ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಅಡಿ ಆಯ್ಕೆಯಾದರೂ ಪ್ರವೇಶವಿಲ್ಲ

ವ್ಯಾಪ್ತಿ ಗೊಂದಲ: ಪೋಷಕರ ಪರದಾಟ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಮಂಡ್ಯ: ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಮಕ್ಕಳಿಗೆ, ಶಾಲಾ ಪ್ರದೇಶದ ವ್ಯಾಪ್ತಿ ಹೊರಗಿನವರು ಎಂಬ ಕಾರಣ ನೀಡಿ ಶಾಲಾ ಆಡಳಿತ ಮಂಡಳಿಯವರು ಪ್ರವೇಶ ನಿರಾಕರಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ  ಪ್ರವೇಶ ಪಡೆಯಲು ಪೋಷಕರು ಪರದಾಡುತ್ತಿದ್ದಾರೆ.

ವಾರ್ಡ್‌, ಗ್ರಾಮದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಕಾರಣಕ್ಕೆ ಮಂಡ್ಯ ದಕ್ಷಿಣ ವಲಯದಲ್ಲಿ ಆರ್‌ಟಿಇ ಅಡಿ ಆಯ್ಕೆಯಾಗಿದ್ದ 90ಕ್ಕೂ ಹೆಚ್ಚು ಮಕ್ಕಳಿಗೆ ಶಾಲೆಗಳು ಪ್ರವೇಶ ನೀಡುತ್ತಿಲ್ಲ. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಇಂತಹದೇ ಸಮಸ್ಯೆ ಎದುರಿಸುತ್ತಿದ್ದಾರೆ. ರಾಜ್ಯದಾದ್ಯಂತ ಸಾವಿರಾರು ಮಕ್ಕಳು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಈ ಮೊದಲು ಶಾಲೆಯಿಂದ 3 ಕಿ.ಮೀ ವ್ಯಾಪ್ತಿಯ ಮಕ್ಕಳು ಆರ್‌ಟಿಇ ಅಡಿ ಆ ಶಾಲೆಗೆ ಸೇರಲು ಅರ್ಜಿ ಸಲ್ಲಿಸಬಹುದಾಗಿತ್ತು. ಈ ವರ್ಷ ಅದನ್ನು ಶಾಲೆ ಇರುವ ಗ್ರಾಮ ಅಥವಾ ಶಾಲೆ ಇರುವ ವಾರ್ಡ್‌ ವ್ಯಾಪ್ತಿಯ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಬದಲಾಯಿಸಲಾಗಿದೆ.

ಬದಲಾವಣೆ ಮಾಹಿತಿ ಇಲ್ಲದ ಪೋಷಕರು ಫೆಬ್ರವರಿ ತಿಂಗಳಿನಲ್ಲಿ ಆನ್‌ಲೈನ್‌ ಮೂಲಕ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಏಪ್ರಿಲ್‌ ತಿಂಗಳಿನಲ್ಲಿ ಅವರ ಅರ್ಜಿ ಅಂಗೀಕೃತವಾಗಿದೆ. ಮೇ ತಿಂಗಳಿನಲ್ಲಿ ನಿಮ್ಮ ಮಗು ಆಯ್ಕೆಯಾಗಿದ್ದು, ಮೇ 23ರ ಒಳಗೆ ಪ್ರವೇಶ ಪಡೆಯಬೇಕು ಎಂದು ಪೋಷಕರಿಗೆ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಪ್ರವೇಶ ಪಡೆಯಲು ಶಾಲೆಗೆ ತೆರಳಿದರೆ ಮಕ್ಕಳಿಗೆ ಪ್ರವೇಶ ನೀಡುತ್ತಿಲ್ಲ. ವಾರ್ಡ್‌ ವ್ಯಾಪ್ತಿ ಮೀರಿರುವುದರಿಂದ ಪ್ರವೇಶ ಸಾಧ್ಯವಿಲ್ಲ ಎಂದು ಶಾಲಾ ಆಡಳಿತ ಮಂಡಳಿಯವರು ಪೋಷಕರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಪ್ರವೇಶಕ್ಕೆ ಕೊನೆಯ ದಿನವಾದ ಮೇ 23ರಂದು ಪ್ರವೇಶ ನೀಡದಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಅಲಗೂಡು ಗ್ರಾಮದ ರವಿಕುಮಾರ್‌ ತಮ್ಮ ಪುತ್ರ ರಿತೇಶ್‌ಗೌಡ ಪ್ರವೇಶಕ್ಕಾಗಿ ಮಂಡ್ಯ ತಾಲ್ಲೂಕಿನ ಉರಮಾರಕಸಲಗೆರೆ ಗ್ರಾಮದಲ್ಲಿರುವ ಚಿನ್ಮಯ್‌ ವಿದ್ಯಾಲಯಕ್ಕೆ ಪ್ರವೇಶ ಬಯಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು.

‘ಈಚೆಗೆ ನನ್ನ ಮಗ ಆಯ್ಕೆಯಾಗಿದ್ದಾನೆ ಎಂದು ಶಿಕ್ಷಣ ಇಲಾಖೆಯಿಂದ ಪತ್ರ ಬಂದಿದೆ. ಆದರೆ, ಶಾಲೆಯವರು ಬೇರೆ ಗ್ರಾಮದವರು ಎಂಬ ಕಾರಣಕ್ಕೆ ಪ್ರವೇಶ ನೀಡುತ್ತಿಲ್ಲ. ಈ ಹಿಂದೆ ನಮ್ಮೂರಿನ ಮಕ್ಕಳು ಆರ್‌ಟಿಇ ಅಡಿ ಈ ಶಾಲೆಗೆ ಆಯ್ಕೆಯಾಗಿದ್ದಾರೆ. ಈಗ ನಮಗೆ ನಿರಾಕರಿಸಲಾಗುತ್ತಿದೆ’ ಎಂದು ರವಿಕುಮಾರ್ ದೂರುತ್ತಾರೆ.

‘65 ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದೆ. ವ್ಯಾಪ್ತಿ ಪ್ರದೇಶದಲ್ಲಿ ಬರುವುದಿಲ್ಲ ಎನ್ನುವುದಾದರೆ ಆಗಲೇ ಅರ್ಜಿ ತಿರಸ್ಕರಿಸಬೇಕಿತ್ತು. ಅರ್ಜಿ ತೆಗೆದುಕೊಂಡು, ಆಯ್ಕೆ ಮಾಡುವವರೆಗೂ ಗೊತ್ತಿರಲಿಲ್ಲವೇ? ಈ ಶಾಲೆಗೆ ಪ್ರವೇಶ ಸಿಗುತ್ತದೆ ಎಂದು ಬೇರೆ ಯಾವ ಶಾಲೆಗೂ ಪ್ರಯತ್ನಿಸಿಲ್ಲ. ಬೇರೆ ಕಡೆಗೂ ಪ್ರವೇಶ ಸಿಗುವುದು ಕಷ್ಟ. ಈಗ ಏನು ಮಾಡಬೇಕು’ ಎಂದು ಅವರು ಪ್ರಶ್ನಿಸುತ್ತಾರೆ.

‘ಶಾಲೆ ಇರುವ ಗ್ರಾಮ ಅಥವಾ ವಾರ್ಡ್‌ನವರು ಮಾತ್ರ ಅರ್ಜಿ ಸಲ್ಲಿಸಬೇಕು ಎಂಬುದನ್ನು ಪ್ರಚಾರ ಮಾಡಿದ್ದೆವು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರಿಂದ ಹೊರಗಿನವರೂ ಅರ್ಜಿ ಸಲ್ಲಿಸಿರುವುದು ನಮಗೆ ಗೊತ್ತಾಗಿಲ್ಲ. ಈಗ ಪರಿಶೀಲನೆ ಮಾಡುತ್ತಿದ್ದೇವೆ. ವ್ಯಾಪ್ತಿ ಹೊರಗಿರುವ ಮಕ್ಕಳ ಪ್ರವೇಶಕ್ಕೆ ಅವಕಾಶವಿಲ್ಲ. ತಿರಸ್ಕರಿಸಲಾಗುತ್ತಿದೆ’ ಎನ್ನುತ್ತಾರೆ ಮಂಡ್ಯ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು.

‘ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಆಯ್ಕೆಯಾಗಿದ್ದ 90ಕ್ಕೂ ಹೆಚ್ಚು ಮಕ್ಕಳ ಪ್ರವೇಶವನ್ನು ಇದೇ ಕಾರಣಕ್ಕೆ ನಿರಾಕರಿಸಲಾಗಿದೆ. ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲಿಯೂ ಇಂತಹ ಪ್ರಕರಣಗಳಾಗಿವೆ. ಇಲಾಖೆಯ ಗಮನಕ್ಕೂ ತರಲಾಗಿದೆ. ಎರಡನೇ ಹಂತದಲ್ಲಿ ಬೇರೆ ಮಕ್ಕಳಿಗೆ ಅವಕಾಶ ಸಿಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT