ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆ ಆಕಾಂಕ್ಷೆಗಳ ಕಡೆಗಣಿಸಿ...

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಅನೂಪ್‌ ರಾಜ್‌
ಪ್ರತಿಭೆ ಯಾರಪ್ಪನ ಮನೆಯ ಸ್ವತಲ್ಲ?  ಅದು ಯಾರಲ್ಲಿ, ಯಾವಾಗ ಅರಳಿ ಸಮಾಜಕ್ಕೆ ಬೆಳಕಾಗುವುದು ಎಂದು ಹೇಳಲಾಗುವುದಿಲ್ಲ. ಅನೂಪ್‌ ರಾಜ್‌ ಬಿಹಾರದ  ಕುಗ್ರಾಮವೊಂದರಲ್ಲಿ ಹುಟ್ಟಿದ ಯುವಕ. ಕಿತ್ತು ತಿನ್ನುವ ಬಡತನ, ಊಟ, ಬಟ್ಟೆ ಇಲ್ಲದ ದಿನಗಳನ್ನು ಕಳೆದದ್ದು ಭವಿಷ್ಯದಲ್ಲಿ ಬಡತನದಿಂದ ಪಾರಾಗುವ ವಿಶ್ವಾಸದಿಂದ. ಈ ಆತ್ಮವಿಶ್ವಾಸವೇ ಇಂದು ಅನೂಪ್‌ ರಾಜ್‌ ಅವರನ್ನು ಎತ್ತರಕ್ಕೆ ಬೆಳೆಸಿದೆ.

‘ತಾಯಿ ಮತ್ತು ಅಜ್ಜ, ಹೊಟ್ಟೆ ಬಟ್ಟೆ ಕಟ್ಟಿ ಉಳಿಸುತ್ತಿದ್ದ ಹಣದಲ್ಲಿ ನೋಟ್‌ ಪುಸ್ತಕ ಮತ್ತು ಪಠ್ಯಪುಸ್ತಕಗಳನ್ನು ಖರೀದಿ ಮಾಡಿ ಓದಿದ್ದಕ್ಕೂ ಸಾರ್ಥಕವಾಯಿತು’ ಎನ್ನುತ್ತಾರೆ ಅನೂಪ್‌.

ಹತ್ತನೇ ತರಗತಿ ಓದಿದ ಬಳಿಕ ಅನೂಪ್‌ ಗಯಾದಲ್ಲಿ ಪಿಯುಸಿಗೆ ಸೇರುತ್ತಾರೆ. ಮುಂದೆ ಎಂಜಿನಿಯರಿಂಗ್‌ ಪದವಿಗಾಗಿ ಅಂದಿನ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಳಿ ಹಣಕಾಸು ನೆರವು ಕೇಳುತ್ತಾರೆ. ಅಲ್ಲಿದ್ದ ಅಧಿಕಾರಿಯೊಬ್ಬರು ಸೂಪರ್‌ 30ರ ಅನಂದ್‌ ಕುಮಾರ್‌ ಅವರನ್ನು ಭೇಟಿ ಮಾಡುವಂತೆ ಸೂಚಿಸುತ್ತಾರೆ. ಮುಂದೆ ಆನಂದ್‌ ಕುಮಾರ್‌ ಅವರ ತಂಡ ಸೇರಿ ಉತ್ತಮ ತರಬೇತಿ ಪಡೆದು 2010ರಲ್ಲಿ ಜೆಇಇ ಪ್ರವೇಶ ಪರೀಕ್ಷೆಯಲ್ಲಿ 997 ರ್‍್ಯಾಂಕ್‌ನಲ್ಲಿ ಅನೂಪ್‌ ಉತ್ತೀರ್ಣರಾಗುತ್ತಾರೆ.

ಬಾಂಬೆ ಐಐಟಿಯಲ್ಲಿ ಕಷ್ಟಪಟ್ಟು ಎಂಜಿನಿಯರಿಂಗ್‌ ಪದವಿ ಪಡೆಯುತ್ತಾರೆ. ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೂ ಮುಂಬೈನ ರೈಲು ನಿಲ್ದಾಣಗಳಲ್ಲಿ ಮಲಗಿ ಕಾಲ ಕಳೆದಿದ್ದಾರೆ ಅನೂಪ್‌. ಕೆಲವೊಮ್ಮೆ ಊಟವಿಲ್ಲದೆ ಬರೀ ಟೀ ಕುಡಿದೇ ಜೀವನ ಸಾಗಿಸಿದ್ದೂ ಉಂಟು ಎಂದು ಕಂಬನಿ ಮಿಡಿಯುತ್ತಾರೆ.

‘ದೈನಂದಿನ ಕಷ್ಟಗಳನ್ನು ನುಂಗಿಕೊಂಡು ಓದಿನ ಕಡೆ ಹೆಚ್ಚು ಗಮನ ಕೊಟ್ಟಿದ್ದಕ್ಕೆ ಅತ್ತುತ್ತಮ ದರ್ಜೆಯಲ್ಲಿ ಉತ್ತೀರ್ಣನಾದೆ. ಹಾಗಾಗಿ ಕೆಲಸ ನನ್ನ ಮನೆ ಬಾಗಿಲಿಗೆ ಹುಡುಕಿಕೊಂಡು ಬಂತು’ ಎನ್ನುತ್ತಾರೆ. ಕ್ವಿಕ್ಕರ್‌.ಕಾಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅನೂಪ್‌ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಕಷ್ಟದಲ್ಲಿ ಓದಿದ ಅನೂಪ್‌ ನಿಜಕ್ಕೂ ಯುವಕರಿಗೆ ಮಾದರಿ.
­anuupraaj/facebook

ಕೃಷ್ಣಮೂರ್ತಿ

ಚೆನ್ನೈನ ವಿಪ್ರೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು ಅವು. ಕಚೇರಿಯಲ್ಲಿ ಕೆಲಸ ಮಾಡುವಾಗ ಕಿವಿಯಲ್ಲಿ ಸದಾ ಗುಯ್‌ಗುಡುವ ಸದ್ದು. ಅದು ಎ.ಸಿ ಸದ್ದು ಎಂದು ಕೃಷ್ಣಮೂರ್ತಿಗೆ ಗೊತ್ತಿದ್ದರೂ ಅವರಿಗೆ ಅದು ಜೇನು ನೋಣಗಳ ಸದ್ದಿನಂತೆ ಭಾಸವಾಗುತ್ತಿತ್ತು!

ಅಂತಿಮವಾಗಿ ಆ ಸದ್ದು ಅವರನ್ನು ಯಶಸ್ವಿ ಜೇನು ಉದ್ಯಮಿಯನ್ನಾಗಿ ರೂಪಿಸಿದ್ದು ವಿಶೇಷ. ಕೃಷ್ಣಮೂರ್ತಿ ತಮಿಳುನಾಡಿನ ಕರೂರು ಜಿಲ್ಲೆಯವರು. ಹುಟ್ಟಿದ್ದು ಸಣ್ಣ ಹಳ್ಳಿಯಲ್ಲಿ. ಅಪ್ಪ ರೈತ. ಮಗನನ್ನು ಚೆನ್ನಾಗಿ ಓದಿಸಬೇಕು ಎಂಬ ಹಂಬಲ ಅವರಲ್ಲಿತ್ತು. ಹಾಗಾಗಿ ಕೃಷ್ಣ ಮೂರ್ತಿಯನ್ನು ವಸತಿ ಶಾಲೆಗಳಲ್ಲಿ ಓದಿಸಿದರು. ಸಾಫ್ಟ್‌ವೇರ್‌ ಎಂಜಿನಿಯರಿಂಗ್‌  ಪದವಿ ಪಡೆದ ಕೃಷ್ಣಮೂರ್ತಿಗೆ ವಿಪ್ರೋದಲ್ಲಿ ಕೆಲಸ ಸಿಕ್ಕಿತ್ತು. ಚೆನ್ನೈ ಕ್ಯಾಂಪಸ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದರು. ಕಂಪೆನಿಯಿಂದ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತು. ಅದನ್ನು ತಿರಸ್ಕರಿಸಿದರು. ಕೊನೆಗೆ ಕೆಲಸಕ್ಕೂ ರಾಜೀನಾಮೆ ನೀಡಿದರು!

ಜಾಗತಿಕ ಹಣಕಾಸು ಹಿಂಜರಿತದ ಪರಿಣಾಮ ಕೆಲಸದಿಂದ ತೆಗೆದು ಹಾಕಿದರು ಎಂದು ಮನೆಯಲ್ಲಿ ಸುಳ್ಳು ಹೇಳಿದರು. ಸ್ಥಳೀಯ ಬ್ಯಾಂಕ್‌ನಲ್ಲಿ ಕೆಲಸ ಮಾಡುವಂತೆ ಕೃಷ್ಣಮೂರ್ತಿ ತಂದೆ ಸಲಹೆ ಕೊಟ್ಟರು. ಅದನ್ನೂ ತಿರಸ್ಕರಿಸಿ, ಕೊಯಮತ್ತೂರಿಗೆ ಬಂದು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರು.  ಅಲ್ಲಿ ಒಂದು ಲಕ್ಷ ರೂಪಾಯಿ ನಷ್ಟವಾಯಿತು.

ಈ ಸೋಲಿನ ನಂತರ ತೋಟದಲ್ಲಿ ಜೇನುಕೃಷಿ ಮಾಡುವ ಬಗ್ಗೆ ಆಲೋಚಿಸಿದರು. ಈ ಬಗ್ಗೆ ವೈಜ್ಞಾನಿಕವಾಗಿ ತರಬೇತಿ ಪಡೆದರು. ಗೆಳೆಯರ ಬಳಿ 3 ಲಕ್ಷ ರೂಪಾಯಿ ಸಾಲ ಮಾಡಿ ಜೇನು ಸಾಕಾಣಿಕೆ ಆರಂಭಿಸಿದರು. ರಾಣಿ ಜೇನು ಅವರ ಕೈಹಿಡಿಯಿತು. ಇಂದು ಪ್ರತಿ ತಿಂಗಳು 5 ಕ್ವಿಂಟಾಲ್‌ ಜೇನು ತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಉದ್ಯಮವನ್ನು ವಿಸ್ತರಿಸಿ ವಿದೇಶಗಳಿಗೂ ತುಪ್ಪವನ್ನು ರಫ್ತು ಮಾಡುವ ಕನಸು ಕೃಷ್ಣಮೂರ್ತಿ ಅವರದ್ದು.

ಕಂಡ ಕನಸನ್ನು ನನಸು ಮಾಡಿಕೊಂಡ ಕೃಷ್ಣಮೂರ್ತಿ ಅವರ ಸಾಧನೆ ಅನನ್ಯವಾದುದು. honeykart/Facebook


ಅಂಕಿತ್‌ ಫಾಡಿಯಾ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆಯಾದ ‘ಡಿಜಿಟಲ್‌ ಇಂಡಿಯಾ’ ಕಾರ್ಯಕ್ರಮಕ್ಕೆ ಯುವ ‘ಎಥಿಕಲ್‌ ಹ್ಯಾಕರ್‌’ ಅಂಕಿತ್‌ ಫಾಡಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಚಿಕ್ಕ ವಯಸ್ಸಿಗೆ ಇಡೀ ವಿಶ್ವವೇ ಗುರುತಿಸಬಹುದಾದ ವಿಕ್ರಮಕ್ಕೆ ಅಂಕಿತ್‌  ಸಾಕ್ಷಿಯಾಗಿದ್ದಾರೆ. ಇದರ ಹಿಂದೆ ಅವರ ಓದು ಮತ್ತು ಪರಿಶ್ರಮ ಸಾಕಷ್ಟಿದೆ.
ಅಂಕಿತ್‌ ಮೂಲತಃ ದೆಹಲಿಯವರು. ಕಂಪ್ಯೂಟರ್‌ ಹ್ಯಾಕಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಭಾರತದ ಯಾವುದೋ ಮೂಲೆಯಲ್ಲಿ ಕುಳಿತು ಅಮೆರಿಕದ ಶ್ವೇತಭವನದಲ್ಲಿರುವ ಕಂಪ್ಯೂಟರ್‌ಗಳಿಂದ ಮಾಹಿತಿಯನ್ನು ಸುಲಭವಾಗಿ ಹೆಕ್ಕಿ ತೆಗೆಯಬಹುದಾದ ಚಾಕಚಕ್ಯತೆ ಅಂಕಿತ್‌ಗೆ ಸಿದ್ಧಿಸಿದೆ.

ಅವರು ಹ್ಯಾಕಿಂಗ್‌ ವೃತ್ತಿಯನ್ನು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ. ಬದಲಿಗೆ ಅಪರಾಧಿಗಳ ಪತ್ತೆಗಾಗಿ ಹ್ಯಾಕಿಂಗ್‌ ಮಾಡುತ್ತಿದ್ದಾರೆ. ಪ್ರಸ್ತುತ ಭಾರತದ ಗುಪ್ತಚರ ಇಲಾಖೆಯಲ್ಲಿ ಅಂಕಿತ್‌ ಕೆಲಸ ಮಾಡುತ್ತಿದ್ದಾರೆ.

ಹ್ಯಾಕಿಂಗ್‌ ಕುರಿತಂತೆ ಅಂಕಿತ್‌ 13ನೇ ವಯಸ್ಸಿಗೆ ಬರೆದ ‘The Unofficial Guide to Ethical Hacking’ ಪುಸ್ತಕ ವಿಶ್ವದಲ್ಲೇ ಭಾರೀ ಜನಪ್ರಿಯಗೊಂಡಿದೆ. ಈ ಪುಸ್ತಕದ 75 ಲಕ್ಷ ಪ್ರತಿಗಳು ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರಾಟವಾಗಿರುವುದು ವಿಶೇಷ. ಅಂಕಿತ್‌ ಇಲ್ಲಿಯವರೆಗೂ ಒಟ್ಟು ಹದಿನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಈ ಎಲ್ಲಾ ಪುಸ್ತಕಗಳು ಹ್ಯಾಕಿಂಗ್‌ಗೆ ಸಂಬಂಧಿಸಿದ ಪುಸ್ತಕಗಳಾಗಿವೆ. ಸದ್ಯ ‘How to hack into Windows Vista and Windows 7’ ಎಂಬ ಪುಸ್ತಕ ಬರೆಯುವ ಸಿದ್ಧತೆಯಲ್ಲಿದ್ದಾರೆ.

ಇದೀಗ ಡಿಜಿಟಲ್‌ ಇಂಡಿಯಾಗೆ ರಾಯಭಾರಿಯಾಗಿ ನೇಮಕಗೊಂಡಿರುವುದು ಖುಷಿ ತಂದಿದೆ ಎನ್ನುವ ಅಂಕಿತ್‌ ಸೈಬರ್‌ ಅಪರಾಧ ವಿಭಾಗದಲ್ಲಿ ಹೆಚ್ಚು ಕೆಲಸ ಮಾಡಬೇಕಿದೆ ಎನ್ನುತ್ತಾರೆ. ‘ಓದು ಮತ್ತು ಕಠಿಣ ಪರಿಶ್ರಮ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಈ ಎರಡು ಅಂಶಗಳೇ ನನ್ನ ಯಶಸ್ಸಿನ ಸೂತ್ರಗಳು’ ಎನ್ನುತ್ತಾರೆ ಅಂಕಿತ್‌. ankitfadia/facebook

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT