ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕುಶಲರಿಗೊಪ್ಪುವ ತಂಬೂರಿ...

Last Updated 6 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ


ಸುತ್ತಮುತ್ತ ಆವರಿಸಿರುವ ಕೇಡು, ದುಷ್ಟತನ ಮತ್ತು ಸಣ್ಣತನಗಳನ್ನು ನೋಡುವಾಗ ಮನುಷ್ಯನಿಗೆ ಯಾವುದು ಸಹಜ– ಕ್ರೌರ್ಯವೋ, ಕಾರುಣ್ಯವೋ? ಪದರುಪದರುಗಳಾಗಿ ಸುತ್ತಿ ಜೀವಚೇತನವನ್ನು ಕಟ್ಟಿ ಹಾಕಿರುವುದು ಯಾವುದು– ಪಶುತನವೋ, ದೈವತ್ವವೋ? ಎಲ್ಲ ಬಗೆಯ ಅಹಂಕಾರದ ಬಟ್ಟೆಗಳ ಸುಲಿದು ಬೆತ್ತಲಾಗಿಸುವ; ಎಲ್ಲ ಭಯ, ಗೊಂದಲಗಳ ದಾಟುವ ಶಕ್ತಿಯೇ ಆಧ್ಯಾತ್ಮಿಕತೆಯೆ? ನಾನು, ನನ್ನ ಜೀವಿತಾವಧಿ, ಪ್ರಯತ್ನಗಳ ಸಾಧ್ಯಾಸಾಧ್ಯತೆಗಳನ್ನು ಪೂರ್ಣ ತಿಳಿದು ಒಂದು ನಿಸ್ಪೃಹ ಸ್ಥಿತಿ ಒದಗಬೇಕಾದರೆ ಅದಕ್ಕೊಂದು ಪೂರ್ವ ತಯಾರಿ ಬೇಕಲ್ಲವೆ? ಆ ಪೂರ್ವ ಯಾವುದು? ತಯಾರಿಗೊಳಿಸುವುದು ಯಾವುದು? ಇವೆಲ್ಲ ಇತ್ತೀಚೆಗೆ ಗುಂಗಿಹುಳದಂತೆ ಕೊರೆಯುತ್ತ ಸುತ್ತುತ್ತಿರುವ ಒಳಸುಳಿಗಳು...

ಲೋಕ ಅರ್ಥವಾಗದೇ ಹೋದಾಗ ಬುದ್ಧಿ ತರ್ಕದ ದಾರಿ ಹಿಡಿಯುತ್ತದೆ. ಎಲ್ಲವನ್ನು ನಂಬಿ ನಿರಾಳವಾಗುವ ಮುಗ್ಧತೆಯೂ ದಕ್ಕದೆ, ಪೂರ್ತಿ ಅರಿವಿನ ಬುದ್ಧ ಜ್ಞಾನ ಸ್ಥಿತಿಯೂ ನಿಲುಕದೆ ರೂಕ್ಷತೆ ಇಣುಕತೊಡಗುತ್ತದೆ. ಎಲ್ಲವನ್ನೂ ಏಕತ್ರವಾಗಿ ಪ್ರೀತಿಸಿ, ಅನುಭವಿಸುವ ಸ್ಥಿತಿಯೇ ನನ್ನ ಅಧ್ಯಾತ್ಮ; ಅದುವೇ ಸರಿಯಾದ ಮಾರ್ಗ ಎನಿಸುವ ಹೊತ್ತಿನಲ್ಲಿ ಈ ಸ್ತರವನ್ನು ತಲುಪಬೇಕಾದರೆ ತಾರ್ಕಿಕ, ತಾತ್ವಿಕ ಹಂದರದಿಂದ ಹೊರಬರಬೇಕಲ್ಲವೆ ಎಂದು ಬೆಳಕಾಗುತ್ತದೆ. ನಡುವೆಯೇ ತರ್ಕದ ಎಳೆ ಒಳನುಸುಳಿ ಸಂಪೂರ್ಣ ಶರಣಾಗತಿ ಜೀವಕ್ಕೆ ಕಷ್ಟವೆನಿಸಿ ಇರುಳಾವರಿಸುತ್ತದೆ.

ಮುಳುಗಿದರೂ ಒದ್ದೆಯಾಗಿಸದ ಬೌದ್ಧಿಕ ವಿಲಾಸದ ನಡುವೆ ಒಮ್ಮೊಮ್ಮೆ ಮಳೆ ಸುರಿಸದೇ ತೋಯಿಸುವವರು ಎದುರಾಗುತ್ತಾರೆ. ಅವರು ನಾನು ಬದುಕಿರುವ ಈ ಕಾಲದ, ನೆಲದ ಜನರೋ ಅಥವಾ ಇನ್ಯಾವುದೋ ಅನೂಹ್ಯ ಲೋಕದ ಸಾಧ್ಯತೆಯೋ ಎಂಬ ಭಾಸ ಮೂಡಿಸುತ್ತಾರೆ.
ಅಂಥ ಕೆಲ ಕ್ಷಣಗಳ ಕುರಿತು...

***
ಜೂನ್ ತಿಂಗಳ ರಾಜಸ್ತಾನ. ಬಿರುಬಿಸಿಲಿಗೆ ಅರಾವಳಿ ಪರ್ವತ ಶ್ರೇಣಿಯೂ ಅದರ ಮೇಲಿರುವ ಗಿಡಗಂಟಿಯೂ ಮಸುಕಾಗಿ ಕಾಣುತ್ತ ಕಂಪಿಸತೊಡಗಿದ್ದವು. ಪರ್ವತ ಶ್ರೇಣಿಯ ಮೇಲೆ ಬಳ್ಳಿಯಂತೆ ಹಬ್ಬಿದ ಜಯಪುರದ ಅಮೇರಿ ಕೋಟೆ, ನಡುನಡುವೆ ಬುರುಜುಗಳು. ನಮ್ಮ ಕಣ್ಣು ಕಂಡದ್ದೇನು ಎಂದು ಗ್ರಹಿಸಿ ಆ ಕುರಿತು ಕೂಡಲೇ ವಿವರಣೆ ಕೊಡುವ ಗೈಡ್.

ಕೋಟೆ ಹತ್ತತೊಡಗಿದೆವು. ಅಕ್ಬರನ ಹಿಂದೂ ಹೆಂಡತಿ ಜೋಧಾ ಹುಟ್ಟಿದ್ದು ಇದೇ ಕೋಟೆಯಲ್ಲಿ; ಔರಂಗಜೇಬನ ಸೈನ್ಯಕ್ಕೆ ತನ್ನ 23 ಕೋಟೆಗಳ ಕಳಕೊಂಡು ನಂತರ ಸಂಧಾನಕ್ಕೆ ಒಪ್ಪಿದ ಶಿವಾಜಿ ಜೈಪುರದ ಅರಸರ ಮೂಲಕ ಮಾತುಕತೆಯಾಡಲು ಬಂದಿದ್ದು ಇದೇ ಕೋಟೆಗೆ; ಅಕೋ ಅಲ್ಲಿ, ಆ ಬೆಟ್ಟತುದಿಯಲ್ಲಿ ಕಾಣುವುದು ಮದ್ದುಗುಂಡು ಸಂಗ್ರಹಾಗಾರ; ಚೀನಾ ಗೋಡೆ ಹಾಗೂ ಕುಂಭಗಢ ಕೋಟೆ ಬಿಟ್ಟರೆ ಇದು ಜಗತ್ತಿನ ಮೂರನೆಯ ಅತಿ ಉದ್ದನೆಯ ಕೋಟೆಗೋಡೆ; ಅಲ್ಲಿ ಕೆಳಗೆ, ರೇಖಾಗಣಿತದ ಆಕೃತಿಗಳಂತೆ ತೋರುವ ತೋಟವಿದೆಯಲ್ಲ, ಅದು ‘ಕೇಸರ್ ಉದ್ಯಾನ. ಅರಸರಿಗೆ ಬೇಕಾದಷ್ಟು ಕೇಸರಿ ಅಲ್ಲೇ ಬೆಳೆಯುತ್ತಿದ್ದರು ಎಂದೆಲ್ಲ ಗೈಡ್ ಕಲಿತ-ತಿಳಿದ ಮಾಹಿತಿಗಳಿಂದ ಸವಿವರ ವರ್ಣನೆಗೆ ತೊಡಗಿದ್ದ.

ಚರಿತ್ರೆಯ ಚದುರಿದ ಮಣಿಗಳ ಹೆಕ್ಕಿ ಎಲ್ಲರೂ ನಮ್ಮನಮ್ಮ ದಾರದಲ್ಲಿ ಪೋಣಿಸಿಕೊಳ್ಳುತ್ತಿದ್ದೆವು. ದೂರದಲ್ಲಿ ನಡೆಯಲಾರದವರ ಹೊತ್ತ ಆನೆಗಳು ಹಿಂಡುಹಿಂಡಾಗಿ ಕೋಟೆ ಹತ್ತುತ್ತಿದ್ದವು. ಅಲ್ಲಿ ಆನೆಗೊಂದು ದಾರಿ, ಅರಸನಿಗೊಂದು ದಾರಿ, ಆಳಿಗೊಂದು ದಾರಿ. ಬಾಬರ್ ಭಾರತಕ್ಕೆ ಮದ್ದುಗುಂಡು ತುಪಾಕಿ ತರುವ ಮೊದಲು ಆನೆಗಳೇ ಸಮೂಹನಾಶಕ ಅಸ್ತ್ರಗಳಲ್ಲವೇ? ಜೈಪುರದ ಅರಸರು ಆನೆಗಳನ್ನು ದಕ್ಷಿಣದಿಂದ ಮಾವುತರ ಸಮೇತ ತರಿಸಿದ್ದರು. ಹೆಂಡಕುಡಿದು ಅಮಲೇರಿದ ಆ ಆನೆಗಳ ಕಾಲ್ತುಳಿತಕ್ಕೆ ಅಪ್ಪಚ್ಚಿಯಾದವರಲ್ಲಿ ಶತ್ರುಸೇನೆಯವರೆಷ್ಟೋ, ಮಿತ್ರ ಸೇನೆಯವರೆಷ್ಟೋ, ‘ಹತ’ ಕುಂಜರಗಳೆಷ್ಟೋ? ಲೆಕ್ಕ ಇಟ್ಟವರಾರು?

ಕಾಲನದಿಯ ಅವಶೇಷಗಳ ನಡುವೆ ನಾವೂ ಒಂದು ಕಣವೆಂದು ಭಾಸವಾಗುತ್ತಿರುವಾಗ ಗಂಟಲು ಒಣಗಿ ತನ್ನಿರವನ್ನು ನೆನಪಿಸಿತು. ಬಾಟಲಲ್ಲಿ ನೀರು ಖಾಲಿ. ಹಸಿವೂ, ನೀರಡಿಕೆಯೂ ಕಲ್ಲನೂ ಕರಗಿಸುವುದೇನೋ ಎನಿಸುವ ಹೊತ್ತಿಗೆ... ಆ ನಾದ ಕೇಳಿಸಿತು. ಇದುವರೆಗೆ ಅಂಥ ಶಬ್ದ ಕೇಳಿರಲಿಲ್ಲ. ತೀರ ಸ್ಪಷ್ಟವಲ್ಲದ, ವೀಣೆ ಪಿಸು ನುಡಿದಂತೆ ಕೇಳುವ ಶಬ್ದ.

ಎತ್ತರದ ಕಲ್ಲು ಗೋಡೆಗಳ ನಡುವೆ ಆಗಸದಿಂದ ಕಪ್ಪು ಮೂರ್ತಿಯೊಂದು ಉದುರಿಬಿದ್ದಿತೋ ಎಂಬಂತೆ ನಾಕಾಳೆತ್ತರಕ್ಕೂ ಮಿಗಿಲಾದ ಕೋಟೆಗೋಡೆಯ ಮೂಲೆಯಲ್ಲಿ ಹಾಸಿದ ಬಟ್ಟೆ ಮೇಲೆ ಆತ ಕೂತಿದ್ದ. ಶ್ವೇತಶುಭ್ರ ವಸನಧಾರಿ. ಮನದಾಳದ ವಿಷಾದ-ಶೋಕ-ಸಂಭ್ರಮ-ಖುಷಿಗಳನ್ನೆಲ್ಲ ತರಂಗಗಳಾಗಿ ಹೊರಗೆಳೆದು ಹಾಕುವವನಂತೆ ತಂಬೂರ ನುಡಿಸುತ್ತಲಿದ್ದ. ಕಪ್ಪನೆಯ ಒರಟು ಬೆರಳುಗಳ ಚಲನೆಗೆ ಹೊಮ್ಮುತ್ತಿದ್ದ ಮಧುರಸ್ವರ. ಅವನ ತನ್ಮಯತೆ ಮುಚ್ಚಿದ ಕಣ್ಣುಗಳಲ್ಲಿದೆಯೋ, ನುಡಿಸುವ ಬೆರಳುಗಳಲ್ಲಿದೆಯೋ, ತಾಳ ಹಾಕುವ ಪಾದದಲ್ಲಿದೆಯೋ? ಸುತ್ತಮುತ್ತ ಬಂದುಹೋಗುವವರ ಪರಿವಿಲ್ಲದೆ ಕುಳಿತ ದೇಹದಲ್ಲಿದೆಯೋ? ಎಲ್ಲವೂ ಹದಗೊಂಡು ನಲಿಯುವುದಕ್ಕೇ ಆ ಜೀವ, ಅವನ ದೇಹ, ಕೋಟೆ ಮೇಲೆ ಬೀಸುವ ಗಾಳಿ ಇರುವಂತೆನಿಸಿ ಯಾವುದೋ ಪ್ರಾಚೀನ ಸೆಳೆತಕ್ಕೊಳಗಾದವರಂತೆ ಅಲ್ಲೇ ನಿಂತೆವು.

ಶಿಲಾಸದೃಶ ಮುಖದಲ್ಲಿ ಏನೋ ಗಾಂಭೀರ್ಯ ಹೊದ್ದವನ ನೋಡಿ ಕುತೂಹಲ ಕಣ್ತೆರೆಯಿತು. ವಾದ್ಯ ನುಡಿಸುವವನ ನುಡಿಸತೊಡಗಿದೆವು.
ಆತ ನುಡಿಸುತ್ತಿದ್ದದ್ದು ತಂಬೂರವಲ್ಲ, ‘ರಾವಣಹತ್ತಾ’. ಅದನ್ನು ರಾವಣ ಶಿವಪೂಜೆಯ ವೇಳೆ ನುಡಿಸುತ್ತಿದ್ದನಂತೆ. ರಾವಣ ತಪಸ್ಸಿಗೆ ಕುಳಿತಾಗ ಈತನ ಸಮುದಾಯವಾದ ‘ಭೋಪರು’ ಇದೇ ವಾದ್ಯ ನುಡಿಸುತ್ತಿದ್ದರಂತೆ. ರಾಮರಾವಣರ ಯುದ್ಧ ನಡೆಯುತ್ತಿದ್ದಾಗ ಹನುಮಂತ ಈ ವಾದ್ಯವನ್ನು ಎತ್ತಿಕೊಂಡು ಉತ್ತರ ಭಾರತಕ್ಕೆ ತಂದ. ಅದನ್ನು ಹುಡುಕುತ್ತ ಇವರೂ ಬಂದವರಂತೆ. ಈಗ ಭಾರತ, ಶ್ರೀಲಂಕಾದಲ್ಲಿ ‘ರಾವಣಹತ್ತಾ’ ಇದೆ ಎಂದ.

ಇಲ್ಲಿ ಅವನ ಊರು ಕೋಟೆಯ ಕೆಳಗೆ ಗುಡ್ಡಗಳ ದಾಟಿ ಇದೆ. ಬೆಳಗ್ಗೆ ಆತ ನಡೆದು ಇಲ್ಲಿ ಬರುತ್ತಾನೆ. ನಾವು ಕಲಿತ ಶಾಲೆಯಲ್ಲಿ ಅವ ಕಲಿಯಲಿಲ್ಲ. ರಾವಣಹತ್ತಾವನ್ನೂ ಕಲಿಯಲಿಲ್ಲ, ಅದು ತಂತಾನೇ ಬಂತು. ಅದನ್ನು ಮನೆಯಲ್ಲಿ ಅವನಪ್ಪ, ತಮ್ಮ, ಅಣ್ಣ, ಮಗ ಎಲ್ಲ ನುಡಿಸುತ್ತಾರೆ. ಮರಳುಗಾಡಿನ ರಾಜ್ಯಗಳ ರಾಜರೂ ಇದನ್ನು ಕಲಿತಿದ್ದರಂತೆ. ಅವನಮ್ಮ, ಹೆಂಡತಿ, ಮಗಳು, ಅಕ್ಕ ಕಲಿತಿರುವರೆ? ಇಲ್ಲಿಲ್ಲ, ಅವರಿಗೆ ಬರುತ್ತದೆ, ಆದರೆ ನುಡಿಸುವಂತಿಲ್ಲ. ಹೆಂಗಸರು ತಾವುತಾವೇ ಹಾಡಿಕೊಳುವಾಗ ಇದನ್ನು ನುಡಿಸುತ್ತಾರೆ.

ಗೂಗಲಿಸಿ ನೋಡಿದರೆ ಕ್ರಿಸ್ತನಿಗಿಂತ ಐದು ಸಾವಿರ ವರ್ಷ ಮುಂಚೆ ಹುಟ್ಟಿತು ಎನ್ನಲಾದ ವಾದ್ಯ ಅದು! ಈ ನೆಲದ ವಾದ್ಯ ಅಲೆಮಾರಿಗಳ ಜೊತೆ ಏಷ್ಯಾದ ಬೇರೆಬೇರೆ ಕಡೆ, ಮಧ್ಯಪ್ರಾಚ್ಯದ ತನಕ ಸಂಚರಿಸಿ ಅರಬರನ್ನೂ, ಸ್ಪೇನಿನವರನ್ನೂ ತಲುಪಿ ಎಲ್ಲೆಡೆ ಹರಡಿಕೊಂಡಿತು. ಅವನ ವಾದ್ಯ ಈಗಿನ ವಯೊಲಿನ್‌ನ ಪಿತಾಮಹ.

ಅವ ಸಣ್ಣಗೆ ನುಡಿಸತೊಡಗಿದ್ದ. ತೆಂಗಿನ ಕರಟದ ಬುರುಡೆಯನ್ನು ಬಿಳಿಯ ಮೇಕೆಚರ್ಮ ಮುಚ್ಚಿತ್ತು. ಕರಟಕ್ಕೆ ಅಂಟಿಕೊಂಡ ಬಿದಿರ ಕೋಲಿನ ಮೇಲೆ ಕುದುರೆ ಬಾಲದ ಒಂದೇ ಒಂದು ಮುಖ್ಯ ತಂತಿ. ಅದರ ಮೇಲಾಡುವ ಬಿಲ್ಲಿಗೂ ಕುದುರೆ ಬಾಲದ ಕೂದಲೇ ಕಟ್ಟಲಾಗಿದೆ. ಕೈಬೆರಳ ಚಾಕಚಕ್ಯತೆಗೆ ಬಿಲ್ಲಿನ ಒಂದು ಕೊನೆಯಲ್ಲಿ ಕಟ್ಟಿದ ಗೆಜ್ಜೆಗಳು ಘಲ್‌ಘಲ್ ಎನ್ನುತ್ತ ತಾಳದ ಕೆಲಸ ನಿರ್ವಹಿಸುತ್ತಿದ್ದವು. ಬೇಟೆಗಾಗಿ, ಯುದ್ಧಕ್ಕಾಗಿ ತಯಾರಾದ ಬಿಲ್ಲಿನಿಂದ ಮಧುರ ರಾಗ ಹೊರಡಿಸಬಲ್ಲ ಮನುಷ್ಯ!

ಭೋಪ ಸಮುದಾಯದವರು ಜಾನಪದ ಹಾಗೂ ಭಕ್ತ ಸಂಪ್ರದಾಯಕ್ಕೆ ಸೇರಿದವರು. ‘ಫಾಡ್’ ಎಂಬ ಬಟ್ಟೆ ಪರದೆಯ ಮೇಲೆ ಬರೆದುಕೊಂಡ ಸ್ಥಳೀಯ ದೈವದ ಮಹಾತ್ಮೆಯನ್ನು ಭೋಪರು ರಾತ್ರಿ ಕಳೆದು ಬೆಳಗಾಗುವ ತನಕ ಹಾಡುತ್ತಾರೆ. ಪೂಜೆ, ಪದ, ಆರತಿ ಎಂದು ಜಾಗರಣೆ ಮಾಡುತ್ತಾರೆ. ಮೊದಲೆಲ್ಲ ಐದಾರು ರಾತ್ರಿ ನಡೆಯುತ್ತಿದ್ದ ಕಾರ್ಯಕ್ರಮ ಈಗ ಒಂದು ರಾತ್ರಿಗೆ ಮುಗಿಯುತ್ತಲಿದೆ.

ಫಾಡ್ (ಪರದೆ) ಎನ್ನುವುದು ಚಲಿಸುವ ದೇವಾಲಯ. ಪರದೆ ಹರಡಿಟ್ಟರೆ ಅದೇ ಪಾಬೂಜಿ ದೇವಾಲಯ. ಪಾಬೂಜಿ ಮರಳುಗಾಡಿನ ಜನಪದ ದೈವ. ಆತ 14ನೇ ಶತಮಾನದ ರಜಪೂತ ರಾಥೋಡ್ ನಾಯಕ. ಸ್ಥಳೀಯರನ್ನು, ಅವರ ಪಶುಗಳನ್ನು ವೈರಿಪಡೆಯಿಂದ ರಕ್ಷಿಸಿದವ. ಪಾಬೂಜಿಯ ಮುಖ್ಯ ಹಾಡುಗಾರರು ಭೋಪರೇ. ಪರದೆಯನ್ನು ಭೋಪರೇ ಒಂದೂರಿನಿಂದ ಇನ್ನೊಂದು ಊರಿಗೆ ಒಯ್ಯುತ್ತಾರೆ. ಐದಾರಡಿ ಉದ್ದದ, ಪಾಬೂಜಿ ದೈವದ ಕಥೆ ಚಿತ್ರಿಸಲ್ಪಟ್ಟ ಪರದೆಯನ್ನು ಎರಡು ಕಂಬಗಳಿಗೆ ಕಟ್ಟುತ್ತಾರೆ. ಸಾಮಾನ್ಯವಾಗಿ ಭೋಪ ಯಾವ ಭಾಗದ ಕುರಿತು ಹಾಡುತ್ತಾನೋ ಅದರ ಬಳಿ ಭೋಪನ ಹೆಂಡತಿ ಭೋಪಿ ದೀಪ ಹಿಡಿದು ನಿಂತಿರುತ್ತಾಳೆ. ಅವಳೂ ಕೆಲವೊಮ್ಮೆ ಹಾಡುತ್ತಾಳೆ. ತಮ್ಮ ಹಾಡಿಗೆ ಜೊತೆಯಾಗಿ ‘ರಾವಣಹತ್ತಾ’ ನುಡಿಸುತ್ತಾರೆ. ಈ ಕಾರ್ಯಕ್ರಮ ಏರ್ಪಡಿಸಿದರೆ ಊರಿಗೆ ಅಥವಾ ವ್ಯಕ್ತಿಗೆ ಬಂದ ಕಷ್ಟ, ದುರದೃಷ್ಟ ತೊಲಗುತ್ತದೆ ಎಂಬ ನಂಬಿಕೆಯಿದೆ.

ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ಈ ಜನಪದ ಹಾಡುಗಾರರನ್ನು ಎಲ್ಲ ಸ್ಮಾರಕಗಳ ಬಳಿಯೂ ಇರಿಸಿದೆ. ನಾವಲ್ಲಿ ನಿಂತ ಹಾಗೆ ಸಾಂಪ್ರದಾಯಿಕ ಉಡುಪು ತೊಟ್ಟು ಮುಖ ಕಾಣಿಸದಂತೆ ಸೆರಗೆಳೆದುಕೊಂಡ ಭೋಪಿ ಬಂದಳು, ಮರಿ ಭೋಪನೂ ಬಂದ. ದಪ್ಪ ಸ್ವರದ ಭೋಪಿ ಸ್ಥಳೀಯ ಶೈಲಿಯಲ್ಲಿ ‘ನಿಮುಡಾ ನಿಮುಡಾ’ ಹಾಡಿದಳು. ಅದು ಮೂಲತಃ ತಮ್ಮ ಹಾಡಾಗಿದ್ದು ಸಿನಿಮಾ ಜನ ಅಳವಡಿಸಿಕೊಂಡಿದ್ದಾರೆ ಎಂದರು. ಡೋಲಕ್ ಹಿಡಿದ ಮರಿ ಲಯಬದ್ಧವಾಗಿ ನುಡಿಸುತ್ತಿತ್ತು.

ನಾವು ಮುಂದೆಮುಂದೆ ಹೋದರೂ ಮತ್ತದೇ ನಾದ ಕೇಳತೊಡಗಿತು. ಎಲ್ಲಿಯ ಲಂಕಾರಾಜ್ಯದ ರಾವಣ? ಎಲ್ಲಿಯ ಥಾರ್ ಮರುಭೂಮಿಯ ರಾಜಸ್ತಾನದ ಭೋಪ ಸಮುದಾಯ? ಯಾರು ಎಲ್ಲಿಯ ಮೂಲ ನಿವಾಸಿಗಳು? ಯಾರು ವಲಸಿಗರು? ಲೌಕಿಕದ ಪ್ರಶ್ನೆಗಳು ಮನದಲ್ಲಿ ಸುಳಿಯುತ್ತಿರುವಾಗ ತಲೆ ಮೇಲೆ ಏನೋ ಬಿತ್ತು. ಕತ್ತೆತ್ತಿ ನೋಡಿದರೆ ಹತ್ತಾಳೆತ್ತರದ ಕೋಟೆಯ ದಿಡ್ಡಿಬಾಗಿಲ ಮೇ..ಲೆ ಪಾರಿವಾಳದ ಅಸಂಖ್ಯ ಗೂಡುಗಳು. ಮರಿಗಳು ಗದ್ದಲ ಹಾಕುತ್ತ ತಲೆಮೇಲೆ ಹಿಕ್ಕೆಪ್ರಸಾದ ಉದುರಿಸಿದ್ದವು. ಈ ಚಾರಿತ್ರಿಕ ಸ್ಥಳಗಳು ಕೇವಲ ನಿಮ್ಮ ಪಿತ್ರಾರ್ಜಿತ ಸೊತ್ತಲ್ಲ ಎಂದು ಅಣಕಿಸುತ್ತ ಮಂಗನ ಹಿಂಡು ಸರಿದುಹೋಯಿತು. ಪಾರಿವಾಳದ ಹಿಕ್ಕೆ ನೆತ್ತಿಯನ್ನೆಲ್ಲ ಅಂಟಂಟಾಗಿಸುತ್ತಿರುವಾಗ ಮಾಧುರ್ಯವು ಆವರಣದಲ್ಲೆಲ್ಲ ತುಂಬಿಕೊಳ್ಳುತ್ತಿತ್ತು.

ಇಹದ ವ್ಯಾಪಾರಗಳಾವುವೂ ತನಗೆ ಸಂಬಂಧವಿಲ್ಲ, ಈ ತಂತಿಗಳ ನುಡಿಸುವುದೊಂದೇ ತನಗೆ ಗೊತ್ತು ಎನ್ನುವಂತೆ ಆಕಾಶದತ್ತ ಕತ್ತೆತ್ತಿ ಕಣ್ಮುಚ್ಚಿ ಕಾಲಾತೀತ ಮುಖಭಾವದಲ್ಲಿ ಮಿಡಿಯತೊಡಗಿದ್ದ ಆತ. ಅವನ ಮರಿಯು ಇಡೀಮುಖದಲ್ಲಿ ಸಣ್ಣ ನಗೆ, ನಾಚಿಕೆ ತುಂಬಿಕೊಂಡಿತ್ತು. ನಮ್ಮ ದೃಷ್ಟಿ ತಪ್ಪಿಸಲು ಕಣ್ಣು ಹೊರಳಿಸುತ್ತ, ಅಪ್ಪನ ಅಂಗಿ, ಚುಂಗು, ವಾದ್ಯಗಳ ಮುಟ್ಟುತ್ತ ಅಮ್ಮನ ತೊಡೆಯೇರಿ ಕೂತಿತ್ತು. ಮುಗ್ಧತೆಯಲ್ಲಿ, ಕುತೂಹಲದಲ್ಲಿ, ಲಜ್ಜೆಯಲ್ಲಿ ಎಂಥವರನ್ನೂ ಕರಗಿಸಿಬಿಡುವ ಮಗುತನ ಆ ಕಾಜಗಣ್ಣಿನಲ್ಲಿ ಹೊರಸೂಸುತ್ತಿತ್ತು. ಪ್ರತಿಯೊಬ್ಬನಲ್ಲೂ ಇರುವ ಮಗುತನವ ಹೊರಗೆಳೆವಂತಿರುವ ತಂಬೂರಿ ನಾದ...
ನಿಜ ಶಿಶುನಾಳಾಧೀಶ,
ಹಸನಾದ ಮೇಳಕೆ ತಂಬೂರಿ,
ಇದು ಕುಶಲರಿಗೊಪ್ಪುವ ತಂಬೂರಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT