ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಜನೇಯ ರಾಜೀನಾಮೆಗೆ ಪರಿಷತ್ತಿನಲ್ಲೂ ಪಟ್ಟು

ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಸದಸ್ಯರು
Last Updated 27 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ  ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಧರಣಿ ನಡೆಸಿದರು.

ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ ನಂತರ ಸಭಾಪತಿಗಳ ಪೀಠದ ಮುಂದೆ ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು, ಸಭಾಪತಿ ಶಂಕರಮೂರ್ತಿ ಅವರು ಸದನವನ್ನು ಅನಿರ್ದಿಷ್ಟಾವಧಿವರೆಗೆ  ಮುಂದೂಡುವವರೆಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಗದ್ದಲ ಉಂಟು ಮಾಡಿದರು.
ಈ ಗದ್ದಲದ ನಡುವೆಯೇ ಪಂಚಾಯತ್‌ ರಾಜ್‌ (ಎರಡನೇ ತಿದ್ದುಪಡಿ) ಮಸೂದೆ, ಧನವಿನಿಯೋಗ ಮಸೂದೆ (ಸಂಖ್ಯೆ 5) ಸೇರಿದಂತೆ ಆರು ಮಸೂದೆಗಳನ್ನು ಅಂಗೀಕರಿಸಲಾಯಿತು. 2015–16ನೇ ಸಾಲಿನ ಪೂರಕ ಅಂದಾಜಿಗೂ ಸದನದ ಒಪ್ಪಿಗೆ ಪಡೆಯಲಾಯಿತು.

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಷಯದ ಕುರಿತಾಗಿ ನಡೆದ ಚರ್ಚೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಕೋಲಾಹಲದ ನಡುವೆಯೇ ಉತ್ತರ ಮಂಡಿಸಿದರು. ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ, ಉಪಸಭಾಪತಿ ಮರಿತಿಬ್ಬೇಗೌಡರು ಕಡತದಿಂದ ಪದಗಳನ್ನು ತೆಗೆದುಹಾಕಿದ್ದನ್ನು ಖಂಡಿಸಿ ಗುರುವಾರ ಆರಂಭಿಸಿದ್ದ ಧರಣಿಯನ್ನು ಬಿಜೆಪಿ ಸದಸ್ಯರು ಮುಂದುವರೆಸಿದರು.

ಈ ಪ್ರಕರಣವನ್ನು ಪರಿಶೀಲಿಸಿ, ಪದಗಳನ್ನು ಮತ್ತೆ ಕಡತಕ್ಕೆ ಸೇರಿಸಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬುದನ್ನು ತಿಳಿದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಭರವಸೆ ನೀಡಿದ ಬಳಿಕ ಧರಣಿ ವಾಪಸ್ ತೆಗೆದುಕೊಂಡರು.

ನಿಲುವಳಿಗೆ ಯತ್ನ: ನಂತರ ಆಂಜನೇಯ ವಿರುದ್ಧ ನಿಲುವಳಿ ಸೂಚನೆ ಮಂಡಿಸುವ ಬಗ್ಗೆ ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮುಂದಾದರು. ಆದರೆ, ಇದಕ್ಕೆ ಸಭಾ ನಾಯಕ ಎಸ್‌.ಆರ್‌. ಪಾಟೀಲ, ಆಡಳಿತ ಪಕ್ಷದ ಮುಖ್ಯ ಸಚೇತಕ ಆರ್.ವಿ. ವೆಂಕಟೇಶ್‌ ಆಕ್ಷೇಪಿಸಿದರು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾದ ಪ್ರತಿವಾದ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಭಾಪತಿ ಶಂಕರಮೂರ್ತಿ, ಈಶ್ವರಪ್ಪ ಅವರಿಗೆ ನಿಲುವಳಿ ಸೂಚನೆ ಬಗ್ಗೆ ಮಾತನಾಡಲು ಅವಕಾಶ ನೀಡಿದರು.

‘ಸುದ್ದಿವಾಹಿನಿಯೊಂದು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಆಂಜನೇಯ ಅವರ ಪತ್ನಿ ಲಂಚ ಸ್ವೀಕರಿಸುತ್ತಿರುವುದು ಬಹಿರಂಗವಾಗಿದೆ.  ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಹಣವನ್ನು ದುರ್ಬಳಕೆ ಮಾಡಲಾಗಿದೆ. ಆಂಜನೇಯ ಅವರು ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಈಶ್ವರಪ್ಪ ಒತ್ತಾಯಿಸಿದರು.

‘ಆರೋಪ ಬಂದಾಗ ರಾಜೀನಾಮೆ ಕೊಟ್ಟು, ನಂತರ ನಿರ್ದೋಷಿ ಎಂದು ಸಾಬೀತಾದಾಗ ಮತ್ತೆ ಸಚಿವ ಸ್ಥಾನ ಅಲಂಕರಿಸಿದ ಪ್ರಕರಣಗಳು ನಮ್ಮಲ್ಲಿ ನಡೆದಿವೆ. ಹಾಗಾಗಿ, ತಕ್ಷಣ ಆಂಜನೇಯ ಅವರು ರಾಜೀನಾಮೆ ನೀಡಲಿ. ತನಿಖೆಯಲ್ಲಿ ಅವರ ತಪ್ಪಿಲ್ಲ ಎಂಬುದು ಗೊತ್ತಾದರೆ, ಮತ್ತೆ ಸಚಿವರಾಗಲಿ’ ಎಂದರು. ವಿ. ಸೋಮಣ್ಣ ಸೇರಿದಂತೆ ಬಿಜೆಪಿ ಸದಸ್ಯರು ಇದನ್ನು ಬೆಂಬಲಿಸಿದರು.   ಸಭಾಪತಿಗಳ ಪೀಠದ ಮುಂದೆ ಧರಣಿ ಆರಂಭಿಸಿದರು. ಗದ್ದಲ ಹೆಚ್ಚಾದಾಗ ಸಭಾಪತಿಗಳು ಸದನವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭಗೊಂಡಗಲೂ ಪ್ರತಿಪಕ್ಷಗಳ ಸದಸ್ಯರ ಧರಣಿ, ಕೂಗಾಟ ಮುಂದುವರೆಯಿತು.

ವಿಧಾನಸಭೆಯಲ್ಲೂ ಧರಣಿ: ಸಚಿವ ಆಂಜನೇಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದಸ್ಯರು  ವಿಧಾನಸಭೆಯಲ್ಲಿ ಶುಕ್ರವಾರವೂ ಧರಣಿ ಮುಂದುವರಿಸಿದರು. ಗದ್ದಲ ಹೆಚ್ಚಾಗಿದ್ದರಿಂದ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಒಮ್ಮೆ ಸದನವನ್ನು ಅರ್ಧ ತಾಸು ಮುಂದೂಡಿದರು.
ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಧನ ವಿನಿಯೋಗ ಮಸೂದೆ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ ಮಸೂದೆಗಳನ್ನು ಅಂಗೀಕರಿಸಲಾಯಿತು. ಉಪಲೋಕಾಯುಕ್ತ ಸುಭಾಷ್‌ ಬಿ.ಅಡಿ ಪದಚ್ಯುತಿ ಪ್ರಸ್ತಾವವನ್ನು ತನ್ವೀರ್‌ ಸೇಠ್‌ ಮಂಡಿಸಿದರು.  ಪೂರಕ ಅಂದಾಜುಗಳಿಗೂ ಅಂಗೀಕಾರ ನೀಡಲಾಯಿತು.

ಗದ್ದಲದ ನಡುವೆಯೇ ಪ್ರಶ್ನೋತ್ತರ ಹಾಗೂ ಗಮನಸೆಳೆಯುವ ಸೂಚನೆಗಳ ಚರ್ಚೆಯನ್ನು ಸಭಾಧ್ಯಕ್ಷರು ಕೈಗೆತ್ತಿಕೊಂಡರು. ಇದನ್ನು ವಿರೋಧಿಸಿ ದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಇನ್ನಷ್ಟು ಜೋರು ಧ್ವನಿಯಲ್ಲಿ ಘೋಷಣೆ ಕೂಗಲಾರಂಭಿಸಿದರು. ಸಭಾಧ್ಯಕ್ಷರು ಸದನವನ್ನು ಅರ್ಧ ತಾಸು ಮುಂದೂಡಿದರು.
ಸದನ ಮತ್ತೆ ಸೇರಿದಾಗಲೂ ಬಿಜೆಪಿ ಸದಸ್ಯರು ಗದ್ದಲ ಮುಂದುವರಿಸಿದರು. ವಿಧಾನ ಪರಿಷತ್ತಿನಲ್ಲಿ ಯಾವೆಲ್ಲ ಮಸೂದೆಗಳು ಅಂಗೀಕಾರಗೊಂಡಿವೆ ಎಂಬುದನ್ನು ವಿಧಾನಸಭೆಗೆ ತಿಳಿಸಿದ ಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟಾಧಿವರೆಗೆ ಮುಂದೂಡಿದರು.
*
ಸಮಾಜ ಕಲ್ಯಾಣ ಇಲಾಖೆ ಈಗ ಮಜಾ ಕಲ್ಯಾಣ ಇಲಾಖೆಯಾಗಿದೆ.
– ಗೋ. ಮಧುಸೂದನ್‌
*
ಅದು ಸಮಾಜ ಕಲ್ಯಾಣ ಇಲಾಖೆ ಅಲ್ಲ; ಆಂಜನೇಯ ಕಲ್ಯಾಣ ಇಲಾಖೆ.
– ವೈ.ಎ. ನಾರಾಯಣ ಸ್ವಾಮಿ
*
ಇದೇನು ಸದನ ನಡೆಸುವ ರೀತಿಯೇ? ಪಂಚಾಯತ್‌ ರಾಜ್‌ನಂತಹ ಪ್ರಮುಖ ಮಸೂದೆ ಬಗ್ಗೆ ಇಲ್ಲಿ ಚರ್ಚೆ ಆಗುವುದಿಲ್ಲ ಎಂದರೆ ಹೇಗೆ? ಇದು ಸರಿಯಾದ ಕ್ರಮ ಅಲ್ಲ.
– ಬಸವರಾಜ ಹೊರಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT