ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸಣ್ಣ ವಿಚಾರವೇ?

Last Updated 4 ಜೂನ್ 2014, 19:30 IST
ಅಕ್ಷರ ಗಾತ್ರ

‘ಸಣ್ಣ ವಿಚಾರವನ್ನು ದೊಡ್ಡದು ಮಾಡಿ ರಾಜ್ಯ ಮೀಸಲು ಪೊಲೀಸ್‌ ಪಡೆ ಎಡಿಜಿಪಿ ಡಾ. ಪಿ. ರವೀಂದ್ರನಾಥ್‌ ಅವರಿಗೆ ಅನ್ಯಾಯ ಎಸಗ­ಲಾ­ಗು­ತ್ತಿದೆ. ಇಡೀ ಪ್ರಕರಣ ದಲಿತ ಅಧಿಕಾರಿಯೊಬ್ಬರಿಗೆ ಮಾಡಿದ ಅನ್ಯಾಯ’ ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಆಡಿದ ಮಾತು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ರವೀಂದ್ರನಾಥ್‌ ಮೇಲಿ­ರುವ ಆರೋಪ ಎಂದರೆ ರೆಸ್ಟೊರೆಂಟ್‌ನಲ್ಲಿ ಕುಳಿತ ಯುವತಿಗೆ ಗೊತ್ತಿಲ್ಲದಂತೆ ಆಕೆಯ ಚಿತ್ರ ತೆಗೆದದ್ದು. ಯಾರೇ ಹೀಗೆ ಮಾಡಿದರೂ ಅದು ಅನುಚಿತ, ಆಕ್ಷೇ­ಪಾರ್ಹ ನಡೆ ಎನಿಸಿಕೊಳ್ಳುತ್ತದೆ.

ರವೀಂದ್ರನಾಥ್‌ ಸಾಮಾನ್ಯ ವ್ಯಕ್ತಿ­ಯಲ್ಲ; ನಾಗರಿಕರ ಮಾನ, ಪ್ರಾಣ ರಕ್ಷಣೆಯ ಜವಾಬ್ದಾರಿ ಹೊತ್ತ ಇಲಾಖೆ­ಯೊಂದರ ಉನ್ನತಾಧಿಕಾರಿ. ಅಲ್ಲದೆ ಈ ಬಗ್ಗೆ ದೂರು, ಪ್ರತಿ ದೂರು ದಾಖ­ಲಾ­ಗಿದ್ದು, ಸಿಐಡಿ ತನಿಖೆಯೂ ನಡೆಯುತ್ತಿದೆ. ಅದು ಮುಗಿಯುವ ತನಕವೂ ಕಾಯದೆ ಸಚಿವರು ಇಡೀ ಪ್ರಕರಣಕ್ಕೆ ಜಾತಿ ಬಣ್ಣ ಬಳಿಯುತ್ತಿದ್ದಾರೆ.   ಆರೋಪಿ ಸ್ಥಾನದಲ್ಲಿ ಇರುವ ಅಧಿಕಾರಿ ಪರ ವಕಾಲತ್ತು ಮಾಡುತ್ತಿದ್ದಾರೆ.   ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ರವೀಂದ್ರನಾಥ್‌ ವಿರುದ್ಧ ಷಡ್ಯಂತ್ರ ನಡೆಸಿ­­ರುವ ಹೈಗ್ರೌಂಡ್‌್ಸ ಠಾಣೆ ಎಸ್‌ಐ ರವಿ ವಿರುದ್ಧ ಕ್ರಮ ತೆಗೆದುಕೊಳ್ಳ­ಬೇಕು’ ಎಂದು ಒತ್ತಾಯಿಸಿದ್ದಾರೆ. ಎಸ್‌ಐ ರವಿ ಕೂಡ ದಲಿತ ಸಮುದಾಯ­ದ­ವರು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಅವರೇ ಹೇಳಿದ್ದರು.

ಹಾಗಿದ್ದರೆ ರವಿ ಪರವಾಗಿಯೂ  ಶ್ರೀನಿವಾಸ್‌ ಪ್ರಸಾದ್‌ ಏಕೆ ಮಾತನಾಡುತ್ತಿಲ್ಲ? ಅವರು ಎಡಿ­­ಜಿ­ಪಿ­ಯಂಥ ಪ್ರಭಾವಿ ಅಧಿಕಾರಿ ಅಲ್ಲ; ಬರೀ ಎಸ್‌ಐ ದರ್ಜೆಯ ಕಿರಿಯ ನೌಕರ ಎನ್ನುವ ಕಾರಣಕ್ಕಾಗಿಯೇ? ಘಟನೆಯಿಂದ ಮಾನಸಿಕ ಯಾತನೆ ಅನು­­­ಭ­ವಿ­ಸು­ತ್ತಿರುವ ಆ ಇಬ್ಬರು ಯುವತಿಯರ ನೋವಿನ ಬಗ್ಗೆ  ಮೌನ ವಹಿ­ಸಿ­ರು­­ವು­ದೇಕೆ? ಸರ್ಕಾರದಲ್ಲಿ ಇರುವವರೇ ಪಕ್ಷಪಾತದಿಂದ ವರ್ತಿಸಿದರೆ ಹೇಗೆ? ಇದೇ ಪ್ರವೃತ್ತಿ ಮುಂದುವರಿದರೆ ಉನ್ನತ ಸ್ಥಾನದಲ್ಲಿರುವವರ ವಿರುದ್ಧ ಸಾಮಾನ್ಯ ಜನ ದೂರು ಕೊಡಲು ಹಿಂಜರಿಯುವ ಸ್ಥಿತಿಯೂ ಬರ­ಬಹುದು ಎನ್ನುವುದು ಸಚಿವರ ಗಮನದಲ್ಲಿ ಇರಬೇಕಾಗಿತ್ತು. ರವೀಂದ್ರ­ನಾಥ್‌ ವಿರುದ್ಧದ ಷಡ್ಯಂತ್ರ ಏನು ಎನ್ನುವುದನ್ನೂ ಅವರು ಬಹಿರಂಗಪಡಿಸ­ಬೇಕು, ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಾಹಿತಿ ಕೊಟ್ಟು ಸಹ­ಕರಿ­­ಸ­­­ಬೇಕು. ಅದನ್ನು ಬಿಟ್ಟು, ಆರೋಪಿ ಸ್ಥಾನ­ದಲ್ಲಿ­ರುವ­ವರನ್ನು ಬಹಿರಂಗ­ವಾಗಿ ಬೆಂಬಲಿಸಿ ಅದೇ ಉಸಿರಿನಲ್ಲಿಯೇ ‘ನಿಷ್ಪಕ್ಷ­ಪಾತ ತನಿಖೆ ನಡೆಯಬೇಕು’ ಎಂದು ಕೇಳುವುದು ಅರ್ಥಹೀನ ಎನಿಸಿಕೊಳ್ಳು­ತ್ತದೆ.

ಮಂತ್ರಿ ಸ್ಥಾನದಲ್ಲಿ ಇರುವವರು ಪಕ್ಷಪಾತದಿಂದ ಮಾತನಾಡುವು­ದನ್ನು ಬಿಟ್ಟಾಗಲೇ ತನಿಖೆ ನಿಷ್ಪಕ್ಷಪಾತವಾಗಿ ಇರಲು ಸಾಧ್ಯ. ಇದನ್ನೆಲ್ಲ ನೋಡಿ­­ದರೆ ತಮ್ಮ ಸಂಪುಟದ ಸಚಿವರನ್ನು ನಿಯಂತ್ರಿಸಲು ಮುಖ್ಯಮಂತ್ರಿ­ಗಳಿಗೆ ಆಗುತ್ತಿಲ್ಲ ಎನ್ನುವ ಅನುಮಾನ ಬರುತ್ತದೆ. ದಲಿತರೊಬ್ಬರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಧಾಟಿಯಲ್ಲಿಯೇ ಇಡೀ ಪ್ರಕರಣವನ್ನು ಬಿಂಬಿಸುವ ಪ್ರಯತ್ನ  ನಡೆದಿದೆ. ತಾವು ದಲಿತ ಎಂಬ ಕಾರಣ­ಕ್ಕಾಗಿ ತಮ್ಮನ್ನು ತುಳಿಯುತ್ತಿದ್ದಾರೆ, ದಲಿತ ಎಂದು ನಿಂದಿಸುತ್ತಿದ್ದಾರೆ ಎಂಬು­ದಾಗಿ ರವೀಂದ್ರನಾಥ್‌ ಹೇಳುತ್ತಿದ್ದಾರೆ. ಮೀಸಲಾತಿ ಎನ್ನುವುದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬರಲು ದಲಿತರಿಗೆ, ಶೋಷಿತರಿಗೆ ಸಂವಿ­ಧಾನ ನೀಡಿರುವ ಹಕ್ಕು. ಆದರೆ ಕಾನೂನಿನ ಪ್ರಕ್ರಿಯೆಯಲ್ಲಿ ಮಾತ್ರ ಯಾರಿಗೂ ವಿನಾಯಿತಿ ಇಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿ­ಕೊಳ್ಳ­ಬೇಕು.

ಶಿಸ್ತಿಗೆ ಹೆಸರಾದ ಪೊಲೀಸ್‌ ಇಲಾ­ಖೆಯ ಉನ್ನತಾಧಿಕಾರಿ ಇಲಾಖೆಯ ಘನತೆ, ಕಟ್ಟುಪಾಡುಗಳಿಗೆ ಒಳಪಟ್ಟೇ ವರ್ತಿಸ­ಬೇಕು. ಟಿ.ವಿ. ಕ್ಯಾಮೆರಾಗಳ ಮುಂದೆ ನಿಂತು ಗೃಹ ಸಚಿವರಿಗೆ ಸಲಹೆ ಕೊಡು­ವುದು, ತಮ್ಮ ವರ್ಗಾವಣೆ ವಿಚಾರದಲ್ಲಿ ಉನ್ನತ ಸ್ಥಾನದಲ್ಲಿ ಇರುವ­ವರ ಮೇಲೆ ಗೂಬೆ ಕೂರಿಸುವುದು, ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿ­ಗಳನ್ನು ಬೈಯುವುದು ಅಶಿಸ್ತು ಎನಿಸಿಕೊಳ್ಳುತ್ತದೆ. ಹೀಗೆ ಅಧಿಕಾರಿ­ಗಳೆಲ್ಲ ನ್ಯಾಯ ಪಡೆಯಲು ಕಾನೂನಿನ ದಾರಿ ಬಿಟ್ಟು ಬಹಿರಂಗವಾಗಿ ಮಾತಿನ ಸಮರಕ್ಕೆ ಇಳಿದರೆ ಅರಾಜಕತೆ ಸೃಷ್ಟಿಯಾದೀತು. ಅದಕ್ಕೆಲ್ಲ  ಅವ­ಕಾಶ ಕೊಡದೇ ಮುಖ್ಯಮಂತ್ರಿಗಳು ದೃಢ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT