ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆ ಮರೆತ ಸರ್ಕಾರ

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಆರೋಗ್ಯ ಮತ್ತು ಶಿಕ್ಷಣ ಆದ್ಯತೆಯ ಕ್ಷೇತ್ರಗಳು. ಆದರೆ ಈ ವಲಯಕ್ಕೆ  ಸಿಗಬೇಕಾದ ಪ್ರಾಮುಖ್ಯ ಸಿಗುತ್ತಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಕೊರತೆಗಳೇ ಹೆಚ್ಚು. ವೈದ್ಯರು, ದಾದಿಯರಿಂದ ಹಿಡಿದು ಕಟ್ಟಡ ಮೊದಲಾದ ಮೂಲ ಸೌಕರ್ಯಗಳವರೆಗೂ ಈ ಮಾತು ಅನ್ವಯ ಆಗುತ್ತದೆ. ಗ್ರಾಮೀಣ ಪ್ರದೇಶವಂತೂ ವೈದ್ಯರಿಗೆ ಅಪಥ್ಯವಾಗಿ ಪರಿಣಮಿಸಿದೆ. ಅವರು ಮನ­ವೊ­ಲಿಕೆಗೂ ಜಗ್ಗುತ್ತಿಲ್ಲ; ದಂಡಕ್ಕೂ ಬಗ್ಗುತ್ತಿಲ್ಲ. ವೈದ್ಯರ ಕೊರತೆ ಜತೆಗೆ ದಾದಿಯರ ಅಭಾವವೂ ಸೇರಿಕೊಂಡು ರೋಗಿಗಳ ನರಳಾಟ ಹೆಚ್ಚಿಸಿದೆ. ಆರೋಗ್ಯ ಸೇವೆಯಲ್ಲಿ ದಾದಿಯರ ಪಾತ್ರ ಮಹತ್ವದ್ದು. ರೋಗಿಯ ಜತೆ ಹೆಚ್ಚು ಒಡನಾಡುವವರು ಇವರೇ. ಅವರಿಗೆ ಮನೋಸ್ಥೈರ್ಯ ತುಂಬಿ ಚೇತರಿಕೆಗೆ ನೆರವಾಗುವ ದಾದಿಯರ ಸೇವಾ ಮಹತ್ವ ನಮ್ಮ ಸರ್ಕಾರಗಳಿಗೆ ಇನ್ನೂ ಮನವರಿಕೆಯಾದಂತಿಲ್ಲ.

ಮೂವರು ರೋಗಿಗಳಿಗೆ ಒಬ್ಬ ದಾದಿ ಇರಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿ ಶಿಫಾರಸು ಮಾಡಿದೆ. ಆದರೆ ವಸ್ತುಸ್ಥಿತಿ ಬೇರೆಯೇ ಆಗಿದೆ. 20ರಿಂದ 50 ರೋಗಿಗಳಿಗೆ ಒಬ್ಬ ದಾದಿ ಇದ್ದಾರೆ ಎಂದರೆ ದಾದಿಯರ ಕೊರತೆ ಯಾವ ಪ್ರಮಾಣದಲ್ಲಿ ಇದೆ ಎಂಬು­ದನ್ನು ಯಾರಾದರೂ ಊಹಿಸಬಹುದು. ದೇಶದ ಬಹುಪಾಲು ಜಿಲ್ಲಾ ಆಸ್ಪತ್ರೆಗಳಲ್ಲಿ 20 ರಿಂದ 30 ರೋಗಿಗಳಿಗೆ ಒಬ್ಬ ದಾದಿ ಇದ್ದಾರೆ ಎಂದು ಭಾರತೀಯ ನರ್ಸಿಂಗ್ ಮಂಡಳಿ ಅಂದಾಜಿಸಿದೆ. ಇದು ನಿಜಕ್ಕೂ ಕಳವಳ ಮೂಡಿಸುವ ಸಂಗತಿ. ದಾದಿಯರ ನೇಮಕಕ್ಕೆ ಸರ್ಕಾರ ಗಮನಹರಿಸಬೇಕು. ದಾದಿಯರಿಗೆ ಕಡಿಮೆ ಸಂಬಳ ಹಾಗೂ ಹೆಚ್ಚಿನ ದುಡಿಮೆ ಎಂಬ ದೂರಿದೆ. ಈ ಬಗೆಯ ಶೋಷಣೆಯನ್ನೂ ತಪ್ಪಿಸಬೇಕು.

ಆರೋಗ್ಯ ಸೇವೆಯ ನರಳಾಟ ಈ ಬಗೆಯದಾದರೆ, ಶಿಕ್ಷಣ ಕ್ಷೇತ್ರದ ಫಜೀತಿ ಮತ್ತೊಂದು ರೀತಿಯದು. ರಾಜ್ಯದ 409 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 249 ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ ಎಂದು ವರದಿಯಾಗಿದೆ. ಇದು ಅತ್ಯಂತ ದುರದೃಷ್ಟಕರ. ಪ್ರಾಂಶು­ಪಾ­ಲರ ಹುದ್ದೆಗಳು ಕಾಲಕಾಲಕ್ಕೆ ಭರ್ತಿಯಾಗದ ಕಾರಣ ಪ್ರಭಾರಿಗಳ ಕೈಯಲ್ಲಿ ಕಾಲೇಜುಗಳ ಆಡಳಿತ ಇದೆ. ಇಂತಹ ತಾತ್ಕಾಲಿಕ ವ್ಯವಸ್ಥೆಯಿಂದ ಕಾಲೇಜುಗಳ ದೈನಂದಿನ ಆಡಳಿತ ಬಿಗಿ ಕಳೆದುಕೊಳ್ಳುವುದು ಸಹಜ. ಇದರ ಪರಿಣಾಮ ಶೈಕ್ಷಣಿಕ ಗುಣಮಟ್ಟಕ್ಕೂ ತಟ್ಟದೇ ಇರದು. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸಬೇಕಾದ ಕಾಲೇಜುಗಳೇ  ಸರಿಯಾಗಿ ಮಾರ್ಗದರ್ಶನ ಮಾಡುವ ‘ನಾಯಕ’ನಿಲ್ಲದೆ ಪರಿತಪಿಸು­ವಂತಾಗಿರುವುದು ಸರ್ಕಾರದ ಅಲಕ್ಷ್ಯ ಧೋರಣೆಗೆ ಜೀವಂತ ಸಾಕ್ಷಿ.

ಪ್ರಾಂಶುಪಾಲರ ನೇಮಕ ಸಂಬಂಧ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), 2006ರಲ್ಲಿ ರೂಪಿಸಿರುವ ಪರಿಷ್ಕೃತ ನಿಯಮಗಳನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡಿದೆ ಯಾದರೂ ಆ ನಿಯಮಗಳ ಅನುಸಾರ ಪ್ರಾಂಶುಪಾಲರ ಹುದ್ದೆಗಳನ್ನು ತುಂಬಿಲ್ಲ. ಯುಜಿಸಿ ನಿಯಮಗಳ ಪ್ರಕಾರ ನೇರ ನೇಮಕಾತಿ ಮೂಲಕ ಈ ಹುದ್ದೆ ಭರ್ತಿ ಮಾಡಬೇಕು. ಇದಕ್ಕೆ ಕೆಲವು ಅಧ್ಯಾಪಕರ ವಿರೋಧ ಇದೆ. ಹೀಗಾಗಿ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ‘ಯುಜಿಸಿ ವೇತನ ಬೇಕು. ಆದರೆ ಶಿಕ್ಷಣದ ಗುಣಮಟ್ಟ ಎತ್ತರಿಸಲು ಅದು ಸೂಚಿಸುವ ಶಿಫಾರಸುಗಳ ಅನುಷ್ಠಾನ ಬೇಡ’ ಎಂದಾದರೆ ಹೇಗೆ? ಸರ್ಕಾರ ಈ ವಿಚಾರದಲ್ಲಿ ದೃಢ ನಿಲುವು ತಳೆಯಬೇಕು. ಪ್ರಾಂಶುಪಾಲರ ಹುದ್ದೆ ತುಂಬಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT