ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್‌ದೀಪ್‌ ಗೋಲಿನಲ್ಲಿ ಅರಳಿದ ಸಂಭ್ರಮ

ಹಾಕಿ: 12 ವರ್ಷಗಳ ಬಳಿಕ ಭಾರತ ಫೈನಲ್‌ ಪ್ರವೇಶ, ಕೊರಿಯ ಎದುರು ಗೆದ್ದ ಸರ್ದಾರ್‌ ಪಡೆ
Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಇಂಚೆನ್: ಏಷ್ಯನ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಬೇಕೆನ್ನುವ ಭಾರತದ ಕಾಯುವಿಕೆಗೆ ತೆರೆ ಬಿದ್ದಿದೆ. ಭರವಸೆಯ ಆಟಗಾರ ಆಕಾಶ್‌ದೀಪ್‌ ಸಿಂಗ್‌ ಗಳಿಸಿದ ಅಮೋಘ ಗೋಲಿನ ನೆರವಿನಿಂದ ಸರ್ದಾರ್‌ ಸಿಂಗ್‌ ನೇತೃತ್ವದ ಭಾರತ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಸಿಯೊನ್‌ಹಾಕ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ಗೆಲುವು ಸಾಧಿಸಿತು. ಆಕಾಶ್‌ದೀಪ್‌ 44ನೇ ನಿಮಿಷದಲ್ಲಿ ಗೋಲು ತಂದಿತ್ತು ಭಾರತದ ಸಂಭ್ರಮಕ್ಕೆ ಕಾರಣರಾದರು.

1998ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಕೂಟದಲ್ಲಿ ದಕ್ಷಿಣ ಕೊರಿಯವನ್ನು ಮಣಿಸಿ ಭಾರತ ಕೊನೆಯ ಸಲ ಬಂಗಾರದ ಪದಕ ಗೆದ್ದುಕೊಂಡಿತು. ನಂತರ ಬೂಸಾನ್‌ನಲ್ಲಿ ನಡೆದ ಕೂಟದ ಫೈನಲ್‌ನಲ್ಲಿ ಕೊರಿಯ ವಿರುದ್ಧವೇ ಸೋಲು ಕಂಡಿತ್ತು. ಹನ್ನೆರೆಡು ವರ್ಷಗಳ ಬಳಿಕ ಈಗ ಮತ್ತೆ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಚಿನ್ನದ ಸಾಧನೆ ತೋರುವ ಭರವಸೆ ಮೂಡಿಸಿದೆ. 2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಬೇಕಾದರೆ ಭಾರತ ತಂಡ ಇಲ್ಲಿ ಚಿನ್ನದ ಪದಕ ಗೆಲ್ಲಲೇಬೇಕಿದೆ.

ಮೊದಲ ಎರಡು ಕ್ವಾರ್ಟರ್‌ಗಳು ಕೊನೆಗೊಂಡಾಗ ಉಭಯ ತಂಡಗಳಿಂದಲೂ ಗೋಲು ಬಂದಿರಲಿಲ್ಲ. ಆತಿಥೇಯರಿಗೆ ಎರಡು ಬಾರಿ

ಚೆಂಡನ್ನು ಗುರಿ ಸೇರಿಸಲು ಅವಕಾಶ ಲಭಿಸಿತ್ತಾದರೂ, ಭಾರತ ಇದಕ್ಕೆ ಅವಕಾಶ ನೀಡಲಿಲ್ಲ. ಪಂದ್ಯ ಆರಂಭವಾಗಿ ಐದನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸಲು ಅವಕಾಶ ಸಿಕ್ಕಿತ್ತು. ಕರ್ನಾಟಕದ ಎಸ್‌.ವಿ. ಸುನಿಲ್ ಉತ್ತಮವಾಗಿ ಪಾಸ್‌ ನೀಡಿದರಾದರೂ, ಧರ್ಮವೀರ್‌ ಸಿಂಗ್‌ಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ, ಕೊರಿಯದ ಗೋಲ್‌ಕೀಪರ್‌ ಮಂಗೊಹೊ ಇದಕ್ಕೆ ಅವಕಾಶ ನೀಡಲಿಲ್ಲ.

ಎರಡನೇ ಕ್ವಾರ್ಟರ್‌ನ ಆಟ ಆರಂಭವಾಗಿ ಮೂರೇ ನಿಮಿಷದಲ್ಲಿ ಭಾರತಕ್ಕೆ ಮೇಲಿಂದ ಮೇಲೆ ಎರಡು ಪೆನಾಲ್ಪಿ ಕಾರ್ನರ್‌ ಅವಕಾಶಗಳು ಲಭಿಸಿದ್ದವು. ಆದರೆ, ಈ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಡ್ರ್ಯಾಗ್‌ಫ್ಲಿಕ್ಕರ್ ಪರಿಣತ ಕರ್ನಾಟಕದ ವಿ.ಆರ್‌. ರಘುನಾಥ್‌ ವಿಫಲರಾದರು.

ಮೊದಲ ಎರಡು ಕ್ವಾರ್ಟರ್‌ಗಳು ಮುಗಿದರೂ ಗೋಲು ಬಾರದ ಕಾರಣ ಭಾರತ ಒತ್ತಡಕ್ಕೆ ಒಳಗಾಯಿತು. ರಮಣದೀಪ್‌ ಸಿಂಗ್‌, ಗುರ್ವಿಂದರ್‌ ಸಿಂಗ್ ಚಾಂಡಿ ಫಾರ್ವರ್ಡ್‌ ಲೈನ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಬೀರೇಂದ್ರ ಲಾಕ್ರಾ, ಮನ್‌ಪ್ರೀತ್ ಸಿಂಗ್‌ ಮತ್ತು ರೂಪಿಂದರ್‌ಪಾಲ್ ಸಿಂಗ್ ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ಪ್ರದರ್ಶಿಸಿದರು.

ಚೆಂಡಿನ ಮೇಲೆ ಹಿಡಿತ ಸಾಧಿಸಲು ಉಭಯ ತಂಡಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿತ್ತು. ಗುರ್ಬಾಜ್‌ ಸಿಂಗ್ ಮತ್ತು ಸುನಿಲ್‌ ಮೂರನೇ ಕ್ವಾರ್ಟರ್‌ ವೇಳೆ ಚುರುಕಾದರು. ಇವರ ಸಹಾಯದಿಂದ ಆಕಾಶ್‌ದೀಪ್‌ ಗೋಲು ತಂದಿತ್ತು ಗೆಲುವಿನ ರೂವಾರಿ ಎನಿಸಿದರು. ನಂತರ ದಕ್ಷಿಣ ಕೊರಿಯ ಸಾಕಷ್ಟು ಒತ್ತಡಕ್ಕೆ ಒಳಗಾಯಿತು. ಗೋಲು ಗಳಿಸಲು ಪದೇ ಪದೇ ಯತ್ನಿಸಿತಾದರೂ ಭಾರತದ ಭದ್ರ ರಕ್ಷಣಾ ಕೋಟೆಯನ್ನು ಭೇದಿಸಲು ಆತಿಥೇಯರಿಗೆ ಸಾಧ್ಯವಾಗಲಿಲ್ಲ.

ಕಂಚಿಗಾಗಿ ಇಂದು ಪೈಪೋಟಿ
ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯದ ಎದುರು ಸೋಲು ಕಂಡು ಚಿನ್ನ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಭಾರತದ ವನಿತೆಯರ ಹಾಕಿ ತಂಡ ಬುಧವಾರ ಕಂಚಿನ ಪದಕಕ್ಕಾಗಿ ಪ್ಲೇ ಆಫ್‌ ಪಂದ್ಯ ಆಡಲಿದೆ. 2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದ ಏಷ್ಯನ್ ಕೂಟದ ಪ್ಲೇ ಆಫ್‌ ಪಂದ್ಯದಲ್ಲೂ ಭಾರತ ಮತ್ತು ಜಪಾನ್ ಪೈಪೋಟಿ ನಡೆಸಿದ್ದವು. ಆಗ ಭಾರತ ಸೋಲು ಕಂಡಿತ್ತು.

ಭಾರತ-ಪಾಕ್‌ ನಡುವೆ ಫೈನಲ್‌ ಕದನ
ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಮಂಗಳವಾರ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಪಾಕ್ ಪೆನಾಲ್ಟಿ ಶೂಟೌಟ್‌ನಲ್ಲಿ 6-5ರಲ್ಲಿ ಮಲೇಷ್ಯಾವನ್ನು ಮಣಿಸಿತು. ಪಂದ್ಯ ನಿಗದಿತ ಅವಧಿಯಲ್ಲಿ ಗೋಲು ರಹಿತವಾಗಿ ಡ್ರಾದಲ್ಲಿ ಅಂತ್ಯ ಕಂಡಿತ್ತು. ಆದ್ದರಿಂದ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಲೀಗ್‌ ಹಂತದಲ್ಲಿ  ಒಂದೇ ಗುಂಪಿನಲ್ಲಿದ್ದ ಭಾರತ ಮತ್ತು ಪಾಕ್‌ ತಂಡಗಳು ಪೈಪೋಟಿ ನಡೆಸಿದ್ದವು. ಆಗ ಭಾರತ 1-2ರಲ್ಲಿ ಸೋಲು ಕಂಡಿತ್ತು. 1990ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಏಷ್ಯನ್‌ ಕೂಟದಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಆಗಲೂ ಪಾಕ್‌ ಜಯ ಪಡೆದಿತ್ತು. 24 ವರ್ಷಗಳ ನಂತರ ಫೈನಲ್‌ನಲ್ಲಿ ಮತ್ತೆ ಪಾಕ್‌ ಎದುರಾಗಿರುವ ಕಾರಣ ಇಂಚೆನ್‌ ಏಷ್ಯನ್‌ ಕೂಟದ ಫೈನಲ್‌ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT