ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬಹುರೂಪಿ ನಾಟಕೋತ್ಸವ

Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಮಂದಿಗೆ ಇಂದಿನಿಂದಲೇ (ಜ. 13) ಸಂಕ್ರಾಂತಿ ಹಬ್ಬ. ಇಲ್ಲಿಯ ರಂಗಾಯಣದ ‘ಬಹು­ರೂಪಿ’ ರಾಷ್ಟ್ರೀಯ ನಾಟಕೋತ್ಸವದ ಮೂಲಕ ಜ. 18ರವರೆಗೆ ‘ರಂಗ ಸಂಕ್ರಾಂತಿ’ಯನ್ನು ಆಚರಿ­ಸಲಿದ್ದಾರೆ.

ಶೇಕ್ಸ್‌ಪಿಯರ್‌ನ 450ನೇ ಜನ್ಮೋ­ತ್ಸವ ಅಂಗವಾಗಿ ‘ಜಗದ ಜಾನಪದ ಬಹುಮುಖಿ ಶೇಕ್ಸ್‌ಪಿಯರ್’ ಹೆಸರಿ­ನಲ್ಲಿ ಈ ಬಾರಿ ಜ. 13ರಿಂದ 18ರ­ವರೆಗೆ ನಾಟಕೋ­ತ್ಸವ ಇಲ್ಲಿಯ ರಂಗಾ­ಯಣದ ಆವರಣ­ದಲ್ಲಿ ನಡೆಯಲಿದೆ.

ಜ. 13ರಂದು ಸಂಜೆ 5 ಗಂಟೆಗೆ ರಂಗಾಯಣದ ವನರಂಗದಲ್ಲಿ ನಾಟ­ಕೋತ್ಸವವನ್ನು ರಂಗಭೂಮಿ ಹಾಗೂ ಬಾಲಿವುಡ್ ನಟ, ನಿರ್ದೇಶಕ ನಾಸಿರುದ್ದಿನ್‌ ಷಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತು­ವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹಾಗೂ ರಂಗಭೂಮಿ, ಚಲನಚಿತ್ರ ನಟ ಪ್ರಕಾಶ ರೈ ಭಾಗವ­ಹಿಸುವರು.

ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ನಂತರ 7 ಗಂಟೆಗೆ ಕಲಾಮಂದಿರದಲ್ಲಿ ವಿಕ್ರಂ ಸೇಟ್‌ ಮತ್ತು ಜೇಮ್ಸ್‌ ಥರ್ಬರ್ ಅವರ ಕವನ ಹಾಗೂ ಸಣ್ಣಕಥೆಗಳ ಸಂಗ್ರಹದ ‘ಬೀಸ್ಟ್ಲಿ ಟೇಲ್ಸ್’ ಇಂಗ್ಲಿಷ್‌ ನಾಟಕವನ್ನು ನಿರ್ದೇ­ಶಿಸಿ ನಟಿಸುತ್ತಿದ್ದಾರೆ ನಾಸಿರುದ್ದಿನ್ ಷಾ. ಈ ನಾಟಕವನ್ನು ಮುಂಬೈಯ ಮೋಟ್ಲಿ ತಂಡ ಪ್ರಸ್ತುತಪ­ಡಿಸಲಿದೆ.

ಮಂಗಳವಾರ ಬೆಳಿಗ್ಗೆ 10 ಗಂಟೆಗೆ ರಂಗಾ­ಯಣದ ಕಿಂದರಿಜೋಗಿ ಆವರಣ­ದಲ್ಲಿ ಬೀದಿನಾಟಕಗಳ ಪ್ರದರ್ಶನಕ್ಕೆ ಹಿರಿಯ ರಂಗಕರ್ಮಿ ಪಿ. ಗಂಗಾಧರ­ಸ್ವಾಮಿ ಚಾಲನೆ ನೀಡುವರು. ಸಂಜೆ 5.30 ಗಂಟೆಗೆ ಜನಮನ ತಂಡದ ಬೀದಿನಾಟಕ ಪ್ರದರ್ಶನಗೊಳ್ಳಲಿದೆ.
ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ಅಕಾ­ಡೆಮಿ ಸಹಯೋಗ­ದಲ್ಲಿ ‘ಬಹುರೂಪಿ ಚಲನ­ಚಿತ್ರೋ­ತ್ಸವ’ ಉದ್ಘಾಟನೆಯಾಗಲಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಉದ್ಘಾಟಿಸುವರು.

ಇದರೊಂದಿಗೆ ದಕ್ಷಿಣ ವಲಯ ಜಾನಪದ ಕಲಾ ಉತ್ಸವ ಪ್ರತಿ ದಿನ ರಂಗಾಯಣದ ವನರಂಗದಲ್ಲಿ ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಪ್ರಾಯೋಜಕ­ತ್ವದಲ್ಲಿ ನಡೆಯಲಿದೆ. 17 ಹಾಗೂ 18ರಂದು ‘ಶೇಕ್ಸ್‌ಪಿ­ಯರ್‌ ಭಾರ­ತೀಯ ಅನು­ಸಂಧಾನ’ ವಿಚಾರ ಸಂಕಿರಣ ನಡೆಯಲಿದೆ. ಕರಕುಶಲ ವಸ್ತುಪ್ರದರ್ಶನ ಹಾಗೂ ಮಾರಾಟ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ.

‘ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ವರ್ಗಕ್ಕೂ ಇಷ್ಟವಾಗುವವನು, ದಕ್ಕುವ­ವನು ಶೇಕ್ಸ್‌ಪಿಯರ್. ಹೀಗಾಗಿ, ಅವ­ನನ್ನು ಜಗದ ಜಾನಪದ ಬಹು­ಮುಖಿ ಎಂದು ಕರೆದು, ಇದೇ ಶೀರ್ಷಿಕೆಯಲ್ಲಿ ನಾಟಕೋತ್ಸವ ಆಯೋಜಿ­ಸಿದ್ದೇವೆ. ಅವನ ಕುರಿತ ನಾಟಕ, ಸಿನಿಮಾ, ವಿಚಾರ ಸಂಕಿರಣ ನಡೆಯಲಿದೆ. ಈ ಮೂಲಕ ಅವನ 450ನೇ ಜನ್ಮೋತ್ಸ­ವವನ್ನು ಆಚರಿಸು­ತ್ತಿದ್ದೇವೆ’ ಎಂದು ರಂಗಾಯಣದ ನಿರ್ದೇಶಕ ಎಚ್‌. ಜನಾರ್ದನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT