ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಬೆಂಗಳೂರು ಬಂದ್‌

ಆಟೊ, ಟ್ಯಾಕ್ಸಿ, ಬಸ್‌ ಸೇವೆಗಳು ಅಬಾಧಿತ
Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳು ಹಾಗೂ ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಮಹಾ­ರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳು ಗುರುವಾರ (ಜು.31) ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಸಂಘ ಸಂಸ್ಥೆಗಳಿಂದ ಮಿಶ್ರ ಬೆಂಬಲ ವ್ಯಕ್ತವಾಗಿದೆ.

ಬಂದ್‌ಗೆ ಬೆಂಬಲ ಸೂಚಿಸುವುದಾಗಿ ಹೇಳಿರುವ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ), ತನ್ನ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಗುರುವಾರ ರಜೆ ಘೋಷಿಸಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರು ಸ್ವಯಂಪ್ರೇರಿತವಾಗಿ ಕಚೇರಿಗೆ ಗೈರು ಹಾಜರಾಗಲು ನಿರ್ಧರಿ­ಸಿದ್ದಾರೆ. ಇನ್ನುಳಿದಂತೆ ನಗರದ ಮಾಲ್‌ಗಳು, ಹೋಟೆಲ್‌ಗಳು, ಮಾರು­ಕಟ್ಟೆಗಳ ವಹಿವಾಟು ಸ್ಥಗಿತಗೊಳ್ಳಲಿವೆ.

ಬೆಂಬಲ ಇಲ್ಲ: ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ, ಸರ್ಕಾರಿ ನೌಕರರ ಸಂಘ, ವಕೀಲರ ಸಂಘ, ಸರ್ಕಾರಿ ಶಾಲಾ–ಕಾಲೇಜುಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಬಾಹ್ಯ ಬೆಂಬಲ ಇದೆಯಾ­ದರೂ, ಕಾರ್ಯ­ಚಟು­ವಟಿಕೆಗಳು ಪ್ರತಿನಿತ್ಯದಂತೆ ನಡೆಯಲಿವೆ ಎಂದು ಹೇಳಿವೆ.
ಆಟೊ ಮತ್ತು ಟ್ಯಾಕ್ಸಿ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಅದೇ ರೀತಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಮೆಟ್ರೊ ರೈಲುಗಳು ಸಹ ಎಂದಿನಂತೆ ಸೇವೆ ಒದಗಿಸಲಿವೆ.

‘ಬಂದ್‌ಗೆ ಬೆಂಬಲ ನೀಡಲು ಸಿದ್ಧರಿದ್ದೇವೆ. ಆದರೆ, ಸೇವೆ ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ಕೊಡು­ವುದು ಸರಿಯಲ್ಲ. ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳಿಸಿದರೆ ಕೆಂಪೇಗೌಡ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಹೋಗುವ ಪ್ರಯಾಣಿ­ಕರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಗುರುವಾರವೂ ಎಂದಿನಂತೆ ಟ್ಯಾಕ್ಸಿಗಳು ಓಡಾಟ ನಡೆಸಲಿವೆ’ ಎಂದು ಕೆಐಎಎಲ್‌ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ರವೀಂದ್ರ ಹೇಳಿದ್ದಾರೆ.

‘ಆಟೊಗಳು ಸಹ ಎಂದಿನಂತೆ ಸೇವೆ ಒದಗಿಸು­ತ್ತವೆ. ಮೆರವಣಿಗೆ ನಡೆಯುವ ರಸ್ತೆಗಳಲ್ಲಿ ಸಂಚಾರ ನಡೆಸದಂತೆ ಚಾಲಕರಿಗೂ ಸೂಚಿಸ­ಲಾಗಿದೆ. ಆಟೊ ನಿಲ್ಲಿಸಿ ಹೋರಾಟಕ್ಕೆ ಬೆಂಬಲ ನೀಡು­ವುದು ಚಾಲ­ಕನ ವೈಯಕ್ತಿಕ ವಿಚಾರ’ ಎಂದು ನಗರ ಆಟೊ ಚಾಲ­ಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸಿದರು.

‘ಬಂದ್‌ನ ದಿನ ಮೆಟ್ರೊ ರೈಲುಗಳ ಓಡಾಟ ನಡೆಯಲಿದೆ. ಪರಿಸ್ಥಿತಿಯನ್ನು ಗಮನಿಸಿ ಮುಂದಿನ ನಿರ್ಧಾರ ತೆಗೆದು­ಕೊಳ್ಳಲಾಗುವುದು’ ಎಂದು ಬಿಎಂಆರ್‌­ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.
‘ಬಂದ್‌ ಕಾರಣದಿಂದಾಗಿ ಕರ್ನಾಟಕ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಂಘದ ಅಡಿಯಲ್ಲಿ ಬರುವ ಎಲ್ಲ  ಶಾಲಾ–ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ’ ಎಂದು ಸಂಘ ಮುಖ್ಯಸ್ಥ ಎಲ್‌.ಆರ್‌.ಶಿವರಾಮೇಗೌಡ ಹೇಳಿದರು.

ಶಾಲೆಗಳ ನಿರ್ಧಾರ: ‘ಬಂದ್‌ ಕಾರಣಕ್ಕೆ ಶಾಲೆಗಳಿಗೆ ರಜೆ ಘೋಷಿಸಿದರೆ ಬಂದ್‌ಗೆ ಸರ್ಕಾರ ಬೆಂಬಲ ಸೂಚಿಸಿದಂತಾಗುತ್ತದೆ. ಹೀಗಾಗಿ ರಜೆ ನೀಡುವ ಬಗ್ಗೆ ಇಲಾಖೆ­ಯಿಂದ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್‌ ಮೊಹ್ಸಿನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲಭವನಕ್ಕೆ ರಜೆ: ‘ಸಾರ್ವಜನಿಕರ ಹಾಗೂ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಗುರು­ವಾರ ಬಾಲಭವನಕ್ಕೆ ರಜೆ ಘೋಷಿಸಲಾಗಿದೆ. ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಪ್ರವೇಶ ನಿರ್ಬಂಧಿ­ಸಲಾಗಿದೆ.  ಯಾವುದೇ ಆಟಿಕೆಗಳ ಸೌಲಭ್ಯ ಇರುವುದಿಲ್ಲ’ ಎಂದು ಬೆಂಗಳೂರು ಬಾಲಭವನದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹೋಟೆಲ್‌ಗಳು ಬಂದ್: ಬಂದ್‌ನ ದಿನ ನಗರದ ಎಲ್ಲ ಹೋಟೆಲ್‌ಗಳು ಸಂಪೂರ್ಣ ಮುಚ್ಚ­ಲಿವೆ. ‘ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಕೋರಿದ್ದಾರೆ. ಹೀಗಾಗಿ ನಗರದಲ್ಲಿ 1,300 ಹೋಟೆಲ್‌ಗಳ ಮಾಲೀಕರಿಗೂ ಈ ಬಗ್ಗೆ ಸಂದೇಶ ಕಳುಹಿಸಲಾಗಿದೆ. ಎಲ್ಲರೂ ಹೋಟೆಲ್‌ಗಳ ವಹಿವಾಟನ್ನು ಸ್ಥಗಿತಗೊ­ಳಿಸುವುದಾಗಿ ಹೇಳಿದ್ದಾರೆ’ ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್‌ ಹೆಬ್ಬಾರ್‌ ಹೇಳಿದ್ದಾರೆ.

ಎಂಬಿಎ ಪರೀಕ್ಷೆ ಮುಂದೂಡಿಕೆ: ಗುರುವಾರ ನಡೆಯಬೇಕಿದ್ದ ಬೆಂಗ­ಳೂರು ವಿ.ವಿಯ ಎಂಬಿಎ ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆಯನ್ನು ಬಂದ್‌ನ ಕಾರಣಕ್ಕಾಗಿ ಆಗಸ್ಟ್‌ 5ಕ್ಕೆ ಮುಂದೂಡ­ಲಾಗಿದೆ. ಆ ದಿನ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಪರೀಕ್ಷೆ ನಡೆಯಲಿದೆ ಎಂದು ವಿ.ವಿಯ ಮೌಲ್ಯಮಾಪನ ವಿಭಾಗದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಂತಿಯುತ ಹೋರಾಟ: ವಾಟಾಳ್ ನಾಗರಾಜ್
‘ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‌ ನಡೆಯಲಿದೆ. ಎಲ್ಲ ಸಂಘಟನೆಗಳ ಸದಸ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಂತಿಯುತ ರೀತಿಯಲ್ಲಿ ಹೋರಾಟ ನಡೆಸುವಂತೆ ಎಲ್ಲ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಹಾಲು, ಆಸ್ಪತ್ರೆ ಮತ್ತು ಔಷಧದ ಅಂಗಡಿ ಸೇರಿದಂತೆ ತುರ್ತು ಮತ್ತು ಅಗತ್ಯ ಸೇವೆಗಳಿಗೆ ಯಾವುದೇ ಅಡೆತಡೆ ಮಾಡುವುದಿಲ್ಲ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಬೆಳಿಗ್ಗೆ 10.30ಕ್ಕೆ ಪುರಭವನದಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಪ್ರತಿಭಟನಾ ಜಾಥಾ ನಡೆಸಲಾಗುವುದು. ಮಹಿಳೆ­ಯರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸಿಎಂ ಅವರಿಗೆ ಮನವಿ ಸಲ್ಲಿಸಲಾಗು­ವುದು ಎಂದರು.

ಪುಂಡಾಟಿಕೆಗೆ ಜೋಶಿ ಖಂಡನೆ
ಎಂಇಎಸ್‌ ಮುಖಂಡರ ಪುಂಡಾಟಿಕೆ­ಯನ್ನು  ನಾವು ಖಂಡಿಸುತ್ತೇವೆ. ನಮಗೆ ರಾಜ್ಯದ ಹಿತಾಸಕ್ತಿ ಮುಖ್ಯ. ರಾಜ್ಯದ ಪ್ರಶ್ನೆ ಬಂದಾಗ ಉಳಿದೆ­ಲ್ಲವೂ ಗೌಣ ಎಂದು ಬಿಜೆಪಿ ಸಂಸದ  ಪ್ರಹ್ಲಾದ ಜೋಶಿ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿ­ದ್ದಾರೆ. ಮುಂಬೈ, ಸೊಲ್ಲಾಪುರ, ಕೊಲ್ಲಾ­ಪುರ ಮತ್ತು ಅಕ್ಕಲ್‌ಕೋಟೆಗಳಲ್ಲಿ ನೆಲೆಸಿರುವ ಕನ್ನಡಿ­ಗ­ರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ­ದರು. ಬೆಳಗಾವಿ ಸಂಸದ ಸುರೇಶ್ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರೂ, ಏನೂ ಮಾತನಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT