ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಷನ್ ಲಕ್ಷ್ಮಣ

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

‘ಲಕ್ಷ್ಮಣ’ ಚಿತ್ರದ ಮೂಲಕ ನಟ ಅನೂಪ್ ಆ್ಯಕ್ಷನ್ ಸ್ಟಾರ್ ಹೆಸರು ತೊಟ್ಟಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ, ಅನೂಪ್ ಹುಟ್ಟುಹಬ್ಬ ಮತ್ತು ಅನೂಪ್ ಅಭಿಮಾನಿಗಳ ಸಂಘದ ಉದ್ಘಾಟನೆಗೆ ಒಂದೇ ವೇದಿಕೆ ಸಾಕ್ಷಿಯಾಯಿತು. ವೇದಿಕೆಯಲ್ಲಿದ್ದವರು ಅನೂಪ್‌ಗೆ ಜನ್ಮದಿನದ ಶುಭಕೋರುವ ಜತೆಗೆ ಅವರ ನಟನೆಯನ್ನು ಪ್ರಶಂಸಿಸಿದರು.

‘ನಟನಾಗಬೇಕು ಎನ್ನುವುದು ನನ್ನ ಕನಸು. ಇದಕ್ಕೆ ಅಪ್ಪ, ಅಮ್ಮ ಬೆಂಬಲವಾದರು. ಎಲ್ಲವನ್ನು ಕಲಿತು ತೆರೆಗೆ ಬಾ ಎಂದು ಪ್ರೋತ್ಸಾಹಿಸಿದರು. ಮೊದಲ ಶಾಟ್‌ನಲ್ಲಿ ಭಯ ಆಗುತ್ತದೆ ಎಂದು ನಿರ್ದೇಶಕ ಚಂದ್ರು ಹೆಲ್ಮೆಟ್ ಹಾಕಿಸಿ ಎರಡು ದಿನ ಚಿತ್ರೀಕರಣ ನಡೆಸಿದರು. ಈ ದೃಶ್ಯಗಳು ಚಿತ್ರದಲ್ಲಿ ಇದ್ದವು’ ಎಂದು ಮೊದಲ ಚಿತ್ರದ ಖುಷಿ ಬಗ್ಗೆ ಹೇಳಿದರು ಅನೂಪ್.

ಆರ್. ಚಂದ್ರು, ‘ಅನೂಪ್‌ಗೆ, ಅಭಿಮಾನಿಗಳು ಆ್ಯಕ್ಷನ್ ಸ್ಟಾರ್ ಬಿರುದುಕೊಟ್ಟಿದ್ದಾರೆ. ಅವರು ಮುಂದಿನ ಚಿತ್ರಗಳಲ್ಲೂ ಇದನ್ನು ಉಳಿಸಿಕೊಳ್ಳುವರು’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಅನೂಪ್‌ನ ನಟನೆಯ ಬದ್ಧತೆ ಮತ್ತು ಎಚ್‌.ಎಂ. ರೇವಣ್ಣ ಅವರೊಂದಿಗಿನ ಸಂಬಂಧ ಚಂದ್ರು ಮಾತಿನಲ್ಲಿ ಕೇಂದ್ರೀಕರಣಗೊಂಡಿದ್ದವು.

ಟ್ರೇಲರ್‌ನಲ್ಲಿ ಮಗನ ಆಕ್ಷನ್‌ ನೋಡಿ ಕೊಂಡಾಡಿದರು ವತ್ಸಲಾ ರೇವಣ್ಣ.  ಮಗನ ಈ ಸಾಧನೆಗೆ ಕಾರಣ ಪತ್ನಿ ಎಂದು ವತ್ಸಲಾ ಅವರಿಗೆ ಕ್ರೆಡಿಟ್ ಕೊಟ್ಟರು ರೇವಣ್ಣ. ‘ನಾನು ರಾಜಕಾರಣದ ಒತ್ತಡದಲ್ಲಿದ್ದೆ. ನನ್ನ ಹೆಂಡತಿ ಮಗನ ಬೇಕು ಬೇಡಗಳನ್ನು ನಿರ್ವಹಿಸಿದಳು. ಚೀನಾದಲ್ಲಿ ಕುಂಗ್‌ಫು ಕಲಿಕೆ, ನಟನೆ, ನೃತ್ಯ ಕಲಿಕೆಗೆ ಚೆನ್ನೈ, ಹೈದರಾಬಾದ್‌ಗೆ ತೆರಳಲು ಆಕೆಯೇ ಕಾರಣ’ ಎಂದರು ರೇವಣ್ಣ.

‘ಲಕ್ಷ್ಮಣ’ನ ಪೂರ್ಣ ಜವಾಬ್ದಾರಿಯನ್ನು ಚಂದ್ರು ಅವರಿಗೆ ವಹಿಸಿದ್ದಾಗಿ ಹೇಳಿದ ರೇವಣ್ಣ, ಈಗಾಗಲೇ ಇಂದ್ರಜಿತ್ ಲಂಕೇಶ್ ಸೇರಿದಂತೆ ಕೆಲವು ನಿರ್ದೇಶಕರು ಮಗನಿಗೆ ಚಿತ್ರ ಮಾಡಲು ಮುಂದೆ ಬಂದಿರುವುದಾಗಿ ಮಾಹಿತಿ ನೀಡಿದರು. ಮುಹೂರ್ತ ಸಮಾರಂಭವನ್ನು ಟೀವಿಯಲ್ಲಿ ನೋಡಿದ್ದ ನಾಯಕಿ ಮೇಘನಾ ರಾಜ್‌, ಅನೂಪ್‌ನೊಳಗೆ ನಟನೆಯ ಸ್ಪಾರ್ಕ್ ಎದ್ದು ಕಾಣುತ್ತದೆ ಎಂದು ತನ್ನ ಅಪ್ಪ–ಅಮ್ಮನಿಗೆ ಆಗ ಹೇಳಿದ್ದಂತೆ.

ಚಂದ್ರು ನಾಯಕಿಯಾಗಲು ಆಹ್ವಾನಿಸಿದ್ದನ್ನು ಅವರು ನೆನಪಿಸಿಕೊಂಡರು. ‘ಅನೂಪ್‌ ಅವರಿಗೆ ಬೆಂಬಲವಾಗಿ ನಿಲ್ಲಲು ನಾನು ಈ ಚಿತ್ರದ ಭಾಗವಾದೆ’ ಎನ್ನುವುದು ಮೇಘನಾ ಮಾತು. ಛಾಯಾಗ್ರಹಕ ಸಂತೋಷ್ ರೈ ಪಾತಾಜಿ, ‘ರಥಾವರ’ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಅಭಿಮಾನಿಗಳ ಸಂಘದ ಅಧ್ಯಕ್ಷ ಸಿದ್ದೇಶ್, ನಟಿ ಪ್ರಮೀಳಾ ಜೋಷಾಯ್ ಅನೂಪ್‌ಗೆ ಶುಭ ಕೋರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT