ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶದಲ್ಲೊಂದು ಯಾಂತ್ರಿಕ ಪಕ್ಷಿ!

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆಕಾಶದಲ್ಲಿ ಹಾರಾಡುತ್ತದೆ, ಆದರೆ ಪಕ್ಷಿಯಲ್ಲ.  ಯಂತ್ರದಿಂದ ನಡೆಯುತ್ತದೆ, ಆದರೆ ವಿಮಾನವಲ್ಲ.  ಹಾಗಾದರೆ ಅದು ಏನು? ಅದನ್ನು ರೋಬರ್ಡ್‌ ಎಂದು ಕರೆಯುತ್ತಾರೆ! ಕನ್ನಡದಲ್ಲಿ ಅದನ್ನು ಯಂತ್ರಚಾಲಿತ ಪಕ್ಷಿ ಅಥವಾ ಯಾಂತ್ರಿಕ ಪಕ್ಷಿ ಎಂದು ಕರೆಯಬಹುದು.

ಪಕ್ಷಿ ಹಾಗೂ ವಿಮಾನದ ಎರಡೂ ಲಕ್ಷಣಗಳು ಇದರಲ್ಲಿ ಕೂಡಿಕೊಂಡಿವೆ.  ನೋಡಲು ಇದು ಹದ್ದಿನಂತೆಯೇ ಕಾಣುತ್ತದೆ.  ಜೀವ ಇಲ್ಲ ಎಂಬುದನ್ನು ಬಿಟ್ಟರೆ ಇದು ಸಂಪೂರ್ಣ ಹದ್ದಿನಂತೆಯೇ ಇದೆ.

ರೋಬೊ ಹಾಗೂ ಬರ್ಡ್‌ ಪದಗಳು ಸೇರಿ ರೋಬರ್ಡ್‌ ಆಗಿದೆ. ಆದರೆ, ಇದು ತಾನಾಗಿಯೇ ತನ್ನ ಇಚ್ಛೆಯಂತೆ ಹಾರಲಾರದು.  ಇದರ ಎಲ್ಲ ಚಲನವಲನಗಳನ್ನು ಭೂಮಿಯ ಮೇಲಿರುವ ಮನುಷ್ಯ ದೂರ ನಿಯಂತ್ರಣ ಸಾಧನದ ಮೂಲಕ ನಿಯಂತ್ರಿಸುತ್ತಾನೆ.

ಇದೆಲ್ಲ ಏಕೆ ಎನ್ನುತ್ತೀರಾ?  ಕೆಲವು ಪಕ್ಷಿಗಳು ಮನುಷ್ಯನಿಗೆ ತುಂಬ ತೊಂದರೆ ಕೊಡುತ್ತವೆ. ರೈತನ ಹೊಲಕ್ಕೆ ದಾಳಿ ಮಾಡಿ ಬೆಳೆಗಳನ್ನು ಹಾಳುಗೆಡವುತ್ತವೆ.  ವಿಮಾನ ಹಾರಾಟ ಆರಂಭಿಸಿದಾಗ ಅದಕ್ಕೆ ಅಡ್ಡಲಾಗಿ ಹಾರಿಬಂದು ಅಪಘಾತಗಳು ಉಂಟಾಗುವಂತೆ ಮಾಡುತ್ತವೆ. ಇವುಗಳ ನಿಯಂತ್ರಣಕ್ಕೆ ಮನುಷ್ಯ ಕಂಡುಕೊಂಡ ಇತ್ತೀಚಿನ ಯಾಂತ್ರಿಕ ಪರಿಹಾರ ಎಂದರೆ ರೋಬರ್ಡ್‌.

ಇದನ್ನು ನೆದರ್‌ಲೆಂಡ್‌ನ ಕ್ಲಿಯರ್ ಫ್ಲೈಟ್ ಸಲ್ಯೂಷನ್ ಎಂಬ ಕಂಪೆನಿ ಅಭಿವೃದ್ಧಿಪಡಿಸಿದೆ. ಈಗ ಎರಡು ಬಗೆಯ ರೋಬರ್ಡ್‌ಗಳು ಸಿದ್ಧವಾಗಿವೆ.  ಒಂದು ಸಾಮಾನ್ಯ ಗಾತ್ರದ ಹದ್ದಿನಂತಹುದು, ಇನ್ನೊಂದು ದೊಡ್ಡ ಗಾತ್ರದ ರಣಹದ್ದಿನಂತಹುದು. 

ಸಾಮಾನ್ಯ ಗಾತ್ರದ ರೋಬರ್ಡ್‌ ಹದ್ದಿನ ದೇಹ ೨೩ ಅಂಗುಲ ಉದ್ದವಿದ್ದು, ಅದರ ರೆಕ್ಕೆಗಳ ವಿಸ್ತಾರ ೪೩ ಅಂಗುಲಗಳಷ್ಟಿದೆ.
ರಣಹದ್ದಿನ ಗಾತ್ರದ ರೋಬರ್ಡ್‌ ಇದರ ಎರಡು ಪಟ್ಟು ದೊಡ್ಡದಾಗಿದೆ.  ಇವು ಗಂಟೆಗೆ ೫೦ರಿಂದ ೮೦ ಕಿಲೋಮೀಟರ್ ವೇಗದಲ್ಲಿ ಹಾರಬಲ್ಲವು. ಸದ್ಯ ಅವುಗಳ ನಿಯಂತ್ರಣ ಮಾನವರ ಕೈಯಲ್ಲಿಯೇ ಇದ್ದು, ಮುಂಬರುವ ದಿನಗಳಲ್ಲಿ ಸ್ವಯಂ ನಿಯಂತ್ರಣದ ರೋಬರ್ಡ್‌ಗಳನ್ನು ಉತ್ಪಾದಿಸುವ ಯೋಜನೆ ಇದೆ ಎನ್ನುತ್ತಾರೆ ಇದರ ನಿರ್ಮಾತೃ ನಿಕೋ ನಿಜೆನಿಸ್.

ಅತಿ ಶೀತದ ದ್ರುವಪ್ರದೇಶಗಳನ್ನು ಹೊರತುಪಡಿಸಿ ಹದ್ದುಗಳು ಸಾಮಾನ್ಯವಾಗಿ ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಇವೆ. ಹದ್ದುಗಳು ಕೆಸ್ಟ್ರೆಲ್ ತರಹದ ಸಣ್ಣ ಹಾಗೂ ಪಾರಿವಾಳ ತರಹದ ಮಧ್ಯಮ ಗಾತ್ರದ ಪಕ್ಷಿಗಳನ್ನು ಆಹಾರವಾಗಿ ಸೇವಿಸುತ್ತವೆ.  ಇತ್ತೀಚಿಗೆ ಅತಿಯಾದ ಕೀಟನಾಶಕಗಳ ಬಳಕೆ ಹದ್ದುಗಳ ಆಹಾರವನ್ನೆಲ್ಲಾ ವಿಷಯುಕ್ತಗೊಳಿಸಿದೆ.

ಕೀಟನಾಶಕಕ್ಕೆ  ಬಲಿಯಾದ ಇತರೆ ಪಕ್ಷಿಗಳ ಮಾಂಸವನ್ನು ಸೇವಿಸುವ ಹದ್ದುಗಳು ಭಾರಿ ಪ್ರಮಾಣದಲ್ಲಿ ಸಾವಿಗೀಡಾಗುತ್ತಿವೆ. ಇದರಿಂದಾಗಿ ಹದ್ದುಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಒಂದು ಹಂತದಲ್ಲಿ ಅವು ಜೀವಜಗತ್ತಿನಿಂದಲೇ ಶಾಶ್ವತವಾಗಿ ಕಾಣೆಯಾಗಿ ಬಿಡುತ್ತವೆಯೋ ಏನೋ ಎಂಬ ಆತಂಕವೂ ಇತ್ತು.

ಇದೆಲ್ಲದರ ಪರಿಣಾಮವಾಗಿ ಸಣ್ಣ ಹಾಗೂ ಮಧ್ಯಮ ಗಾತ್ರದ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.  ಇದರಿಂದ ಜೈವಿಕ ಸಮತೋಲನದಲ್ಲಿ ತುಸು ಏರುಪೇರಾಗಿದೆ.  ಇದನ್ನು ಸರಿಪಡಿಸಲು ರೋಬರ್ಡ್‌ಗಳ ಸಂಶೋಧನೆಯಾಗಿದೆ. 

ಈ ರೋಬರ್ಡ್‌ಗಳು ಸಣ್ಣ ಮತ್ತು ಮಧ್ಯಮ ಗಾತ್ರದ ಪಕ್ಷಿಗಳು ಇರುವಲ್ಲಿ ಹಾರಾಡುತ್ತವೆ. ಅವುಗಳಲ್ಲಿ ಭಯವನ್ನು ಉಂಟುಮಾಡಿ ಓಡಿಸುತ್ತವೆ. ಆ ಮೂಲಕ ಅವುಗಳಿಂದ ಉಂಟಾಗುವ ತೊಂದರೆಯನ್ನು ದೂರು ಮಾಡಲಾಗುತ್ತದೆ ಎಂಬುದು ಸಂಶೋಧಕರ ಅನಿಸಿಕೆ.

ಗ್ಲಾಸ್ ಫೈಬರ್ ಹಾಗೂ ನೈಲಾನ್ ಮಿಶ್ರಣದಿಂದ ಈ ರೋಬರ್ಡ್ ತಯಾರಿಸಲಾಗಿದೆ. ಈ ಯಾಂತ್ರಿಕ ಹಕ್ಕಿಯ ದೇಹ ರಚನೆಗಾಗಿ ೩ಡಿ ಮುದ್ರಣ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗಿದೆ. ನೈಜ ಹದ್ದುಗಳಂತೆಯೇ ಕಾಣಲು ಬಣ್ಣವನ್ನು ಕಲಾತ್ಮಕವಾಗಿ ಹಚ್ಚಲಾಗಿದೆ. ಗಗನದಲ್ಲಿ ರೆಕ್ಕೆ ಬಿಚ್ಚಿ ಹಾರಾಡುತ್ತಿರುವುದು ಕೃತಕ ಹದ್ದು ಎಂಬುದು ಗೊತ್ತೇ ಆಗದು, ಹಾಗೆ ಈ ಯಾಂತ್ರಿಕ ಹಕ್ಕಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ ಸಂಶೋಧಕರ ತಂಡ.

ಹಿಂದೆ ರೈತರು ತಮ್ಮ ಹೊಲಗಳಲ್ಲಿ ಪಕ್ಷಿಗಳನ್ನು ಹೆದರಿಸಲು ಬೆದರು ಬೊಂಬೆಗಳನ್ನು ನಿಲ್ಲಿಸುತ್ತಿರಲಿಲ್ಲವೇ?  ಹಾಗೆಯೇ ಈ ರೋಬರ್ಡ್‌ ಸಹ ಹುಟ್ಟು ಪಡೆದಿದೆ. ಬೆಳೆಗೆ ಹಾನಿ ಮಾಡುವ ಪಕ್ಷಿಗಳನ್ನು ಓಡಿಸಲು ಇದೂ ಸಹ (ಯಂತ್ರಚಾಲಿತ) ಬೆದರುಬೊಂಬೆಯೇ ಆಗಿದೆ.  ಆದರೆ, ಇದೊಂದು ಪರಿಸರ ಸ್ನೇಹಿ ಉಪಾಯ ಎನ್ನಲಡ್ಡಿ ಇಲ್ಲ.

ಇದು ಕೇವಲ ಬೆದರುಬೊಂಬೆ, ಇದೇನೂ ನಮ್ಮ ಮೇಲೆ ದಾಳಿ ಮಾಡದು, ನಮ್ಮ ಮಾಂಸಕ್ಕೆ ಬಾಯಿ ಹಾಕದು ಎಂಬುದು ಪುಟ್ಟ ಪಕ್ಷಿಗಳಿಗೆ ತಿಳಿಯುವವರೆಗೂ ಈ ಯಾಂತ್ರಿಕ ಪಕ್ಷಿಯ ತಂತ್ರ ಯಶಸ್ವಿಯಾಗಬಹುದು.  ಹಾಗೊಮ್ಮೆ ತಿಳಿದು ಸಣ್ಣ ಹಕ್ಕಿಗಳು ಹೆದರುವುದು ನಿಂತು ಹೋದರೆ?
ಮತ್ತೆ ಹೊಸತೊಂದು ಸಂಶೋಧನಾ ಕಾರ್ಯ ಆರಂಭಗೊಳ್ಳುತ್ತದೆ ಅಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT