ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಕೂಸು: ನಂಬಿಕೆಯ ಬೀಸು!

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ತಲೆಮಾರು ಹೊಸತಾಗಿರಲಿ ಹಳತಾಗಿರಲಿ, ನಂಬಿಕೆಗಳ ಗಾಳಿ, ಅದೃಷ್ಟದ ನೆರಳು ಅವರಿಗೆ ಸಮಾಧಾನ ಕೊಡುತ್ತಲೇ ಬಂದಿದೆ. ಯಾವುದೋ ಅಂಗಿ, ಯಾವುದೋ ಬ್ಯಾಟು, ಯಾವುದೋ ಪೆನ್ನು ಎಂದು ನಂಬಿಕೆಗಳ ಗಂಟು ಕಟ್ಟಿಕೊಂಡು ಗುರಿಯ ಹಿಂದೆ ಬಿದ್ದವರ ಬದುಕು ಕುತೂಹಲಕಾರಿಯಂತೂ ಹೌದು.

ತನ್ನ ಮೇಷ್ಟರು ಹೈಸ್ಕೂಲಿನಲ್ಲಿದ್ದಾಗ ಕೊಟ್ಟಿದ್ದ ಕೆಂಪು ಹ್ಯಾಂಡ್‌ಬ್ಯಾಂಡನ್ನು ಹಾಕಿಕೊಂಡು, ಮೋಟುದ್ದದ ಬ್ಯಾಟ್ ಹಿಡಿದು ಅವನು ಕ್ರಿಕೆಟ್ ಕಣಕ್ಕೆ ಇಳಿಯುವುದು. ಪಿಯೂಸಿ ಮುಗಿಸಿದರೂ ಅವನ ಈ ನಂಬಿಕೆ ಮುಂದುವರಿದಿದೆ. ಆ ಬ್ಯಾಂಡನ್ನು ಅವನು ಪ್ರಿಯತಮೆ ಕೊಟ್ಟ ಉಡುಗೊರೆಗಿಂತ ಹೆಚ್ಚು ಜೋಪಾನ ಮಾಡುತ್ತಾನೆ.

ಸ್ನೇಹಿತ ಇಪ್ಪತ್ತು ವರ್ಷಗಳಿಂದ ಕರ್ಮಜೀವಿ. ಟೆಂಪೊ ಒಂದರ ಒಡೆಯನಾದ ಅವನು ಅಮಾವಾಸ್ಯೆ, ಹುಣ್ಣಿಮೆಯ ದಿನ ಸುತರಾಂ ಗಾಡಿಯನ್ನು ಹೊರಗೆ ತೆಗೆಯುವುದಿಲ್ಲ. ಅದನ್ನು ಹಸನಾಗಿ ತೊಳೆದು, ಪೂಜೆ ಮಾಡಿ, ತನ್ನಿಷ್ಟದ ಊಟ ಮಾಡಿಸಿಕೊಂಡು ಮನೆಯಲ್ಲಿ ವಿರಮಿಸುತ್ತಾನೆ. ಕೆಲವೊಮ್ಮೆ ಅವನಿಗೆ ದೊಡ್ಡ ಮೊತ್ತದ ಆಮಿಷ ಒಡ್ಡಿ, ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ಹೊರಗೆಳೆಯುತ್ತೇವೆ ಎಂದು ಬಾಜಿ ಕಟ್ಟಿ ಸೋತವರೂ ಇದ್ದಾರೆನ್ನಿ. ಅವನ ನಂಬಿಕೆಯ ಬುಡ ಅಷ್ಟು ಬಲವಾದದ್ದು.

ತನ್ನ ಜಿಯೊಮೆಟ್ರಿ ಬಾಕ್ಸ್‌ನಲ್ಲಿ ಆ ಹುಡುಗಿ ಒಂದು ಪೆನ್ನನ್ನು ಸದಾ ಇಟ್ಟುಕೊಂಡೇ ಇರುತ್ತಾಳೆ. ಅದರ ಜೊತೆಗೊಂದು ಮೋಟುದ್ದದ ಪೆನ್ಸಿಲ್. ಪರೀಕ್ಷೆ, ಟೆಸ್ಟ್ ಇದ್ದಾಗಲಂತೂ ಜಿಯೊಮೆಟ್ರಿ ಬಾಕ್ಸ್‌ನಲ್ಲಿ ಅವು ಇರಬೇಕಾದದ್ದು ಕಡ್ಡಾಯ. ಆ ಎರಡೂ ಅವಳಿಗೆ ಅದೃಷ್ಟವಂತೆ. ಆ ಪೆನ್ನು ಅಪ್ಪ ಕೊಡಿಸಿದ್ದು. ಪೆನ್ಸಿಲನ್ನು ಅಣ್ಣ ಕೊಡಿಸಿದ್ದು. ಯಾರೋ ಅವಳನ್ನು ಕಿಚಾಯಿಸಲು ಒಮ್ಮೆ ಅವನ್ನು ಕದ್ದುಬಿಟ್ಟಿದ್ದರು. ಅವಳು ಸೀದಾ ಹೋಗಿ ಹೆಡ್ ಮೇಷ್ಟರಿಗೇ ದೂರು ಕೊಟ್ಟಿದ್ದಲ್ಲದೆ, ಮೂರು ದಿನ ಊಟ ಬಿಟ್ಟು, ಗೊಳೋ ಎಂದು ಅತ್ತಿದ್ದಳು. ಕೊನೆಗೆ ಕದ್ದವರೇ ಸೈಲೆಂಟಾಗಿ ಅವನ್ನು ಅವಳ ಜಿಯೊಮೆಟ್ರಿ ಬಾಕ್ಸ್‌ನಲ್ಲಿ ಇಟ್ಟಿದ್ದರಂತೆ.

‘ಬಲಗಾಲಿಟ್ಟು ಒಳಗೆ ಬಾರಮ್ಮ’ ಎಂದು ಸೊಸೆಯನ್ನು ಮನೆಗೆ ಬರಮಾಡಿಕೊಳ್ಳುವ ನಮ್ಮ ನಂಬಿಕೆಗಳ ಸಾಮ್ರಾಜ್ಯ ಆಧುನಿಕತೆ ಎಷ್ಟೇ ಲಗ್ಗೆ ಇಟ್ಟರೂ ಅಲ್ಲಾಡುವುದಿಲ್ಲ.

ಸೌರವ್ ಗಂಗೂಲಿ ಬ್ಯಾಟಿಂಗ್‌ಗೆ ಹೊರಡುವಾಗ ಸದಾ ಎಡಗೈಯಿಂದಲೇ ಬ್ಯಾಟ್ ಎತ್ತಿಕೊಳ್ಳುತ್ತಿದ್ದುದು ಅವರ ನಂಬಿಕೆ. ಜನಪ್ರಿಯ ಬ್ಯಾಸ್ಕೆಟ್‌ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ಎನ್‌ಬಿಎ ಚಾಂಪಿಯನ್‌ಷಿಪ್‌ನಲ್ಲಿ ಶಿಕಾಗೊ ಬುಲ್ಸ್ ತಂಡವನ್ನು ಮುನ್ನಡೆಸಿದಾಗ ತನ್ನ ಉದ್ದದ ಚೆಡ್ಡಿಯ ಒಳಗೆ ಸೊಳ್ಳೆಪರದೆಯಂಥ ಇನ್ನೊಂದು ಸಣ್ಣ ಚಡ್ಡಿ ತೊಟ್ಟಿದ್ದರು. ಯೂನಿವರ್ಸಿಟಿ ಆಫ್ ನಾರ್ತ್ ಕ್ಯಾಲಿಫೋರ್ನಿಯಾ ತಂಡದ ಪರವಾಗಿ 1982ರಲ್ಲಿ ಆಡಿದಾಗ ಆ ಚಡ್ಡಿಯನ್ನು ಅವರು ತೊಟ್ಟಿದ್ದರಲ್ಲದೆ, ಆಡಿದ ಪಂದ್ಯಗಳಲ್ಲೆಲ್ಲಾ ಗೆಲುವು ಸಾಧಿಸಿದ್ದರು. ಅದು ಅದೃಷ್ಟದ ಚಡ್ಡಿ ಎಂದೇ ನಂಬಿದ್ದ ಅವರು ಅದನ್ನು ತಮ್ಮ ಕಾಲುಗಳು ಇನ್ನೂ ಉದ್ದವಾದ ಮೇಲೂ ಹಾಕುತ್ತಿದ್ದರು. ಆ ಛೋಟಾ ಚಡ್ಡಿಯನ್ನು ಮರೆಮಾಚಲೆಂದೇ ಉದ್ದದ ಚಡ್ಡಿ ಅರ್ಥಾತ್ ಶಾರ್ಟ್ಸ್ ಹಾಕಲಾರಂಭಿಸಿದರು. ಅದೃಷ್ಟದ ಚಡ್ಡಿ ಮುಚ್ಚಲೆಂದು ತೊಟ್ಟ ಉದ್ದದ ಚಡ್ಡಿ ಆಮೇಲೆ ಫ್ಯಾಷನ್ ಆದದ್ದು ಬೇರೆ ಮಾತು.

ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕೂಡ ನಂಬಿಕೆಯನ್ನು ಬೆನ್ನಿಗೆ ಕಟ್ಟಿಕೊಂಡವರೇ. ಅವರು ಸ್ನಾನ ಮಾಡಲು ಬಳಸುತ್ತಿದ್ದ ಚಪ್ಪಲಿಗಳನ್ನು ಒಮ್ಮೆಯಾದರೂ ಟೆನಿಸ್ ಅಂಗಳಕ್ಕೆ ಹಾಕಿಕೊಂಡು ಬರುತ್ತಿದ್ದರು. ಮೊದಲ ಸರ್ವ್‌ಗೆ ಮುನ್ನ ಐದು ಸಲ, ಎರಡನೇ ಸರ್ವ್‌ಗೆ ಮುನ್ನ ಎರಡು ಸಲ ಚೆಂಡನ್ನು ನೆಲಕ್ಕೆ ಬಡಿದು ಪುಟಿಯುವಂತೆ ಮಾಡುವುದು ಅವರ ಇನ್ನೊಂದು ನಂಬಿಕೆ. ಬೂಟಿನ ಲೇಸನ್ನು ಸದಾ ನಿರ್ದಿಷ್ಟ ರೀತಿಯಲ್ಲಿಯೇ ಕಟ್ಟಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದರ ಹಿಂದೆಯೂ ಅದೃಷ್ಟದ ಲೆಕ್ಕಾಚಾರ ಇದೆ. ಅವರು ಪ್ರಮುಖ ಟೆನಿಸ್ ಟೂರ್ನಿಗಳಲ್ಲಿ ಪಂದ್ಯ ನಡೆಯುವ ಹಿಂದಿನ ದಿನದಿಂದ ಹಿಡಿದು ಅದು ಮುಗಿಯುವವರೆಗೆ ಪ್ರತಿಯೊಂದನ್ನೂ ಒಂದು ಕ್ರಮದಲ್ಲಿಯೇ ಮಾಡುತ್ತಿದ್ದರು.
ಆಪ್ತೇಷ್ಟರು ಈ ಕುರಿತು ಕಾಲೆಳೆದಾಗ, ಅವರು ತಮ್ಮ ನಂಬಿಕೆಯ ಶಿಸ್ತನ್ನು ಮುರಿದು ಆಟವಾಡಿದ್ದೂ ಇದೆ. ಆದರೆ, ಆಗೆಲ್ಲಾ ಅವರಿಗೆ ಸೋಲು ಎದುರಾದದ್ದೇ ಹೆಚ್ಚು. ‘ನನ್ನ ನಂಬಿಕೆಯೇ ದೊಡ್ಡದು’ ಎಂದು ಸಲಹೆ ಕೊಟ್ಟವರನ್ನೆಲ್ಲಾ ಅವರು ತರಾಟೆಗೆ ತೆಗೆದುಕೊಂಡಿದ್ದರು.

ಸ್ವೀಡನ್‌ನ ಟೆನಿಸ್ ಆಟಗಾರ ಬೋರ್ನ್ ಬೋರ್ಗ್ 1976ರಿಂದ 1980ರವರೆಗೆ ಸತತವಾಗಿ ವಿಂಬಲ್ಡನ್ ಟೆನಿಸ್ ಚಾಂಪಿಯನ್ ಆದವರು. ಅಷ್ಟೂ ವರ್ಷ ಟೂರ್ನಿ ನಡೆಯುವ ಹೊತ್ತಿಗೆ ಗಡ್ಡ ಬಿಡುವುದು ಅದೃಷ್ಟಕರ ಎಂದು ಭಾವಿಸಿದ್ದ ಅವರು, ಆ ಗೆಲುವಿನ ಟೂರ್ನಿಗಳಲ್ಲೆಲ್ಲಾ ಒಂದೇ ‘ಫಿಲಾ’ ಶರ್ಟ್ ತೊಟ್ಟಿದ್ದರು. ಬೋರ್ನ್ ಬೋರ್ಗ್ ಗಡ್ಡ ಆ ಕಾಲದಲ್ಲಿ ಫ್ಯಾಷನ್ ಟ್ರೆಂಡ್ ಕೂಡ ಆಯಿತು. ಅದನ್ನು ಫ್ಯಾಷನ್ ಪರಿಣತರು ‘ಲಕಿ ಬಿಯರ್ಡ್’ ಎಂದು ಕರೆದದ್ದು ವಿಶೇಷ. ನಿನ್ನ ನಕ್ಷತ್ರಕ್ಕೆ ಕೆಂಪು ಅಂಗಿ ಆಗಿಬರುತ್ತದೆ. ಏನಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಕೆಂಪು ಅಂಗಿಯನ್ನೇ ಹಾಕಿಕೋ ಎಂದು ಅಮ್ಮ ಕೊಟ್ಟ ಸಲಹೆಯನ್ನು ಗಾಲ್ಫರ್ ಟೈಗರ್ ವುಡ್ಸ್ ಅನೂಚಾನವಾಗಿ ಪಾಲಿಸಿಕೊಂಡು ಬಂದರು. ಗಾಲ್ಫ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಅವರು ಕೆಂಪು ಟಿ–ಶರ್ಟ್ ಧರಿಸುವುದನ್ನು ಕಂಡ ಅನೇಕರಿಗೆ ಅದರ ಹಿಂದೆ ಇದ್ದ ಅಮ್ಮನ ಕಿವಿಮಾತು ಗೊತ್ತಿರಲಾರದು.

‘ವ್ಯೂ’ ಎಂಬ ಜನಪ್ರಿಯ ಟೀವಿ ಕಾರ್ಯಕ್ರಮದ ಸಹ ನಿರೂಪಕಿ ಸ್ಟಾರ್ ಜೋನ್ಸ್ ತನ್ನ ಪರ್ಸ್ ಅಥವಾ ಹ್ಯಾಂಡ್‌ಬ್ಯಾಗನ್ನು ಎಂದೂ ಮೇಜು, ಟೀಪಾಯಿ ಅಥವಾ ನೆಲದ ಮೇಲೆ ಇಡುವುದಿಲ್ಲ. ಹಣದ ಥೈಲಿಯನ್ನು ಕೈಯಿಂದ ಕೆಳಗೆ ಇಟ್ಟರೆ ಲತ್ತೆ ಹೊಡೆಯುತ್ತದೆ ಎಂದು ಅವರಮ್ಮ ಬಾಲ್ಯದಲ್ಲಿ ಹೇಳಿದ ಕಿವಿಮಾತು ಅವರ ತಲೆಯಲ್ಲಿ ಕೂತುಬಿಟ್ಟಿದೆ. ಈಗ ನಾನು ಅದನ್ನು ಅದೃಷ್ಟದ ಸಂಕೇತ ಎಂದೇನೂ ನಂಬಿಲ್ಲವಾದರೂ ಕಳ್ಳಕಾಕರಿಂದ ಪರ್ಸ್ ಕಾಪಾಡಿಕೊಳ್ಳುವ ದಾರಿಯಾಗಿ ನನಗೆ ಅಮ್ಮನ ಕಿವಿಮಾತು ಕಂಡಿದೆ ಎಂದಿದ್ದಾರೆ ಸ್ಟಾರ್ ಜೋನ್ಸ್.

ಒಂದನೇ ಕ್ವೀನ್ ಎಲಿಜಬೆತ್‌ಗೆ ಸಂಬಂಧಪಟ್ಟ ವಸ್ತುಗಳನ್ನು ಬ್ರಿಟಿಷ್ ನ್ಯಾಷನಲ್ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಅವುಗಳ ಸಾಲಿನಲ್ಲಿ ಜೋನ್ ಡೀ ಎಂಬ ಜಾದೂಗಾರ ಬಳಸುತ್ತಿದ್ದ ಮಾಯಾ ಕಲ್ಲೂ ಉಂಟು. ಜೋನ್ ಡೀಗೂ ಎಲಿಜಬೆತ್ ರಾಣಿಗೂ ಇದ್ದುದು ಶಕುನ, ಭವಿಷ್ಯದ ಸಂಬಂಧ. ಆಡಳಿತದ ವೈಖರಿ, ಯುದ್ಧದ ಯೋಜನೆ ಎಲ್ಲವನ್ನೂ ನಿರ್ಧರಿಸಲು ರಾಣಿ ಜಾದೂಗಾರನ ಸಲಹೆ ಪಡೆಯುತ್ತಿದ್ದರು. ಅವರು ಸಂಬಳ ಕೊಡುತ್ತಿದ್ದ ಅಧಿಕಾರಿಗಳ ಪಟ್ಟಿಯಲ್ಲಿ ಜೋನ್ ಡೀ ಕೂಡ ಒಬ್ಬನಾಗಿದ್ದ.

ನೆಪೋಲಿಯನ್ ಬೋನಾಪಾರ್ಟೆ ಕೂಡ ನಂಬಿಕೆಯ ಹಾಸಿಗೆ ಮೇಲೆ ಮಲಗಿದವನು. ಅವನು ತನಗೆ ಬೀಳುತ್ತಿದ್ದ ಕನಸುಗಳೆಲ್ಲಾ ನಿಜವಾಗುತ್ತವೆ ಎಂದು ನಂಬಿದ್ದ. ಕರಿಬೆಕ್ಕನ್ನು ಕಂಡರೆ ಅವನಿಗೆ ಬಲು ಭಯ. ಒಮ್ಮೆ ಅವನ ಕುದುರೆಗೆ ಕರಿಬೆಕ್ಕು ಅಡ್ಡಬಂದು, ಅದು ಬೆದರಿದಂತೆ ಸದ್ದು ಮಾಡಿತ್ತು. ವಾಟರ್‌ಲೂ ಯುದ್ಧಕ್ಕೂ ಮುಂಚೆ ಅವನ ಕನಸಿನಲ್ಲಿ ಕರಿಬೆಕ್ಕು ಕಾಣಿಸಿಕೊಂಡಿದ್ದು, ಅದು ಅಪಶಕುನ ಎಂದೇ ನೆಪೋಲಿಯನ್ ನಂಬಿದ್ದ. ಆ ಯುದ್ಧದಲ್ಲಿ ತಾನು ಸೋತಮೇಲಂತೂ ಕರಿಬೆಕ್ಕು ಅವನನ್ನು ಬಹುವಾಗಿ ಕಾಡಿತ್ತು. ಸರ್ವಾಧಿಕಾರಿ ಹಿಟ್ಲರ್ ಕೂಡ ಇಬ್ಬರು ಜೋತಿಷಿಗಳನ್ನು ಸಾಕಿಕೊಂಡಿದ್ದ. ಏಳನೇ ಅಂಕಿ ಅದೃಷ್ಟದ್ದು ಎಂದು ಅವನು ನಂಬಿದ್ದ. ನಾಜಿ ಸಂಕೇತವಾಗಿ ಅವನು ರೂಪಿಸಿದ ಸ್ವಸ್ತಿಕ್ ಲಾಂಛನ ನಂಬಿಕೆಯ ದೊಡ್ಡ ಸಂಕೇತವಾಯಿತು.

ಹಾಗಾದರೆ ನಂಬಿಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲವೇ? ಸಾಹಿತಿಗಳು, ಸಿನಿಮಾದವರು, ಕ್ರೀಡಾಪಟುಗಳು, ಕೊನೆಗೆ ವಿಜ್ಞಾನಿಗಳೂ ನಂಬಿಕೆಗಳ ಹಂಗಿಗೆ ಬಿದ್ದವರೇ ಆದಾಗ ಅದರಿಂದ ನುಣುಚಿಕೊಳ್ಳುವುದಾದರೂ ಹೇಗೆ? ಅವೈಜ್ಞಾನಿಕ ಸಂಗತಿಗಳನ್ನು ಸುತರಾಂ ಒಪ್ಪಿಕೊಳ್ಳದವರು, ಧಾರ್ಮಿಕ ವಿಜ್ಞಾನಿಗಳು, ಸುಮಾರಾಗಿ ನಂಬಿಕೆಗಳನ್ನು ಇಟ್ಟುಕೊಂಡಿರುವವರು, ನಿತ್ಯವೂ ನಂಬಿಕೆಗಳ ಹಂಗಿಗೆ ಬಿದ್ದವರು, ಕಟ್ಟಾ ಅದೃಷ್ಟ ನಂಬುವವರು ಎಂದು ಸಮಾಜ ವಿಜ್ಞಾನಿಗಳು ಶಕುನಗಳ ನಂಬುವವರು, ನಂಬದವರ ಪಟ್ಟಿಯನ್ನು ಮಾಡಿದ್ದಾರೆ. ಈ ವರ್ಗೀಕರಣದ ಅನ್ವಯ ಮೊದಲ ಎರಡು ಗುಂಪಿಗೆ ಸೇರಿದವರು ಬಹುತೇಕ ಮೆಟಾಫಿಸಿಕ್ಸ್ ನಂಬುವವರು. ಇವರು ಅದೃಷ್ಟ, ಶಕುನ, ಧಾರ್ಮಿಕ ನಂಬಿಕೆ ಎಂದೆಲ್ಲಾ ಯಾವ ಕ್ರಿಯೆಯನ್ನೂ ಮಾಡಲಾರರು. ಮನೋವಿಜ್ಞಾನಿಗಳ ಪ್ರಕಾರ ಇಂಥವರ ಮನೋಬಲ ಹೆಚ್ಚಾಗಿರುತ್ತದೆ. ಕಟ್ಟಾ ಅದೃಷ್ಟ ನಂಬುವವರು ಎಲ್ಲದಕ್ಕೂ ಶಕುನಗಳನ್ನೇ ಹೊಣೆಯಾಗಿಸಿ ತಮ್ಮ ಮ್ಯಾನ್‌ಪವರ್ ಸಾಮರ್ಥ್ಯವನ್ನು ಸಹಜವಾಗಿಯೇ ಕ್ಷೀಣಿಸಿಕೊಳ್ಳುತ್ತಾ ಹೋಗುತ್ತಾರೆ.

ಅಮೆರಿಕದಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ಶೇ 50ಕ್ಕೂ ಹೆಚ್ಚು ಜನ ಶಕುನ, ಅದೃಷ್ಟಗಳನ್ನು ನಂಬುವವರೇ ಇದ್ದಾರೆ. ಅಮೆರಿಕದ ಸಂಶೋಧಕರಾದ ಲೈಸನ್ ಡ್ಯಾಮಿಷ್, ಬಾರ್ಬರಾ ಸ್ಟಾಬರಾಕ್ ಹಾಗೂ ಥಾಮಸ್ ಮುಸ್ವೆಲ್ಲರ್ 2010ರಲ್ಲಿ ‘ಕೀಪ್ ಯುವರ್ ಫಿಂಗರ್ಸ್ ಕ್ರಾಸ್ಡ್! ಹೌ ಸೂಪರ್‌ಸ್ಟಿಷನ್ ಇಂಪ್ರೂವ್ಸ್ ಪರ್ಫಾರ್ಮೆನ್ಸ್’ ಎಂಬ ಪ್ರಬಂಧವನ್ನು ಮಂಡಿಸಿದರು. ಅದೃಷ್ಟ, ನಂಬಿಕೆ ಮತ್ತು ಆಚರಣೆಗಳು ನಿರ್ದಿಷ್ಟ ಸಮುದಾಯದ ವ್ಯಕ್ತಿಗಳು ತಮ್ಮ ಮೇಲೆ ತಾವೇ ನಿಯಂತ್ರಣ ಸಾಧಿಸಲು ಹಾಗೂ ಶಿಸ್ತನ್ನು ರೂಢಿಸಿಕೊಳ್ಳಲು ಹೇಗೆ ಸಹಾಯ ಮಾಡುತ್ತವೆ ಎಂಬ ಅಂಶಗಳ ಮೇಲೆ ಅವರ ಪ್ರಬಂಧ ಬೆಳಕು ಚೆಲ್ಲಿತ್ತು. ಒಂದಿಷ್ಟು ಕಾಲೇಜು ವಿದ್ಯಾರ್ಥಿಗಳನ್ನು ಪ್ರಯೋಗಗಳಿಗೆ ಒಳಪಡಿಸಿ, ಅವುಗಳ ಆಧಾರದ ಮೇಲೆ ಈ ಸಂಶೋಧಕರು ನಂಬಿಕೆಗಳ ಗಟ್ಟಿತನದ ಕುರಿತು ಒಂದು ತೀರ್ಮಾನಕ್ಕೆ ಬಂದಿದ್ದರು. ಅವುಗಳನ್ನು ಒಪ್ಪಿಕೊಂಡವರಂತೆ ಟೀಕೆ ಮಾಡಿದವರೂ ಇದ್ದಾರೆ. ಗಾಲ್ಫ್ ಚೆಂಡನ್ನು ರಂಧ್ರದೊಳಕ್ಕೆ ಹಾಕಿಸುವ ಪ್ರಯೋಗವನ್ನು ಅವರು ‘ಲಕ್ಕಿ ಬಾಲ್’ ಪ್ರಯೋಗ ಎಂದು ಕರೆದರು. ಯಾರು ಯಾವುದಾದರೂ ಶಕುನ, ನಂಬಿಕೆಗಳನ್ನು ಅನುಸರಿಸುತ್ತಿದ್ದರೋ ಅವರಲ್ಲೇ ಹೆಚ್ಚು ಗುರಿಕಾರರು ಇದ್ದಾರೆಂದು ವಾದಿಸಿದ್ದರು.

ನಂಬಿಕೆಗಳ ವಿಷಯದಲ್ಲಿ ಪರ-ವಿರೋಧದ ಚರ್ಚೆ ಲಾಗಾಯ್ತಿನಿಂದಲೂ ನಡೆದೇ ಇದೆ. ಓದಿಕೊಂಡವರ ಬಡಾವಣೆಗಳ ಕೂಡು ರಸ್ತೆಗಳ ಮೇಲೆ ಮಂತ್ರಿಸಿದ ಕೆಂಪು ನೀರಿನ ಗುರುತು, ಒಡೆದ ಮೊಟ್ಟೆ, ವೀಳ್ಯದೆಲೆ, ನಿಂಬೆಹಣ್ಣುಗಳು ಬೀಳುತ್ತಿರುವುದು ನಿಂತಿಲ್ಲ. ಇಂಥ ತಂತ್ರಗಳಿಗೆ ಹೋಲಿಸಿದರೆ ವೈಯಕ್ತಿಕ ಮಟ್ಟದ ನಂಬಿಕೆಗಳೇ ಎಷ್ಟೋ ವಾಸಿ. ಆಧುನಿಕತೆ, ಐಷಾರಾಮದ ನೆರಳಿನಲ್ಲಿಯೂ ಉಳಿದೇ ಇರುವ ನಂಬಿಕೆಗಳ ಈ ಬೀಸು ಕುತೂಹಲಕಾರಿಯಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT