ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಷ್ಟು ಸುಧಾರಣೆ ಅಗತ್ಯ

ಚೇತರಿಕೆ ಹಾದಿಯಲ್ಲಿ ದೇಶದ ಅರ್ಥ ವ್ಯವಸ್ಥೆ: ರಾಜನ್‌
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ‘ದೇಶದ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ. ಇದರಲ್ಲಿ ಸಂಶಯವೇ ಇಲ್ಲ.  ಬಂಡವಾಳ ಹೂಡಿಕೆ ಒಳಹರಿವು ಹೆಚ್ಚಾಗುತ್ತಿದೆ. ಆದರೆ ಆರ್ಥಿಕ ಪ್ರಗತಿಯ ವೇಗ ಹೆಚ್ಚಿಸಲು ಮತ್ತು ಸ್ಥಗಿತಗೊಂಡಿರುವ ಯೋಜನೆಗಳ ಜಾರಿಗೆ ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳ ಅಗತ್ಯವಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ರಘುರಾಂ ರಾಜನ್‌ ಅಭಿಪ್ರಾಯಪಟ್ಟರು.

ಜಾಗತಿಕ ಅಂಶಗಳಿಂದಾಗಿ ದೇಶದ ರಫ್ತು ವಹಿವಾಟು ಮಂದಗತಿಯಲ್ಲೇ ಸಾಗಿದೆ. ಇದು ಕಳವಳಕಾರಿ ಅಂಶವಾಗಿದೆ ಎಂದರು.

ಇಲ್ಲಿ ಗುರುವಾರ ನಡೆದ ಆರ್‌ಬಿಐ ನಿರ್ದೇಶಕ ಮಂಡಳಿಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಸುಧಾರಿ ಸುತ್ತಿದೆ. ಬಂಡವಾಳ ಹೂಡಿಕೆಯೂ ಹೆಚ್ಚಿದೆ. ಈ ಹಂತದಲ್ಲಿ ಸ್ಥಿಗಿತಗೊಂಡಿ ರುವ ಕೆಲವು ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ಹೇಳಿದರು.

ದೇಶದ ಅರ್ಥ ವ್ಯವಸ್ಥೆ ಸಮಸ್ಥಿತಿ ಯಲ್ಲಿ ಚೇತರಿಸಿಕೊಳ್ಳುತ್ತಿದೆ. ವೇಗವಾಗಿ ಪ್ರಗತಿ ಸಾಧಿಸಬೇಕಾದರೆ, ಬಲಿಷ್ಠ ಮತ್ತು ಸ್ಥಿರ ಪ್ರಗತಿ ಸಾಧಿಸಬೇಕಾದರೆ ಹಲವು ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಹಣದುಬ್ಬರ ಮತ್ತು ಮುಂಗಾರು ಮಳೆ: ಹಣದುಬ್ಬರದ ಏರಿಳಿತ ಪ್ರಗತಿಯ ದಿಕ್ಕನ್ನು ನಿರ್ಧರಿಸುತ್ತದೆ. ಇನ್ನು ಮುಂಗಾರು ಮಳೆಗೆ ಸಂಬಂಧಿಸಿದಂತೆ ಹೇಳುವುದಾದರೆ ಈವರೆಗೆ ಉತ್ತಮ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂದಾಜು ಮಾಡಿರುವುದಕ್ಕಿಂತಲೂ ಜೂನ್‌ನಲ್ಲಿ ಶೇ 28ರಷ್ಟು ಹೆಚ್ಚೇ ಮಳೆಯಾಗಿದೆ ಎಂದರು.

ಮುಂದಿನ ಎರಡರಿಂದ ಮೂರು ತಿಂಗಳುಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಐಎಂಡಿ ಸೂಚನೆ ನೀಡಿದೆ.  ಇನ್ನೊಂದೆಡೆ  ಖಾಸಗಿ ಹವಾಮಾನ ಇಲಾಖೆಗಳು ನೀಡಿರುವ ಮುನ್ನೋಟ ದಂತೆ ಮಳೆ ಸುರಿಯುವ ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಮಳೆ ಸುರಿಯುವ ಪ್ರಮಾಣವೂ ಹಣದುಬ್ಬರದ ಮೇಲೆ ಪ್ರಭಾವ ಬೀರಲಿದೆ ಎಂದರು.

ಜಾಗತಿಕ ಅರ್ಥ ವ್ಯವಸ್ಥೆ  ಚೇತರಿಕೆ: ಜಾಗತಿಕ ಅರ್ಥ ವ್ಯವಸ್ಥೆ ಕುರಿತಂತೆ ರಾಜನ್‌ ಅವರು ಈಗ ತಮ್ಮ ಅಭಿಪ್ರಾಯ ವನ್ನು ಬದಲಿಸಿದ್ದಾರೆ. ಜಾಗತಿಕ ಅರ್ಥ ವ್ಯವಸ್ಥೆ ಮಂದಗತಿಯಲ್ಲಿ ಚೇತರಿಕೆ ಕಂಡುಕೊಳ್ಳುತ್ತಿದೆ. ಆದರೆ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದರೆ 1930 ರಲ್ಲಿ ಕಂಡಂತಹ ಆರ್ಥಿಕ ಕುಸಿತ ಎದುರಾಗುವಂತೇನೂ ಇಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ  ಲಂಡನ್‌ನಲ್ಲಿ ಮಾತ ನಾಡಿದ ಅವರು, ವಿವಿಧ ದೇಶಗಳು ಅನುಸರಿಸುತ್ತಿರುವ ಸ್ಪರ್ಧಾತ್ಮಕ ಹಣ ಕಾಸು ನೀತಿಯಿಂದ ಜಾಗತಿಕ ಅರ್ಥ ವ್ಯವಸ್ಥೆಯು ಮತ್ತೊಮ್ಮೆ 1930ರಲ್ಲಿ ಕಂಡಂತಹ ಆರ್ಥಿಕ ಹಿಂಜರಿತವನ್ನು ಎದುರಿಸಬೇಕಾಗಿ ಬರಬಹುದು ಎಂದಿದ್ದರು.
ವಿಶ್ವ ಆರ್ಥಿಕ ವ್ಯವಸ್ಥೆ ಬಗ್ಗೆ ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಚೇತರಿಕೆ ಉತ್ತಮವಾಗಿಲ್ಲ. ಹೀಗಿದ್ದರೂ ಸಹ 1930ರಲ್ಲಿ ಕಂಡಂತಹ ಆರ್ಥಿಕ ಕುಸಿತ ಎದುರಾಗುವುದಿಲ್ಲ ಎಂದಿದ್ದಾರೆ.

ಲಂಡನ್‌ನಲ್ಲಿ ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT