ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್ ಲಾಭ ರೂ. 2,992 ಕೋಟಿ

2013–14ರಲ್ಲಿ ರೂ. 50 ಸಾವಿರ ಕೋಟಿ ದಾಟಿದ ವರಮಾನ
Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್‌ ರಫ್ತು ಕ್ಷೇತ್ರ ದಲ್ಲಿ ದೇಶದ ಎರಡನೇ ಅತಿ ದೊಡ್ಡ ಕಂಪೆನಿಯಾದ ‘ಇನ್ಫೊಸಿಸ್‌’ ಮಾರ್ಚ್‌ 31ಕ್ಕೆ ಕೊನೆ­ಗೊಂಡ 2013–14ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ­–ಮಾರ್ಚ್‌) ರೂ.2,992 ಕೋಟಿ ನಿವ್ವಳ ಲಾಭ ಗಳಿಸಿದೆ. ಮೂರನೇ ತ್ರೈಮಾ­ಸಿಕಕ್ಕೆ ಹೋಲಿ­ಸಿದರೆ ನಿವ್ವಳ ಲಾಭದಲ್ಲಿ ಶೇ 4.1ರಷ್ಟು ಮತ್ತ ವಾರ್ಷಿಕವಾಗಿ ಶೇ 25­ರಷ್ಟು ಏರಿಕೆ ಕಂಡುಬಂದಿದೆ.

ದಾಖಲೆ: 2013–14ನೇ ಸಾಲಿನ ನಾಲ್ಕೂ ತ್ರೈಮಾ­­ಸಿಕ­ಗಳು ಸೇರಿ ಕಂಪೆನಿ ರೂ.50,133 ಕೋಟಿ ವರಮಾನ ಗಳಿಸಿದೆ. ಇನ್ಫೊಸಿಸ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಾರ್ಷಿಕ ವರಮಾನ ರೂ.50 ಸಾವಿರ ಕೋಟಿ ಗಡಿ ದಾಟಿದೆ ಎಂದು ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಂಪೆನಿಯ ‘ಸಿಇಒ’ ಎಸ್‌.ಡಿ.ಶಿಬುಲಾಲ್‌ ಹೇಳಿದರು.

ಜನವರಿ­ –ಮಾರ್ಚ್‌ ತ್ರೈಮಾಸಿಕದಲ್ಲಿ ರೂ.12,875 ಕೋಟಿ ವರಮಾನ ದಾಖ­ಲಾ­ಗಿದ್ದು ಶೇ 1.2ರಷ್ಟು ಕುಸಿತ ಕಂಡಿದೆ. ಅಮೆರಿಕ ಮತ್ತು ಯೂರೋಪ್‌ ಮಾರು­­ಕಟ್ಟೆಯಲ್ಲಿ ಮುಂದು­ವರಿ­ದಿರುವ ಅಸ್ಥಿ­ರತೆ ವರಮಾನದ ಮೇಲೆ ನಕಾ­ರಾತ್ಮಕ ಪರಿಣಾಮ ಬೀರಿದೆ. ಆದರೆ, ಮುಂಬ­ರುವ ತ್ರೈಮಾ­ಸಿಕಗಳಲ್ಲಿ ವಹಿವಾಟು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. 92 ಗ್ರಾಹಕ ಸಂಸ್ಥೆಗಳು ಹೊಸ­ದಾಗಿ ಸೇರ್ಪ­ಡೆಯಾಗಿವೆ. 2014–15ನೇ ಸಾಲಿ­ನಲ್ಲಿ ವರಮಾ­ನದಲ್ಲಿ ಶೇ 7ರಿಂದ ಶೇ 9ರಷ್ಟು ಪ್ರಗತಿ ಅಂದಾಜು ಮಾಡಿದ್ದೇವೆ ಎಂದು ಅವರು ಹೇಳಿದರು.

ನಾಸ್ಕಾಂ ನಿರೀಕ್ಷೆಗಿಂತ ಕಡಿಮೆ
ಆದರೆ, ಇನ್ಫೊಸಿಸ್‌ ಪ್ರಸಕ್ತ ಹಣಕಾಸು ವರ್ಷದಲ್ಲಿನ ಪ್ರಗತಿ ಕುರಿತು ಅಂದಾಜು ಮಾಡಿರುವ ವರಮಾನ ಮುನ್ನೋಟ ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಮಾಡಿರುವ ಅಂದಾಜಿ ಗಿಂತಲೂ (ಶೇ 13ರಿಂದ ಶೇ 15) ಕಡಿಮೆ ಇದೆ.

ವೇತನ ಏರಿಕೆ
ಇನ್ಫೊಸಿಸ್‌ ತನ್ನ ಸಿಬ್ಬಂದಿ ವೇತನ­ವನ್ನು ಏ.1ರಿಂದ ಹೆಚ್ಚಿಸಿದೆ. ದೇಶೀಯ ನೌಕರರ ವೇತನ ಶೇ 6ರಿಂದ ಶೇ 7ರಷ್ಟು ಮತ್ತು ವಿದೇಶಗಳಲ್ಲಿರುವ ನೌಕರರ ವೇತನ ಶೇ 1ರಿಂದ 2ರಷ್ಟು ಏರಿಕೆ­ಯಾಗಿದೆ.

ರೋಹನ್‌ ಮೂರ್ತಿ ಅವಧಿ
ಕಾರ್ಯನಿರ್ವಾಹಕ ಅಧ್ಯಕ್ಷರಾಗಿ­ರುವ ನಾರಾಯಣ ಮೂರ್ತಿ ಅವರ ಸೇವಾ ಅವಧಿ ಪೂರ್ಣಗೊಳ್ಳುತ್ತಿದ್ದಂತೆ, ಕಾರ್ಯ­ನಿರ್ವಾಹಕ ಸಹಾಯಕರಾ­ಗಿರುವ ಅವರ ಮಗ ರೋಹನ್‌ ಮೂರ್ತಿಯ ಸೇವಾ ಅವಧಿಯೂ ಪೂರ್ಣ­ಗೊಳ್ಳಲಿದೆ ಎಂದು ಶಿಬುಲಾಲ್ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಹೇಳಿದ್ದಾರೆ. ಆ ಮೂಲಕ ರೋಹನ್‌ಗೆ ಕಂಪೆನಿ­ಯಲ್ಲಿ ಇನ್ನೂ ಉನ್ನತ ಹುದ್ದೆ ನೀಡಲಾಗುತ್ತದೆ ಎನ್ನುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಿವೃತ್ತಿ– ಶಿಬುಲಾಲ್‌ ಸ್ಪಷ್ಟನೆ

ತಮ್ಮ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ ಶಿಬುಲಾಲ್‌, ಕೊನೆ ಕ್ಷಣದಲ್ಲಿ ಆಗುವ ಅನಗತ್ಯ ಗೊಂದ­ಲಗಳನ್ನು ನಿವಾರಿಸಲು ಮುಂಚಿ­ತವಾಗಿಯೇ ಈ ಕುರಿತು ನಿರ್ಧಾರ ಪ್ರಕಟಿಸಿದ್ದೇನೆ ಎಂದರು.

‘ನಿವೃತ್ತಿಗೆ ಇದು ಸಕಾಲ ಎನಿಸಿದೆ. 2015ರ ಜ.9ರಂದು ನನ್ನ ಸೇವಾ ಅವಧಿ ಮುಗಿಯಲಿದೆ. ಆದರೆ, ಅದಕ್ಕಿಂತ ಮೊದಲೇ ಕಂಪೆನಿಯ ನಿರ್ದೇಶಕ ಮಂಡಳಿಗೆ ಹೊಸ ‘ಸಿಇಒ’ ಲಭ್ಯ­ವಾದರೆ ತಕ್ಷಣವೇ ಹುದ್ದೆ­ಯಿಂದ ನಿರ್ಗ­ಮಿಸುವೆ’ ಎಂದು ಸ್ಪಷ್ಟಪಡಿಸಿ­ದರು.ಕಂಪೆನಿ ನಿರ್ದೇಶಕ ಮಂಡಳಿ ಸದ­ಸ್ಯ­ತ್ವ­ವನ್ನೂ ತೊರೆ­­ಯುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಬ್ಬರ ಬೆನ್ನಿಗೊಬ್ಬರಂತೆ ಹಿರಿಯ ಅಧಿಕಾರಿಗಳು ಇನ್ಫೊಸಿಸ್‌ ತೊರೆ­ಯುತ್ತಿ­ರುವ ಕುರಿತು ಕೇಳಿದ ಪ್ರಶ್ನೆಗೆ,  ‘ಸಾವಿರಾರು ಜನ ಉದ್ಯೋಗಿಗಳಿರುವ ಇನ್ಫೊಸಿಸ್‌­ನಲ್ಲಿ ಒಂದಿಬ್ಬರು ಕಂಪೆನಿ­ಯಿಂದ ನಿರ್ಗ­ಮಿಸುವುದು ಸಹಜ.  ಎಲ್ಲ ಕಂಪೆನಿಗಳಲ್ಲಿಯೂ ಇದು ಸಾಮಾನ್ಯ ಸಂಗತಿ. ಸದ್ಯ ಇನ್ಫೊಸಿಸ್‌ ಉತ್ತಮವಾದ ತಂಡವನ್ನು ಹೊಂದಿದೆ ಎಂದರು.

‘ಜಾಗತಿಕ ಆರ್ಥಿಕ ಅಸ್ಥಿರತೆಯಂತಹ ಸವಾಲಿನ ಸಂದರ್ಭದಲ್ಲಿ ಇನ್ಫೊಸಿಸ್‌ನ ‘ಸಿಇಒ’ ಆಗಿ ನೇಮಕಗೊಂಡೆ. ಆಗ ಯೂರೋಪ್‌ ಮತ್ತು ಅಮೆರಿಕ ಮಾರು­­ಕಟ್ಟೆಯಲ್ಲಿ ವಹಿವಾಟು ಕುಸಿ­ದಿತ್ತು. ವೀಸಾ ಸಮಸ್ಯೆಯಿಂದಾಗಿ ವಿದೇ­ಶಗಳಲ್ಲಿ ಕಂಪೆನಿಯ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಇತ್ತು.

ಪ್ರಮು­ಖವಾಗಿ ಅಂತರರಾ­ಷ್ಟ್ರೀಯ ಮಾರು­ಕಟ್ಟೆಯಲ್ಲಿ ಇನ್ಫೊಸಿಸ್‌ ಬ್ರಾಂಡ್‌ ಮೌಲ್ಯ ಹೆಚ್ಚಿಸಬೇಕಿತ್ತು ಮತ್ತು ಗ್ರಾಹಕರ ಆತ್ಮವಿಶ್ವಾಸ ಮರಳಿ ಪಡೆಯಬೇಕಿತ್ತು. ಆಗಷ್ಟೇ, ಐ.ಟಿ ಸೇವೆಗಳ ಮೌಲ್ಯವರ್ಧ­ನೆಗಾಗಿ  2.0 ತಂತ್ರಜ್ಞಾನದಿಂದ 3.0 ತಂತ್ರಜ್ಞಾನಕ್ಕೆ ಬದಲಾಗುತ್ತಿದ್ದೆವು. ಹೀಗೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಲವು ಸಮಸ್ಯೆ­ಗಳನ್ನು ಎದುರಿಸು­ತ್ತಿದ್ದೆವು. ಆದರೆ, ಈ ಎಲ್ಲ ಸಮಸ್ಯೆಗಳು ಈಗ ಇತ್ಯರ್ಥ­ಗೊಂಡಿವೆ. ಹಿಂದಿಗಿಂ­ತಲೂ ಹೆಚ್ಚು ಸದೃಢ­ವಾದ ಮತ್ತು ಶಕ್ತಿಶಾಲಿಯಾದ ಇನ್ಫೊಸಿಸ್‌ ನಿಮ್ಮೆದುರಿಗಿದೆ’ ಎಂದು ಶಿಬುಲಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT