ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ದಾಳಿಗೆ ಡೇರ್‌ಡೆವಿಲ್ಸ್ ಕಂಗಾಲು

ಮಿಷೆಲ್‌ ಸ್ಟಾರ್ಕ್‌ ಚುರುಕಿನ ಬೌಲಿಂಗ್‌; ವಿರಾಟ್‌ ಕೊಹ್ಲಿ ಪಡೆಗೆ 10 ವಿಕೆಟ್‌ಗಳ ಗೆಲುವು
Last Updated 26 ಏಪ್ರಿಲ್ 2015, 19:37 IST
ಅಕ್ಷರ ಗಾತ್ರ

ನವದೆಹಲಿ: ‘ಮಿಷೆಲ್‌ ಸ್ಟಾರ್ಕ್‌ ಬಂದರೆ ನಮ್ಮ ತಂಡದ ಬೌಲಿಂಗ್ ಸಾಮರ್ಥ್ಯ ಹೆಚ್ಚಾಗಲಿದೆ. ಆಗ ನೈಜ ಶಕ್ತಿ ಏನೆಂಬುದು ಗೊತ್ತಾಗಲಿದೆ’ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದ ಮಾತು ಮತ್ತೆ ನಿಜವಾಗಿದೆ. ಬೌಲಿಂಗ್‌ ಮೂಲಕ ಮಿಂಚಿದ ಆರ್‌ಸಿಬಿ ತಂಡ ಐಪಿಎಲ್‌ ಎಂಟನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಎದುರು 10 ವಿಕೆಟ್‌ಗಳ ಗೆಲುವು ಪಡೆದಿದೆ.

ಆಸ್ಟ್ರೇಲಿಯಾದ ಬೌಲರ್‌ ಸ್ಟಾರ್ಕ್‌ ಗಾಯದ ಸಮಸ್ಯೆಯಿಂದ ಬಳಲಿದ್ದ ಕಾರಣ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು. ನಂತರ ಅವರು ಆಡಿದ ಮೂರು ಪಂದ್ಯಗಳಲ್ಲಿ ಆರ್‌ಸಿಬಿ ಎರಡರಲ್ಲಿ ಜಯ ಪಡೆದಿದೆ. ಈ ಎಲ್ಲಾ ಗೆಲುವುಗಳಿಗೆ ಎಡಗೈ ವೇಗಿ ಕಾರಣರಾಗಿದ್ದಾರೆ. ಇವರ ಚುರುಕಿನ ಬೌಲಿಂಗ್ ಬಲದಿಂದ ಆರ್‌ಸಿಬಿ ಭಾನುವಾರ ಮತ್ತೊಂದು ಗೆಲುವು ಪಡೆಯಿತು.

ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಕೊಹ್ಲಿ ಪ್ರತಿ ಬಾರಿಯಂತೆ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಹಿಂದಿನ ನಾಲ್ಕು ಪಂದ್ಯಗಳಲ್ಲಿ ಟಾಸ್‌ ಚಿಮ್ಮುವ ಲೆಕ್ಕಾಚಾರದಲ್ಲಿ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದ್ದರು. ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಕಾರಣ ಕೊಹ್ಲಿ ಟಾಸ್‌ ಗೆದ್ದ ಪ್ರತಿ ಪಂದ್ಯದಲ್ಲೂ ಫೀಲ್ಡಿಂಗ್ ಮಾಡಲು ಮುಂದಾಗುತ್ತಿದ್ದಾರೆ.

ಅವರ ಈ ತಂತ್ರಕ್ಕೆ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲೂ ಫಲ ಲಭಿಸಿತು. ಡೆಲ್ಲಿ ತಂಡ 18.2 ಓವರ್‌ಗಳಲ್ಲಿ 95 ರನ್‌ ಗಳಿಸಿ ಆಲೌಟ್‌ ಆಯಿತು. ಸುಲಭ ಗುರಿಯನ್ನು ವಿಜಯ್‌ ಮಲ್ಯ ಒಡೆತನದ ಬೆಂಗಳೂರು ತಂಡ ವಿಕೆಟ್‌ ನಷ್ಟವಿಲ್ಲದೇ 63 ಎಸೆತಗಳಲ್ಲಿ ಮುಟ್ಟಿತು!

ವೇಗಕ್ಕೆ ಕಂಗಾಲು: ತವರಿನ ಅಭಿಮಾನಿಗಳ ಎದುರು ಗೆಲುವಿನ ಆಸೆ ಹೊಂದಿದ್ದ ಡೇರ್‌ಡೆವಿಲ್ಸ್‌ ತಂಡಕ್ಕೆ ಭಾರಿ ಮುಖಭಂಗವಾಯಿತು. ಈ ಸಲದ ಐಪಿಎಲ್‌ನಲ್ಲಿ ಹೆಚ್ಚು ಹಣಕ್ಕೆ (₹16 ಕೋಟಿ) ಮಾರಾಟವಾಗಿರುವ ಯುವರಾಜ್‌ ಸಿಂಗ್ ವೈಫಲ್ಯ ಮುಂದುವರಿಯಿತು. ಈ ಪಂದ್ಯದಲ್ಲಿ ಅವರು ಗಳಿಸಿದ್ದು ಎರಡು ರನ್‌ ಮಾತ್ರ. ಡೆವಿಲ್ಸ್‌ ಪಡೆಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಕರ್ನಾಟಕದ ಮಯಂಕ್‌ ಅಗರವಾಲ್‌, ಶ್ರೇಯಸ್ ಅಯ್ಯರ್‌, ಡುಮಿನಿ, ಮ್ಯಾಥ್ಯೂಸ್‌ ಎಲ್ಲರೂ ಜಿದ್ದಿಗೆ ಬಿದ್ದಂತೆ ವಿಕೆಟ್‌ ಒಪ್ಪಿಸಿದರು.

ಮಹಾರಾಷ್ಟ್ರದ ಕೇದಾರ್‌ ಜಾಧವ್‌ 33 ರನ್‌ ಗಳಿಸಿದರು.  ಈ ತಂಡಕ್ಕೆ ಆರ್‌ಸಿಬಿಯ  ಬಲಿಷ್ಠ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಮೊದಲ ಓವರ್‌ನ ಐದನೇ ಎಸೆತದಲ್ಲಿ ಅಯ್ಯರ್‌ ವಿಕೆಟ್‌ ಪಡೆದ ಸ್ಟಾರ್ಕ್‌ ಆರಂಭಿಕ ಮೇಲುಗೈ ಒದಗಿಸಿದರು.  ಆರನೇ ಓವರ್‌ನಲ್ಲಿ ಡುಮಿನಿ ಪೆವಿಲಿಯನ್‌ ಸೇರಿದರು. ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ಕಾರಣ ಡೇರ್‌ಡೆವಿಲ್ಸ್‌ಗೆ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಡುಮಿನಿ ನಾಯಕತ್ವದ ತಂಡದ ಒಟ್ಟು ಮೊತ್ತ 67 ಆಗುವಷ್ಟರಲ್ಲಿ ಐದು ವಿಕೆಟ್‌ಗಳು ಪತನವಾಗಿದ್ದವು. ಕೊನೆಯ ಐದು ವಿಕೆಟ್‌ ಕಳೆದುಕೊಂಡಾಗ ತಂಡ ಗಳಿಸಿದ್ದು 28 ರನ್‌ ಮಾತ್ರ. ಇದಕ್ಕೆ ಕಾರಣವಾಗಿದ್ದು ಆರ್‌ಸಿಬಿ ವೇಗಿಗಳು. ಸ್ಟಾರ್ಕ್‌ ಮೂರು ವಿಕೆಟ್‌ಗಳನ್ನು ಉರುಳಿಸಿದರು. ನಾಲ್ಕು ಓವರ್‌ ಬೌಲಿಂಗ್‌ ಮಾಡಿದ ಈ ವೇಗಿ  20 ರನ್‌ಗಳನ್ನಷ್ಟೇ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿದರು. ವರುಣ್  ಆ್ಯರನ್ ಮತ್ತು ವೈಸಿ ತಲಾ ಎರಡು ವಿಕೆಟ್‌ ಕಬಳಿಸಿದರು. ವಿಶೇಷವೆಂದರೆ, ಒಟ್ಟು ಹತ್ತು ವಿಕೆಟ್‌ಗಳಲ್ಲಿ ಒಂಬತ್ತು ವಿಕೆಟ್‌ ವೇಗಿಗಳ ಪಾಲಾದವು.

ಗೇಲ್‌–ಕೊಹ್ಲಿ ಅಬ್ಬರ: ಡೇರ್‌ಡೆವಿಲ್ಸ್ ತಂಡವನ್ನು ನೂರು ರನ್‌ ಒಳಗೆ ಕಟ್ಟಿ ಹಾಕಿದ್ದರಿಂದ ಆರ್‌ಸಿಬಿ ತಂಡ ಇನಿಂಗ್ಸ್‌ ಆರಂಭಿಸುವ ಮುನ್ನವೇ ಗೆಲುವಿನ ಸಂಭ್ರಮದಲ್ಲಿತ್ತು. ಈ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ್ದು ಕ್ರಿಸ್‌ ಗೇಲ್‌ ಮತ್ತು ವಿರಾಟ್‌ ಕೊಹ್ಲಿ. ಈ ಆರಂಭಿಕ ಜೋಡಿ ಮುರಿಯದ ಜೊತೆಯಾಟದಲ್ಲಿ 99 ರನ್‌ ಕಲೆ ಹಾಕಿ ಗೆಲುವು ತಂದುಕೊಟ್ಟರು.

ಗೇಲ್‌ 62 ರನ್‌ ಬಾರಿಸಿದರು. 40 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ ಸಿಡಿಸಿದರು. ಕೊಹ್ಲಿ 23 ಎಸೆತಗಳಲ್ಲಿ 35 ರನ್‌ ಕಲೆ ಹಾಕಿ ಭರ್ಜರಿ ಮನರಂಜನೆ ನೀಡಿದರು. ಆರ್‌ಸಿಬಿ ಪಡೆದ ಮೂರನೇ ಗೆಲುವು ಇದಾಗಿದೆ. ಹಿಂದಿನ ಪಂದ್ಯಗಳಲ್ಲಿ ರಾಜಸ್ತಾನ ರಾಯಲ್ಸ್‌ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್ ಎದುರು ಗೆಲುವು ಸಾಧಿಸಿತ್ತು. ಡೇರ್‌ಡೆವಿಲ್ಸ್‌ ಏಳು ಪಂದ್ಯ ಆಡಿದ್ದು ನಾಲ್ಕರಲ್ಲಿ ಸೋಲು ಕಂಡಿದೆ.
*
ಮುಖ್ಯಾಂಶಗಳು
*ಆರ್‌ಸಿಬಿ ತಂಡಕ್ಕೆ ಲಭಿಸಿದ ಮೂರನೇ ಗೆಲುವು
*200ನೇ ಟ್ವೆಂಟಿ–20 ಪಂದ್ಯ ಆಡಿದ ಕ್ರಿಸ್‌ ಗೇಲ್‌
* ಡೆಲ್ಲಿ ಡೇರ್‌ಡೆವಿಲ್ಸ್‌ 100 ರನ್‌ ಒಳಗೆ ಆಲೌಟ್ ಆಗಿದ್ದು ಆರನೇ ಬಾರಿ
*
ಸ್ಕೋರ್‌ಕಾರ್ಡ್‌
ಡೆಲ್ಲಿ ಡೇರ್‌ಡೆವಿಲ್ಸ್‌ 95 (18.2 ಓವರ್‌)

ಮಯಂಕ್‌ ಅಗರವಾಲ್‌ ಸ್ಟಂಪ್ಡ್‌ ದಿನೇಶ್‌ ಕಾರ್ತಿಕ್‌ ಬಿ ಇಕ್ಬಾಲ್‌ ಅಬ್ದುಲ್ಲಾ    27
ಶ್ರೇಯಸ್‌ ಅಯ್ಯರ್‌ ಎಲ್‌ಬಿಡಬ್ಲ್ಯು ಬಿ ಮಿಷೆಲ್‌ ಸ್ಟಾರ್ಕ್‌  00
ಜೆಪಿ ಡುಮಿನಿ ಸಿ ದಿನೇಶ್‌ ಕಾರ್ತಿಕ್‌ ಬಿ ಡೇವಿಡ್‌ ವೈಸಿ  13
ಯುವರಾಜ್‌ ಸಿಂಗ್ ಸಿ ದಿನೇಶ್ ಕಾರ್ತಿಕ್‌ ಬಿ ವರುಣ್‌ ಆ್ಯರನ್‌  02
ಏಂಜೆಲೊ ಮ್ಯಾಥ್ಯೂಸ್‌ ಸಿ ಡಿವಿಲಿಯರ್ಸ್‌ ಬಿ ವರುಣ್‌ ಆ್ಯರನ್  00
ಕೇದಾರ್‌ ಜಾಧವ್‌ ಸಿ ಮಿಷೆಲ್‌ ಸ್ಟಾರ್ಕ್‌ ಬಿ ಹರ್ಷಲ್ ಪಟೇಲ್  33
ನಥಾನ್‌ ಕೌಲ್ಟರ್‌ ನೈಲ್‌ ಎಲ್‌ಬಿಡಬ್ಲ್ಯು ಬಿ ಡೇವಿಡ್‌ ವೈಸಿ  04
ಅಮಿತ್‌ ಮಿಶ್ರಾ ಬಿ ಮಿಷೆಲ್‌ ಸ್ಟಾರ್ಕ್‌  02
ಶಹಬಾಜ್‌ ನದೀಮ್‌ ಬಿ ಮಿಷೆಲ್‌ ಸ್ಟಾರ್ಕ್‌  02
ಇಮ್ರಾನ್‌ ತಾಹಿರ್‌ ಔಟಾಗದೆ  03
ಡಾಮ್ನಿಕ್ ಮುತ್ತುಸ್ವಾಮಿ ರನ್‌ಔಟ್‌ (ಡಿವಿಲಿಯರ್ಸ್‌)  01
ಇತರೆ: (ಲೆಗ್‌ ಬೈ–2, ವೈಡ್‌–6)  08

ವಿಕೆಟ್‌ ಪತನ: 1–2 (ಅಯ್ಯರ್‌; 0.5), 2–36  (ಡುಮಿನಿ; 5.2), 3–39 (ಯುವರಾಜ್‌; 6.2), 4–39 (ಮ್ಯಾಥ್ಯೂಸ್; 6.3), 5–67 (ಮಯಂಕ್‌; 12.1), 6–72 (ನಥಾನ್‌; 13.4), 7–85  (ಮಿಶ್ರಾ; 14.6), 8–90 (ನದೀಮ್‌; 16.3), 9–92  (ಜಾಧವ್‌; 17.3), 10–95 (ಮುತ್ತುಸ್ವಾಮಿ; 18.2).

ಬೌಲಿಂಗ್‌: ಮಿಷೆಲ್ ಸ್ಟಾರ್ಕ್‌ 4–0–20–3, ವರುಣ್‌ ಆ್ಯರನ್‌ 4–0–24–2, ಹರ್ಷಲ್‌ ಪಟೇಲ್ 3–0–14–1, ಡೇವಿಡ್‌ ವೈಸಿ 3.2–0–18–2, ಇಕ್ಬಾಲ್‌ ಅಬ್ದುಲ್ಲಾ 4–1–17–1.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿಕೆಟ್‌ ನಷ್ಟವಿಲ್ಲದೆ 99
(10.3 ಓವರ್‌)

ಕ್ರಿಸ್‌ ಗೇಲ್ ಔಟಾಗದೆ  62
ವಿರಾಟ್‌ ಕೊಹ್ಲಿ ಔಟಾಗದೆ  35
ಇತರೆ: (ವೈಡ್–2)  02

ಬೌಲಿಂಗ್‌: ನಥಾನ್‌ ಕೌಲ್ಟರ್‌ ನೈಲ್‌ 3.3–0–30–0, ಡಾಮ್ನಿಕ್ ಮುತ್ತುಸ್ವಾಮಿ 1–0–14–0, ಇಮ್ರಾನ್‌ ತಾಹಿರ್‌ 2–0–20–0, ಜೆಪಿ ಡುಮಿನಿ 1–0–7–0, ಅಮಿತ್‌ ಮಿಶ್ರಾ 2–0–25–0, ಏಂಜೆಲೊ ಮ್ಯಾಥ್ಯೂಸ್ 1–0–3–0.

ಫಲಿತಾಂಶ:  ಆರ್‌ಸಿಬಿಗೆ 10 ವಿಕೆಟ್‌ ಗೆಲುವು
ಪಂದ್ಯ ಶ್ರೇಷ್ಠ: ವರುಣ್ ಆ್ಯರನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT