ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮರಕ್ಷಣೆಯ ಅಸ್ತ್ರ ಸ್ಕ್ವಾಯ್‌

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಪುರಾತನ ಭಾರತೀಯ ಯುದ್ಧಕಲೆಗಳ ಸಾಲಿಗೆ ಸೇರಿದ ‘ಸ್ಕ್ವಾಯ್‌’ ಈಗ ಆತ್ಮರಕ್ಷಣಾ ಕಲೆಯಾಗಿ ಬೆಳೆಯುತ್ತಿದೆ. ಮೈಸೂರಿನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ 15ನೇ ಸ್ಕ್ವಾಯ್‌ ಮಾರ್ಷಲ್‌ ಆರ್ಟ್ಸ್‌ ಚಾಂಪಿಯನ್‌ಷಿಪ್‌ ಸ್ಕ್ವಾಯ್‌ನ ಹೊಸ ಪ್ರತಿಭೆಗಳನ್ನು ಪರಿಚಯಿಸಿತು.

ರಾಜ್ಯದಲ್ಲಿ ಮೊದಲ ಬಾರಿಗೆ ನಡೆದ ಈ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು 524 ಸ್ಕ್ವಾಯ್‌ಪಟುಗಳು ಭಾಗವಹಿಸಿದ್ದರು. ಇವರಲ್ಲಿ 350 ಹುಡುಗರು, 190 ಹುಡುಗಿಯರು. ಅದರಲ್ಲೂ ಗೋವಾ ರಾಜ್ಯವೊಂದರಿಂದಲೇ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಬಂದಿದ್ದರು. ಇವರು 118 ಪದಕಗಳನ್ನು ಗೆದ್ದರು. ಮಹಾರಾಷ್ಟ್ರಕ್ಕೆ 99, ತಮಿಳುನಾಡಿಗೆ 37, ಕರ್ನಾಟಕಕ್ಕೆ 26 ಪದಕಗಳು ಲಭಿಸಿದವು. ಈ ಸಂಖ್ಯೆಗಳನ್ನು ಗಮನಿಸಿದರೆ ರಾಜ್ಯವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಸ್ಕ್ವಾಯ್‌ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿರುವುದು ಎದ್ದುಕಾಣುತ್ತದೆ.

ಬಲಗೈಯಲ್ಲಿ ತುರ್ರಾ (ಕತ್ತಿ), ಎಡಗೈಯಲ್ಲಿ ಬರ್ಗೂಲಾ (ಗುರಾಣಿ) ಹಿಡಿದು ಎದುರಾಳಿ ಮೇಲೆ ಎರಗುವುದು ಇದರ ಶೈಲಿ. ಫೈಟ್‌ ಮಾಡುವುದಕ್ಕೆ ಮಾತ್ರವಲ್ಲ, ನೋಡುವುದಕ್ಕೂ ಈ ಕಲೆ ಅತ್ಯಂತ ರೋಮಾಂಚನಕಾರಿ.
ಸಾಮಾನ್ಯವಾಗಿ ಬಾಕ್ಸಿಂಗ್‌, ಕುಂಗ್‌ಫೂ ಹಾಗೂ ಕರಾಟೆಯಲ್ಲಿ ಪೆಟ್ಟು ಬೀಳುತ್ತವೆ, ನೋವುಗಳಾಗುತ್ತವೆ. ಆದರೆ, ಸ್ಕ್ವಾಯ್‌ ಇವೆರಡಕ್ಕಿಂತಲೂ ಸುರಕ್ಷಿತ. ಸ್ಕ್ವಾಯ್‌ನಲ್ಲಿ ಕೂಡ ನಾಲ್ಕು ವಿಭಾಗಗಳಿವೆ. ಲೋಬಾ, ಖವಾಂಕಿ, ಮೆಥಾಲ್‌, ಏರೋಸ್ಕ್ವಾಯ್‌. ಕಾಶ್ಮೀರ ದಲ್ಲಿರುವ ಗ್ರ್ಯಾಂಡ್‌ ಮಾಸ್ಟರ್‌ ಮೀರ್‌ ನಜೀರ್‌ ಈಗ ಸ್ಕ್ವಾಯ್‌ ಪ್ರಪಂಚದ ಮಹಾಗುರು.

ಸ್ಕ್ವಾಯ್‌ ಹುಟ್ಟಿದ್ದು, ಬದುಕಿದ್ದು, ಬೆಳೆದಿದ್ದು ಕಾಶ್ಮೀರದಲ್ಲೇ. ಇದರ ಇತಿಹಾಸ ಕ್ರಿ.ಪೂ. 4012ರಿಂದ ಆರಂಭವಾಗುತ್ತದೆ. ಕ್ರಿ.ಪೂ. 3905ರಲ್ಲಿ ದಯಾದೇವ ಎಂಬ ರಾಜ ಈ ಕಲೆಯನ್ನು ಯುದ್ಧಕಲೆಯಾಗಿ ತನ್ನ ಸೈನಿಕರಿಗೆ ಕೊಡಿಸಿದ ಬಗ್ಗೆ ಸ್ಕ್ವಾಯ್‌ ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

1987ರಿಂದ ಈಚೆಗೆ ಸ್ಕ್ವಾಯ್‌ ಸಂಘಟನೆ ಹುಟ್ಟಿಕೊಂಡಿದೆ. ದಾವಣಗೆರೆ ಜಿಲ್ಲೆಯ ಹರಿಹರದ ಕರಾಟೆ ಮಾಸ್ಟರ್‌ಗಳಾದ ಜಿ.ಬಿ. ರವಿಕುಮಾರ್‌ ಹಾಗೂ ಮಹಮ್ಮದ್‌ ಅಲಿ ಅವರು ‘ಸ್ಕ್ವಾಯ್‌ ಅಸೋಸಿಯೇಷನ್‌ ಆಫ್‌ ಕರ್ನಾಟಕ’ ಕಟ್ಟಿಕೊಂಡರು. ಮೈಸೂರಿಗೆ ಇದನ್ನು ಪರಿಚಯಿಸಿದವರು  ಎನ್‌. ಮಾಲತೇಶ್, ವಿ. ಆನಂದರಾಜು,  ಮಂಜುನಾಥ್‌. ಸ್ಕ್ವಾಯ್‌ ಗೇಮ್‌ ಫೆಡರೇಷನ್‌ ಆಫ್‌ ಇಂಡಿಯಾ, ಸಿಬಿಎಸ್‌ಸಿ ಕೂಡ ಇದನ್ನು ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT