ಸೋನಿಯಾ ಸಂಚರಿಸಲಿದ್ದಾರೆ ಎಂಬ ಸೂಚನೆ ಅದರಲ್ಲಿತ್ತು. ಮನಮೋಹನ್‌ ಸಿಂಗ್‌ ಅವರ ಹೆಸರೂ ಇತ್ತು’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೈಗಾ ತಿಳಿಸಿದ್ದಾರೆ.

ಪಟೇಲ್‌ ಪಾತ್ರದ ಬಗ್ಗೆ ಹೇಳುತ್ತಾ, ‘ಅವರ ವಿರುದ್ಧ ಆಪಾದನೆ ಹೊರಿಸುವ ಉದ್ದೇಶ ಇರಲಿಲ್ಲ. ನಮ್ಮ ತನಿಖಾ ಪ್ರಕ್ರಿಯೆಗೆ ಅವರ ಅವಶ್ಯಕತೆ ಇರಲಿಲ್ಲ. ಆದರೆ ಇಡೀ ಹಗರಣದ ಮುಖ್ಯ ಪಾತ್ರಧಾರಿಯಂತೆ ಕಾಣಿಸುತ್ತಿದ್ದಾರೆ’ ಎಂದಿದ್ದಾರೆ.

ಫಿನ್‌ಮೆಕಾನಿಕಾ ಕಂಪೆನಿಯ ಮಾಜಿ ಮುಖ್ಯಸ್ಥ ಗುಸೆಪ್‌ ಒರ್ಸಿ ಅವರ ಬಳಿಯಿದ್ದ ದಾಖಲೆಯಲ್ಲಿ ಭಾರತದ ರಾಜಕಾರಣಿಗಳ ಹೆಸರು ಇತ್ತು. ‘ಸೋನಿಯಾ ಅವರೇ ಈ ಒಪ್ಪಂದದ ಹಿಂದಿನ ಪ್ರಮುಖ ವ್ಯಕ್ತಿ’ ಎಂದು ಒರ್ಸಿ ಹೇಳಿದ್ದು ಅದರಲ್ಲಿತ್ತು. ಮನಮೋಹನ್‌ ಮತ್ತು ಅಹ್ಮದ್‌ ಪಟೇಲ್‌ ಅವರ ಹೆಸರೂ ಇತ್ತು.
ಮೈಗಾ ಅವರ ಹೇಳಿಕೆಯಿಂದ ಕಾಂಗ್ರೆಸ್‌ ಅಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬಿಜೆಪಿಯು ಬುಧವಾರ ರಾಜ್ಯಸಭೆಯಲ್ಲಿ ಸೋನಿಯಾ ವಿರುದ್ಧ ವಾಗ್ದಾಳಿಗೆ ಸಿದ್ಧತೆ ನಡೆಸಿದೆ. ಇದೀಗ ಮೈಗಾ ಹೇಳಿಕೆಯನ್ನು ಮುಂದಿಟ್ಟು ಪ್ರತ್ಯುತ್ತರ ನೀಡುವ ಅವಕಾಶ ಕಾಂಗ್ರೆಸ್‌ಗೆ ದೊರೆತಿದೆ.

ತೀರ್ಪಿನಲ್ಲಿ ಯಾವೆಲ್ಲಾ ರಾಜಕಾರಣಿಗಳ ಹೆಸರು ಇತ್ತು ಎಂಬ ಪ್ರಶ್ನೆಗೆ ಅವರು, ‘ಒರ್ಸಿ ಮತ್ತು ಐಎಎಫ್‌ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ನಡುವಣ ಸಂಬಂಧವೇ ನಮ್ಮ ಪರಿಶೀಲನೆಯ ಮುಖ್ಯ ವಿಷಯವಾಗಿತ್ತು’ ಎಂದು ಉತ್ತರಿಸಿದ್ದಾರೆ.

‘ತನಿಖೆಯ ಸಂದರ್ಭ ನಮಗೆ ಕೈಬರಹದ ಪತ್ರ ದೊರೆತಿತ್ತು. ಅದರಲ್ಲಿ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಅರ್ಧ ಹೆಸರುಗಳು ಮಾತ್ರ ದಾಖಲಾಗಿದ್ದವು. ಆದರೆ ಈ ಪ್ರಕರಣದಲ್ಲಿ ವ್ಯಕ್ತಿಗತವಾಗಿ ಅವರ ಪಾತ್ರ ಏನು ಎಂಬುದನ್ನು ನಾವು ವಿವರವಾಗಿ ತನಿಖೆ ನಡೆಸಿಲ್ಲ’ ಎಂದು ಮೈಗಾ ತಿಳಿಸಿದ್ದಾರೆ.

ರಾಹುಲ್‌ ನಿಕಟವರ್ತಿಗೆ ಹಷ್ಕೆ ನಂಟು: ಬಿಜೆಪಿ ಆರೋಪ
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನಿಕಟವರ್ತಿ ಕನಿಷ್ಕ ಸಿಂಗ್‌ ಅವರಿಗೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಒಪ್ಪಂದದ ಮಧ್ಯವರ್ತಿ ಗೈಡೊ ಹಷ್ಕೆ ಜತೆ ನಂಟು ಇತ್ತು ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ ಕಿರೀಟ್‌ ಸೋಮಯ್ಯ ಅವರು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐಗೆ ಪತ್ರ ಬರೆದಿದ್ದಾರೆ.

‘ಹಷ್ಕೆ ಅವರು ಎಮ್ಮಾರ್‌ ಎಂಜಿಎಫ್‌ ಕಂಪೆನಿಯ ನಿರ್ದೇಶಕರಾಗಿದ್ದರು. ಈ ಕಂಪೆನಿಯು ರಾಹುಲ್‌ ಅವರ ಪ್ರಧಾನ ಸಲಹೆಗಾರ ಕನಿಷ್ಕ ಸಿಂಗ್‌ ಅವರ ಕುಟುಂಬಕ್ಕೆ ಸೇರಿದ್ದಾಗಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಗರಣದಲ್ಲಿ ಈ ಕಂಪೆನಿ ಹೆಸರು ಕೇಳಿಬಂದಿತ್ತು. ಆದ್ದರಿಂದ ಕಂಪೆನಿ ಈ ಹಗರಣದಲ್ಲೂ ಭಾಗಿಯಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಕೋರುತ್ತೇನೆ’ ಎಂದು ಸೋಮಯ್ಯ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಆರೋಪದಲ್ಲಿ ಹುರುಳಿಲ್ಲ (ಬೆಂಗಳೂರು ವರದಿ): ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಹಗರಣದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕೆಲವು ಕಾಂಗ್ರೆಸ್‌ ಮುಖಂಡರು ಭಾಗಿಯಾಗಿದ್ದಾರೆ ಎಂಬ ಕೇಂದ್ರ ಸರ್ಕಾರದ ಆರೋಪ ಆಧಾರ ರಹಿತ ಎಂದು ಕೆಪಿಸಿಸಿ ಪ್ರತಿಕ್ರಿಯಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಇಟಲಿಯ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕೆಲವು ಕಾಂಗ್ರೆಸ್‌ ನಾಯಕರ ಹೆಸರುಗಳನ್ನು ಪ್ರಭಾವಿ ವ್ಯಕ್ತಿಗಳು ಎಂದು ಉಲ್ಲೇಖಿಸಿರುವುದನ್ನೇ ಆಧರಿಸಿ ಲಂಚ ಪಡೆದವರೆಂದು ಆರೋಪಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಬಿ.ಕೆ. ಚಂದ್ರಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನಮೋಹನ್‌ ಸಿಂಗ್‌ ಅಥವಾ ಭಾರತದ ಯಾವುದೇ ಅಧಿಕಾರಿ ಈ ವಿಷಯದಲ್ಲಿ ಚರ್ಚೆ ನಡೆಸಿಲ್ಲ ಎಂದು ಇಟಲಿಯ ರಾಯಭಾರಿ ಕಚೇರಿ ಅಧಿಕೃತ ಹೇಳಿಕೆ ನೀಡಿದ ಬಳಿಕವೂ ಸೋನಿಯಾ ಗಾಂಧಿ ವಿರುದ್ಧ ದೂರುತ್ತಿರುವುದು ದುರುದ್ದೇಶದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT