ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾ ಯುವತಿಯ ಬೀದಿ ರಂಪಾಟ

ಪೊಲೀಸರನ್ನೇ ಬೆದರಿಸಿ ಓಡಿಸಿದ ಪಾನಮತ್ತೆ
Last Updated 27 ಜೂನ್ 2016, 19:58 IST
ಅಕ್ಷರ ಗಾತ್ರ

ಬೆಂಗಳೂರು: ಆಫ್ರಿಕಾದ ಯುವತಿಯೊಬ್ಬಳು ಮದಿರೆಯ ನಶೆಯಲ್ಲಿ ನಗರದ ನ್ಯಾಷನಲ್‌ ಮಾರ್ಕೆಟ್‌ ಹಾಗೂ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಸೃಷ್ಟಿಸಿದ ರಂಪಾಟಕ್ಕೆ ಪೊಲೀಸರೇ ಸುಸ್ತು ಹೊಡೆದರು.

ಶಾಪಿಂಗ್‌  ಮಾಡಲು ಸೋಮವಾರ ಬೆಳಿಗ್ಗೆ  ಪ್ರಿಯಕರನ  ಜೊತೆಗೆ ಗಾಂಧಿನಗರದ ನ್ಯಾಷನಲ್ ಮಾರ್ಕೆಟ್‌ಗೆ  ಬಂದಿದ್ದ ಮಾರಿಯಾ ಈ ರೀತಿ ದಾಂದಲೆ ಮಾಡಿದ್ದಾಳೆ. ಆಕೆ ಯಲಹಂಕದ ಖಾಸಗಿ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ.

ಅವರು ಮಾರ್ಕೆಟ್‌ನಲ್ಲಿ ಮೊಬೈಲ್ ಅನ್ನು ರಿಪೇರಿಗೆ ಕೊಟ್ಟಿದ್ದರು. ಆಗ ಅಂಗಡಿಯಾತ  ಅರ್ಧ ಗಂಟೆ ಬಿಟ್ಟು ಬರುಲು ಹೇಳಿದ್ದಾನೆ. ಇದಕ್ಕೊಪ್ಪಿ  ಅವರು ಅಂಗಡಿಯಿಂದ ಹೊರಬಂದಿದ್ದಾರೆ.  ಆದರೆ, ಅಷ್ಟರಲ್ಲಾಗಲೇ ಮದ್ಯದ ಅಮಲೇರಿದ ಜೋಡಿ ಪರಸ್ಪರ ಅಪ್ಪಿಕೊಂಡು ‘ಪ್ರಣಯ’ಕ್ಕಿಳಿದಿದೆ.

ಈ ವರ್ತನೆ ಕಂಡು ಕುಪಿತಗೊಂಡ ಅಂಗಡಿಯಾತ, ಮಾರುಕಟ್ಟೆಯಿಂದ ಹೊರ ಹೋಗುವಂತೆ ಸೂಚಿಸಿದ್ದಾನೆ. ಇದರಿಂದ ಕೆರಳಿದ ಆಕೆ, ಅಂಗಡಿ ಮಾಲೀಕರ ವಿರುದ್ಧವೇ ತಿರುಗಿ ಬಿದ್ದು, ಹಲ್ಲೆಗೆ ಮುಂದಾಗಿದ್ದಾಳೆ. ಆಗ ಬಿರುಸಿನ ವಾಗ್ವಾದ ನಡೆದು, ವಿಷಯ ಉಪ್ಪಾರಪೇಟೆ ಠಾಣೆಗೆ ಮುಟ್ಟಿದೆ.

ಕೂಡಲೇ ಮೂವರು ಮಹಿಳಾ ಕಾನ್‌ಸ್ಟೆಬಲ್‌ ಸೇರಿ ಐವರು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಗಲಾಟೆ ಮಾಡದಂತೆ ಸೂಚಿಸಿದ ಪೊಲೀಸರ  ಮಾತಿಗೆ ಕಿವಿಗೊಡದೇ ಆ ಯುವತಿ ರಾದ್ಧಾಂತ ಮಾಡಿದ್ದಾಳೆ.

ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ  ಆ ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಹೊಯ್ಸಳ ವಾಹನ ಇಲ್ಲದ ಕಾರಣ ಆಟೊ ಹತ್ತಿಸಲು ಮುಂದಾಗಿದ್ದಾರೆ. ಆಟೊ ಏರಲು ನಿರಾಕರಿಸಿದ ಯುವತಿ, ಚಾಲಕನ ಕೈಕಚ್ಚಿದಳು ಎಂದು  ಪೊಲೀಸರು ತಿಳಿಸಿದ್ದಾರೆ.

ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಆಟೊದಲ್ಲಿ ಠಾಣೆಗೆ ಕರೆ ತಂದ ಬಳಿಕವೂ ಯುವತಿಯ ರಂಪಾಟ ನಿಂತಿಲ್ಲ. ಬಳಿಕ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕೆ. ಸಿ. ಜನರಲ್‌ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಅದಕ್ಕೂ ಅಡ್ಡಿಪಡಿಸಿ ಯುವತಿ, ಒಂದು ಹಂತದಲ್ಲಿ ಎಎಸ್‍ಐ ಮೇಲೆ ಏರಿ ಹೋಗಿದ್ದಾಳೆ. ಆಕೆಯಿಂದ ತಪ್ಪಿಸಿಕೊಳ್ಳಲು ಓಡಿದ ಎಎಸ್‍ಐ ಅನ್ನು ಅಟ್ಟಾಡಿಸಿದ್ದಾಳೆ ಎಂದು ತಿಳಿದು ಬಂದಿದೆ.

ಅದಾದ ಬಳಿಕ ಆಸ್ಪತ್ರೆಯಲ್ಲೂ ರಾದ್ಧಾಂತ ನಡೆಸಿದ್ದಾಳೆ. ಅವಳ ಮೇಲೆ ಬೆಡ್‌ಶೀಟ್‌ ಹೊದಿಸಿ ನಿಯಂತ್ರಿಸಲು ಮುಂದಾಗಾಗ, ತಪ್ಪಿಸಿಕೊಂಡು  ತುರ್ತು ಘಟಕಕ್ಕೆ ನುಗ್ಗಿದ್ದಾಳೆ. ಕೊನೆಗೆ ವೈದ್ಯರು ಅರಿವಳಿಕೆ ನೀಡಿ ಶಾಂತಗೊಳಿಸಿ, ಆಕೆಯನ್ನು ತಪಾಸಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವೈದ್ಯರಿಗೂ ಒದ್ದಳು: ಆಸ್ಪತ್ರೆಯಲ್ಲಿ ವೈದ್ಯರ ಸಭೆ ನಡೆಯುತ್ತಿತ್ತು. ಈ ವೇಳೆ ಗಲಾಟೆ ಸದ್ದು ಕೇಳಿ ಹೊರಬಂದೆವು. ಯುವತಿ ದೇಹದ ಮೇಲಿನ ನಿಯಂತ್ರಣ ಕಳೆದುಕೊಂಡು ಮನಸೋಇಚ್ಛೆ ವರ್ತಿಸುತ್ತಿದ್ದಳು. ಅವಳನ್ನು ತಪಾಸಣೆಗೆ ಒಳಪಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ  ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನಗಳ ಸಂಸ್ಥೆಗೆ (ನಿಮ್ಹಾನ್ಸ್‌) ಕಳುಹಿಸಲಾಗಿದೆ ಎಂದು ಕೆ. ಸಿ. ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ್ ತಿಳಿಸಿದರು.

‘ಆ ಯುವತಿಯು ಕುಡಿದ ಮತ್ತಿನಲ್ಲಿದ್ದಳೇ ಇಲ್ಲವೇ ಮಾನಸಿಕ ರೋಗದಿಂದ ಬಳಲುತ್ತಿದ್ದಳೇ ಎಂಬುದು ತಿಳಿದಿಲ್ಲ. ತೀವ್ರತರ ಮಾನಸಿಕ ಒತ್ತಡದಿಂದ ಬಳಲುವವರಲ್ಲೂ ಇಂಥ ಆಕ್ರಮಣಕಾರಿ ಪ್ರವೃತ್ತಿ ಕಂಡು ಬರುತ್ತದೆ’ ಎಂದರು. ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯರು  ಡ್ರಿಪ್ಸ್‌ ಹಾಕುವ ವೇಳೆ, ಯುವತಿಯು ಇಬ್ಬರು ವೈದ್ಯರಿಗೆ ಒದ್ದಳು ಎಂದು ಅವರು ತಿಳಿಸಿದರು.

ಫೇಸ್‌ಬುಕ್‌ನಲ್ಲಿ ಸ್ನೇಹ
ಮಾರಿಯಾ ಸ್ನೇಹಿತ ಯೇಸುದಾಸ್ ಖಾಸಗಿ ಕಂಪೆನಿಯ ಉದ್ಯೋಗಿ. ಮೂಲತಃ ಕೇರಳ ರಾಜ್ಯದವನು. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಆದ ಪರಿಚಯ ಪ್ರೀತಿಗೆ ತಿರುಗಿದೆ ಎಂದು ಪೊಲೀಸರು ತಿಳಿಸಿದರು.

** *** **
ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಕೆಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾಸ್ ಪೋರ್ಟ್‌ ಸೇರಿದಂತೆ ಪೂರ್ವಾಪರ ಪರಿಶೀಲಿಸಲಾಗುತ್ತಿದೆ.
-ಅಜಯ್ ಹಿಲೋರಿ ಡಿಸಿಪಿ,
ಬೆಂಗಳೂರು ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT