ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಬಿ ಮುಂದೆ ಕಷ್ಟದ ಹಾದಿ

ಇಂದು ಸನ್‌ರೈಸರ್ಸ್‌ ವಿರುದ್ಧ ಪಂದ್ಯ, ಕೊಹ್ಲಿ ಪಡೆಗೆ ಬೌಲಿಂಗ್‌ ವೈಫಲ್ಯದ ಚಿಂತೆ
Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಆರಂಭಿಕ ಐದು ಲೀಗ್‌ ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆಲುವು ಪಡೆದು ಮೂರು ಪಂದ್ಯಗಳನ್ನು ಸೋತಿರುವ ಆರ್‌ಸಿಬಿ ತಂಡದ ಮುಂದೆ ಈಗ ಕಷ್ಟದ ಹಾದಿಯಿದೆ.

ವಿರಾಟ್‌ ಕೊಹ್ಲಿ ನಾಯಕತ್ವದ ಬೆಂಗಳೂರಿನ ತಂಡ ಲೀಗ್ ಹಂತದಲ್ಲಿ ಇನ್ನು ಒಂಬತ್ತು ಪಂದ್ಯಗಳನ್ನು ಆಡಬೇಕಿದೆ. ಉಳಿದ ಪಂದ್ಯಗಳಲ್ಲಿ ಗೆಲುವು ಪಡೆದರೆ ಮಾತ್ರ ನಾಕೌಟ್‌ ಪ್ರವೇಶದ ಹಾದಿ ಸುಗಮವಾಗಲಿದೆ. ಇಲ್ಲವಾದರೆ ಲೀಗ್ ಹಂತದಿಂದಲೇ ಹೊರಬೀಳಬೇಕಾಗುತ್ತದೆ. ಆದ್ದರಿಂದ ಶನಿವಾರ ನಡೆಯಲಿರುವ ಸನ್‌ರೈಸರ್ಸ್‌ ಹೈದರಾಬಾದ್ ಎದುರಿನ ಪಂದ್ಯದ ಮಹತ್ವ ಹೆಚ್ಚಿದೆ.

ಉಪ್ಪಳದಲ್ಲಿರುವ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ. ಹಿಂದಿನ ಟೂರ್ನಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸನ್‌ರೈಸರ್ಸ್‌ ಈ ಬಾರಿ ಗಮನಾರ್ಹ ಸಾಧನೆ ತೋರುತ್ತಿದೆ.  ಉಭಯ ತಂಡಗಳು ಇದೇ ಟೂರ್ನಿಯ ಮೊದಲ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಮುಖಾಮುಖಿಯಾಗಿದ್ದವು.  ಆಗ ಆರ್‌ಸಿಬಿ 45 ರನ್‌ಗಳ ಗೆಲುವು ಪಡೆದಿತ್ತು.

ಆರ್‌ಸಿಬಿ ಎಂದರೆ ಬ್ಯಾಟಿಂಗ್ ಶಕ್ತಿ: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ತಂಡ  ಟೂರ್ನಿಯ ಇತರೆ ತಂಡಗಳಿಗೆ ಹೋಲಿಸಿದರೆ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಕೊಹ್ಲಿ, ಎ.ಬಿ ಡಿವಿಲಿಯರ್ಸ್‌, ಶೇನ್ ವ್ಯಾಟ್ಸನ್‌, ಯುವ ಆಟಗಾರ ಸರ್ಫರಾಜ್‌ ಖಾನ್‌ ಉತ್ತಮ ಲಯದಲ್ಲಿದ್ದಾರೆ. ಆರಂಭದ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಕರ್ನಾಟಕದ ಕೆ.ಎಲ್‌. ರಾಹುಲ್ ಗುಜರಾತ್‌ ಲಯನ್ಸ್‌ ವಿರುದ್ಧ  ಅರ್ಧಶತಕ ಬಾರಿಸಿದ್ದರು.

ಅದರಲ್ಲೂ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್‌ ಕ್ರಿಕೆಟ್‌ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಒಂಬತ್ತನೇ ಆವೃತ್ತಿಯ ಮೊದಲ ಪಂದ್ಯದಿಂದ  ರನ್ ಹೊಳೆಯನ್ನೇ ಹರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಕೊಹ್ಲಿ ಹಿಂದಿನ ಹತ್ತು ಇನಿಂಗ್ಸ್‌ಗಳಿಂದ ಒಟ್ಟು 640 ರನ್ ಕಲೆ ಹಾಕಿದ್ದಾರೆ. 

ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕಗಳು ಸೇರಿವೆ. ಲಯನ್ಸ್ ಎದುರಿನ ಪಂದ್ಯದಲ್ಲಿ ಕೇವಲ 63 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಕೊಹ್ಲಿ ಅಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ. ದಕ್ಷಿಣ ಆಫ್ರಿಕಾದ ಡಿವಿಲಿಯರ್ಸ್ ಕೂಡ ಕೊಹ್ಲಿ ಆಟವನ್ನೂ ಮೀರಿಸುವಂತೆ ಬ್ಯಾಟ್ ಮಾಡುತ್ತಿದ್ದಾರೆ.

ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ 82 ರನ್ ಕಲೆ ಹಾಕಿದ್ದರು. ಡೆಲ್ಲಿ ಡೇರ್‌ಡೆವಿಲ್ಸ್ ಎದುರು 55 ಮತ್ತು ಸೂಪರ್‌ಜೈಂಟ್ಸ್ ಎದುರು 83 ರನ್‌ಗಳನ್ನು ಬಾರಿಸಿದ್ದರು.  ಆದ್ದರಿಂದ ಸನ್‌ರೈಸರ್ಸ್‌ ಬೌಲರ್‌ಗಳಲ್ಲಿ ಆತಂಕ ಶುರುವಾಗಿದೆ. ತವರಿಗೆ ತೆರಳಿದ್ದ ಕ್ರಿಸ್‌ ಗೇಲ್‌ ಮೂರು ದಿನಗಳ ಹಿಂದೆ ಮರಳಿದ್ದು ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಆಡಲಿದ್ದಾರೆ.

ಅಪ್ಪನಾದ ಖುಷಿಯಲ್ಲಿರುವ ಗೇಲ್‌ ಹಿಂದಿನ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸನ್‌ರೈಸರ್ಸ್‌ (1) ಮತ್ತು  ಡೆಲ್ಲಿ (0) ಎದುರಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದರು. ಆದರೆ ಅಭಿಮಾನಿಗಳು ಗೇಲ್‌ ಬ್ಯಾಟಿಂಗ್ ಅಬ್ಬರವನ್ನು ನೋಡಲು ಕಾಯುತ್ತಿದ್ದಾರೆ. ಮೊದಲ ಬಾರಿಗೆ ಆರ್‌ಸಿಬಿ ತಂಡದಲ್ಲಿ ಆಡುತ್ತಿರುವ ವ್ಯಾಟ್ಸನ್‌ ಇನ್ನು ಮಿಂಚಿಲ್ಲ. ಆದರೆ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಬೌಲಿಂಗ್ ವೈಫಲ್ಯ: ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದರೂ ಆರ್‌ಸಿಬಿ ತಂಡಕ್ಕೆ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ದುರ್ಬಲ ಬೌಲಿಂಗ್‌ ಇದಕ್ಕೆ ಕಾರಣ. ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರಿನ ತಂಡ 180 ರನ್ ಗಳಿಸಿಯೂ ಸೋತಿತ್ತು. ಯಜುವೇಂದ್ರ ಚಾಹಲ್‌, ಕೇನ್‌ ರಿಚರ್ಡ್‌ಸನ್‌, ಇಕ್ಬಾಲ್‌ ಅಬ್ದುಲ್ಲಾ, ವ್ಯಾಟ್ಸನ್‌ ಮತ್ತು ತಬ್ರಾಜ್‌ ಸಂಸಿ ಇದ್ದರೂ ಎದುರಾಳಿ ತಂಡವನ್ನು  ಬೇಗನೆ ಕಟ್ಟಿ ಹಾಕಲು ಸಾಧ್ಯವಾಗಿರಲಿಲ್ಲ.

ಮಿಷೆಲ್‌ ಸ್ಟಾರ್ಕ್‌ ಗಾಯಗೊಂಡಿರುವ ಕಾರಣ ಆರ್‌ಸಿಬಿ ಫ್ರಾಂಚೈಸ್‌ ಕ್ರಿಸ್‌ ಜೋರ್ಡಾನ್‌ಗೆ ಸ್ಥಾನ ಕೊಟ್ಟಿದೆ. ಇಂಗ್ಲೆಂಡ್‌ನ ಬಲಗೈ ವೇಗಿ ಎಂಟು ಟೆಸ್ಟ್‌ ಮತ್ತು 27 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 21 ಮತ್ತು ಏಕದಿನ ಮಾದರಿಯಲ್ಲಿ 40 ವಿಕೆಟ್‌ ಕಬಳಿಸಿದ್ದಾರೆ. ಆದ್ದರಿಂದ ಜೋರ್ಡಾನ್‌ ಬಂದಿರುವುದರಿಂದ ಆರ್‌ಸಿಬಿ ತಂಡದ ಬೌಲಿಂಗ್‌ ಚುರುಕಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಪುಟಿದೇಳುವ ಸವಾಲು: ಹಿಂದಿನ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಎದುರು ಸೋತಿದ್ದ ಸನ್‌ರೈಸರ್ಸ್ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. ಆರಂಭದ ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ಶಿಖರ್‌ ಧವನ್‌ ಹಿಂದಿನ ಮೂರು ಪಂದ್ಯಗಳಿಂದ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಲಯನ್ಸ್ ಮತ್ತು ಸೂಪರ್‌ಜೈಂಟ್ಸ್ ಎದುರು ಅರ್ಧಶತಕ ಬಾರಿಸಿದ್ದರು.

ಆದರೆ ನಾಯಕ ಡೇವಿಡ್‌ ವಾರ್ನರ್‌, ಆದಿತ್ಯ ತರೆ, ಎಯೊನ್‌ ಮಾರ್ಗನ್‌, ದೀಪಕ್‌ ಹೂಡಾ ಮತ್ತು ನಮನ್‌ ಓಜಾ ಅವರ ಕಳಪೆ ಬ್ಯಾಟಿಂಗ್‌ನಿಂದ ಪರದಾಡುತ್ತಿದೆ. ಬೌಲರ್‌ಗಳು ಕೂಡ ಚುರುಕಿನ ದಾಳಿ ನಡೆಸಲು ವಿಫಲರಾಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಬ್ಯಾಟಿಂಗ್ ಶಕ್ತಿ ಎನಿಸಿರುವ ಆರ್‌ಸಿಬಿ ಮುಂದೆ ಸನ್‌ರೈಸರ್ಸ್ ತಂಡದ ತಂತ್ರ ಏನಿರಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

* 640 ಹಿಂದಿನ ಹತ್ತು ಇನಿಂಗ್ಸ್‌ಗಳಲ್ಲಿ ಕೊಹ್ಲಿ ಗಳಿಸಿದ ರನ್‌
* 06 ಹತ್ತು ಇನಿಂಗ್ಸ್‌ಗಳಿಂದ ಕೊಹ್ಲಿ ಬಾರಿಸಿದ ಅರ್ಧಶತಕಗಳು
* 01 ಗೇಲ್‌ ಎರಡು ಪಂದ್ಯಗಳಿಂದ ಗಳಿಸಿದ ರನ್‌

ಐಪಿಎಲ್‌ನಲ್ಲಿ ಡಿವಿಲಿಯರ್ಸ್‌ ಸಾಧನೆ
* 109 ಪಂದ್ಯ
* 2839 ಒಟ್ಟು ರನ್‌
* 133* ಗರಿಷ್ಠ
* 37.85 ಸರಾಸರಿ
* 02 ಶತಕ
* 18 ಅರ್ಧಶತಕ
* 63 ಸಿಕ್ಸರ್‌
* 245 ಬೌಂಡರಿ

ಮುಖಾಮುಖಿ ಫಲಿತಾಂಶ
ಪಂದ್ಯ 7: 
4 ಆರ್‌ಸಿಬಿ ಜಯ, 3 ಸನ್‌ರೈಸರ್ಸ್‌ ಜಯ

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT