ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಪ್ರವೇಶ ಗೊಂದಲ: ಪಾಲಕರ ಪ್ರತಿಭಟನೆ

Last Updated 24 ಮೇ 2016, 9:42 IST
ಅಕ್ಷರ ಗಾತ್ರ

ಗಂಗಾವತಿ: ಆರ್‌ಟಿಇ ಯೋಜನೆಯಲ್ಲಿ ಉಂಟಾದ ಗೊಂದಲ ಪರಿಹರಿಸುವಂತೆ ಒತ್ತಾಯಿಸಿ ಪಾಲಕರು ನಡೆಸುತ್ತಿರುವ ಧರಣಿ ಸೋಮವಾರ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಕೆಲ ಪಾಲಕರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದರು. ಇನ್ನೂ ಕೆಲ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂದೆ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಟಿಇ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ವಾರ್ಡ್‌ ಬದಲಿಸಿರುವುದು ಸಮಸ್ಯೆಗೆ ಕಾರಣವಾಗಿದ್ದು, ಇದೇ ಗೊಂದಲದಿಂದಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ. ಕೂಡಲೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಪಾಲಕರು ಕಳೆದ ಹಲವು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮವಾರ ಆರ್‌ಟಿಇ ಯೋಜನೆಯಲ್ಲಿ ಪ್ರವೇಶಕ್ಕೆ ಕೊನೆಯ ದಿನವಾಗಿತ್ತು. ಆದರೂ  ಶಿಕ್ಷಣ ಇಲಾಖೆ ಯಾವುದೇ ಪರಿಹಾರ ಮಾರ್ಗ ಕಂಡುಹಿಡಿಯದ್ದರಿಂದ ಪಾಲಕರಲ್ಲಿ ಆಕ್ರೋಶ ಸ್ಫೋಟವಾಯಿತು. ಪ್ರತಿಭಟನೆ ತೀವ್ರಗೊಳಿಸಿದ ಪಾಲಕರು ಕೂಡಲೆ ಮಕ್ಕಳಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದರು.

ಇಲಾಖೆಯ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ಆಗಮಿಸಿದ ಆರ್‌ಟಿಇ ಯೋಜನೆಗೆ ಆಯ್ಕೆಯಾದ ಮಕ್ಕಳ ಪಾಲಕರು ಪ್ರತಿಭಟನೆಗಳಿದರು. ಸಮಸ್ಯೆ ಪರಿಹರಿಸುವಂತೆ ಬಿಇಒ ಅವರನ್ನು ಒತ್ತಾಯಿಸಿದರು. ಸರ್ಕಾರಿ  ಆದೇಶವಿದ್ದರಿಂದ ಏನು ಮಾಡಲಾಗದು ಎಂದು ಬಿಇಒ ಅಸಹಾಯಕತೆ ವ್ಯಕ್ತಪಡಿಸಿದರು.

ಇದು ಪಾಲಕರನ್ನು ಕೆರಳುವಂತೆ ಮಾಡಿತ್ತು. ಕೆಲ ಪಾಲಕರು ತಮ್ಮ ಜೊತೆಯಲ್ಲಿ ತಂದಿದ್ದ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ  ಘೋಷಿಸಿದುದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.  ಗೊಂದಲ ಸರಿಪಡಿಸುವಂತೆ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಇಲಾಖೆಯಾಗಲಿ ಸರ್ಕಾರವಾಗಲಿ ಗಮನ ನೀಡಿಲ್ಲ.

ಮಕ್ಕಳ ಭವಿಷ್ಯ ಹಾಳಾಗುತ್ತಿರುವುದನ್ನು ನೋಡಿ ಪಾಲಕರು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪಾಲಕ ಪ್ರತಿನಿಧಿ ಶಬ್ಬೀರ್ ಪ್ರಶ್ನಿಸಿದರು. ಪಾಲಕರಾದ ನಂದಿನಿ, ಶೋಭಾಸಿಂಗ್, ಅಶ್ವಿನಿ, ರಾಜಶೇಖರ, ಶಿವಾನಂದ, ಸೈಯದ್, ಶಬ್ಬೀರ್, ಇಸ್ಮಾಯಿಲ್, ಬಸವರಾಜ, ಪ್ರಕಾಶ, ನೂರುದ್ದೀನ್, ಶೋಭಾ, ಜೋತಿ, ಪೂಜಾ, ಮಾಲಾ, ಲತಾ, ಶಬನಾಬೇಗಂ, ನಸೀಮಾ, ಶಿವು, ಎಸ್ಎಫ್ಐ ಸಂಘಟನೆಯ ಅಮರೇಶ ಕಡಗದ ಇದ್ದರು.

** *** **
ಸರ್ಕಾರದ ನಿಯಮಗಳನ್ನು ಪಾಲಿಸುವುದಷ್ಟೆ ನಮ್ಮ ಕೆಲಸ. ವಾರ್ಡ್‌ ಬದಲಾವಣೆ ಸರ್ಕಾರದಿಂದ ಆಗಬೇಕೆ ವಿನಃ ನನ್ನ ಮಿತಿಯಲ್ಲಿ ಇಲ್ಲ.
-ವಿಜಯಕುಮಾರ ಬಾಕೇರ,
ಕ್ಷೇತ್ರ ಶಿಕ್ಷಣಾಧಿಕಾರಿ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT