ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ ಬಿಟ್ಟು ಓದು ತರವೇ?

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಮಗುವಿಗೆ ಮೂರು ವರ್ಷ ಆಗುತ್ತಿದ್ದಂತೆ, ಅದರ ಓದು, ಭವಿಷ್ಯದ ಬಗ್ಗೆ ನೂರೆಂಟು ಲೆಕ್ಕಾಚಾರ ಹಾಕುತ್ತಾರೆ ಈಗಿನ ಪೋಷಕರು. ಪಠ್ಯ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳನ್ನು ಚುರುಕುಗೊಳಿಸಲು ಶಾಲೆ ನಂತರ ಹಲವು ವಿಶೇಷ ತರಗತಿಗಳಿಗೆ ಸೇರಿಸುವುದು ಈಗಿನ ಟ್ರೆಂಡ್. ಬೆಳಿಗ್ಗೆ 6.30ಕ್ಕೆ ಯೋಗ ಕ್ಲಾಸ್, ಸಂಜೆ 4ಕ್ಕೆ ಈಜು, 5ಕ್ಕೆ ಡಾನ್ಸ್, 6ಕ್ಕೆ ಸಂಗೀತ, ಪೇಂಟಿಂಗ್ ಕ್ಲಾಸ್, ಕರಾಟೆ, ಸ್ಕೇಟಿಂಗ್... ಹೀಗೆ ಕ್ಲಾಸ್‌ಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಸ್ಪರ್ಧಾತ್ಮಕ ಯುಗದ ನಿಯಮವೂ ಹೌದು.
ಮಕ್ಕಳ ಸಮಯವನ್ನು ಮೌಲ್ಯಯುತ ಮಾಡುವ ಹಾಗೂ ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ಲಾಸ್‌ಗಳು ಪರಿಣಾಮಕಾರಿ ಸಾಧನ ಎನ್ನಬಹುದು.

ಈ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳಲ್ಲಿ ಏಕತಾನತೆ ದೂರವಾಗಿ, ಮಾನಸಿಕ ಹಾಗೂ ಬೌದ್ಧಿಕವಾಗಿ ಸಮರ್ಥರಾಗುವಂತೆ ಹಾಗೂ ಒತ್ತಡದಿಂದ ಅವರನ್ನು ಹಗುರಗೊಳಿಸುವ ಹೊಸ ದಾರಿಯನ್ನೂ ತೋರುತ್ತವೆ. ಬರೇ ಹೋಮ್‌ ವರ್ಕ್, ಪಾಠಗಳ ಒತ್ತಡದಿಂದ ಹಗುರಗೊಳ್ಳುವ ಈ ಹವ್ಯಾಸ ತರಗತಿಗಳಿಗೆ ಮಕ್ಕಳೂ ಹೊಂದಿಕೊಂಡೇ ಬೆಳೆದಿರುತ್ತಾರೆ. ಆ ತರಗತಿಗಳು ಸಂತೋಷ ತಾಣಗಳೂ ಆಗಿರುತ್ತವೆ.

ಆದರೆ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಕ್ಕಳ ಗಮನವನ್ನು ಓದುವ ಕಡೆ ಮಾತ್ರ ಕೇಂದ್ರೀಕರಿಸಲು ಪೋಷಕರು ಎಲ್ಲಾ ಪಠ್ಯೇತರ ತರಗತಿಗಳಿಗೂ ತಾತ್ಕಾಲಿಕ ವಿರಾಮ ನೀಡಿ ಮಕ್ಕಳನ್ನು ಓದಿಗೆ ಮಾತ್ರ ಸೀಮಿತಗೊಳ್ಳುವಂತೆ ಮಾಡುತ್ತಾರೆ. ಇದರಿಂದ ಮಕ್ಕಳ ಚಿತ್ತ ಬೇರೆಲ್ಲೂ ವಾಲದೆ ಓದಿನತ್ತ ಮಾತ್ರ ಇರಲು ಸಹಾಯವಾಗುತ್ತದೆ ಎಂಬುದು ಬಹುಪಾಲು ಪೋಷಕರ ನಂಬಿಕೆ.

ಆದರೆ ನಿಜಕ್ಕೂ ಒತ್ತಡ ನಿವಾರಕದಂತೆ ಕೆಲಸ ಮಾಡುವ ಈ ತರಗತಿಗಳನ್ನು ಬಿಡಿಸುವುದರಿಂದ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆಯೇ? ಪರೀಕ್ಷೆ ಸಮಯದಲ್ಲಿ ಸಹಜವಾಗೇ ಹೆಚ್ಚಿರುವ ಒತ್ತಡದ ಪ್ರಮಾಣ ಇನ್ನೂ ಏರುತ್ತದೆಯೇ? ಅಥವಾ ಮಕ್ಕಳ ವಯಸ್ಸಿನ ಮೇಲೆ ಇವು ಅವಲಂಬಿತವಾಗಿದೆಯೇ? ಇದಕ್ಕೆ ಮನಶಾಸ್ತ್ರಜ್ಞ ಮೋಹನ್ ರಾಜ್ ಅವರು ನೀಡುವ ವ್ಯಾಖ್ಯಾನ ಹೀಗಿದೆ.

‘ಮಕ್ಕಳಿಗೆ ಅವುಗಳದೇ ಆದ ಒತ್ತಡವೂ ಇದ್ದೇ ಇರುತ್ತದೆ. ಕ್ಲಾಸ್‌ನಿಂದ ಕ್ಲಾಸ್‌ಗೆ ಹೋಗುತ್ತಿದ್ದಂತೆ ಅವರ ಒತ್ತಡದ ಮಟ್ಟವೂ ಹೆಚ್ಚುತ್ತಾ ಹೋಗುತ್ತದೆ. ಪರೀಕ್ಷೆ ಸಮಯದಲ್ಲಿ ಅದು ಇನ್ನಷ್ಟು ಹೆಚ್ಚು. ಆ ಸಮಯದಲ್ಲಿ ಪೋಷಕರು ಮಕ್ಕಳಿಗೆ ಮಾಮೂಲಿ ದಿನಚರಿಯಂತೆ ನಡೆದುಕೊಳ್ಳಲು ಬಿಡದೆ ಅವೆಲ್ಲವನ್ನೂ ಬಿಟ್ಟು ಬರೇ ಓದಿನೆಡೆಗೇ ತೊಡಗುವಂತೆ ಒತ್ತಾಯಿಸುತ್ತಾರೆ. ಇದು ಸರಿಯಲ್ಲ. ಮಕ್ಕಳಿಗೆ ಬ್ರೇಕ್ ಅಗತ್ಯ ಹೆಚ್ಚಿರುತ್ತದೆ. ಅಂಥ ಒಂದು ಆರೋಗ್ಯದಾಯಕ ಬ್ರೇಕ್ ಅನ್ನು ಈ ಚಟುವಟಿಕೆಗಳು ನೀಡುತ್ತವೆ.

ಬ್ರೇಕ್ ಮಾತ್ರವಲ್ಲ, ಅತಿ ಚಿಕ್ಕ ವಯಸ್ಸಿಗೇ ಮಕ್ಕಳಲ್ಲಿ ಒತ್ತಡ ನಿರ್ವಹಣಾ ಸಾಮರ್ಥ್ಯ ಹೆಚ್ಚಲು ಅನುಕೂಲವಾಗುತ್ತದೆ. ಓದು ಮತ್ತು ಇನ್ನಿತರ ಚಟುವಟಿಕೆಗಳನ್ನು ಸಮಾನವಾಗಿ ನಿಭಾಯಿಸಲು ಕಲಿಸಿದರೆ ಮುಂದೆ ಜಟಿಲ ಸಮಸ್ಯೆಗಳನ್ನೂ ಸುಲಭವಾಗಿ ನಿವಾರಿಸುವ, ಸಂಭಾಳಿಸುವ ಸಾಮರ್ಥ್ಯವನ್ನೂ ಕಲಿಸಿದಂತಾಗುತ್ತದೆ. ಒತ್ತಡ ನಿವಾರಣೆ, ಸಮಯ ನಿರ್ವಹಣೆ, ಹೊಂದಾಣಿಕೆ ಇನ್ನಿತರ ಅಂಶಗಳೂ ಪರೋಕ್ಷವಾಗಿ ಮಕ್ಕಳು ಕಲಿಯುತ್ತವೆ’.

ಬೇರೆ ತರಗತಿಗಳನ್ನು ನಿಲ್ಲಿಸಿದರೆ ಮಕ್ಕಳ ಪರ್ಫಾರ್ಮೆನ್ಸ್ ಹೆಚ್ಚುತ್ತದೆ ಎಂಬುದನ್ನು ಸುಳ್ಳು ಎನ್ನುವ ಮೋಹನ್, ತಂದೆ ತಾಯಿಗಳು ಮಕ್ಕಳನ್ನು ಒತ್ತಡಕ್ಕೆ ದೂಡದೆ, ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ ಎಂಬ ಸಲಹೆಯನ್ನೂ ನೀಡುತ್ತಾರೆ.
ಆದರೆ ಈ ಚಟುವಟಿಕೆಗಳ ಇತಿ ಮಿತಿ, ಮಕ್ಕಳ ಸಾಮರ್ಥ್ಯ, ವಯಸ್ಸು, ಓದುತ್ತಿರುವ ತರಗತಿ ಇವುಗಳ ಕಡೆಗೂ ಗಮನ ನೀಡಬೇಕು ಎನ್ನುವುದು ಅವರ ಅಭಿಪ್ರಾಯ.

ಕ್ಲಾಸ್ ತಪ್ಪಿಸುವುದಿಲ್ಲ
ನನ್ನ ಮಗಳು ಯುಕೆಜಿಯಲ್ಲಿದ್ದಾಳೆ. ಅವಳಿಗೆ ಇಷ್ಟ ಎನ್ನುವ ಕಾರಣಕ್ಕೆ ಚಿತ್ರಕಲೆ ಹಾಗೂ ನೃತ್ಯ ತರಗತಿಗೆ ಸೇರಿಸಿದ್ದೇನೆ. ಅದು ವಾರಕ್ಕೆ ಮೂರು ದಿನ ಇರುತ್ತದೆ. ಪರೀಕ್ಷೆ ಬಂದರೂ ಈ ತರಗತಿಗಳನ್ನು ಬಿಡಿಸುವುದಿಲ್ಲ. ಏಕೆಂದರೆ ಪರೀಕ್ಷೆ ಸಮಯ ಮಕ್ಕಳಿಗೆ ಮೊದಲಿಗಿಂತ ಹೆಚ್ಚು ಒತ್ತಡ ಇರುತ್ತದೆ. ಅವರವರ ವಯಸ್ಸಿಗೆ ತಕ್ಕ ಒತ್ತಡ ಅವರಿಗೆ ಇದ್ದೇ ಇರುತ್ತದೆ. ಆ ಸಮಯದಲ್ಲಿ ಅವರು ಖುಷಿಯಿಂದ ಹೋಗುವ ಈ ತರಗತಿಗಳನ್ನೂ ಬಿಡಿಸಿದರೆ ಈ ಪುಟ್ಟ ಮಕ್ಕಳಿಗೆ ಓದು ಇನ್ನಷ್ಟು ಕಷ್ಟವಾಗಬಹುದು. ಆದ್ದರಿಂದ ಈ ತರಗತಿಗಳನ್ನು ಬಿಡಿಸುವುದಿಲ್ಲ. ಮಕ್ಕಳು ಪಾಠವನ್ನು ಇನ್ನಷ್ಟು ಖುಷಿಯಿಂದ ಗ್ರಹಿಸಲು ಈ ಚಟುವಟಿಕೆಗಳು ನೆರವಾಗುತ್ತವೆ.
–ಶ್ವೇತಾ

ಪರೀಕ್ಷೆ ಸಮಯ ಅನಿವಾರ್ಯ
ನನ್ನ ಮಗನಿಗೆ ಕರಾಟೆ ಅಂದ್ರೆ ತುಂಬಾ ಇಷ್ಟ. ಆದ್ದರಿಂದ ದಿನಕ್ಕೆ ಒಂದರಿಂದ ಒಂದೂವರೆ ಗಂಟೆ ಕರಾಟೆ ತರಗತಿಯಲ್ಲಿ ಕಳೆಯುತ್ತಾನೆ.

ಆದರೆ ಪರೀಕ್ಷೆ ಬಂದಾಗ ಈ ವೇಳಾಪಟ್ಟಿ ಸ್ವಲ್ಪ ಬದಲಾಗುತ್ತದೆ. ಶಾಲೆಯಲ್ಲಿ ತಿಂಗಳ ಪರೀಕ್ಷೆ ಇದ್ದಾಗ, ಕೆಲವು ದಿನಗಳ ಮುಂಚೆ ಕರಾಟೆ ತರಗತಿಗೆ ಕಳುಹಿಸುವುದಿಲ್ಲ. ದೊಡ್ಡ ಪರೀಕ್ಷೆ ಬಂದರೆ ಹದಿನೈದು ದಿನಗಳ ಮುಂಚಿತವಾಗಿಯೇ ಕರಾಟೆ ತರಗತಿಯನ್ನು ಬಿಡಿಸುತ್ತೇನೆ. ಏಕೆಂದರೆ ಕರಾಟೆ ದೈಹಿಕ ಶ್ರಮ ಬೇಡುವಂಥದ್ದು. ಕರಾಟೆ ಕ್ಲಾಸಿಗೆ ಹೋಗಿ ಸುಸ್ತಾಗುವುದರಿಂದ ಓದಲು ಕಷ್ಟವಾಗುತ್ತದೆ. ಬೇಗ ನಿದ್ದೆ ಮಾಡಿಬಿಡಬಹುದು. ಓದಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗಿನ ಕೆಲವು ಶಾಲೆಗಳಲ್ಲಂತೂ ದಿನಕ್ಕೆ ಎರಡು ವಿಷಯದ ಪರೀಕ್ಷೆಗಳನ್ನು ಇಟ್ಟುಬಿಡುತ್ತಾರೆ. ಆಗ ಒತ್ತಡ ಎನಿಸಿದರೂ ಓದಲೇಬೇಕಾದ್ದು ಕಡ್ಡಾಯ. ತರಗತಿ ಬಿಡಿಸುವುದೂ ಅನಿವಾರ್ಯ. ಚಿಕ್ಕ ಮಕ್ಕಳಲ್ಲಾದರೆ ಓದುವುದು ಕಡಿಮೆ ಇರುವುದರಿಂದ ಹೇಗೋ ನಿರ್ವಹಣೆ ಮಾಡಬಹುದು. ಆದರೆ ಪ್ರೌಢ ಶಾಲೆಗೆ ಬರುತ್ತಿದ್ದಂತೆ, ಓದು ಗಂಭೀರವಾಗುತ್ತದೆ. ಆಗ ಅನಿವಾರ್ಯವಾಗಿ ಒಂದಿಷ್ಟು ಅವಧಿ ಬಿಡಿಸಬೇಕಾಗುತ್ತದೆ. ಅವರಿಗೆ ಎರಡೂ ಕಡೆ ಒತ್ತಡ ಎನಿಸಬಾರದಲ್ಲ?
–ದಿವ್ಯ ಕುಮಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT