ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಅಗಿಯಿರಿ ಆರೋಗ್ಯ ಪಡೆಯಿರಿ

Last Updated 21 ಜುಲೈ 2015, 19:51 IST
ಅಕ್ಷರ ಗಾತ್ರ

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸತ್ವಯುತ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಆಹಾರ ಸೇವನೆಯ ವಿಧಾನ ಕೂಡಾ ಹೌದು. ಆದರೆ ಆಧುನೀಕರಣದ ಭರಾಟೆಯಲ್ಲಿ ಎಲ್ಲ ರಂಗಗಳಲ್ಲೂ ಬದಲಾವಣೆ ಆಗುತ್ತಿರುವ ಹಾಗೇ ಈಗ ಬೇಗ ಬೇಗನೇ ಊಟ ಮಾಡುವುದೂ ಒಂದು ಪ್ಯಾಷನ್ ಆಗಿ ಮಾರ್ಪಾಟಾಗಿ ಬಿಟ್ಟಿದೆ. ಈ ಅಭ್ಯಾಸಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವೂ ಬೆಳೆದು ನಿಂತಿದೆ. ಹೊಟ್ಟೆ ಹಸಿವಾದ ತಕ್ಷಣ ಹಸಿವನ್ನು ಇಂಗಿಸುವ ಸಿದ್ಧ ಆಹಾರಗಳು ಎಗ್ಗಿಲ್ಲದೇ ಎಲ್ಲಡೆ ಧಾರಾಳವಾಗಿ ಸಿಗುತ್ತಿವೆ.

ಶಾಲಾ  ಕಾಲೇಜುಗಳಿಗೆ  ತಡವಾಯಿತೆಂದು ಗಬಗಬನೆ ಎರಡೇ ನಿಮಿಷದಲ್ಲಿ ಬ್ರೇಕ್‌ಫಾಸ್ಟ್, ಲಂಚ್ ಮುಗಿಸುವ ವಿದ್ಯಾರ್ಥಿಗಳು, ಕಚೇರಿಗಳ ನಿತ್ಯ ಕರ್ತವ್ಯಕ್ಕೆ ಹಾಜರಾಗಬೇಕಾದ ಮಹಿಳೆಯರು, ಪುರುಷರು ಲಗುಬಗನೆ ತಿಂದು ಹೊಗುವವರು ಒಂದೆಡೆಯಾದರೆ ಸಾಕಷ್ಟು  ಪುರುಸೊತ್ತಿದ್ದರೂ ಟಿ.ವಿ ನೋಡುತ್ತಾ ಇಲ್ಲವೇ ವೃತ್ತಪತ್ರಿಕೆ ಓದುತ್ತಾ, ವ್ಯಾಟ್ಸ್‌ಅಪ್, ಫೇಸ್‌ಬುಕ್ ನೋಡುತ್ತಾ ಬಾಯಿ ಆಹಾರ ವನ್ನು ತುರುಕಲು ಇರುವ ಮಾರ್ಗವಷ್ಟೇ ಎಂದುಕೊಂಡು ಗಪಗಪನೇ ತುರುಕುವ ಮಂದಿ ಇನ್ನೊಂದೆಡೆ. ಇದರಿಂದಲೆ ಹಲವು ರೀತಿಯ ಜೀರ್ಣ ಸಮಸ್ಯೆಗಳಿಂದ ಬಳಲಿ ನಂತರ ಆಸ್ಪತ್ರೆ, ಡಾಕ್ಟರುಗಳ ಮೊರೆ ಹೋಗಿ ಹಣ ತೆತ್ತು ಆರೋಗ್ಯ ಸುಧಾರಿಸಿಕೊಳ್ಳತ್ತಿರುವವರೇ ಹೆಚ್ಚು. ಕೇವಲ ಆಹಾರ ಅಗಿಯುವಿಕೆ ನಮ್ಮ ಆರೋಗ್ಯವನ್ನು ಹೇಗೆ ಉತ್ತಮಪಡಿಸುವದೆಂದು ನೋಡೋಣ.

ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ.

ಚೆನ್ನಾಗಿ ಅಗಿಯುವುದರಿಂದ ಆಗುವ ಪ್ರಯೋಜನಗಳೇನು?
ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ  ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿ ಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ.

ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ ಬೇಕು. ಆದರೆ ಚೆನ್ನಾಗಿ ಅಗಿದು ತಿನ್ನುವುದರಿಂದ ಮೆದುಳಿಗೆ ಬೇಗನೇ ಹೆಚ್ಚು ಸಂದೇಶಗಳು ರವಾನೆಯಾಗಿ ಕಡಿಮೆ ತಿನ್ನುವ ಹಾಗೆ ಪ್ರಚೋದನೆಯಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿಂದಾಗ ಮಾಮೂಲಿ ಸೇವನೆಗಿಂತ ಶೇಕಡಾ 10 ರಷ್ಟು ಕಡಿಮೆ ಆಹಾರ ಸೇವನೆ ಬೇಕಾಗುವುದು ಸಾಬೀತಾಗಿದೆ. ಆದ್ದರಿಂದ ಅನವಶ್ಯಕ ಆಹಾರ ಸೇವನೆಯಿಂದ ಆಹಾರ ಉಳಿತಾಯದ ಜೊತೆಗೆ ಅತಿ ಆಹಾರ ಸೇವನೆಯಿಂದ ಉಂಟಾಗುವ ಬೊಜ್ಜು, ಸಿಹಿಮೂತ್ರ ರೋಗ ಇನ್ನಿತರ ಅನೇಕ ರೋಗಗಳು ಬರದಂತೆ ತಡೆಯುತ್ತವೆ.

ಆಹಾರವು ಚೆನ್ನಾಗಿ ಅಗಿಯುವುದರಿಂದ ಲಾಲಾರಸದೊಡನೆ ಹೆಚ್ಚೆಚ್ಚು ಬೆರೆತು ನಂತರ ಅನ್ನನಾಳದಲ್ಲಿ ಚಲಿಸುವ ಕ್ರಿಯೆ ಸುಲಭವಾಗುತ್ತದೆ. ಆಹಾರ ನುಣ್ಣಗೂಆಗಿ ಜೀರ್ಣಕ್ರಿಯೆ ಉತ್ತೇಜನೆಗೊಂಡು ಹೊಟ್ಟೆ ಕರಳುಗಳು ಹಾಗೂ  ಇತರ ಅಂಗಗಳ ಮೇಲೂ ಪರಿಣಾಮ ಬೀರಿ ಸಹಜ ಸುಲಲಿತ ಜೀರ್ಣ ಕ್ರಿಯೆಯನ್ನುಂಟು ಮಾಡುತ್ತದೆ. ದೈಹಿಕ, ಮಾನಸಿಕ ಉಲ್ಲಾಸವನ್ನು ನೀಡುತ್ತದೆ. ಸಣ್ಣ ಕರುಳಿನಿಂದ ಪೋಷಕಾಂಶಗಳು ಹೀರುವಿಕೆಯೂ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯೆ ಸುಲಭ, ಸರಳವಾದಾಗ ಶಕ್ತಿಯ ವ್ಯಯ ಕಡಿಮೆಯಾಗಿ ಶಕ್ತಿ ಉಳಿತಾಯವಾಗುತ್ತದೆ.

* ಹಲ್ಲು ಮತ್ತು ಒಸಡುಗಳು ಆಹಾರ ಚೆನ್ನಾಗಿ ಅಗಿಯುದರಿಂದ ಗಟ್ಟಿಯಾಗುತ್ತವೆ ಮತ್ತು ಅಗಿಯುವುದರಿಂದ ಲಾಲರಸವು (ಸಲೈವಾ) ಹೆಚ್ಚು ಉತ್ಪತ್ತಿಯಾಗಿ ಅದರಲ್ಲಿರುವ ಲೈಸೋಜೈಮ್ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ಅದರಲ್ಲಿರುವ ನೈಟ್ರಿಕ್ ಆಕ್ಸೈಡ್ ಕೂಡ ಆಂಟಿಸೆಪ್ಟಿಕ್ ಗುಣವನ್ನು ಹೊಂದಿದ್ದು ಇವೆಲ್ಲವೂ ದಂತಕ್ಷಯ  ಹಾಗೂ ದಂತಕುಳಿಗಳಿಂದ ರಕ್ಷಣೆ ನೀಡಿ ಅಗಿಯುವುದರಿಂದ ಉತ್ತಮ ದಂತಾರೋಗ್ಯ ನಮ್ಮದಾಗುತ್ತದೆ. ಅದಕ್ಕೆ ಮ್ಯಾಕ್ ಫಾಡಲ್ ಹೇಳಿದ್ದು ‘ನೀವು ನಿಮ್ಮ  ಆಹಾರವನ್ನು ಅಗಿಯಿರಿ ನಿಮ್ಮ ಹೊಟ್ಟೆಯೊಳಗೆ ಹಲ್ಲಿಲ್ಲ’ ಎಂದು ( Chew your food, your stomach has no teeth).

* ಆಹಾರ ಅಗಿಯದೇ ಇದ್ದರೆ ದೊಡ್ಡ ತುಣುಕುಗಳನ್ನು ನುಂಗಿದಾಗ ದೊಡ್ಡ ಕರುಳಿನಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳ ಹೆಚ್ಚಿದ ಚಟುವಟಿಕೆಯಿಂದ ಅಜೀರ್ಣ, ಗ್ಯಾಸ್ ಸಮಸ್ಯೆ, ಹೊಟ್ಟೆಯುಬ್ಬರ, ಬೇಧಿ, ಹೊಟ್ಟೆನೋವು, ಮಲಬದ್ಧತೆ ಮುಂತಾದ ಸಮಸೈಗಳು  ಹೆಚ್ಚಾಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

* ಆಹಾರವನ್ನು ನಿಧಾನವಾಗಿ ಅಗಿಯುವುದರಿಂದ ಹಂತ ಹಂತವಾಗಿ ಅನುಭವಿಸಿ ಸವಿಯನ್ನು ಸವಿಯಬಹುದು. ಅದನ್ನೇ ಮ್ಯಾಕ್ ಮಿಕಲ್ ಎನ್ನುವವರು ಹೇಳಿದ್ದು ‘ನಿಮ್ಮ ಆಹಾರವನ್ನು ಸವಿಯಿರಿ ಹೊಟ್ಟೆಯಲ್ಲಿ ರುಚಿಯ ಮೊಗ್ಗುಗಳಿಲ’ ‘Taste your food, your stomach has no taste buds’.

* ಇಂದು ಆಹಾರದ ಕಲಬೆರೆಕೆ ಎಲ್ಲೆಡೆ ಹೆಚ್ಚಿರುವುದರಿಂದ ಕಲಬೆರೆಕೆಯ ವಿಷವನ್ನು ಚೆನ್ನಾಗಿ ಅಗಿಯುವುದರಿಂದ ಗುರುತಿಸಬಹುದು.

* ಆಹಾರ ಜೀರ್ಣಕ್ರಿಯೆಗೆ ಅತ್ಯಗತ್ಯವಾದ ನೀರಿನ ಪ್ರಮಾಣವನ್ನು ಚೆನ್ನಾಗಿ ಅಗಿಯುವುದರ ಮೂಲಕ ಕಾಯ್ದುಕೊಳ್ಳಬಹುದು.

* ಅಗಿಯುವಿಕೆಯಿಂದ ಲಾಲಾರಸ ಹೆಚ್ಚುವುದರ ಜೊತೆಗೆ   ಪ್ಯಾರೋಟಿಡ್ ಗ್ರಂಥಿಗಳಿಂದ ಉತ್ಪಾದನೆ ಯಾಗುವ ಪ್ಯಾರೋಟಿನ್ ಹಾರ್ಮೊನುಗಳ ಸ್ವಲ್ಪ ಭಾಗ ಬಾಯಿ ಮೂಲಕ ಲಿಂಪ್ ಸೆಲ್ಸ್‌ನಿಂದ ಹೀರಲ್ಪಟ್ಟು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ಶರೀರವನ್ನು ಚೈತನ್ಯ ಶೀಲವಾಗಿ ಮಾಡುತ್ತದೆ. ಹೀಗೆ ವಯಸ್ಕರೂ ಅಗಿಯುವುದರಿಂದ ಯುವ ಚೈತನ್ಯ ಪಡೆಯಬಹುದು .ಅಲ್ಲದೆ ಸೊಂಕು ತಡೆಗಟ್ಟುವ ಬಿಳಿರಕ್ತಕಣಗಳು (ಟಿ-ಸೆಲ್ಸ್) ಹೆಚ್ಚಾಗುತ್ತದೆ. ಅಗಿಯುವುದರಿಂದ ಶರೀರ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿರುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಂಡು ಆಟೋಇಮ್ಯುನ್ ಕಾಯಿಲೆ ಬರುವುದು  ಕಡಿಮೆ ಆಗುತ್ತವೆ.

ಅಗಿಯುವುದು ಹೇಗೆ?
ಆಹಾರ ಅಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದಾಗ ಹೇಗೆ ಅಗಿಯುವುದೆಂದು ತಿಳಿಯಲೇಬೇಕಾಗಿದೆ.
* ಆಹಾರವನ್ನು ಒಮ್ಮೆಲೇ ಬಾಯಿಗೆ ತುರುಕಬೇಡಿ
* ಸಣ್ಣ ಸಣ್ಣ ತಂಡುಗಳಿಂದ ಪ್ರಾರಂಭಿಸಿ ನಂತರ ನಿಧಾನವಾಗಿ ಅಗಿದು ಅಗಿದು ತಿನ್ನಿರಿ
* ಮೆತ್ತಗಿನ ಆಹಾರವನ್ನು ಹಣ್ಣು ತರಕಾರಿಗಳನ್ನು 8 ರಿಂದ 10 ಬಾರಿ ಅಗೆಯಬೇಕು.
* ಗಟ್ಟಿ ಆಹಾರವಾದರೆ 25ರಿಂದ 30 ಬಾರಿ ಅಗಿಯಿರಿ.
* ನಿಧಾನವಾಗಿ ಅಗಿದು ಆಹಾರವನ್ನು ನೀರನ್ನಾಗಿ ಮಾಡಿ. ನಿಧಾನವಾಗಿ ನುಂಗಿ ಚೆನ್ನಾಗಿ ಅಗಿದು ನುಂಗಿದ ಮೇಲೆ ಇನ್ನೊಂದು ತುಂಡು ಆಹಾರವನ್ನು  ಸೇವಿಸಿ. ಇಡೀ ಜೀರ್ಣಾಂಗವ್ಯೂಹದ ಕ್ರಿಯೆ ಸುಲಿಲಿತವಾಗಿ ನಡೆದು ಹೋಗುವುದು. ಅದಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಯೂ ‘ಘನಾಹಾರವನ್ನು ಕುಡಿಯಿರಿ, ದ್ರವಾಹಾರವನ್ನು ತಿನ್ನಿರಿ’ (drink the solid and eat the liquid) ಎಂದು ಹೇಳಿದ ಹರ್ಬರ್ಟ್ ಫಿಲ್ಟನ್‌ನ ಮಾತನ್ನು ಸಮರ್ಥಿಸಿರುವುದು.
* ಹೀಗೆ ಅಗಿದು ಅಗಿದು ತಿಂದಾಗ ಶೇಕಡಾ 75ರಷ್ಟು ಜೀರ್ಣಕ್ರಿಯೆಯ ತೊಂದರೆಗಳು ಕಡಿಮೆಯಾಗುತ್ತದೆ.
* ಹೀಗೆ ಕನಿಷ್ಟ ಊಟ ತಿಂಡಿಗೆ 20–25 ನಿಮಿಷಗಳನ್ನಾದರೂ ಅಗಿಯಲು ವ್ಯಯ ಮಾಡಿದರೆ ಜೊತೆಗೆ ಟಿ.ವಿ ನೋಡುತ್ತಾ, ವೃತ್ತ ಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಾ, ನಡೆದಾಡುತ್ತಾ ತಿನ್ನದೇ, ತಿನ್ನುವ ಆಹಾರದ ಮೇಲೆ  ಗಮನವಿಟ್ಟು, ನುಣ್ಣಗೆ ಅಗಿದು ನುಂಗಿದರೆ ನೀವು ಸಂಪೂರ್ಣ ಆರೋಗ್ಯವಾಗಿ, ಆನಂದಮಯವಾಗಿ ಇರಬಹುದಲ್ಲವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT