ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗದ ಆದೇಶಕ್ಕೆ ಮಣಿದ ಮಮತಾ

ಅಧಿಕಾರಿಗಳ ವರ್ಗಾವಣೆ: ತಣ್ಣಗಾದ ‘ದೀದಿ’ ಗುಡುಗು
Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದುರ್ಗಾಪುರ (ಪಶ್ಚಿಮ ಬಂಗಾಳ) (ಪಿಟಿಐ): ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳ ವರ್ಗಾವಣೆ ಮಾಡಲಾಗದು ಎಂದು ಸವಾಲು ಎಸೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಟ್ಟು ಸಡಿಲಿಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಒಪ್ಪಿ­ಕೊಂಡಿದ್ದಾರೆ.

‘ಚುನಾವಣಾ ಆಯೋಗದ ನಿರ್ದೇಶ­ನದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತೇನೆ’ ಎಂದು ಮಂಗಳವಾರ ರಾತ್ರಿ ಆತುರಾತುರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಮತಾ ಸ್ಪಷ್ಟ­ಪಡಿಸಿ, ಆಯೋಗದೊಂದಿಗಿನ ಸಂಘ­ರ್ಷಕ್ಕೆ ತೆರೆ ಎಳೆದರು. ‘ಇದರಿಂದ ನನಗೆ ಒಳ್ಳೆ­ಯದೇ ಆಗು­ತ್ತದೆ. ರಾಜ್ಯದ ಎಲ್ಲಾ ಅಧಿ­ಕಾ­ರಿ­­ಗ­ಳೊಂದಿಗೆ ನನಗೆ ಉತ್ತಮ ಸಂಪ­ರ್ಕ­ವಿದೆ’ ಎಂದು ಮಮತಾ ಹೇಳಿದರು.

ಅಧಿಕಾರಿಗಳ ವಿರುದ್ಧದ ದೂರು­ಗಳು ಬಂದ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕೆ ನಿಯೋಜಿತರಾಗಿದ್ದ ನಾಲ್ವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿಗಳು ಹಾಗೂ ಒಬ್ಬ ಜಿಲ್ಲಾಧಿಕಾರಿ­ಯನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ನಿರ್ದೇಶಿಸಿತ್ತು.
ಆಯೋಗದ ಈ ಕ್ರಮದ ವಿರುದ್ಧ ಸೋಮವಾರ ಚುನಾವಣಾ ಭಾಷಣ­ದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದ ಮಮತಾ, ‘ನನ್ನನ್ನು ಜೈಲಿಗಟ್ಟಿದರೂ ಸರಿ, ಅಧಿಕಾರಿಗಳನ್ನು ಈಗಿರುವ ಜಾಗ­ದಿಂದ ಕದಲಿಸುವುದಿಲ್ಲ’ ಎಂದು ಅವರು ಹೇಳಿದ್ದರು.

ಮಂಗಳವಾರ ಸಂಜೆಯ ತನಕವೂ ಮಮತಾ ಆಯೋಗದ ವಿರುದ್ಧ ಗುಡುಗು ಮುಂದುವರಿಸಿದ್ದ ಮಮತಾ, ‘ಸಂವಿಧಾನ ಎಂದರೆ ಏನೆಂಬುದು ನನಗೆ ಗೊತ್ತು. ನಾನು ಸಂವಿಧಾನಕ್ಕೆ ಬದ್ಧವಾ­ಗಿ­­ದ್ದೇನೆ. ನಾನು ನಿಮಗೆ (ಚುನಾವಣಾ ಆಯೋಗಕ್ಕೆ) ಗೌರವ ನೀಡುತ್ತೇನೆ. ಅದೇ ವೇಳೆ, ನನ್ನನ್ನು ಅಪಮಾನಿಸಲು ನಿಮಗೆ ಹಕ್ಕು ನೀಡಿಲ್ಲ’ ಎಂದು ಚುನಾ­ವಣಾ ಪ್ರಚಾರ ಭಾಷಣದಲ್ಲಿ ಚಾಟಿ ಬೀಸಿದ್ದರು.
ಆದರೆ ಮತ್ತೊಂದೆಡೆ ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯ­ದರ್ಶಿ ಅವರು ಆಯೋಗಕ್ಕೆ ಪತ್ರ ಬರೆದು ವರ್ಗಾವಣೆ ನಿರ್ದೇಶನವನ್ನು ಪುನರ್‌ ಪರಿಶೀಲಿಸುವಂತೆ ಕೋರಿದ್ದರು.

ಆದರೆ ಇದಕ್ಕೆ ಒಪ್ಪದ ಆಯೋಗವು ಬುಧವಾರ (ಏ.9) ಬೆಳಿಗ್ಗೆ 10 ಗಂಟೆಯೊಳಗೆ ಅಧಿಕಾರಿಗಳನ್ನು ವರ್ಗಾಯಿಸಬೇಕು ಎಂದು ಕಟ್ಟು­ನಿಟ್ಟಾಗಿ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT