ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೆಕ್ಟರ್ ಅಮಾನತು

ಹಲ್ಲೆ ಪ್ರಕರಣ: ‘ಕಟ್ಟುಕಥೆ’ ಹೆಣೆದ ತಾಂಜಾನಿಯಾ ವಿದ್ಯಾರ್ಥಿನಿ
Last Updated 5 ಫೆಬ್ರುವರಿ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ತಾಂಜಾನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇರೆಗೆ ಸೋಲದೇವನಹಳ್ಳಿ ಠಾಣೆ ಇನ್‌ಸ್ಪೆಕ್ಟರ್  ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಇನ್‌ಸ್ಪೆಕ್ಟರ್ ಪ್ರವೀಣ್ ಬಾಬು,   ಹೆಡ್‌ ಕಾನ್‌ಸ್ಟೆಬಲ್ ಜಗದೀಶ್‌, ಕಾನ್‌ಸ್ಟೆಬಲ್‌ಗಳಾದ ಮಂಜುನಾಥ್ ಹಾಗೂ ಹೊನ್ನೇಶ್‌  ಅಮಾನತುಗೊಂಡವರು.

‘ಇವರು ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ಜ.31ರ ರಾತ್ರಿ  ಸಂಭವಿಸಿದ್ದ ಅಪಘಾತದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಹಾಗೂ ಘಟನೆ ಬಳಿಕ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಎಸ್. ಮೇಘರಿಕ್ ತಿಳಿಸಿದರು.

ಇನ್‌ಸ್ಪೆಕ್ಟರ್ ಲೋಪವೇನು?:  ‘ಸ್ಥಳೀಯರ ಗುಂಪು ತಾಂಜಾನಿಯಾ ವಿದ್ಯಾರ್ಥಿನಿಯ ಗೆಳೆಯ ಜಮಾಲ್ ಇಬ್ರಾಹಿಂ ಮೇಲೆ ಹಲ್ಲೆ ನಡೆಸಿ, ಕಾರಿಗೆ ಬೆಂಕಿ ಹಚ್ಚಿತ್ತು. ಆಗ ಸ್ಥಳಕ್ಕೆ ತೆರಳಿದ್ದ ಸಿಬ್ಬಂದಿ, ಹೊಯ್ಸಳ ವಾಹನದಲ್ಲಿ ಜಮಾಲ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಕಾರಿನ ಬಳಿಯೇ ನಿಂತಿದ್ದ ವಿದ್ಯಾರ್ಥಿನಿಯ ಸ್ಥಿತಿ ಏನಾಯಿತು? ಅವರು ಎಲ್ಲಿಗೆ ಹೋದರು ಎಂಬ ಬಗ್ಗೆ ಇನ್‌ಸ್ಪೆಕ್ಟರ್ ಮಾಹಿತಿ ಸಂಗ್ರಹಿಸಿರಲಿಲ್ಲ’ ಎಂದು ಕಮಿಷನರ್ ವಿವರಿಸಿದರು.

ಕ್ರಮಕ್ಕೆ ಆಕ್ಷೇಪ: ‘ತಾಂಜಾನಿಯಾ ಹೈಕಮಿಷನರ್‌ಗೆ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತೋರಿಸುವುದಕ್ಕಾಗಿ  ಅಮಾನತು ಕ್ರಮ ಜರುಗಿಸಲಾಗಿದೆ’ ಎಂಬ ಆರೋಪ ಪೊಲೀಸರಿಂದ ಕೇಳಿ ಬಂದಿದೆ.

ತಾಂಜಾನಿಯಾ ಹೈಕಮಿಷನರ್ ಭೇಟಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ 5 ಅಧಿಕಾರಿಗಳ ತಂಡದ ಜತೆ ನಗರಕ್ಕೆ ಬಂದ ತಾಂಜಾನಿಯಾ ಹೈಕಮಿಷನರ್‌ ಜಾನ್‌ ಡಬ್ಲ್ಯು ಎಚ್‌ ಕಿಜಾಜಿ ಅವರು, ಗೃಹಸಚಿವ ಡಾ. ಜಿ. ಪರಮೇಶ್ವರ್‌ ಹಾಗೂ ಪೊಲೀಸರಿಂದ  ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡರು.

‘ಅಪಘಾತದ ಕಾರಿನಲ್ಲಿದ್ದರು’
ಬೈಕ್‌ಗೆ ಡಿಕ್ಕಿ ಹೊಡೆದ ಸುಡಾನ್ ವಿದ್ಯಾರ್ಥಿಯ ಕಾರಿನಲ್ಲಿ ತಾಂಜಾನಿಯಾ ವಿದ್ಯಾರ್ಥಿನಿಯೂ ಇದ್ದರು. ಆದರೀಗ ತಾನು ಬೇರೆ ಕಾರಿನಲ್ಲಿದ್ದೆನೆಂದು ಇಲ್ಲದ ‘ಕಟ್ಟುಕಥೆ’ ಹೆಣೆದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮೂಲಕ ‘ಹಲ್ಲೆ ಪ್ರಕರಣ’ಕ್ಕೆ ಹೊಸ ತಿರುವು ಸಿಕ್ಕಿದೆ. ‘ಜ.31ರ ರಾತ್ರಿ ಸುಡಾನ್ ವಿದ್ಯಾರ್ಥಿ ಮೊಹಮದ್ ಅಹದ್, ಜಮಾಲ್ ಇಬ್ರಾಹಿಂ, ಫಿರ್ಯಾದಿ ವಿದ್ಯಾರ್ಥಿನಿ ಕಾರಿನಲ್ಲಿ ಹೆಸರಘಟ್ಟಕ್ಕೆ ಬಂದಿದ್ದರು. ಪಾನಮತ್ತನಾಗಿದ್ದ ಅಹದ್, ಅಡ್ಡಾದಿಡ್ಡಿ ಚಾಲನೆ ಮಾಡಿ ಬೈಕ್‌ಗೆ ಡಿಕ್ಕಿ ಮಾಡಿದ್ದ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ಕೊಟ್ಟಿದ್ದಾಗಿ ಆ ಅಧಿಕಾರಿ ತಿಳಿಸಿದ್ದಾರೆ.

‘ಈ ಅಪಘಾತದಿಂದ ರೊಚ್ಚಿಗೆದ್ದ ಜನ,  ಚಾಲಕ ಅಹದ್ ಹಾಗೂ ಇಬ್ರಾಹಿಂನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಆಗ ವಿದ್ಯಾರ್ಥಿನಿ ಕಾರಿನಿಂದ ಇಳಿದು ಗೆಳೆಯರನ್ನು ಬಿಡಿಸಲು ಹೋದಾಗ, ‘ಯುವತಿ ಎಂಬ ಕಾರಣಕ್ಕೆ ಸುಮ್ಮನೆ ಬಿಟ್ಟಿದ್ದೇವೆ. ಸುಮ್ಮನೆ ಇಲ್ಲಿಂದ ಹೋಗು’ ಎಂದು ವಿದ್ಯಾರ್ಥಿನಿಗೆ ಎಚ್ಚರಿಕೆ ನೀಡಿ, ಆ ಕಾರಿಗೆ ಬೆಂಕಿ ಹಚ್ಚಿದ್ದರು.

‘ನಂತರ ಸ್ಥಳಕ್ಕೆ ತೆರಳಿದ ಸಿಬ್ಬಂದಿ, ಅಪಘಾತದಲ್ಲಿ ಗಾಯಗೊಂಡಿದ್ದ ಶಬಾನಾ, ಅವರ ಪತಿ ಕರೀಂ, ಹಲ್ಲೆಯಿಂದ ಗಾಯಗೊಂಡ ಅಹದ್‌ನನ್ನು ಆಸ್ಪತ್ರೆಗೆ ಕರೆದೊಯ್ದರು. ವಿಚಾರಣೆಗೆ ಬರುವಂತೆ ಸೂಚಿಸಿ ಇಬ್ರಾಹಿಂ, ವಿದ್ಯಾರ್ಥಿನಿಯನ್ನು ಕಳುಹಿಸಿದ್ದೆವು. ‘ನಂತರ ಸ್ಥಳೀಯರ ಗುಂಪು ಮತ್ತೆ ಅವರಿಬ್ಬರನ್ನು ಅಟ್ಟಿಸಿಕೊಂಡು ಹೋಗಿತ್ತು. ಆಗ ಮತ್ತೊಬ್ಬ ಗೆಳತಿ ಸಲಾಂ ಅವರ ಕಾರಿನಲ್ಲಿ ಇಬ್ಬರೂ ಹೋಗಿದ್ದರು. ಕಿರ್ಲೋಸ್ಕರ್ ಲೇಔಟ್‌ನಲ್ಲಿ ತಡೆದ ಮತ್ತೊಂದು ಗುಂಪು, ಇಬ್ರಾಹಿಂನನ್ನು ಮತ್ತೆ ಥಳಿಸಿ ಆ ಕಾರಿಗೂ ಬೆಂಕಿ ಇಟ್ಟಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT