ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚಿ,ಜೋನ್ಸರ ಅನಾಮಿಕ ಪಿತೃ

ವ್ಯಕ್ತಿ ಸ್ಮರಣೆ
Last Updated 25 ಜುಲೈ 2015, 19:30 IST
ಅಕ್ಷರ ಗಾತ್ರ

ಕಲಾವಿದ ಟಾಮ್ ಮೂರ್ (1928– 2015) ತಮ್ಮ 86ನೇ ವಯಸ್ಸಿಗೆ ಕ್ಯಾನ್ಸರಿನಿಂದ ತೀರಿಕೊಂಡಿದ್ದಾರೆ. ಮೂರ್ ಎಂದರೆ ಪರಿಚಯವಿರಲಾರದವರಿಗೂ ಆರ್ಚಿ ಕಾಮಿಕ್ಸ್ ಸೃಷ್ಟಿಕರ್ತರಲ್ಲಿ ಈತ ಒಬ್ಬ ಪ್ರಮುಖ ಕಲಾವಿದ ಎಂದರೆ ಸುಲಭಕ್ಕೆ ಗುರುತು ಸಿಗುತ್ತದೆ. ಅಮೆರಿಕದ ಟೆಕ್ಸಾಸ್ ನಗರದ ಎಲ್ ಪಾಸೋ ಎಂಬಲ್ಲಿ ಹುಟ್ಟಿ ಅಲ್ಲಿಯೇ ಕೊನೆಯುಸಿರೆಳೆದ ಇವರು, 1950ರಿಂದ 1980ರ ದಶಕದವರೆಗೂ ಮುಖ್ಯವಾಗಿ ಆರ್ಚಿ ಕಾಮಿಕ್ಸ್ ಚಿತ್ರಗಳನ್ನು ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ‘ಆರ್ಚಿ ವ್ಯಂಗ್ಯಚಿತ್ರಕಾರ’ ಎಂದೇ ಖ್ಯಾತರಾಗಿದ್ದರೂ ಕೊರಿಯನ್ ಯುದ್ಧದಲ್ಲಿ ನಿರತವಾಗಿದ್ದ ಅಮೆರಿಕದ ಸೈನ್ಯದಲ್ಲಿ ಯೋಧರಾಗಿದ್ದವರು ಮೂರ್.

ವ್ಯಂಗ್ಯಚಿತ್ರಕಾರರಿಗೂ, ಯುದ್ಧ ಹಿಂಸೆಗಳಿಗೂ, ದೃಶ್ಯಪತ್ರಿಕೋದ್ಯಮಕ್ಕೂ (ವಿಶುಯಲ್ ಜರ್ನಲಿಸಂ) ಎಲ್ಲೆಡೆ ಸಾಮಾನ್ಯವಾಗಿರುವ ಐತಿಹಾಸಿಕ ನಂಟೊಂದಿದೆ. ಬಾಳಾ ಠಾಕ್ರೆ, ಹಿಟ್ಲರ್ ಮುಂತಾದವರು ಒಳ್ಳೆಯ ವ್ಯಂಗ್ಯಚಿತ್ರಕಾರರಾಗಿದ್ದರು. ಜೋ ಸಾಕೋ ಎಂಬ ಮತ್ತೊಬ್ಬ ಅಮೆರಿಕನ್ ವ್ಯಂಗ್ಯಚಿತ್ರಕಾರ, ಲೆಬನಾನ್ ಹಾಗೂ ಪ್ಯಾಲೆಸ್ಟೀನಿನ ಬಗ್ಗೆ  ಆಯಾ ಶೀರ್ಷಿಕೆಗಳ ಅಡಿಯಲ್ಲೇ ರಚಿಸಿದ ಕಾಮಿಕ್ ಪುಸ್ತಕಗಳಿಗೆ ನೊಬೆಲ್ ಪ್ರಶಸ್ತಿಗೆ ಸಮಾನವಾದ ಪ್ರಶಸ್ತಿ ದೊರಕಿದೆ. ಪ್ರಪಂಚ ಯುದ್ಧಗಳ ‘ಜರ್ಮನ್ ಹಾಲೋಕಾಸ್ಟ್’ ಕುರಿತು ಪ್ರಸಿದ್ಧ ‘ಮೌಸ್’ ಕಾಮಿಕ್ ರಚಿಸಿದಾತನೂ ಅಮೆರಿಕದ ವ್ಯಂಗ್ಯಚಿತ್ರಕಾರನೇ.

ಮೂರ್‌ ಅವರ ಆರ್ಚಿ ಮಾತ್ರ ಪಕ್ಕಾ ಅಮೆರಿಕನ್ ಯೋಧ. ತನ್ನ ದೇಶವನ್ನೇ ವಿಶ್ವವೆಂದು ನಂಬಿ ಟೀನೇಜ್ ದುನಿಯಾದಲ್ಲಿ ಸ್ವತಃ ಮುಳುಗಿದ್ದಲ್ಲದೆ, ಅನೇಕ ದೇಶಗಳ ಯುವಜನರನ್ನು ಅದರೊಳಗೆ ಏಳಲಾರದಂತೆ ಮುಳುಗಿಸಿದವರು ಆರ್ಚಿಯ ಸೃಷ್ಟಿಕರ್ತ ಮೂರ್.

‘ಚಿಕ್ ಕಾಲ್’, ‘ಮೈಟಿ ಮೌಸ್’ ‘ಅಂಡರ್‌ಡಾಗ್’ ಮುಂತಾದ ವ್ಯಂಗ್ಯಚಿತ್ರಗಳನ್ನು ತಾವು ರಚಿಸುತ್ತಿದ್ದ ಕಾಲದಲ್ಲಿ ಅಮೆರಿಕದಲ್ಲಿ ಚಾಲ್ತಿಯಲ್ಲಿದ್ದ  ಗ್ರಾಫಿಕ್-ನಾವೆಲ್ ಪ್ರಕಾರವನ್ನು ಟಾಮ್‌ ಮೂರ್‌ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮನರಂಜನೆಯನ್ನು ಕೇಂದ್ರವಾಗಿ ಇರಿಸಿಕೊಂಡಿದ್ದ ಅವರು, ಕೊನೆಯವರೆಗೂ ಅದನ್ನೇ ನಂಬಿಕೊಂಡಿದ್ದರು. ಇದರ ಫಲವಾಗೇ 1980ರಲ್ಲೂ ಆರ್ಚಿಯ ಗೆಳೆಯನಾದ ‘ಜಗ್‌ಹೆಡ್ ಜೋನ್ಸ್‌’ನನ್ನು ಮೂರ್‌ ಸೃಷ್ಟಿಸಿದರು. ಇದರ ನಡುವೆಯೂ, ಅಮೆರಿಕದ ಗಂಭೀರ ಪಾಪ್‌ ಕಲೆಯ ಅಧ್ಯಯನಕ್ಕೆ ತಮ್ಮ ಕಾಮಿಕ್ಸ್ ಗಳ ಮೂಲಕ ಸಂಪದ್ಭರಿತವಾದ ಸಾಮಗ್ರಿಯನ್ನು ಒದಗಿಸಿಕೊಟ್ಟದ್ದು ಈ ಜನಪ್ರಿಯ ದೃಶ್ಯಕಲೆಗೆ ಮೂರ್‌ ಅವರು ನೀಡಿದ ಅತಿ ದೊಡ್ಡ ಕೊಡುಗೆ.

ಸುಮಾರು ನಾಲ್ಕು ದಶಕಗಳ ಕಾಲ ಅಮೆರಿಕದ ಯುವಜನಾಂಗದ ನಡವಳಿಕೆ, ಉಡುಗೆ ತೊಡುಗೆ, ಮಾತು, ವ್ಯಂಗ್ಯ, ಮೊನಚು, ಹಾಸ್ಯ, ದಡ್ಡತನ ಇವೆಲ್ಲವುಗಳ ಮೇಲೂ ಪ್ರಭಾವ ಬೀರಿದ ಆರ್ಚಿ ಪಾತ್ರಧಾರಿ ಹಾಗೂ ಪ್ರಮುಖವಾದ ಆರ್ಚಿ ಕಾಮಿಕ್‌ಗಳ ಸೃಷ್ಟಿಯಲ್ಲಿ ಮೂರ್‌ ಅವರ ಪಾತ್ರ ದೊಡ್ಡದು. ಅವರ ಚಿತ್ರಗಳನ್ನು ಮೂರ್ನಾಲ್ಕು ತಲೆಮಾರು ನಿರಂತರವಾಗಿ ತಮ್ಮ ತಮ್ಮ ಬದಲಾಗುತ್ತಿರುವ ಕಾಲಗತಿಗಿಂತಲೂ ಭಿನ್ನವಾಗಿ, ಸ್ಥಿರವಾಗಿ ಸ್ವೀಕರಿಸಿದ್ದಕ್ಕೆ ಕಾರಣ ಅವರ ಆರ್ಚಿ ಕಾಮಿಕ್ಸಿಗಿದ್ದ ‘ಎವರ್‌ಗ್ರೀನ್’ ಗುಣ. ‘ಬ್ಯಾಕ್ ಟು ದ ಫ್ಯೂಚರ್’ ಮುಂತಾದ ಪ್ರಸಿದ್ಧ ಸಿನಿಮಾಗಳಲ್ಲಿ 1950– 60ರ ದಶಕದ ಅಮೆರಿಕವನ್ನು ನಿರೂಪಿಸುವಾಗ ‘ಆ ಅಂದಕಾಲ’ವನ್ನು ತೋರಿಸಲು ಸಿನಿಮಾ ತಯಾರಕರಿಗೆ ದೃಶ್ಯಾಧಾರವಾಗಿ ಒದಗಿಬಂದದ್ದು ಆರ್ಚಿ ಕಾಮಿಕ್‌ಗಳ ಆವರಣವೇ.

ಆರ್ಚಿ ಚಿತ್ರಗಳಿಗೆ ಜಗತ್ತಿನಾದ್ಯಂತ ಮನ್ನಣೆ ದೊರಕುತ್ತದೆಂದು ಯಾರಿಗೆ ಗೊತ್ತಿತ್ತು? ನಾನು ಚಿತ್ರಿಸಿದ್ದನ್ನು ನಾನು ನಿಜಕ್ಕೂ ಅನುಭವಿಸಿ, ತೃಪ್ತಿಹೊಂದಿದ್ದೇನೆ ಎಂದು ಎರಡು ದಶಕಗಳ ಹಿಂದೆಯೇ ಹೇಳಿದ್ದ ಟಾಮ್ ಮೂರ್ ಅವರ ವಿಶೇಷವೆಂದರೆ, ಆರ್ಚಿಯನ್ನು ರಚಿಸುತ್ತಿದ್ದಾಗಲೇ, ಅದನ್ನು ಅತಿಯಾಗಿ ಬದಲಿಸಬಾರದೆಂಬ ಗುಣದ ಅಧಿಕೃತತೆಯ ಬಗ್ಗೆ ಅವರಿಗಿದ್ದ ವಿಶ್ವಾಸ. ಅಂದರೆ, ಮೂರ್ ಆರ್ಚಿಯನ್ನು ರಚಿಸುತ್ತಿದ್ದ ಕಾಲಕ್ಕೆ ಅಮೆರಿಕದ ದೃಶ್ಯಕಲೆ ಬಹಳ ರಭಸಯುಕ್ತವಾಗಿ, ಕೆಲವೊಮ್ಮೆ ಒತ್ತಾಯಪೂರ್ವಕವಾಗಿ ರೂಪಾಂತರ ಹೊಂದುತ್ತಿತ್ತು. ಯುರೋಪಿನಲ್ಲಿ ಆಧುನಿಕ ಕಲೆ ಉತ್ತುಂಗಕ್ಕೆ ಹೋದದ್ದರಿಂದ, ಅಮೆರಿಕದಲ್ಲಿ ತೈಲವರ್ಣವು ಒಣಗುವ ಮುನ್ನವೇ ಕ್ಯಾನ್ವಾಸುಗಳನ್ನು ಸಂಗ್ರಹಾಲಯಗಳಲ್ಲಿ ಸೇರಿಸಿ, ಕೃತಕವಾಗಿ ಪುರಾತನ, ಸನಾತನವನ್ನು ಹೊಸದಾಗಿ ಸಂಗ್ರಹಾಲಯಗಳ ಮೂಲಕ ರೂಪಿಸುತ್ತಿದ್ದ ಸಿರಿವಂತರಿದ್ದರು. ಆದರೆ ಆರ್ಚಿ ಹಾಗೂ ಟಾಮ್ ಮೂರರ ಬಳಗ ಮಾತ್ರ ಸರಳತೆಯ ಅಸ್ತ್ರದೊಂದಿಗೆ ಸಂಕೀರ್ಣ ಜಗತ್ತಿಗೊಂದು ಮನರಂಜನೆಯನ್ನು ಒದಗಿಸಿಕೊಡುತ್ತಾ ಬಂದಿತು. ಈ ಮೂಲಕ, ಮತ್ತೊಂದು ಅರ್ಥದಲ್ಲಿ ಅಮೆರಿಕದ ‘ಚಂದಮಾಮ’ ‘ಬಾಲಮಿತ್ರ’ಗಳನ್ನು ಸೃಷ್ಟಿಸಿದ ಕೆಲವೇ ಪ್ರಮುಖರಲ್ಲಿ ಮೂರ್ ಒಬ್ಬರು.

ಮೊನ್ನೆ ಜುಲೈ 23ಕ್ಕೆ ತೀರಿಕೊಂಡ ಕೂಡಲೇ ಮೂರ್ ಬಗ್ಗೆ ಶ್ರದ್ಧಾಂಜಲಿಯ ಅತಿಭಾವುಕ ವಿನ್ಯಾಸದ ಹಿನ್ನೆಲೆಯಲ್ಲಿ ಒಂದು ಸಣ್ಣ ವಿವಾದವೂ ಹುಟ್ಟಿಕೊಂಡುಬಿಟ್ಟಿದೆ. ಆರ್ಚಿಯನ್ನು ಏಕತ್ರವಾಗಿ ವೈಯಕ್ತಿಕವಾಗಿ ಮೂರ್ ಮಾತ್ರ ಸೃಷ್ಟಿಸಿದರು ಎಂಬ ಬರವಣಿಗೆಯನ್ನು ಪರಿಷ್ಕರಿಸಿ, ‘ಆರ್ಚಿ ಸೃಷ್ಟಿಕರ್ತರಾದ ಕೆಲವೇ ಮಂದಿಯಲ್ಲಿ ಇವರು ಒಬ್ಬ ಪ್ರಮುಖ ಕಲಾವಿದ’ ಎಂದು ತಿದ್ದುಪಡಿಯನ್ನು ಇವರ ಶ್ರದ್ಧಾಂಜಲಿಯ ಅಡಿಯಲ್ಲಿ ನಿರೂಪಿಸಲಾಯಿತು. ಆರ್ಚಿ ಮತ್ತು ಆತನ ಗೆಳೆಯರು, ಗೆಳತಿಯರು, ಅವರ ವೇಷಭೂಷಣಗಳು ಎಲ್ಲವೂ ಈಗ 80, 60 ಹಾಗೂ 40ರ ವಯಸ್ಸಿನಲ್ಲಿರುವವರಿಗೆ ಹಿನ್ನೆನಪಾಗಿ ಕಾಡುತ್ತವೆ. ನಮ್ಮ ನಗರಗಳಲ್ಲೂ ಅತಿ ಅಗ್ಗದ ಬೆಲೆಗೆ, ಅರ್ಧ ಬೆಲೆಗೆ ದೊರಕುತ್ತಿದ್ದ ಪುಸ್ತಕಗಳಲ್ಲಿ ಆರ್ಚಿ ಕಾಮಿಕ್‌ಗಳು ಹಾಗೂ ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು ಪರಸ್ಪರ ಹೆಗಲ ಮೇಲೆ ಕೈಯಿರಿಸಿಕೊಂಡೇ ನಮ್ಮ ಮನೆಗಳನ್ನು ಪ್ರವೇಶಿಸುತ್ತಿದ್ದವು.

ಕನ್ನಡ ಮಾಧ್ಯಮದಿಂದ ಇಂಗ್ಲಿಷ್‌ ಮಾಧ್ಯಮಕ್ಕೆ ಸ್ಥಳಾಂತರಗೊಂಡ ಮಕ್ಕಳಿಗೆ, ಆರ್ಚಿ ಮತ್ತು ಜೋನ್ಸ್ ಇಬ್ಬರೂ ಇಂಗ್ಲಿಷ್ ಪ್ರಣೀತ ಕಾನ್ವೆಂಟ್ ಕಾಲೇಜು ಸಹಪಾಠಿಗಳ ವೇಷಭೂಷಣಗಳ ಮೂಲಕ ತಮ್ಮನ್ನು ಅಟಕಾಯಿಸಲು ಕಾಯುತ್ತಿರುವಂತೆ ಅನ್ನಿಸುತ್ತಿತ್ತು. ಕೇಶಶೈಲಿ, ಬಣ್ಣದ ಆಯ್ಕೆ, ಇಂಗ್ಲಿಷ್ ಬಳಕೆ ಇತ್ಯಾದಿಗಳೆಲ್ಲಕ್ಕೂ ಬೆಂಗಳೂರಿನ ಬ್ರಿಗೇಡ್ ಹಾಗೂ ಎಂ.ಜಿ. ರಸ್ತೆಗಳಿಗೆ ಮಾರ್ಗನಿರ್ದೇಶನ ಮಾಡಿಕೊಟ್ಟವರೇ ಟಾಮ್ ಮೂರರ ಆರ್ಚಿ-ಜೋನ್ಸರು.

ಆಶಿಶ್ ನಂದಿ ಹೇಳಿದ ಕಥೆಯೊಂದು ಹೀಗಿದೆ: ಮೆಕ್ಸಿಕೊದ ಸೆಮಿನಾರೊಂದರಲ್ಲಿ ಭಾಗವಹಿಸಿ, ಹೊರಗೆ ಪಾರ್ಕಲ್ಲಿ ಕುಳಿತಿದ್ದರಂತೆ ಅವರು. ಪಕ್ಕದಲ್ಲೊಬ್ಬಾತ ಪರಿಚಯವಾಗಿ, ನಾನೊಬ್ಬ ವ್ಯಂಗ್ಯಚಿತ್ರಕಾರ ಎಂದು ಪರಿಚಯಿಸಿಕೊಂಡನಂತೆ. ಏನೆಲ್ಲ ಬರೆಯುತ್ತೀಯ? ಎಂದು ಕೇಳಲಾಗಿ, ತುಂಬಾ ವರ್ಷಗಳಿಂದ ಎರಡು ಪಾತ್ರಗಳನ್ನು ಸೃಷ್ಟಿಸುತ್ತಿದ್ದೇನೆ ಎಂದನಂತೆ. ಕುತೂಹಲಕ್ಕೆ ಆಶಿಶ್‌ ನಂದಿಯವರು ಆ ಪಾತ್ರಗಳ ಹೆಸರೇನು? ಎಂದು ಕೇಳಿದರಂತೆ. ಒಂದು ಫ್ಯಾಂಟಮ್ ಅಂತ, ಮತ್ತೊಂದು ಮಾಂಡ್ರೇಕ್ ಅಂತ ಎಂದರಂತೆ ಸೈಮರ್ ಬ್ಯಾರಿ. ಬಹುಪಾಲು ಅನಾಮಿಕನಾದ ಆ ಚಿತ್ರಕಾರನ ಜಗತ್ಪ್ರಸಿದ್ಧ ಚಿತ್ರಗಳು ನಮ್ಮ ಮನೆಯಲ್ಲಿ, ನಮ್ಮ ಭಾಷೆಯಲ್ಲಿಯೇ ನಮಗೆ ಲಭ್ಯವಾಗುತ್ತಿವೆ ಎಂಬ ವಿಷಯ ಬ್ಯಾರಿಗೆ ಗೊತ್ತಿರಲಿಲ್ಲವಂತೆ. ಆದರೆ ಆರ್ಚಿಯನ್ನು ರಚಿಸಿದ ಟಾಮ್ ಮೂರರಿಗೆ ಮಾತ್ರ ತಮ್ಮ ಸೃಷ್ಟಿಯ ವಿಶಾಲ ಪ್ರಸಿದ್ಧಿಯ ಬಗ್ಗೆ ಅತಿ ಸ್ಪಷ್ಟ ಅರಿವಿತ್ತು. ಆದರೂ ಗಡಿಗಳ ಎಲ್ಲೆ ಮೀರಿ ಜನಪ್ರಿಯವಾಗಿದ್ದ ಆರ್ಚಿಯನ್ನು ಅಮೆರಿಕದ ಮನೋಭಾವದಿಂದ ಗಡೀಪಾರು ಮಾಡಲು ಅವರು ಒಪ್ಪಿರಲಿಲ್ಲ. ಹೀಗಾಗಿಯೇ ಅವರ ಆರ್ಚಿ ಅಪ್ಪಟ ಅಮೆರಿಕನ್ನನಾಗಿದ್ದ.

ಕಾಮಿಕ್ ಮನರಂಜನೆ ಇಂದು ಎಂದಿಗಿಂತಲೂ ಹೆಚ್ಚಿನ ಪ್ರಾಮುಖ್ಯ ಹೊಂದುತ್ತಿರಲು ಕಾರಣ, ಜನರಲ್ಲಿ ಓದುವ ಅಭ್ಯಾಸ ಕ್ಷೀಣಿಸುತ್ತಿರುವುದು.  ಓದುವವರಲ್ಲೂ ಬೃಹತ್ ಸಂಹಿತೆಗಳ ಆಯ್ಕೆಗಳು ಕ್ಷೀಣಿಸುತ್ತಿರುವ ಈ ಕ್ಷಣದಲ್ಲಿ, ಅಮೆರಿಕೆಗೆ ವಲಸೆ ಹೋಗುತ್ತಿರುವ ಉಚ್ಛ್ರಾಯ ಸಂಪ್ರದಾಯದಲ್ಲಿ, ಅಕ್ಷರ ಹಾಗೂ ಚಿತ್ರಗಳನ್ನು ಒಟ್ಟಾಗಿ ಹೆಚ್ಚು ಹೆಚ್ಚಾಗಿ ಬೆರೆಸಿ, ಗಂಭೀರ, ತಾತ್ವಿಕ, ನಾನ್ ಫಿಕ್ಶನ್ ವಿಷಯಗಳನ್ನೂ ಕಾಮಿಕ್ ರೂಪದಲ್ಲಿ ಪ್ರಕಟಿಸುತ್ತಿರುವ ಮುದ್ರಣ ಮಾಧ್ಯಮದ ಕ್ರಾಂತಿಯ ಈ ಯುಗದಲ್ಲಿ ಟಾಮ್ ಮೂರರ ಸೃಷ್ಟಿ ನವನವೀನವಾಗಿ ಕಾಣುತ್ತದೆ. ಜೊತೆಗೆ ಇಂತಹ ಬದಲಾವಣೆಗೆ ಕಾರಣವಾದ ಮೂಲದ ಸೃಷ್ಟಿಯಲ್ಲಿಯೂ ಅವರ ಪಾತ್ರವಿದೆ. ಒಬ್ಬ ಶೆರ್ಲಾಕ್ ಹೋಮ್ಸ್, ಒಬ್ಬ ಮಾಡೆಸ್ಟ್ ಬ್ಲೇಸ್, ಒಬ್ಬ ಫ್ಯಾಂಟಮ್ ಮತ್ತು ಒಬ್ಬ ಆರ್ಚಿ ಇವರೆಲ್ಲರೂ ಮುಂದೊಮ್ಮೆ ವರ್ಚ್ಯುಯಲ್, ಆನಿಮೇಷನ್ ಜಗತ್ತುಗಳ ಪಿತಾಮಹರಾಗಿ ಪರಿಗಣಿತರಾದಲ್ಲಿ ಅಚ್ಚರಿಪಡಬೇಕಾದ ಅವಶ್ಯಕತೆಯೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT