ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ನಿಸರ್ಗ ನಿಯಮಕ್ಕೆ ವಿರುದ್ಧ

Last Updated 24 ಜುಲೈ 2015, 19:57 IST
ಅಕ್ಷರ ಗಾತ್ರ

ನಾಲ್ವಡಿ ಅಂತಹವರು ರಾಣಿಯ  ಕಿರೀಟದಡಿ ನಿಂತು ಅನ್ನದಾತನ ಪರಿಯನ್ನು ವೀಕ್ಷಿಸಿದರು. ವಿಶ್ವೇಶ್ವರ ಯ್ಯನವರು ಹರಿವ ನದಿಗೆ ಕಟ್ಟೆ ಕಟ್ಟಿದರು. ನೆಹರೂ, ಜಲಾಶಯಗಳು ದೇಶದ ಅಭಿವೃದ್ಧಿ ಎಂದರು. ಇವೆಲ್ಲವೂ ಕೈಗಾರಿಕಾ ಕ್ರಾಂತಿಯ ಜಗದೆಚ್ಚರದ ಬೀಜಗಳಾಗಿ ಕಂಡವು. ಪಾತಾಳದಿಂದ ನೀರು ತಂದ ಭಗೀರಥನಂತೆ ‘ನೀರು ಸಾಬ’ರಾದ ನಜೀರರು ಕಂಡರು. ಈ ಮೊದಲೇ, ಬರ ಎಂಬುದರ ಮೇಲೆ ಸಮರ ಸಾರಿ ಕೃಷಿ ವಿಜ್ಞಾನಿಗಳು ಹಸಿರು ಕ್ರಾಂತಿ ತಂದರು. ಈ ಮೇಲಿನ ಯಾವುವೂ ಈಗ ಉಪಯೋಗಕ್ಕೆ ಬರುತ್ತಿಲ್ಲ. ಕಾಲ ಒಂದು ಬುಗುರಿ. ಇದರ ಅರಿವು ಮಹಾತ್ಮ ಗಾಂಧಿಯಂತಹವರಿಗೆ ಮಾತ್ರ ಇತ್ತು. ಕುಂತಲ್ಲಿ ಅಂಗಿ ನೇಯ್ದುಕೊಳ್ಳಿ ಎಂದರು. ನಿಂತಲ್ಲಿ ಹೂವು ಅರಳುವುದು ನೋಡಿ ಎಂದರು. ನಡಿಗೆಯಲ್ಲಿ ಬದುಕು ರೂಪಿಸಿಕೊಳ್ಳಿ ಎಂದರು.

ಈ ದೇಶ ಹಳ್ಳಿಗಳ ದೇಶ, ಹಳ್ಳಿಗಳೇ ದೇಶದ ಬೆನ್ನೆಲುಬು. ‘ನಿಜವಾದ ಭಾರತವನ್ನು ಕೆಲವು ನಗರಗಳಲ್ಲಿ ಕಾಣುವುದು ಸಾಧ್ಯವಿಲ್ಲ; ಕೋಟಿ ಕೋಟಿ ಹಳ್ಳಿಗಳಲ್ಲಿ ಕಾಣಬೇಕು’ ಎಂದರು. ಯಾರೂ ಕೇಳಿಸಿಕೊಳ್ಳಲಿಲ್ಲ. ಗಾಂಧಿ ಕಾಲದಲ್ಲಿ ಬಡತನವಿತ್ತು. ಅದರೊಂದಿಗೆ ದೇವರ ಮೇಲೆ ಭಾರ ಹಾಕಿದ ನೆಮ್ಮದಿಯೂ ಇತ್ತು. ಈ ನೆಮ್ಮದಿ ಸರಳ ಬದುಕಿಗೆ ಹೊಂದಿಕೊಂಡಿತ್ತು. ಅತ್ಯಾಸೆಗೆ ವಿರುದ್ಧವಾಗಿತ್ತು. ಅಂದರೆ ರೈತನಿಗೆ ಆಸೆಗಳಿರಬಾರ ದೆಂದೇನೂ ಇಲ್ಲ. ಅದು  ಪ್ರಕೃತಿಯ ಸೆರಗಿನೊಳಗಿರಬೇಕು.

ಸ್ವತಂತ್ರ ಭಾರತವು ಪರಂಪರೆಯ ಜ್ಞಾನವನ್ನು ರೈತರಿಗೆ ಹೇಳಿಕೊಡಲಿಲ್ಲ. ಪರಂಪರಾಗತ ಜ್ಞಾನ ಆಧುನಿಕ ವಿದ್ಯೆಗಿಂತ ಕಿರಿದು ಎಂದು ಕಲಿಸಿದರು. ಈ ಕಲಿತ ಸಮಾಜ, ರೈತಾಪಿಯನ್ನು ಗಾಂಧಿ ಮಾರ್ಗದಲ್ಲಿ ಮುಂದುವರಿಸಲಿಲ್ಲ. ನೆಹರೂ ಮಾರ್ಗದಲ್ಲಿ ಚಾಲನೆಗೊಳಿಸಿತು. ಪಶ್ಚಿಮ ದಿಕ್ಕಿನಲ್ಲಿ ದಾರಿ ಹುಡುಕಿತು. ಕೋಟಿ ಕೋಟಿ ಹಳ್ಳಿಗಳು ನಗರದ ಕಡೆ ತಿರುಗಿ ನಿಂತವು. ಹಸಿರುಕ್ಕಿಸುತ್ತಾ ಹಸನಕ್ಕೆ ಬೆಳೆದವು. ಸಿಹಿಮೂಟೆ ಒಟ್ಟಿದವು. ಮಂಡ್ಯ ಸೀಮೆ ಒಮ್ಮೆ ಹುರುಳಿಕಾಳು ಬೆಳೆಯಲಾರದ ಸೀಮೆ ಎಂದಾಗಿತ್ತು. ತುಂಗಾಭದ್ರಾ ಸೀಮೆ ಮಳೆ ಕಾಣದ ಸೀಮೆ ಎಂದಾಗಿತ್ತು. ಆಗ ರೈತ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರಲಿಲ್ಲ.

‘ಜಾತಸ್ಯ ಮರಣಂ ಧ್ರುವಂ’ ಎಂದರೆ ಹುಟ್ಟಿದವನು ಸಾಯಲೇಬೇಕು ಎಂಬುದರ ಅರಿವು. ಇದು ನಿಸರ್ಗ ನಿಯಮ. ಆತ್ಮಹತ್ಯೆ ಈ ನಿಸರ್ಗ ನಿಯಮಕ್ಕೆ ವಿರುದ್ಧ. ‘ಕಠೋಪನಿಷತ್ತು’ ಸಾವನ್ನು ಕುರಿತು ಹೇಳುವ ವಿವೇಕ. ಇಂದು ರೈತ ಈ ಎಲ್ಲ ವಿವೇಕವನ್ನೂ ಮೀರುತ್ತಿದ್ದಾನೆ ಏಕೆ? ಹಾಗೆಯೇ ಆಲೋಚಿಸುತ್ತಾ ಹೋದರೆ, ನೀರಾವರಿ ರೈತ ಮಾತ್ರ ಸಾವಿಗೆ ಶರಣಾಗುತ್ತಿದ್ದಾನೆ. ಪಶ್ಚಿಮ ಘಟ್ಟದ ಹಾಸನ ಮಲೆನಾಡು ರೈತ ಆನೆಯೊಡನೆ ಹೋರಾಡುತ್ತಿದ್ದಾನೆಯೇ ಹೊರತು ಮಂಡ್ಯ ಹಾಗೂ ತುಂಗಭದ್ರಾ ರೈತನಂತೆ ಸಾವಿಗೆ ಶರಣಾಗುತ್ತಿಲ್ಲವೇಕೆ? ಈ ವಿವೇಕದಲ್ಲಿ ಇದಕ್ಕೆಲ್ಲ ಉತ್ತರ ಸಿಗಬಹುದು. ಮಳೆ–ಬರ ಎಂಬುದು ರೈತನ ಸಂಗಾತಿ. ಪ್ರಕೃತಿಯೊಡನೆ ಒಡನಾಟ ಅವನ ಜ್ಞಾನ ಪರಂಪರೆಯದು. ಪಾತಾಳದ ನೀರು ತಂದ ರೈತ ಇಂದು ಸಾವಿನ ಕಡೆ ಚಲಿಸುತ್ತಿದ್ದಾನೆ. ಹೊಟ್ಟೆ ತುಂಬಾ ಉಣ್ಣಬೇಕು, ದೇಶಕ್ಕೆ ಉಣಿಸಬೇಕೆಂಬ ಆಸೆಗೆ ನೂಕಿಸಿಕೊಂಡ ರೈತ ಬೆಳೆದದ್ದನ್ನು ಏನು ಮಾಡಲಿ ಎಂದು ಹತಾಶನಾಗಿದ್ದಾನೆ. ಸರ್ಕಾರಗಳು ಈಗ ಏನು ಮಾಡುತ್ತಿವೆ? ಸಿಂಹಾಸನ ಉಳಿಸಿಕೊಳ್ಳುವ, ಏರುವ– ಇಳಿಯುವ ಆಟದಲ್ಲಿ ದೇಶದ ರೈತನ ಬದುಕಿನೊಡನೆ ಚೆಲ್ಲಾಟವಾಡುತ್ತಿವೆ.

ಒಬ್ಬ ಕುರಿಯನ್ ಹಾಲಿನ ಮೂಲಕ ಹಳ್ಳಿಯ ಹೆಣ್ಣು ಮಕ್ಕಳಿಗೆ ಬದುಕು ಕೊಡುತ್ತಾನೆ. ಕರೆಯುವ ಹಾಲನ್ನು ಭಾರತ ದೇಶಕ್ಕೆ ಹಂಚಿ ಉಣ್ಣಲು ನೆರವಾಗುತ್ತಾನೆ. ಅದರಂತೆ ಭೂಮಿ ಫಸಲಿಗೆ ಬಲ ನೀಡುವ ವಿಜ್ಞಾನಿಗಳು, ರಾಜಕೀಯಾಸಕ್ತರು ಎಲ್ಲಿಗೆ ಹೋಗಿದ್ದಾರೆ? ದೇಶ ಹೇಗೋ ನಡೆಯುತ್ತಿದೆ. ಈ ದೇಶ ನಡೆದು ಬಂದಿರುವುದೇ ಹೀಗೇ ಎನ್ನೋಣವೆ! ವಸ್ತುಸ್ಥಿತಿ ಹಾಗಿಲ್ಲ. ಹಳ್ಳಿಗಳು ಖಾಲಿಯಾಗುತ್ತಿವೆ. ಪೇಟೆ ಕಡೆಯಿಂದ ತರುವ ಹಣದ ಥೈಲಿಗೆ ಕಣ್ಣರಳಿಸುತ್ತಿವೆ.
ಇದು ರೈತಾಪಿ ವರ್ಗವನ್ನು ಬಲಿಷ್ಠಗೊಳಿಸುವ ಮಾದರಿಯಲ್ಲ. ಅದನ್ನು  ಮಾರಿಕೊಳ್ಳುವ ವಿಧಾನ. ಇಂದು ಭೂಮಿ ಒಡೆಯ; ನಾಳೆ ಅದೇ ಭೂಮಿಗೆ ಕೂಲಿ.

ಇದು ಈಗಿನ ‘ಬೆಳಗುವ ಭಾರತ.’ ಹಾಲು ಕರೆದರೆ ನಿಗದಿ ಬೆಲೆಯಿದೆ. ಟೊಮಾಟೊ, ಈರುಳ್ಳಿ, ಕಬ್ಬು, ಭತ್ತ ಬೆಳೆದರೆ ಯಾಕಿಲ್ಲ? ಇದೇ ರೈತನ ಸಾವಿನ ಬೀಜದ ಪ್ರಶ್ನೆ. ಬೆಳೆಯಬೇಕೆಂಬ ರೈತನ ಆಸೆಗೆ ಪ್ರಕೃತಿಯ ಸೆರಗಿನಾಶ್ರಯ ಬೇಕು. ಪಾತಾಳದ ನೀರು ರೈತನ ಮಡಿಲಿಗೆ ಹರಿದುಬರುತ್ತಿಲ್ಲ. ಅಳುತ್ತಾ ಕಣ್ಣೀರಾಗಿ ಬರುತ್ತಿದೆ. ನೀರು ತರಲು ಹೊರಟ ರೈತ ಮೀಟರು ಬಡ್ಡಿ ಕೋಲಿನಲ್ಲಿ ಹೊಡೆತ ತಿನ್ನುತ್ತಾನೆ. ಅವಮಾನದಲ್ಲಿ ಸಾಯುತ್ತಾನೆ. ಮರ್ಯಾದೆಗೆ ಅಂಜುವವನು ಮಾತ್ರ ಸಾಯಲು ಮನಸ್ಸು ಮಾಡುತ್ತಾನೆ. ಸಾಯುವುದು ಅಷ್ಟು ಸುಲಭವಲ್ಲ. ಎಲ್ಲರಿಂದಲೂ ಆತ್ಮಹತ್ಯೆ ಆಗುವುದಿಲ್ಲ. ಇದು ಹತಾಶೆಯ ಕಡೆಯ ಘಟ್ಟ.

ಇಂದಿರಮ್ಮನ ದಿನಗಳನ್ನು ಅಣಕಿಸುವ ಇಂದಿನ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದಾರೆಯೆ? ಇಲ್ಲ. ಈ ತುರ್ತು ಯಾರಿಗೂ ಇಲ್ಲ. ಭೂಮಿ ಇರುವವರೆಗೂ ಬದುಕಿರುತ್ತೇವೆಂದು ತಿಳಿದಿರುವ ಆಳುವ ಶೂರರು ಅನ್ನದಾತ ಎಂದು ಹೇಳುತ್ತಲೇ ಅವನ ಗೂನು ಬೆನ್ನಿನ ಮೇಲೆ ಕುಳಿತು ಸವಾರಿ ಮಾಡುತ್ತಿದ್ದಾರೆ. ಹಿಂದೊಮ್ಮೆ ಮೇಣೆಯಲ್ಲಿ ಮನುಷ್ಯರು ಮನುಷ್ಯನನ್ನು ಹೊರುವ ಸಂಪ್ರದಾಯವಿತ್ತು. ಈಗಲೂ ಅದೇ ಇದೆ ಅನ್ನಿ. ಅದರಲ್ಲೂ ಅನ್ನದಾತನ ಮೇಲೆ ಸರ್ಕಾರಗಳೇ ಕುಳಿತುಬಿಟ್ಟಿವೆ.

ಪ್ರಜಾಪ್ರಭುತ್ವ ಗಾಂಧಿ ಮಾದರಿಯಲ್ಲಿ ಇರಬೇಕಾಗಿತ್ತು. ಇಲ್ಲವೇ ಗಾಂಧಿ ತಿಳಿವಳಿಕೆಯ ವಿಶ್ವ ಮಾದರಿಯಲ್ಲಿ ಇರಬೇಕಾಗಿತ್ತು. ಈ ಎರಡೂ ಇಲ್ಲ. ಕೃಷಿ ಬೆಂಡಾಗಿದೆ. ಕೃಷಿಯ ಒಳಗೆ ವಿಷ ಸೇರಿದೆ. ಸಹಜ ಕೃಷಿ ಹೆಜ್ಜೆ ತಪ್ಪಿದೆ. ಹೆಜ್ಜೆ ತಪ್ಪಿದ ಜಾಡಿನಲ್ಲಿ ರೈತನ ಗಂಟಲಿಗೆ ವಿಷ ಅಮೃತದಂತೆ ಕ್ಷಣಮಾತ್ರದಲ್ಲಿ ಸೇರಿಬಿಡುತ್ತದೆ.

ಸಾಯುವ ಅನ್ನದಾತನಿಗೆ ವಿಷವೇ ‘ಅಮೃತ’ವಾಗುತ್ತಲಿರುವ ಈ ಸನ್ನಿವೇಶಕ್ಕೆ ಯಾರು ಹೊಣೆ? ಅವನ ಸಂಸಾರದೊಳಗಿನ ದುಃಖಕ್ಕೆ ಯಾವುದು ಸಮ? ಇದಕ್ಕೆ ಔಷಧಿ ಕಾಣುತ್ತಿಲ್ಲ. ಸರಳತೆ, ಸರಳ ಜೀವನ, ಸಹಜ ಕೃಷಿ, ಸರಳ ಮನಸ್ಸುಗಳು ದೇಶದ ತುಂಬಾ ದಾರಿ ಹುಡುಕುವಾಗ ಔಷಧಿ ದೊರಕಬಹುದು.
ಇದಕ್ಕೆ ನಗರೀಕರಣದ ಮನಸ್ಸಿನ ಕೊಲೆಯಾಗಬೇಕು. ಸ್ವಾರ್ಥ ಚಿಂತನೆಗಳು ಬಲಿಯಾಗಬೇಕು. ಎಲ್ಲದಕ್ಕೂ ಅಂತ್ಯ ಇರಲೇಬೇಕು. ಇದಕ್ಕೆ ಮತ್ತೆಷ್ಟು ರೈತರು ಬಲಿಯಾಗಬೇಕೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT