ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಪ್ರವಾಸೋದ್ಯಮಕ್ಕೆ ಸರ್ಕಾರದ ಅಸಹಕಾರ

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ವಾರದ ಸಂದರ್ಶನ
ಡಾ. ಸತ್ಯಮೂರ್ತಿ ಭಟ್‌, ಅಧ್ಯಕ್ಷರು, ಕರ್ನಾಟಕ ಆಯುರ್ವೇದ– ಯುನಾನಿ ವೈದ್ಯರ ಮಂಡಳಿ


ರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯರ ಮಂಡಳಿ ಈಗ ಸುವರ್ಣ ಮಹೋತ್ಸವದ ಸಡಗರದಲ್ಲಿದೆ. ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯರ ಮಿಸಲೇನಿಯಸ್‌ ಪ್ರಾವಿಷನ್ಸ್‌ ಕಾಯ್ದೆಯಡಿ 1965ರಲ್ಲಿ ಈ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ವೈದ್ಯರ ನೋಂದಣಿ, ನಕಲಿ ವೈದ್ಯರ ನಿಯಂತ್ರಣ ಮೊದಲಾದವು ಇದರ ವ್ಯಾಪ್ತಿಗೊಳಪಡುತ್ತವೆ.

ಮಂಡಳಿಯ ಕಾರ್ಯ ಚಟುವಟಿಕೆಗಳು, ಯೋಜನೆಗಳು, ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಕುರಿತು ಮಂಡಳಿ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್‌ ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಂತಿದೆ:

ನಕಲಿ ವೈದ್ಯರನ್ನು ತಡೆಗಟ್ಟಲು ಮಂಡಳಿ ವಿಫಲವಾಗಿದೆ ಎಂಬ ಆರೋಪಗಳ ಬಗ್ಗೆ ಏನು ಹೇಳುತ್ತೀರಿ?
ಆಯುರ್ವೇದವನ್ನು ಗುರಿ ಇಟ್ಟುಕೊಂಡು ಬಹುತೇಕ ನಕಲಿ ವೈದ್ಯರು ಹುಟ್ಟಿಕೊಂಡಿದ್ದಾರೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ವೈದ್ಯರು ಆಯುರ್ವೇದದ ಹೆಸರಲ್ಲಿ ಅಲೋಪಥಿ ಚಿಕಿತ್ಸೆ ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ.

ಈಗ ಹೊಸದಾಗಿ ಜನಪದ ವೈದ್ಯ ಪದ್ಧತಿ ಹೆಸರಿನಲ್ಲಿ ಜನರನ್ನು ವಂಚನೆ ಮಾಡಲಾಗುತ್ತಿದೆ. ಮಂಡಳಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಒಬ್ಬರು ರಿಜಿಸ್ಟ್ರಾರ್‌ ಇದ್ದು ದೂರು ನೀಡುವುದು, ಕ್ರಮ ಕೈಗೊಳ್ಳುವುದು, ನ್ಯಾಯಾಲಯಕ್ಕೆ ಹೋಗುವುದು ಇತ್ಯಾದಿ ಎಲ್ಲ ಕೆಲಸಗಳನ್ನು ಅವರೇ ನಿರ್ವಹಿಸಬೇಕು. ರಿಜಿಸ್ಟ್ರಾರ್‌ ಕಾರ್ಯಬಾಹುಳ್ಯವನ್ನು ಮನಗಂಡು ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮತ್ತು ಜಿಲ್ಲಾ ಆಯುಷ್‌್ ಅಧಿಕಾರಿಗೆ (ಡಿಎಒ) 2007ರಲ್ಲಿ ಸರ್ಕಾರ ಅಧಿಕಾರ ನೀಡಿದೆ.

ಆದರೆ, ಇವರು ಈವರೆಗೆ ಒಬ್ಬ ನಕಲಿ ವೈದ್ಯರ ವಿರುದ್ಧ  ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಮಂಡಳಿಯು 2013ರಲ್ಲಿ 258 ಪ್ರಕರಣ ದಾಖಲಿಸಿ, ಸುಮಾರು 2500 ಕ್ಲಿನಿಕ್‌ಗಳನ್ನು ಮುಚ್ಚಿಸಿತ್ತು. ಮಂಡಳಿಯೊಂದಿಗೆ ಪೊಲೀಸರು, ಡಿಎಒ, ಡಿಎಚ್‌ಒಗಳು ಕೈಜೋಡಿಸಿದರೆ ಒಂದು ತಿಂಗಳಲ್ಲಿ ಕರ್ನಾಟಕವನ್ನು ನಕಲಿ ವೈದ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಾಧ್ಯ ಇದೆ.

ಯಾರು ಈ ಜನಪದ ವೈದ್ಯರು? ಇವರು ಯಾವ ರೀತಿ ಜನರನ್ನು ವಂಚಿಸುತ್ತಿದ್ದಾರೆ?
ಜಾನಪದ ವಿಶ್ವವಿದ್ಯಾಲಯದ ‘ಜನಪದ ವೈದ್ಯ’ ಸರ್ಟಿಫಿಕೇಟ್‌ ಕೋರ್ಸ್‌ ಮಾಡಿದವರು ‘ಜನಪದ ವೈದ್ಯ’ ಎಂಬ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಏನಿದು ಕೋರ್ಸ್‌ ಎಂದು ವಿಶ್ವವಿದ್ಯಾಲಯದ ಕುಲಪತಿಯವರನ್ನು ಕೇಳಿದರೆ, ಜ್ಞಾನಾರ್ಜನೆ ನಿಟ್ಟಿನಲ್ಲಿ ಈ ಕೋರ್ಸ್‌ ಆರಂಭಿಸಲಾಗಿದೆ ಎಂಬ ಸಬೂಬು ನೀಡುತ್ತಿದ್ದಾರೆ. ವಿಶ್ವವಿದ್ಯಾಲಯವೇ ಗೊಂದಲ ಸೃಷ್ಟಿಸಿದೆ. ಈಗಾಗಲೇ ಈ ಕೋರ್ಸ್‌ನ ಎರಡು ಬ್ಯಾಚ್‌ಗಳು ಹೊರಬಂದಿದ್ದು, ಇವರಲ್ಲಿ ಕೆಲವರು ‘ಜನಪದ ವೈದ್ಯ’ ಪದ್ಧತಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ.

ನಾಟಿ ವೈದ್ಯರ ನೋಂದಣಿಗೆ ಮಂಡಳಿ ಏನು ಕ್ರಮ ಕೈಗೊಂಡಿದೆ?
ನಾಟಿ ವೈದ್ಯ ಎಂಬ ಪದ ಬಳಕೆಯೇ ತಪ್ಪು, ದೇಸಿ ವೈದ್ಯ ಎಂಬುದು ಸರಿ. 1961ನೇ ಇಸವಿಗೆ 25 ವರ್ಷ ತುಂಬಿದ ಮತ್ತು 10 ವರ್ಷ ದೇಸಿ ವೈದ್ಯ ಪದ್ಧತಿಯ ಅನುಭವ ಹೊಂದಿದ ಆರು ಸಾವಿರ ಮಂದಿಯನ್ನು ಮಂಡಳಿಯು 1984ರಲ್ಲಿ ಈ ಪದ್ಧತಿಯಡಿ ನೋಂದಣಿ ಮಾಡಿದೆ. ದೇಸಿ ವೈದ್ಯರು ಸಮಾಜ ಸೇವೆಗಾಗಿ ಕೆಲಸ ಮಾಡುತ್ತಾರೆ, ಹಣಕ್ಕಾಗಿ ಅಲ್ಲ. ಸೂಟು, ಬೂಟು ಹಾಕಿಕೊಂಡು ನಾಟಿ ವೈದ್ಯ ಎಂದು ಹೇಳಿಕೊಳ್ಳುವವರೆಲ್ಲ ಬರೀ ‘ಬೋಗಸ್‌’ ವೈದ್ಯರು. ಈಗ ಈ ಪದ್ಧತಿಯಡಿ ನೋಂದಣಿ ಪ್ರಕ್ರಿಯೆ ಮಾಡುತ್ತಿಲ್ಲ.

ಮಂಡಳಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳು ಯಾವುವು?
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯರ ಮಿಸಲೇನಿಯಸ್‌ ಪ್ರಾವಿಷನ್ಸ್‌ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು. ರಿಜಿಸ್ಟ್ರಾರ್‌ಗೆ ಹೆಚ್ಚಿನ ಅಧಿಕಾರ ನೀಡಬೇಕು. ನಕಲಿ ವೈದ್ಯರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬೇಕು. ಕಠಿಣ ಕಾನೂನುಗಳನ್ನು ರೂಪಿಸಬೇಕು. ನಕಲಿ ವೈದ್ಯ ಎಂಬುದು ಸಾಬೀತಾದರೆ ಅವರಿಗೆ 100 ರೂಪಾಯಿ ದಂಡ ಇತ್ತು. ದಂಡದ ಮೊತ್ತವನ್ನು 25 ಸಾವಿರಕ್ಕೆ ಹೆಚ್ಚಿಸಲು ಮತ್ತು ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸಲು ಪ್ರಸ್ತಾವ ಸಲ್ಲಿಸಲಾಗಿದೆ.

ಕೇರಳದಲ್ಲಿ ಆಯುರ್ವೇದ ಪ್ರವಾಸೋದ್ಯಮದಡಿ ವಾರ್ಷಿಕ ಸುಮಾರು 25 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಕರ್ನಾಟಕದಲ್ಲಿ ಯಾಕೆ ಇಂಥ ಪ್ರಯತ್ನಗಳು ನಡೆಯುತ್ತಿಲ್ಲ?
ಪುಟ್ಟ ರಾಜ್ಯವಾದ ಕೇರಳಕ್ಕೆ ವರ್ಷಕ್ಕೆ ಸುಮಾರು 1.5 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಯುರೋಪ್್, ಜರ್ಮನಿ, ಆಸ್ಟ್ರೇಲಿಯಾ ಮೊದಲಾದ ಕಡೆಗಳಿಂದ ಜನ  ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬರುತ್ತಾರೆ. ಕೇರಳದಲ್ಲಿ ದೇವಾಲಯಗಳು, ಕರಾವಳಿ ಬಿಟ್ಟರೆ ಬೇರಾವ ಆರ್ಕಷಕ ತಾಣಗಳೂ ಇಲ್ಲ.

ಕರ್ನಾಟಕದಲ್ಲಿ ಅರಮನೆ, ದೇಗುಲ, ಕೋಟೆಗಳು, ಉದ್ಯಾನಗಳು, ಕರಾವಳಿ ಪ್ರದೇಶ, ವೈವಿಧ್ಯಮಯ ಪ್ರವಾಸಿ ತಾಣಗಳು, ಆಯುರ್ವೇದ, ಯೋಗ ಚಿಕಿತ್ಸೆ ಪದ್ಧತಿ ಎಲ್ಲವೂ ಇವೆ. ನಮ್ಮ ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ.  ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವವನ್ನು ಕೇಳುವವರಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಕೇರಳಕ್ಕಿಂತ ಹೆಚ್ಚು ವಹಿವಾಟನ್ನು ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಜ್ಯದಲ್ಲಿ ಖಂಡಿತವಾಗಿಯೂ ಮಾಡಬಹುದು.

ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಲು ಉದ್ದೇಶಿಸಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳು ಯಾವುವು?
ಸುವರ್ಣ ಮಹೋತ್ಸವದ ನಿಮಿತ್ತ 2016ರ ಫೆಬ್ರುವರಿ 12, 13 ಮತ್ತು 14ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಗ್ಲೋಬಲ್‌ ವೆಲ್‌ನೆಸ್‌’ ಸಮ್ಮೇಳನ ಆಯೋಜಿಸಲಾಗುತ್ತಿದೆ. ಸಮ್ಮೇಳನದಲ್ಲಿ ಆಯುಷ್‌ ಉದ್ಯೋಗ ಮೇಳ ಏರ್ಪಡಿಸಲಾಗುವುದು. ಆಯುರ್ವೇದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿದೇಶಿಯರನ್ನು ಆಕರ್ಷಿಸಲಾಗುವುದು. ಮೇಳದಲ್ಲಿ ಸುಮಾರು 25 ಸಾವಿರ ವೈದ್ಯರು, ತಜ್ಞರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಜನಸಾಮಾನ್ಯರಿಗೆ ಆಯುರ್ವೇದವನ್ನು ಪರಿಚಯಿಸುವ ಉದ್ದೇಶದಿಂದ ಡಿಸೆಂಬರ್‌ 10ರಿಂದ ಎರಡು ತಿಂಗಳ ಕಾಲ ‘ಧನ್ವಂತರಿ ಜ್ಯೋತಿ’ ಜಾಥಾ ರಾಜ್ಯದಾದ್ಯಂತ ಐದು ಸಾವಿರ ಕಿಲೊ ಮೀಟರ್‌ ಸಂಚರಿಸಲಿದೆ.

ಆಯುರ್ವೇದ ಚಿಕಿತ್ಸೆ ತುಂಬಾ ದುಬಾರಿ, ಈ ಚಿಕಿತ್ಸೆ ಸಾಮಾನ್ಯ ಜನರ ಕೈಗೆಟುಕುವುದಿಲ್ಲ ಎಂಬ ಬಗ್ಗೆ ಏನು ಹೇಳುತ್ತೀರಿ?
ಪಂಚಕರ್ಮ ಚಿಕಿತ್ಸೆಯನ್ನು ಒಂದು ವಾರ ನೀಡಲಾಗುತ್ತದೆ. ಇದಕ್ಕೆ ಸಾಮಾನ್ಯವಾಗಿ 40 ಸಾವಿರ ವೆಚ್ಚವಾಗುತ್ತದೆ. ಇದರಲ್ಲಿ ವಸತಿ, ಆಹಾರ, ಚಿಕಿತ್ಸೆ, ಔಷಧ ಎಲ್ಲವೂ ಸೇರಿರುತ್ತದೆ. ಆಯುರ್ವೇದ ಚಿಕಿತ್ಸೆಗೆ ಸಮಯ ಹಿಡಿಯುವುದರಿಂದ ಅದು ದುಬಾರಿಯಾಗಿ ಕಾಣಿಸುತ್ತದೆ. ಔಷಧಗಳು ಕಡಿಮೆ ದರದಲ್ಲಿ ಲಭಿಸುತ್ತವೆ. ಅಲೋಪಥಿಗೆ ಹೋಲಿಸಿದರೆ ಆಯುರ್ವೇದ ಖಂಡಿತವಾಗಿಯೂ ದುಬಾರಿಯಲ್ಲ.

ಆಯುರ್ವೇದ ಪದವೀಧರರ ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಿರುವ ಕ್ರಮಗಳಾವುವು? ಆಯುರ್ವೇದ ವೈದ್ಯರು ಅಲೋಪಥಿ ಅನುಸರಿಸುವ ಕುರಿತು ನಿಮ್ಮ ನಿಲುವು ಏನು?
ದೇಶದಲ್ಲಿ 25 ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಆಸ್ಪತ್ರೆಗಳಲ್ಲಿ ಶೇ 70ರಷ್ಟು ಹುದ್ದೆಗಳು ಖಾಲಿ ಇವೆ. ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಅನುಪಾತದ ಪ್ರಕಾರ 1 ಸಾವಿರ ಜನರಿಗೆ ಒಬ್ಬ ವೈದ್ಯ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ತೀವ್ರವಾಗಿದೆ. ಎಂಬಿಬಿಎಸ್‌ ವೈದ್ಯರು ಹಳ್ಳಿಗಳಲ್ಲಿ ಕೆಲಸ ಮಾಡಲು ಬರುತ್ತಿಲ್ಲ.

ಆಯುರ್ವೇದ ವೈದ್ಯರೂ ‘ಅನಾಟಮಿ’, ‘ಪೆಥಾಲಜಿ’, ‘ಫಿಸಿಯಾಲಜಿ’ ಎಲ್ಲ ಅಧ್ಯಯನ ಮಾಡಿರುತ್ತಾರೆ. ಹೀಗಾಗಿ, ಅಲೋಪಥಿಗೆ ಸಂಬಂಧಿಸಿದಂತೆ ಆರು ತಿಂಗಳ ‘ಸೇತು ಬಂಧ’ ಕೋರ್ಸ್‌ ರಚಿಸಿ ಇವರಿಗೆ ತರಬೇತಿ ನೀಡಬೇಕು. ಈ ಕೋರ್ಸ್‌ ಮುಗಿಸಿದವರಿಗೆ ‘ಡ್ರಗ್‌ ಅಂಡ್‌ ಕಾಸ್ಮೆಟಿಕ್‌’ ಕಾಯ್ದೆಯಡಿ ಕೆಲವು ಅಲೋಪಥಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲು  ಸರ್ಕಾರ ಕ್ರಮ ಕೈಗೊಳ್ಳಬೇಕು. ಹೀಗೆ ಮಾಡುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲು ಅನುಕೂಲವಾಗುತ್ತದೆ. ಈ ಕುರಿತು ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.  

ಆಯುರ್ವೇದ ಪದ್ಧತಿಗೆ ಪೂರಕವಾದ ನವ ತಂತ್ರಜ್ಞಾನಗಳು ಯಾವುವು?
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲೂ ಆಧುನಿಕ ಉಪಕರಣಗಳನ್ನು ಹೆಚ್ಚಾಗಿ ಬಳಸಬೇಕಿದೆ. ಚಿಕಿತ್ಸೆಗೆ ‘ಡಿಸ್ಪೋಸಬಲ್‌’ ವಸ್ತುಗಳನ್ನು ಬಳಸಬೇಕು. ರೋಗ ಪತ್ತೆ ನಿಟ್ಟಿನಲ್ಲಿ ‘ಇಸಿಜಿ’, ‘ಎಕ್ಸ್‌–ರೇ’ ಮೊದಲಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಆಯುರ್ವೇದದಲ್ಲಿ ಆಧುನಿಕ ಉಪಕರಣಗಳನ್ನು ಬಳಸಿಕೊಂಡರೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ.

ಮಂಡಳಿಯ ಅಭಿವೃದ್ಧಿ ನಿಟ್ಟಿನಲ್ಲಿ ಹಾಕಿಕೊಂಡಿರುವ ಕಾರ್ಯಕ್ರಮಗಳು?
ಬಯೊಮೆಟ್ರಿಕ್‌ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮಂಡಳಿಯನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಮಂಡಳಿಯಲ್ಲಿ ಈಗ 6 ಕೋಟಿ ರೂಪಾಯಿ ಠೇವಣಿ ಇದೆ. ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರವು ಆಸ್ಪತ್ರೆಗಳಲ್ಲಿ ಸಮಗ್ರ ಚಿಕಿತ್ಸೆ ವಿಧಾನವನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಆಯುರ್ವೇದ, ಯುನಾನಿ, ಯೋಗ, ಪ್ರಕೃತಿ, ಅಲೋಪಥಿ, ಹೋಮಿಯೋಪಥಿ ಮೊದಲಾದ ಚಿಕಿತ್ಸೆಗಳು ಸಿಗುವಂತೆ ಮಾಡಬೇಕು. ಇದರಿಂದ ರೋಗಿಗಳು ಬೇಕಾದ ಚಿಕಿತ್ಸೆಯನ್ನು ಒಂದೇ ಸೂರಿನಡಿ ಆಯ್ಕೆ ಮಾಡಿಕೊಳ್ಳಲು ಅವಕಾಶವಾಗುತ್ತದೆ. ಸರ್ಕಾರಕ್ಕೆ ಈ ಕುರಿತು ಮನವಿ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT