ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಮೂರು ದಶಕ...

ಸಿನಿ ಹನಿ
Last Updated 11 ಮೇ 2016, 19:44 IST
ಅಕ್ಷರ ಗಾತ್ರ

ಸೀಮಿತ ಕಾಲಾವಧಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದ ಕಥೆಯೊಂದನ್ನು ಹೆಣೆದು ಸಿನಿಮಾ ಮಾಡಲು ಮೈಸೂರಿನಿಂದ ಹೊಸ ತಂಡವೊಂದು ಚಂದನವನಕ್ಕೆ ಬಂದಿಳಿದಿದೆ. 1986ರಿಂದ 2016ರವರೆಗಿನ ಘಟನೆಗಳ ಸರಣಿಯನ್ನು ‘1986’ ಎಂಬ ಶೀರ್ಷಿಕೆಯ ಸಸ್ಪೆನ್ಸ್–ಥ್ರಿಲ್ಲರ್ ಸಿನಿಮಾದಲ್ಲಿ ತೋರಿಸುವ ಹುಮ್ಮಸ್ಸು ಚಿತ್ರತಂಡದ್ದು.

ಬಹುತೇಕ ಯುವಕರೇ ತುಂಬಿಕೊಂಡಿರುವ ಚಿತ್ರತಂಡಕ್ಕೆ ಹೆಚ್ಚಿನ ಉತ್ಸಾಹ ತಂದುಕೊಟ್ಟಿರುವುದು ನಿರ್ದೇಶಕ ಟಿ.ಎಸ್. ನಾಗಾಭರಣ. ಜಮೀನ್ದಾರನ ಪಾತ್ರದಲ್ಲಿ ಅವರು ‘1986’ರಲ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಹೆಚ್ಚೇನೂ ಮಾತಾಡಲಿಲ್ಲ.

‘ಅಭಿನಯದ ವಿಷಯಕ್ಕೆ ಬಂದಾಗ ನಾನು ಸ್ವಲ್ಪ ಹಿಂಜರಿಯುತ್ತೇನೆ. ಆದರೆ ಇಲ್ಲಿನ ಕಥೆ ಚೆನ್ನಾಗಿದೆ. ಒಂದೆರಡು ದಶಕಗಳ ಹಿಂದೆ ಬಂದಿದ್ದ ಸಸ್ಪೆನ್ಸ್‌ ಸಿನಿಮಾಗಳನ್ನು ನೆನಪಿಗೆ ತರುವ ತಾಕತ್ತನ್ನು ಇದು ಹೊಂದಿದೆ’ ಎಂದು ಹೊಗಳಿದರು.

ಪ್ರಸನ್ನ ಮುದ್ದಣ್ಣ ನಾಯಕನ ಪೋಷಾಕು ಧರಿಸಿದ್ದಾರೆ. ಇದರಲ್ಲಿ ಅವರದು ಪತ್ರಕರ್ತನ ಪಾತ್ರ. ರೋಶನಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಲಕಲಾವಿದೆಯಾಗಿ ತೆಲುಗು ಹಾಗೂ ತಮಿಳಿನ ಒಂದಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇಷ್ಟರಲ್ಲೇ ಬಿಡುಗಡೆಯಾಗಲಿರುವ ‘ಅಜರಾಮರ’ದಲ್ಲಿ ನಾಯಕಿಯಾಗಿರುವ ಅವರಿಗೆ, ಈ ಚಿತ್ರದಲ್ಲಿ ಮೂಕ ಹಾಗೂ ಕಿವುಡಿ ಪಾತ್ರವಂತೆ.  ಮೆಗಾ ಧಾರಾವಾಹಿ ‘ನಾಗಿಣಿ’ಯಲ್ಲಿದ್ದ ಅರ್ಜುನ್‌ಗೆ ಇದರಲ್ಲೊಂದು ಮುಖ್ಯ ಪಾತ್ರವಿದೆ.

ಹೋಟೆಲ್ ಉದ್ಯಮಿ ವಿ. ಮಹೇಶ್ ಚಿತ್ರದ ನಿರ್ಮಾಪಕರು. ಮೈಸೂರಿನ ಅವರ ಮನೆಯಲ್ಲಿ ಬಾಡಿಗೆಗಿದ್ದ ಶಶಿಧರ್ ಎಂ. ಅವರು ಹೇಳಿದ ಕಥೆ ಇಷ್ಟವಾಗಿ, ಅದನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ.

‘ನಮ್ಮ ಪ್ರಯತ್ನಕ್ಕೆ ನಾಗಾಭರಣ ಪ್ರೋತ್ಸಾಹ ನೀಡಿದ್ದಾರೆ. ಅದೇ ನಮಗೆ ದೊಡ್ಡ ಶಕ್ತಿ’ ಎಂದರು. ಹಿಂದಿಯ ‘ಹ್ಯಾಪಿ ನ್ಯೂ ಇಯರ್’ ಹಾಗೂ ಕನ್ನಡದ ‘ದಕ್ಷ ಯಜ್ಞ’ ಚಿತ್ರದಲ್ಲಿ ತಂತ್ರಜ್ಞನಾಗಿ ದುಡಿದಿರುವ ಅನುಭವ ಶಶಿಧರ್ ಅವರದು.

‘ಮೂರು ಪದರುಗಳಲ್ಲಿ ಹಂತಹಂತವಾಗಿ ತೆರೆದುಕೊಳ್ಳುವ ಚಿತ್ರದಲ್ಲಿ, ಒಂದೊಂದು ಕಥೆಯೂ ಪ್ರತ್ಯೇಕವಾಗಿದ್ದು, ಅಂತ್ಯದಲ್ಲಿ ಬೆಸೆದುಕೊಳ್ಳುತ್ತವೆ’ ಎಂದಷ್ಟೇ ಹೇಳಿದ ಅವರು, ಚಿತ್ರಕಥೆ ಕುರಿತು ಗುಟ್ಟು ರಟ್ಟು ಮಾಡಲಿಲ್ಲ. ಮಂಡ್ಯ ರಮೇಶ್, ಶೋಭರಾಜ್ ಇತರರು ಪಾತ್ರವರ್ಗದಲ್ಲಿದ್ದು, ನಾಗರಾಜ್ ಕ್ಯಾಮೆರಾ ಹಿಡಿಯಲಿದ್ದಾರೆ.

ಪತ್ರಿಕಾಗೋಷ್ಠಿಗೂ ಮುನ್ನ ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ನಟ ದರ್ಶನ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ತೋರಿಸಿ, ಶುಭ ಹಾರೈಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT