ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗಳಗಿ: ಕಬ್ಬಿನ ಗದ್ದೆಗೆ ಬೆಂಕಿ, ರೂ 2 ಲಕ್ಷ ಹಾನಿ

Last Updated 25 ಫೆಬ್ರುವರಿ 2015, 5:00 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಮಂಗಳವಾರ ರೈತ ಮಲ್ಲೇಶಪ್ಪ ಚಂದ್ರಾಮ ಬಳಬಟ್ಟಿ ಅವರ ತೋಟದಲ್ಲಿ ಬೆಳೆದು ನಿಂತಿರುವ ಸುಮಾರು 5 ಎಕರೆ ಕಬ್ಬಿನ ಗದ್ದೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ಇಂಡಿ ಪಟ್ಟಣದ ಅಗ್ನಿ ಶಾಮಕ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ಕಬ್ಬು ಸಂಪೂರ್ಣ ಸುಟ್ಟು ಹೋಗಿತ್ತು.

ಸುಮಾರು ರೂ 2 ಲಕ್ಷದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಕರಣ ಇಂಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.
ಪ್ರಾಧ್ಯಾಪಕ ಅಮಾನತು

ವಿಜಯಪುರ: ಅಲ್- ಅಮೀನ್ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಗೋಲೆವಾಲೆ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರ ಆರಂಭಿಸಿದ್ದ ಪ್ರತಿಭಟನೆ ತೀವ್ರಗೊಂಡಿದ್ದರಿಂದ, ಕಾಲೇಜಿನ ಆಡಳಿತ ಮಂಡಳಿ ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ.

ಇದೇ 21ರಂದು ಅಸ್ವಸ್ಥೆಯಿಂದ ಬಳಲುತ್ತಿದ್ದಳು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಡಾ.ಗೋಲೆವಾಲೆ ಕಾಲೇಜು ಆವರಣದಲ್ಲಿರುವ ತಮ್ಮ ವಸತಿ ಗೃಹದಲ್ಲಿರಿಸಿಕೊಂಡಿದ್ದರು. ಇದನ್ನು ಕಂಡ ಇತರ ವಿದ್ಯಾರ್ಥಿಗಳು ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿನಿ ನಡುವೆ ಏನೋ ಸಂಬಂಧವಿದೆ ಎಂದು ಆರೋಪಿಸಿ ಪ್ರತಿಭಟನೆಗಿಳಿದಿದ್ದರು.

ಪ್ರತಿಭಟನೆ ಮಂಗಳವಾರವೂ ಮುಂದುವರಿಯುವ ಲಕ್ಷಣ ಗೋಚರಿಸಿದ್ದರಿಂದ ಹಾಗೂ ಕಾಲೇಜಿನ ಆಡಳಿತ ಸುವ್ಯವಸ್ಥೆ ದೃಷ್ಟಿಯಿಂದ ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಕಾಲೇಜಿನ ಡೀನ್‌ ಡಾ.ಬಿ.ಎಸ್.ಪಾಟೀಲ ಕುದರಿಸಾಲೋಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ 26ರಂದು ಅಲ್-ಅಮೀನ್ ಟ್ರಸ್ಟ್ ಅಧ್ಯಕ್ಷರು, ಕಾರ್ಯದರ್ಶಿಗಳು ಡಾ.ಗೋಲೆವಾಲೆ ಅವರನ್ನು ವಿಚಾರಣೆ ನಡೆಸಲಿದ್ದಾರೆ. ಒಂದು ವೇಳೆ ವಿದ್ಯಾರ್ಥಿಗಳ ಆರೋಪ ನಿಜವಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡೀನ್‌ ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಡಾ.ಗೋಲೆವಾಲೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

ವೃದ್ಧೆ ಕೊಲೆ
ವಿಜಯಪುರ ನಗರದ ಪಟೇಲಗಲ್ಲಿಯಲ್ಲಿ ವೃದ್ಧೆ ಕೊಲೆಗೀಡಾದ ಘಟನೆ ಮಂಗಳವಾರ ನಸುಕಿನಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ರಜಾಕ್‌ಬಿ ಪಟೇಲ (90) ಕೊಲೆಗೀಡಾದವರು.

ಹಲ ವರ್ಷಗಳಿಂದ ಗಂಡನ ಕಳೆದುಕೊಂಡು ಏಕಾಂಗಿ ಜೀವನ ಸಾಗಿಸುತ್ತಿದ್ದ ರಜಾಕ್‌ಬಿ ಏಕಾಏಕಿ ಕೊಲೆಗೀಡಾಗಿದ್ದಾರೆ.
ವೃದ್ಧೆ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾರೆ. ತಲೆಯಲ್ಲಿ ಗಾಯದ ಗುರುತುಗಳು ಕಂಡು ಬಂದಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ನಿಲ್ಲದ ಕಳ್ಳತನ: ಹೆಚ್ಚಿದ ಆತಂಕ
ವಿಜಯಪುರ ನಗರದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಮಿರ್ದೆ ಗಲ್ಲಿಯ ಪ್ರಹ್ಲಾದ ಗೋವಿಂದ ದಶವಂತ ಎಂಬುವರ ಮನೆ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ, ಮನೆಬಳಕೆ ವಸ್ತುಗಳನ್ನು ಕಳವು ಮಾಡಿದ್ದಾರೆ.

ನಗರದ ಹೊರವಲಯದ ಬೂತನಾಳ ತಾಂಡಾದಲ್ಲಿ ಸರಣಿಗಳ್ಳತನವಾಗಿದ್ದು, ಪ್ರಕಾಶ ಸೀತಾರಾಮ ರಾಠೋಡ, ಡಾಕು ಅಣದು ಚವ್ಹಾಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ಎರಡೂ ಮನೆ ಸೇರಿ ರೂ 1.49 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲ ಬೀಗ ಮುರಿದ ಕಳ್ಳರು, ಪ್ಯಾಂಟ್ ಜೇಬಿನಲ್ಲಿಟ್ಟ ರೂ 50 ಸಾವಿರ ನಗದು, ಟ್ರೆಜರಿಯಲ್ಲಿದ್ದ ರೂ 37 ಸಾವಿರ, 15 ಗ್ರಾಂ ತೂಕದ ನೆಕ್ಲೆಸ್ ಸೇರಿದಂತೆ ಇನ್ನಿತರ ಸಾಮಗ್ರಿ ಕಳವು ಮಾಡಲಾಗಿದೆ.
ಇದೇ ಗ್ರಾಮದ ಅಶೋಕ ಸೇವು ರಾಠೋಡ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಒಟ್ಟು ರೂ 34 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ.

ಬೇಸಿಗೆ ಸಮಯವಾದ್ದರಿಂದ ಮನೆ ಸದಸ್ಯರು ಮಾಳಿಗೆ ಮೇಲೆ ಮಲಗಿದ್ದ ಸಂದರ್ಭ ಕಳ್ಳರು ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ. ಈ ಬಗ್ಗೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಬೈಕ್ ಕಳ್ಳತನ: ನಗರದ ನಾಡಗೌಡ ಪೆಟ್ರೋಲ್ ಬಂಕ್ ಹತ್ತಿರ ನಿಲ್ಲಿಸಿದ ಬೈಕ್ ಕಳವಾಗಿದೆ. ಶಂಕರಗೌಡ ನಿಂಗನಗೌಡ ಪಾಟೀಲ ಎಂಬುವರ ಬೈಕ್ ಕಳವಾಗಿದೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಳಗುಮ್ಮಟ ಎದುರಿನ ದುರ್ಗಾ ಹೋಟೆಲ್‌ ಮುಂದೆ ಹ್ಯಾಂಡ್‌ಲಾಕ್‌ ಮಾಡಿ ನಿಲ್ಲಿಸಿದ ಬೈಕ್ ಕಳವಾಗಿದೆ. ಉಮೇಶ ದುಂಡಪ್ಪ ಕುಂಬಾರ ಎಂಬವರ ಬೈಕ್ ಕಳವಾಗಿದೆ. ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT