ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಪೊಲೀಸ್‌ ಠಾಣೆಯಲ್ಲಿ ಶಾಲಾ ದಾಖಲೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ
Last Updated 2 ಸೆಪ್ಟೆಂಬರ್ 2014, 6:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಶಾಲಾ ಆಡಳಿತ ಮಂಡಳಿಯವರು ಇನ್ನು ಮುಂದೆ ಶಿಕ್ಷಕರು, ಸಿಬ್ಬಂದಿ ಜೊತೆ ಮಂಡಳಿ ಪದಾಧಿಕಾರಿಗಳ ವಿಳಾಸ ಮತ್ತು ವಿವರವನ್ನು ಸಮೀಪದ  ಪೊಲೀಸ್‌ ಠಾಣೆಯಲ್ಲಿ ದಾಖಲಿಸಬೇಕು. ಅಪ್ರಾಪ್ತ ವಿದ್ಯಾರ್ಥಿನಿಯರು ಒಂಟಿ­ಯಾಗಿ ಪುರುಷ ಸಿಬ್ಬಂದಿ ಜೊತೆ ಇರದಂತೆ ನೋಡಿಕೊಳ್ಳಬೇಕು. ಪ್ರತಿ­ಯೊಂದು ಶಾಲೆಯು ‘ಮಕ್ಕಳ ಸುರಕ್ಷಾ ಸಮಿತಿ’ ರಚಿಸಬೇಕು.

–ಇದು ಸಾರ್ವಜನಿಕ ಶಿಕ್ಷಣ ಇಲಾಖೆಯು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ­ಗಳಿಗೆ ಹೊರಡಿಸಿರುವ ಸುತ್ತೋಲೆ­ಯಲ್ಲಿನ ಪ್ರಮುಖ ಸೂಚನೆಗಳು.

ಈಚೆಗೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ತಡೆಗೆ ಸಾರ್ವಜನಿಕ ಶಿಕ್ಷಣ ಇಲಾ­ಖೆಯು ಈ ಸುತ್ತೋಲೆ ಹೊರಡಿಸಿದ್ದು, ‘ಇದು ಅತಿ ಸೂಕ್ಷ್ಮ ವಿಚಾರವಾಗಿದ್ದು, ಪ್ರಥಮ ಆದ್ಯತೆ ಮೇರೆಗೆ ಕಾರ್ಯ­ಪ್ರವೃತ್ತರಾಗಿ’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಸುಮಾರು ಎಂಟು ಪುಟಗಳಷ್ಟು ಸೂಚನೆ­ಗಳನ್ನು ಹೊರಡಿಸಿದ್ದು, ಅದರಲ್ಲಿ ಎಲ್ಲರ ಜವಾಬ್ದಾರಿಯುತ ಹೊಣೆಗಾರಿಕೆ ಬಗ್ಗೆ ತಿಳಿಸಿದೆ.

ಪೊಲೀಸ್ ಇಲಾಖೆಗೆ ಮಾಹಿತಿ: ಬಹುತೇಕ ಎಲ್ಲ ಶಾಲೆಗಳು ಈಗ ಪೊಲೀಸ್‌ ಇಲಾಖೆ ನಿಗಾ ಮತ್ತು ಸುಪರ್ದಿ­ಯಲ್ಲಿ ನಡೆಯಬೇಕು. ಪ್ರತಿ ಶಾಲೆಯೂ ಸಿಬ್ಬಂದಿ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ದಾಖಲಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಪೊಲೀಸ್‌ ಠಾಣೆ ಗಮನಕ್ಕೆ ತರಬೇಕು.

ಶಾಲೆ ಜೊತೆ ಪೋಷಕರ ಜವಾ­ಬ್ದಾರಿ, ಪೊಲೀಸ್‌ ಇಲಾಖೆ ಕೈಗೊಳ್ಳ­ಬೇಕಾದ ಕ್ರಮ, ಶಾಲಾ ವಾಹನಗಳ ನಿರ್ವಹಣೆ ಬಗ್ಗೆಯೂ ಸೂಚಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆ, ಹಾಸ್ಟೆಲ್‌, ಪ್ಲೇ ಹೋಮ್‌, ಮಾಂಟೆಸರಿ ಮಾದರಿ, ಸ್ವಯಂ ಸೇವಾ ಸಂಸ್ಥೆ, ಧಾರ್ಮಿಕ ಮತ್ತು ಧರ್ಮ ಸಂಸ್ಥೆಗಳಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ‘ಮಕ್ಕಳ ಸುರಕ್ಷತಾ ಯೋಜನೆ’ ಸಿದ್ಧಪಡಿ­ಸುವುದರ ಬಗ್ಗೆಯೂ ಸೂಚನೆಯಲ್ಲಿ ವಿವರಿಸಲಾಗಿದೆ.

ಶಾಲಾ ಆಡಳಿತ ಮಂಡಳಿಯವರು ಹೊರ ಗುತ್ತಿಗೆ ಕೆಲಸ ಹಾಗೂ ಸಾರಿಗೆ ಸುರಕ್ಷತೆ, ಹೌಸ್‌ ಕೀಪಿಂಗ್‌ ಮುಂತಾದ ಕೆಲಸಗಳಿಗೆ ವಿಶ್ವಾಸಾರ್ಹ ಏಜ್ಸೆನಿ­ಯಿಂದ ನೇಮಿಸಿಕೊಳ್ಳಬೇಕು.

ಜಾಗೃತಾಧಿಕಾರಿ ನೇಮಕ: ಶಾಲೆ­ಯಿಂದ ಮಕ್ಕಳನ್ನು ಕಳುಹಿಸುವಾಗ ಪೋಷಕರು ಅಥವಾ ಸಂಬಂಧಿಕರ (ಅಧಿಕೃತ ಗುರುತಿನ ಚೀಟಿ ಹೊಂದಿ­ರುವವರು) ಜೊತೆ ಮಾತ್ರ ಕಳುಹಿ­ಸಬೇಕು. ಶಾಲೆ­ಯಲ್ಲಿ ಇಡೀ ದಿನದ ಚಟುವ­ಟಿಕೆಯನ್ನು ಗಮನಿಸಲು ಸಿಬ್ಬಂದಿ ವ್ಯಾಪ್ತಿಯಲ್ಲೇ ಸರದಿ ಪ್ರಕಾರ ಜಾಗೃತಾ­ಧಿಕಾರಿ ನೇಮಿಸಬೇಕು ಎಂದು ಸೂಚಿ­ಸಿದೆ.

ಕಷ್ಟ: ಪಠ್ಯಕ್ರಮ ನಿಗದಿತ ಅವಧಿ­ಯೊಳಗೆ ಪೂರೈಸಲು ಸಾಧ್ಯವಾಗ­ದಿದ್ದರೆ, ಹೆಚ್ಚುವರಿ ಪಾಠಗಳನ್ನು ನಡೆಸಲು ಪೊಲೀಸ್ ಇಲಾಖೆ­ಯಿಂ­ದಲೇ ಅನುಮತಿ ಪಡೆಯ­ಬೇಕಾ­ಗುತ್ತದೆ. ಶಾಲಾ ಅವಧಿ ಹೊರತುಪಡಿಸಿ ಬೇರೆ ಅವಧಿಯಲ್ಲಿ ಹೆಚ್ಚುವರಿ ತರಗತಿ ವೇಳೆ ಏನಾದರೂ ನಡೆದರೆ ಅದಕ್ಕೆ ನಾವೇ ಜವಾಬ್ದಾರರಾ­ಗಬೇಕಿದೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಕರೆದೊ­ಯ್ಯುವುದೇ ಕಷ್ಟ. ಕಾರ್ಯಕ್ರಮದ ನಂತರ ನಾವೇ ಖುದ್ದಾಗಿ ಅವರನ್ನು ಮನೆಗೆ ಬಿಟ್ಟು ಬರಬೇಕು. ಒಂದು ವೇಳೆ ನಾವು ಒಬ್ಬಂಟಿಯಾಗಿ ವಿದ್ಯಾರ್ಥಿ­ನಿಯನ್ನು ಮನೆಗೆ ಕಳುಹಿಸುವಾಗ ಅವಘಡ ಸಂಭವಿಸಿದರೆ, ಅದಕ್ಕೆ ನಾವೇ ಹೊಣೆ ಹೊರಬೇಕಾಗುತ್ತದೆ. ಮಕ್ಕಳ ಸುರಕ್ಷತೆ ಶಿಕ್ಷಕರ ಹೊಣೆ ಮಾತ್ರವಲ್ಲ ಎಲ್ಲರ ಹೊಣೆ ಎಂಬ ಮನೋಭಾವ ಮೂಡ­ಬೇಕು’ ಎಂದು ಶಿಕ್ಷಕಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT