ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ದರೋಡೆಕೋರರ ಬಂಧನ

ಕೇರಳ ಕಾರ್ಮಿಕನ ಅಪಹರಣ ಪ್ರಕರಣ
Last Updated 24 ಜುಲೈ 2016, 19:59 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ದರೋಡೆ ಮಾಡಿ, ದುಬೈ ಕಾರ್ಮಿಕರೊಬ್ಬರನ್ನು ಅಪಹರಿಸಿದ ಪ್ರಕರಣ ಭೇದಿಸಿದ ಮೇಟಗಳ್ಳಿ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಯಲಹಂಕದ ತಾಹಿರ್‌ ಹುಸೇನ್‌ (28) ಹಾಗೂ ಅಬ್ದುಲ್‌ ಕಲೀಂ (24) ಬಂಧಿತರಾಗಿದ್ದು, ಆರೋಪಿಗಳಿಂದ ₹15 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಇತರ 7 ಮಂದಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಘಟನೆ: ಮೂಲತಃ ಕೇರಳದ ವೈನಾಡು ಜಿಲ್ಲೆಯ ಅಬೂಬಕರ್‌ ಸಿದ್ದಿಕಿ, ಬಶೀರ್‌, ಮಹಮ್ಮದ್‌, ಅಬ್ದುಲ್‌ ರಫೀಕ್ ಅವರು ದುಬೈ ಕಾರ್ಖಾನೆಯೊಂದರ ಕಾರ್ಮಿಕರು.

ದುಬೈನಿಂದ ಜುಲೈ 13ರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಸ್ನೇಹಿತ ಇಬ್ರಾಹಿಂ ಕಾರಿನಲ್ಲಿ ಮೈಸೂರು ಮೂಲಕ ಕೇರಳದ ಕೊಯಿಕ್ಕೋಡ್‌ಗೆ ಪ್ರಯಾಣ ಬೆಳೆಸಿದ್ದರು.

ಎರಡು ಕಾರಿನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಮೈಸೂರು ಸಮೀಪದ ಸಿದ್ದಲಿಂಗಪುರದ ಶ್ರೇಯಾ ಕಂಫರ್ಟ್‌ ಹೋಟೆಲ್‌ ಬಳಿ ಸಿದ್ದಿಕ್ಕಿ ಮತ್ತು ಸ್ನೇಹಿತರು ಸಾಗುತ್ತಿದ್ದ ಕಾರನ್ನು ಅಡ್ಡ ಹಾಕಿದ್ದರು. ಮಾರಕಾಸ್ತ್ರಗಳಿಂದ ನಾಲ್ವರನ್ನು ಬೆದರಿಸಿ ಕಾರಿನಿಂದ ಕೆಳಗೆ ಇಳಿಸಿದ್ದರು. ಕಾರಿನ ಹಿಂಬದಿಯ ಸೀಟಿನಲ್ಲಿ ನಿದ್ದೆಗೆ ಜಾರಿದ್ದ ಸಿದ್ದಿಕಿಗೆ ಇಳಿಯಲು ಅನುವಾಗಿರಲಿಲ್ಲ. ಹೀಗಾಗಿ, ಸಿದ್ದಿಕಿ ಸಮೇತ ಕಾರು ಅಪಹರಿಸಿದ್ದರು.

ಅಪಹೃತ ಕಾರ್ಮಿಕನ ಬಾಯಿಗೆ ಬಟ್ಟೆ ತುರುಕಿ ಬೆದರಿಸಿದ್ದರು. ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿದು ಚಿನ್ನಾಭರಣ ಮತ್ತು ಹಣಕ್ಕಾಗಿ ತಡಕಾಡಿದ್ದರು. ಕಾರಿನಲ್ಲಿ ಹಣ, ಚಿನ್ನಾಭರಣ ಸಿಗದ ಪರಿಣಾಮ ಘಟನಾ ಸ್ಥಳದಿಂದ 20 ಕಿ.ಮೀ ದೂರದ ಬೆಳಗೊಳ ಸಮೀಪದ ನಿರ್ಜನ ಪ್ರದೇಶದಲ್ಲಿ ಸಿದ್ದಿಕಿ ಯನ್ನು ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದರು.

ಕಾರು ಹಿಂಬಾಲಿಸಿದ್ದರು: ಕರ್ನಾಟಕ ಗಡಿಭಾಗದಲ್ಲಿರುವ ಕೇರಳಿಗರು ಬೆಂಗಳೂರು ಮೂಲಕ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಾರೆ. ತಾಯ್ನಾಡಿಗೆ ಮರಳುವಾಗಲೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ.

ದುಬೈ ಸೇರಿದಂತೆ ವಿವಿಧೆಡೆಗಳಿಂದ ವಿಮಾನದಲ್ಲಿ ಬರುವ ಕೇರಳಿಗರ ಮೇಲೆ ಈ ಗ್ಯಾಂಗ್‌ ಹದ್ದಿನ ಕಣ್ಣಿಡುತ್ತದೆ. ವಿಮಾನ ನಿಲ್ದಾಣದಿಂದ ಹೊರಡುವ ಕೇರಳ ನೋಂದಣಿಯ ವಾಹನಗಳನ್ನು ಹಿಂಬಾಲಿಸಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕಾಯುವ ಗ್ಯಾಂಗ್‌ನ ಸದಸ್ಯರಿಗೆ ಮಾಹಿತಿ ನೀಡುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಾಮನಗರ, ಚನ್ನಪಟ್ಟಣದ ಹೊರವಲಯದ ಡಾಬಾ, ಹೋಟೆಲುಗಳಲ್ಲಿ ಗ್ಯಾಂಗ್‌ ಸದಸ್ಯರು ಹೊಂಚು ಹಾಕಿ ಕೂರುತ್ತಾರೆ. ಸಿದ್ದಿಕಿ ಮತ್ತು ಸ್ನೇಹಿತರು ಅಂದು ಚನ್ನಪಟ್ಟಣದ ಬಳಿಯ ಹೋಟೆಲೊಂದರ ಎದುರು ಕಾರು ನಿಲ್ಲಿಸಿ ಟೀ ಸೇವಿಸಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಎರಡು ಕಾರುಗಳಲ್ಲಿ ಹಿಂಬಾಲಿಸಿದ್ದರು ಎಂದರು.

ಕಪ್ಪು ಹಣ ಸಾಗಣೆ ಶಂಕೆ: ವಿದೇಶದಿಂದ ಬರುವ ಕೇರಳಿಗರು ಕಪ್ಪುಹಣ ಹಾಗೂ ಚಿನ್ನಾಭರಣ ತರುತ್ತಾರೆ ಎಂಬ ಬಲವಾದ ನಂಬಿಕೆಯಿಂದ ದುಷ್ಕರ್ಮಿಗಳು ಇಂತಹ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ.

ಘಟನೆ ಸಂಭವಿಸಿದ ಸ್ಥಳದ ವ್ಯಾಪ್ತಿಯ ಠಾಣೆಯಲ್ಲಿ ದೂರು ದಾಖಲಿಸಲು ಹೊರ ರಾಜ್ಯದವರು ಹಿಂದೇಟು ಹಾಕುತ್ತಾರೆ ಎಂಬ ಸತ್ಯವನ್ನು ಈ ಗ್ಯಾಂಗ್‌ ಅರಿತಿದೆ ಎಂದು ವಿವರಿಸಿದರು.

ರಾತ್ರಿ ವೇಳೆ ಕೇರಳಕ್ಕೆ ಸಾಗುವ ಬಹುತೇಕ ಕಾರುಗಳು ಮೈಸೂರು ಹೊರವಲಯದಲ್ಲಿಯೇ ದರೋಡೆಯಾಗುತ್ತಿವೆ. ರಿಂಗ್‌ ರಸ್ತೆಯಲ್ಲಿ ಏಪ್ರಿಲ್‌ನಲ್ಲಿಯೂ ಇಂತಹದೇ ಘಟನೆಯೊಂದು ನಡೆದಿತ್ತು.

ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ದರೋಡೆ ನಡೆಸಿದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ, ಮೈಸೂರು ಹೊರವಲಯದವರೆಗೆ ಹಿಂಬಾಲಿಸಿ ಕೃತ್ಯ ಎಸಗುತ್ತಾರೆ. ಬಳಿಕ ಕೇರಳ, ತಮಿಳುನಾಡಿಗೆ ಪರಾರಿಯಾಗುತ್ತಾರೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT