ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಎಂಬ ಚಿತ್ರದ ಕಬ್ಬು!

Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶಿಕ್ಷಣ ಮಾಧ್ಯಮದ ಬಗೆಗೆ ನಾವು ತಳೆಯುವ ನಿಲುವು ಸಮುದಾಯದ ಏಳ್ಗೆ, ಸಾಮಾಜಿಕ ಸಹಬಾಳ್ವೆ, ಆರ್ಥಿಕ ಸಮಾನತೆ, ರಾಜಕೀಯ ತೀರ್ಮಾನಗಳ ಹಕ್ಕು ಹಾಗೂ ಸಾಂಸ್ಕೃತಿಕ ಅರಿವಿನ ನಂಟನ್ನು ನೆಲೆಯಾಗಿಸಿಕೊಂಡು ಮೈದಾಳಬೇಕು. ಆದರೆ ಇಂತಹ ಮಹತ್ವದ ವಿಚಾರದ  ಬಗೆಗಿನ ಮಾತು, ಚರ್ಚೆಗಳಲ್ಲಿ ‘ನಾನೂ ಒಬ್ಬ ಪಾಲು
ದಾರ’ ಎಂಬುದನ್ನು ಪ್ರಕಟಿಸುವುದಕ್ಕೆ ಮಾತ್ರ ನಮ್ಮ ನಡೆಗಳು ಸೀಮಿತವಾಗುತ್ತಿವೆ. ಇದು ದುರದೃಷ್ಟಕರ.

ಶಿಕ್ಷಣ ಮಾಧ್ಯಮ ಕುರಿತಾದ ಕಾಳಜಿ, ಕೇವಲ ವೈಯಕ್ತಿಕ ಹಿತಾಸಕ್ತಿ  ಈಡೇರಿಸಿಕೊಳ್ಳುವುದಕ್ಕೆ  ಮಾನದಂಡ ಆಗದೇ, ಅದನ್ನು ಒಂದು ಸಾಮಾಜಿಕ ಯೋಜನೆಯನ್ನಾಗಿ ರೂಪಿಸುವುದಕ್ಕೆ ಒತ್ತಾಸೆಯಾಗಬೇಕು. ಮೆಕಾಲೆ, ಇಂಗ್ಲಿಷ್‌ ನುಡಿಯನ್ನು ಭಾರತದಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ರೂಪಿಸಿ, ನೆಲೆಗೊಳಿಸುವಾಗ, ಅದು ಕೇವಲ  ವ್ಯಕ್ತಿಯೊಬ್ಬರ ಉದ್ದೇಶವಾಗಿರಲಿಲ್ಲ. ಬದಲಾಗಿ ಅದು ಇಡೀ ವಸಾಹತುಶಾಹಿ ಯೋಜನೆಯ ಕೇಂದ್ರ ಪ್ರಜ್ಞೆಯಾಗಿತ್ತು. ಹಾಗಾಗಿ ಇಂಗ್ಲಿಷ್‌ ಭಾಷೆ, ಭಾರತದಲ್ಲಿ ಈ ಮಟ್ಟಕ್ಕೆ ಬೇರೂರಲು ಸಾಧ್ಯವಾಯಿತು.

ಹಾಗೆಂದ ಮಾತ್ರಕ್ಕೆ ಮೆಕಾಲೆ ನಮಗೆ ಮಾದರಿಯಾಗಬೇಕು ಎನ್ನುವುದು ನನ್ನ ವಾದವಲ್ಲ. ಬದಲಾಗಿ ಸಮೂಹಗಳ ಬೆಳವಣಿಗೆಗೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವ ತಂತ್ರಗಾರಿಕೆಯನ್ನು ಹೇಗೆ ಹೂಡುವ ಅಗತ್ಯವಿದೆ ಎಂಬುದಕ್ಕೆ ಈ ಮಾತನ್ನು ಹೇಳಿದೆ. ಸಮಾವೇಶ, ಸಮ್ಮೇಳನಗಳಲ್ಲಿ ವೇದಿಕೆಯೇರಿ ‘ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು’ ಎಂದು ಕೂಗಿ ಹೇಳಿದರೆ ಸಾಲದು. ಕನ್ನಡ ಇಂದು ಶಿಕ್ಷಣ ಮಾಧ್ಯಮವಾಗಿ ನೆಲೆಯೂರಲು ಹೀಗೆ ಗಟ್ಟಿದನಿಯಲ್ಲಿ ಹೇಳುವುದಕ್ಕಿಂತ, ಕನ್ನಡ ನುಡಿಯನ್ನು ಅದಕ್ಕೆ ಹೇಗೆ ಸಜ್ಜುಗೊಳಿಸಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಅದಕ್ಕೆ ಪೂರಕವಾದ ನುಡಿ ನೀತಿ ಮತ್ತು ಯೋಜನೆ ಕೈಗೊಳ್ಳಬೇಕಿದೆ.

ಈ ಇಡೀ ಪ್ರಕ್ರಿಯೆಗೆ ಕಾನೂನಿನ ನೆರವು ನಿಶ್ಚಿತವಾಗಿಯೂ ಬೇಕು. ಆದರೆ ಶಿಕ್ಷಣ ಮಾಧ್ಯಮದ ಸವಾಲನ್ನು ಕಾನೂನಿನ ವ್ಯಾಪ್ತಿಯೊಳಗಿಟ್ಟು ಮಾತ್ರ ನೋಡಿದರೆ, ತೊಡಕುಗಳೇ ಹೆಚ್ಚಾಗಿ ಎದುರಾಗುತ್ತವೆ, ಪರಿಹಾರ ಸಿಗುವುದಿಲ್ಲ. ಕಾನೂನನ್ನು ಕೇವಲ ಹಕ್ಕಿನ ಭಾಗವಾಗಿ ನೋಡುವುದರಲ್ಲೇ ತೊಡಕುಗಳಿವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ. ಅಂದರೆ ಶಿಕ್ಷಣ ಮಾಧ್ಯಮವನ್ನು ಕೇವಲ ಹೆತ್ತವರ ಆಯ್ಕೆಯ ಪ್ರಶ್ನೆಯಾಗಿ ನೋಡುವುದರಲ್ಲಿಯೇ ಸಮೂಹ ನುಡಿಗಳ ವಿರೋಧಿ ನಿಲುವನ್ನು ಕಾಣಬಹುದಾಗಿದೆ.

ಹಕ್ಕುಗಳು ಯಾವಾಗಲೂ ಸಾಮಾಜಿಕ ಮಾನ್ಯತೆಯನ್ನೇ ನೆಲೆ ಆಗಿಸಿಕೊಂಡಿರುತ್ತವೆ. ಶಿಕ್ಷಣ ಮಾಧ್ಯಮ ಎಂಬುದು ಹಕ್ಕಿನ ಪ್ರಶ್ನೆಯಾಗಿರುವುದೇ ಕನ್ನಡದ ಬಗೆಗಿನ ಅಪನಂಬಿಕೆಯ ಮೂಲಸೂತ್ರವಾಗಿದೆ. ಹಕ್ಕೆಂಬುದು ಸಾಮಾಜಿಕ ಪಾಲುದಾರಿಕೆ ಬಗೆಯದಾದರೆ ಮಾತ್ರ ಅದಕ್ಕೆ ಮಹತ್ವವಿರುತ್ತದೆ. ನುಡಿಯೆಂಬುದು ಕೂಡ ಸಾಮಾಜಿಕ ಸಂಪನ್ಮೂಲವೇ ಆಗಿರುವುದರಿಂದ, ನಮ್ಮ ನಮ್ಮ ನುಡಿಗಳ ಇಡೀ ಪ್ರಕ್ರಿಯೆಯಲ್ಲಿ ನಾವು ಪಾಲು ಪಡೆಯುವುದು ನಮ್ಮ ಹಕ್ಕಾಗಿರುತ್ತದೆ.

ಇಲ್ಲವಾದರೆ ಮಾನವ ಹಕ್ಕುಗಳು ಬಂಡವಾಳಶಾಹಿ ಹಿತಾಸಕ್ತಿಯನ್ನು ಪೂರೈಸುವ ಅಸ್ತ್ರಗಳಾಗಿ ಮಾತ್ರ ನೆಲೆಗೊಳ್ಳುತ್ತವೆ. ಇದೆಲ್ಲಕ್ಕಿಂತ ಹೆಚ್ಚಾಗಿ ಮಾನವ ಹಕ್ಕುಗಳು ಎಂಬ ಕಲ್ಪನೆ ವ್ಯವಹರಿಸುವುದೂ ಜನರ ನುಡಿಯಲ್ಲಿಯೇ. ಜನರ ಗ್ರಹಿಕೆಗೆ ಎಟಕುವ ರೀತಿಯಲ್ಲಿ ಇಂತಹ ಕಲ್ಪನೆಗಳು ನೆಲೆಗೊಂಡರೆ, ಆಯಾ ಜನಸಮೂಹಗಳು ತಮ್ಮ ಬದುಕಿಗೆ ಒತ್ತಾಸೆಯಾಗಿ ಇದನ್ನು ಒಗ್ಗಿಸಿಕೊಳ್ಳಬಲ್ಲವು, ಇಲ್ಲವಾದಲ್ಲಿ ಇಂತಹ ನಿಲುವುಗಳನ್ನೇ ತಮ್ಮ ಪ್ರತಿರೋಧಕ್ಕೆ ಬೇಕಾಗುವ ಅಸ್ತ್ರ
ವನ್ನಾಗಿ ರೂಪಿಸಿಕೊಳ್ಳುವ ಅವಕಾಶ ಸಮೂಹಗಳಿಗೆ ದಕ್ಕುತ್ತದೆ. ಒಟ್ಟಾರೆಯಾಗಿ ಹಕ್ಕು ಅನ್ನುವುದು ಆಯಾ ಸಮೂಹದ ಬದುಕಿನ ಸನ್ನಿವೇಶದೊಳಗೇ ಲಭ್ಯವಾಗಬೇಕು ಮತ್ತು ಎಲ್ಲರಿಗೂ ಅರ್ಥವಾಗುವ ಬಗೆಯಲ್ಲಿರಬೇಕು.

ಇಂತಹ ಸಾಮಾಜಿಕ ಅವಕಾಶವನ್ನು ಇಂಗ್ಲಿಷಿನ ಮೂಲಕ ಪಡೆಯುವುದು ಅಸಾಧ್ಯವೇ ಸರಿ. ಆದರೆ ಇದನ್ನು ಕನ್ನಡದ ಮೂಲಕ ಪಡೆದುಕೊಳ್ಳುವ ಪಾಲುದಾರಿಕೆಯ ಹಕ್ಕೊತ್ತಾಯನ ಮಾಡುವುದು ಅತ್ಯಂತ ಸರಳವಾದ ಕೆಲಸ. ಆದ್ದರಿಂದ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಸಾಮಾಜಿಕ ಬಿಕ್ಕಟ್ಟಿಗೆ ದಾರಿಯಾದರೆ, ಕನ್ನಡ ಮಾಧ್ಯಮದ ಶಿಕ್ಷಣವು ಸಮೂಹಗಳ ಬದುಕಿಗೆ ದಾರಿಯಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಬಲವಾಗಬೇಕು. ಶಿಕ್ಷಣ ಮಾಧ್ಯಮವನ್ನು ಕೇವಲ ಹಕ್ಕಿನ ಪ್ರಶ್ನೆಯನ್ನಾಗಿ ಕುರಿತು ಯೋಚಿಸಿದರೆ, ಭಾರತದ ಸಮೂಹಗಳಿಗೆ ಅವರದೇ ತಾಯ್ನುಡಿಯಲ್ಲಿ ಶಿಕ್ಷಣವನ್ನು ಪಡೆಯುವ ಸಂವಿಧಾನಾತ್ಮಕ ಅವಕಾಶವಿದ್ದರೂ, ಇದುವರೆಗೆ ಈ ಅವಕಾಶವನ್ನು ನೆರವೇರಿಸಲು ಸಾಧ್ಯವಾಗಿಲ್ಲ.

ಸಾಮಾಜಿಕ ಪಾಲುದಾರಿಕೆಯನ್ನು ಪಡೆಯದ ಹೊರತು, ಕಾನೂನಿನ ಮೂಲಕ ಸಿಗುವ ಯಾವುದೇ ಸ್ವಾತಂತ್ರ್ಯವು ಕೂಡ ನಮ್ಮ ಬದುಕಿಗೆ ದಾರಿಯಾಗಲಾರದು. ಅಂಬೇಡ್ಕರ್ ಅವರು ಹೇಳಿದ್ದೂ ಇದೇ ಆಗಿದೆ. ಅಂದರೆ ಎಲ್ಲಿಯವರೆಗೆ ನಮಗೆ ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಆಗುವುದಿಲ್ಲವೋ, ಅಲ್ಲಿಯವರೆಗೆ ಕಾನೂನಿನ ಮೂಲಕ ದೊರೆಯುವ ಸ್ವಾತಂತ್ರ್ಯವೂ ನಮಗೆ ಒದಗಿಬರಲಾರದು. ಈ ದಿಟವನ್ನು ನಾವು ಅತ್ಯಂತ ನಿಗಾವಹಿಸಿ ಅರಿಯಬೇಕು. ಭಾರತ ಸಮೂಹ
ಗಳಿಗೆ ಬೇಕಾಗಿರುವ ಯಾವುದೇ ಸಾಮಾಜಿಕ, ರಾಜಕೀಯ ಅವಕಾಶವನ್ನು ಒದಗಿಸಿ ಕೊಡಲಾರದ ಇಂಗ್ಲಿಷ್‌ ನುಡಿಯನ್ನು ನಮ್ಮ ಹಕ್ಕು ಎಂದು ವಾದಿಸುವುದರಲ್ಲಿ ಏನೂ ಪ್ರಯೋಜನವಿಲ್ಲ.

ನಮ್ಮ ಬದುಕಿನೊಳಗಿನ ತೊಡಕುಗಳಿಗೆ ಇಂಗ್ಲಿಷಿನ ಮೂಲಕ ಪರ್ಯಾಯ ಕಂಡುಕೊಳ್ಳುವ ದಲಿತ ಚಿಂತಕರು ಕೂಡ ಇಂಗ್ಲಿಷ್‌ ನಮಗೆ ವಿಮೋಚನೆಯ ನೆಲೆ ಯಾಗಲಾರದು ಎಂಬುದನ್ನು ಅರಿಯಬೇಕು. ವಿಮೋಚನೆಯ ದಾರಿ
ಗಳನ್ನು ನಮ್ಮ ನುಡಿಗಳ ಮೂಲಕವೇ ಕಂಡು ಕೊಳ್ಳಬೇಕು. ಇಲ್ಲವಾದರೆ, ಸಾಮಾಜಿಕ ಪ್ರತ್ಯೇಕತೆ ಹಾಗೇ ಮುಂದುವರಿಯುತ್ತದೆ.  ಶಿಕ್ಷಣ  ಮಾಧ್ಯಮದ ಗುರಿ ಮತ್ತು ಉದ್ದೇಶ, ಬದುಕಿನ ಎಲ್ಲ ಅವಕಾಶಗಳನ್ನು ಪೂರೈಸು ವುದೇ ಆಗಿದೆ. ಇದು ಇಂಗ್ಲಿಷ್‌ ನುಡಿಯಿಂದ ನೆರವೇರು ತ್ತದೆ ಎಂಬ ನಂಬಿಕೆಯೇ ಹುಸಿಯಾದುದು. ಬಸವಣ್ಣ ಹೇಳುವಂತೆ: ‘ಚಿತ್ರದ ಕಬ್ಬು  ಕಾಣಿರಣ್ಣ, ಅಪ್ಪಿದರೆ ಸುಖವಿಲ್ಲ! ಮೆಲದರೆ ರುಚಿಯಿಲ್ಲ!’ ಇಂಗ್ಲಿಷ್‌ ನುಡಿಯೂ ಈ ಚಿತ್ರದ ಕಬ್ಬಿನಂತೆ.

ಕನ್ನಡ ಮಾಧ್ಯಮ ಕುರಿತು  ವೇದಿಕೆಗಳಲ್ಲಿ ಮಾತಾಡುವವರು, ಉಪದೇಶ ನೀಡುವ ಧಾಟಿಯಲ್ಲಿ ಇಂಗ್ಲಿಷನ್ನು ಒಂದು ನುಡಿಯನ್ನಾಗಿ ಕಲಿತರೆ ತೊಂದರೆಯಿಲ್ಲ. ಆದರೆ, ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕು ಎಂದು ಹೇಳುವುದಕ್ಕೆ ಮಾತ್ರ ಸೀಮಿತರಾಗಿ, ನೋಯುವ ಹಲ್ಲಿಗೆ ನಾಲಿಗೆಯನ್ನು ಹೊರಳಿಸುತ್ತ ಆಗ ಉಂಟಾಗುವ ಹಿತವನ್ನು ಮಾತ್ರ ಅನುಭವಿಸುತ್ತಿದ್ದಾರೆ. ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಬಗೆಗೆ ಇವರು ಬದ್ಧರಾದಂತಿಲ್ಲ. ಅವರು, ಇಂತಹ ಪ್ರಯತ್ನಗಳನ್ನು ಮಾಡುವವರ ಜೊತೆಗೂ  ಕೈಜೋಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT