ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಲಿ ಮಣ್ಣಿನೊಂದಿಗೆ ಗಟ್ಟಿ ಬೆಸುಗೆ

ಸೂರುಸ್ವತ್ತು
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಮಣ್ಣು ಕುಸಿತ: ಕಾರ್ಮಿಕರ ದುರ್ಮರಣ’, ‘ವಾಣಿಜ್ಯ ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ಮೂವರು ಕಾರ್ಮಿಕರು ಸಾವು...’
ಇವು ಪತ್ರಿಕೆಗಳಲ್ಲಿ ಆಗಾಗ್ಗೆ ಕಾಣಿಸುವ ಸುದ್ದಿ ಶೀರ್ಷಿಕೆಗಳು. ಮಹಾನಗರಗಳಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳಲ್ಲಿ ಅನಾಹುತಗಳು ಸಾಮಾನ್ಯ ಎಂಬಂತೆ ಆಗಿವೆ.

ಹೊಟ್ಟೆಪಾಡಿಗಾಗಿ ದೂರದ ಊರುಗಳಿಂದ ಬರುವ ಕಾರ್ಮಿಕರ ಜೀವ ತೆಗೆಯುವ ಈ ಘಟನೆಗಳು, ಆ ಕಾರ್ಮಿಕರ ಕುಟುಂಬಗಳಿಗಷ್ಟೇ ನೋವನ್ನು ತರುವುದಿಲ್ಲ, ಆ ಕಟ್ಟಡಗಳ ಮಾಲೀಕರಿಗೂ ತಲೆ ಬಿಸಿ ತಂದೊಡ್ಡುತ್ತವೆ.
ಭೂಮಾಲೀಕರು, ಗುತ್ತಿಗೆದಾರರು, ಬಿಲ್ಡರ್‌ಗಳು ಅನುಸರಿಸುತ್ತಿರುವ ಅವೈಜ್ಞಾನಿಕ ಆಳ ಅಗೆತವೇ ಈ ಸಮಸ್ಯೆಗೆ ಮೂಲ ಕಾರಣ ಎನ್ನುತ್ತಾರೆ ಮಣ್ಣಿನ ತಜ್ಞರು.

ದಿನೇದಿನೇ ಏರುತ್ತಿರುವ ಜನಸಂಖ್ಯೆ, ಅದಕ್ಕನುಗುಣವಾಗ ವಸತಿ ಸಾಂದ್ರತೆಯ ಒತ್ತಡಗಳಿಂದಾಗಿ ನಗರ ಪ್ರದೇಶಗಳಲ್ಲಿ ಪರಸ್ಪರ ಕಡಿಮೆ ಅಂತರದಲ್ಲಿ ಬಹುಮಹಡಿ ಸಂಕೀರ್ಣಗಳು, ಬೃಹತ್ ವಾಣಿಜ್ಯ ಕಟ್ಟಡಗಳು, ವಸತಿ ಗೃಹಗಳು  ನಿರ್ಮಾಣವಾಗುತ್ತಿವೆ.

ಮಹಡಿಗಳ ಸಂಖ್ಯೆ ಏರುತ್ತಾ ಹೋದಂತೆ ಅಡಿಪಾಯದ ಆಳವೂ ಹೆಚ್ಚುತ್ತದೆ. ಆದರೆ, ಅಂಥ ಸಮಯದಲ್ಲಿ ಮಣ್ಣು ಅಗೆಯುವಾಗ ಮಣ್ಣು ತಜ್ಞರು ಅನುಮೋದಿಸುವ ಭೂಬಲವರ್ಧನೆ ಅಥವಾ ಭೂ ಸ್ಥಿರೀಕರಣ ವಿಧಾನಗಳನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ.

ಇದರ ಪರಿಣಾಮವಾಗಿ ಭೂಕುಸಿತ, ಗೋಡೆ ಬಿರುಕು, ಮಹಡಿಗಳ ಊದಿಕೊಳ್ಳುವಿಕೆ, ಗೋಡೆಗಳ ವಾಲುವಿಕೆ (ಬಾಗುವಿಕೆ), ಮನೆಯ ಕಪಾಟು, ಶೆಲ್ಫುಗಳ ಆಕಾರದಲ್ಲಿ ವ್ಯತ್ಯಾಸ ಉಂಟಾಗುವುದು, ಬಾಗಿಲು ಹಾಕಲು ತೆರೆಯಲು ಕಷ್ಟವಾಗುವುದು.

ಮೇಲ್ನೋಟಕ್ಕೆ ಈ ಸಮಸ್ಯೆಗಳು ಭಿನ್ನವಾಗಿ ಕಂಡರೂ, ಹೆಚ್ಚಿನ ಸಮಸ್ಯೆಗಳು ಅಡಿಪಾಯದ ಮಣ್ಣಿನಿಂದಾಗಿಯೇ ಆಗಿರುವುದು ಗಮನಾರ್ಹ.
ಏಕೆ ಹೀಗಾಗುತ್ತದೆ?

ಭೂಮಿಯಲ್ಲಿ ಎಲ್ಲೆಡೆಯೂ ಒಂದೇ ರೀತಿಯ ಮಣ್ಣು ಕಂಡುಬರುವುದಿಲ್ಲ.  ಕೆಲವೊಮ್ಮೆ ಕೆಲವು ಅಡಿಗಳ ಅಂತರದಲ್ಲೇ ವಿಭಿನ್ನ ಮಾದರಿಯ ಮಣ್ಣಿನ ಸಂರಚನೆ ಕಂಡು ಬರುತ್ತದೆ.

ಮಣ್ಣಿನಲ್ಲಿ ಅಧಿಕ ತೇವಾಂಶ, ಮಣ್ಣಿನ ಸವಕಳಿ, ವಿಸ್ತೃತ ಮಣ್ಣು, ಕಳಪೆ ಜಲ ನಿರೋಧಕ, ವಿಪರೀತ ಜೈವಿಕ ಪದಾರ್ಥಗಳ ಬಳಕೆ ಇತ್ಯಾದಿ ಕಾರಣಗಳಿಂದ ಮಣ್ಣಿನ ತೇವಾಂಶದಲ್ಲಿ ಬದಲಾವಣೆಯಾಗುತ್ತವೆ. ಇದು ಮನೆಯ ಇಲ್ಲವೇ ಕಟ್ಟಡದ ಒಟ್ಟಾರೆ ರಚನೆಯ ಮೇಲೆ ಒತ್ತಡ ಬೀರಿ, ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.

ಕಳಪೆ ಒಳಚರಂಡಿ ವ್ಯವಸ್ಥೆ, ಕಳಪೆ ಕಟ್ಟಡ ನಿರ್ಮಾಣ, ಅವೈಜ್ಞಾನಿಕವಾಗಿ ಮಹಡಿಗಳ ಸಂಖ್ಯೆ ಹೆಚ್ಚಳ, ನೆಲಮಾಳಿಗೆಯೂ ಮನೆಯ ಅಡಿಪಾಯಕ್ಕೆ ಧಕ್ಕೆ ತರಬಲ್ಲದು.

ಬೇರು ಜೋಡಿಸುವ ಕ್ರಮ
‘ಮನೆ ಇಲ್ಲವೇ ಕಟ್ಟಡ ಕಟ್ಟಿದ ನಂತರ ಸಮಸ್ಯೆ ಅನುಭವಿಸುವುದಕ್ಕಿಂತ, ಮೊದಲೇ ಭೂಸ್ಥಿರೀಕರಣ ವ್ಯವಸ್ಥೆ ಅಳವಡಿಸಿಕೊಂಡಲ್ಲಿ ನಿರ್ಭೀತಿ ಮತ್ತು  ನೆಮ್ಮದಿಯಿಂದ ಇರಬಹುದು’ ಎನ್ನುತ್ತಾರೆ ಸಾಯಿಲ್ ಟೆಕ್‌ ಸಂಸ್ಥೆಯ ಶ್ರೀಧರ್ ನರೇನ್‌.

‘ಒಂದು ಬಹುಮಹಡಿ ಕಟ್ಟಡಕ್ಕೆ ಹೇಗೆ ಆಳ ಅಡಿಪಾಯ ಮುಖ್ಯವೋ, ಅದಕ್ಕೂ ಮುಖ್ಯ ಭೂಸ್ಥಿರೀಕರಣ ವ್ಯವಸ್ಥೆ. ಇದು ಕಟ್ಟಡಕ್ಕೆ ಭೂಮಿಯೊಂದಿಗೆ ಒಂದು ರೀತಿ ಬೇರು ಜೋಡಿಸುವ ಕ್ರಮವಾಗಿದೆ’  ಎಂದು ವಿವರಿಸುತ್ತಾರೆ ಅವರು.

ಏನಿದು ಭೂಸ್ಥಿರೀಕರಣ?
ಯಾವುದೇ ಮೂಲಸೌಕರ್ಯ ವ್ಯವಸ್ಥೆ ಪೂರ್ವ ಯೋಜನೆ ಮತ್ತು ಕಾರ್ಯಾನಂತರದ ಮೇಲ್ವಿಚಾರಣೆ ಇಲ್ಲದೇ ಹೋದಲ್ಲಿ ಅಸಮರ್ಪಕವಾಗುತ್ತದೆ. ಈ ನಿಟ್ಟಿನಲ್ಲಿ ಭೂಸಂರಕ್ಷಣೆ ಅಥವಾ ಭೂಸ್ಥಿರೀಕರಣ ಪ್ರಮುಖ ಪಾತ್ರ ವಹಿಸುತ್ತದೆ.

ಭೂಸ್ಥಿರೀಕರಣ ವ್ಯವಸ್ಥೆಯು ಅಡಿಪಾಯದಲ್ಲಿ ಮಣ್ಣಿನ ಸಂರಚನೆಯ ಬಲಪಡಿಸುವುದಲ್ಲದೇ ಮುಂದಾಗುವ ಅನಾಹುತವನ್ನೂ ತಡೆಯಬಲ್ಲದು.

ಆಗಲಿ ಮಣ್ಣಿನ ಪರೀಕ್ಷೆ
ಒಂದು ಅಥವಾ ಹೆಚ್ಚಿನ ನೆಲ ಮಹಡಿಗಳಿಗಾಗಿ 2 ಮೀಟರ್ ಅಥವಾ ಹೆಚ್ಚಿನ ಆಳದ ಹಳ್ಳ ತೋಡಿದಲ್ಲಿ ಅಲ್ಲಿನ ಮೇಲ್ಪದರದಿಂದ ಹಿಡಿದು ಕೆಳಮಟ್ಟದವರೆಗೂ ಮಣ್ಣಿನ ವಿವಿಧ ಸ್ತರಗಳ ಮಣ್ಣಿನ ಪರೀಕ್ಷೆ ಮಾಡಿಸಬೇಕು.

ಮಣ್ಣಿನ ಗುಣಾಂಶದ ಆಧಾರದ ಮೇಲೆ ಮತ್ತು ಭೂಸ್ಥಿರೀಕರಣ ಸಾಮ್ಯರ್ಥದ ಆಧಾರದ ಮೇಲೆ ಆ ಭೂಭಾಗವನ್ನು ಆಳ ಅಡಿಪಾಯಕ್ಕಾಗಿ ಮತ್ತು ಅಗೆಯುವಾಗ ಭೂಕುಸಿತ ಉಂಟಾಗದಿರುವ ಬಗ್ಗೆ ಮಣ್ಣು ತಜ್ಞರು ನೀಡುವ ಸಲಹೆ, ಮಾರ್ಗದರ್ಶನಗಳನ್ನು ಪಾಲಿಸಬೇಕು.
ಮನೆ ಕಟ್ಟುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಿ ಭೂಸ್ಥಿರೀಕರಣದ ವಿಧಾನಗಳನ್ನು ಅಳವಡಿಸಿಕೊಂಡಲ್ಲಿ ಮನೆಯ ಮಾಲೀಕರು ನೆಮ್ಮದಿಯಿಂದ ಇರಬಹುದು ಎನ್ನುತ್ತಾರೆ.
*
ಪ್ರಕಾರಗಳು
* ಸಾಯಿಲ್ ನೈಲಿಂಗ್ (ಭೂಭಾಗಕ್ಕೆ ಕಬ್ಬಿಣದ ಸಲಾಕೆಗಳಿಂದ ಘನೀಕರಿಸುವುದು)
* ಪಾಟ್ ಕ್ರೀಟಿಂಗ್ (ಭೂ ಮೇಲ್ಭಾಗವನ್ನು ಜಾಲರಿಗಳಿಂದ ಬಿಗಿದು ಕಾಂಕ್ರೀಟ್‌ ಸಿಂಪಡಿಸುವುದು)
* ಮೈಕ್ರೋ ಪೈಲಿಂಗ್ (ಬೋರೆವೆಲ್ ಯಂತ್ರಗಳ ಸಹಾಯದಿಂದ ಭೂಗರ್ಭದೊಳಗೆ ಕಬ್ಬಿಣದ ಪೈಪ್‌ ಮತ್ತು ಕಾಂಕ್ರೀಟ್‌ ಇಳಿಸಿ ಘನೀಕರಿಸುವುದು)
* ಆ್ಯಂಕರಿಂಗ್ (ಮಣ್ಣು ಮತ್ತು ಬಂಡೆಳನ್ನು ಕೊರೆದು ಸಲಾಕೆ ಮತ್ತು ಕಾಂಕ್ರೀಟ್ ಸಹಾಯದಿಂದ ಹಿಡಿದಿಡುವುದು)
* ಡಿ ವಾಟರಿಂಗ್ (ನೀರು ಇಂಗಿಸುವಿಕೆ)
* ಷೋರಿಂಗ್‌ (ತಡೆಗೋಡೆ ನಿರ್ಮಾಣ)

ಮಾಹಿತಿಗೆ: ಮೊಬೈಲ್: 84534 45494, 9141747454.
***
ಎಲ್ಲೆಲ್ಲಿ ಭೂಸ್ಥಿರೀಕರಣ?

ಭೂಸ್ಥಿರೀಕರಣವು ನಾನಾ ಪ್ರಕಾರಗಳ ಕಾಮಗಾರಿಗಳಲ್ಲಿ ಅಳವಡಿಕೆಯಾಗುತ್ತದೆ.
ಅವೆಂದರೆ,
* ಹೆದ್ದಾರಿ ಮತ್ತು ಮೇಲ್ಸೇತುವೆಗಳಿಗಾಗಿ ಇಳಿಜಾರು ಸ್ಥಿರೀಕರಣ
* ಬಹುಮಹಡಿ ಕಟ್ಟಡಗಳ ಅಡಿಪಾಯಪೂರ್ವ ಭೂ ಬಲವರ್ಧನೆ
* ಬೆಟ್ಟ, ಗುಡ್ಡಗಾಡು, ಕೆರೆ, ನದಿ ಹಾಗೂ ಸಮುದ್ರ ದಡಗಳಲ್ಲಿನ ಮಣ್ಣು ಸಡಿಲಗೊಳ್ಳದಂತೆ ಮುಂಜಾಗ್ರತಾ ಕ್ರಮ
* ಕೃತಕ ಕೊಳ, ಈಜುಕೊಳ ಮತ್ತಿತರ ದೊಡ್ಡ ಗಾತ್ರದ ನೀರು ಸಂಗ್ರಹಣಾ ವ್ಯವಸ್ಥೆಗಳ ಒಳಗೋಡೆಗಳ ನಿರ್ಮಾಣ
*
ಹಳೆಯ ಕಟ್ಟಡಗಳಿಗಾಗಿ

* ರಿಟ್ರೊ ಫಿಟ್ಟಿಂಗ್ (ಹಳೆಯ ಕಟ್ಟಡಗಳ ಕಾಲಂಗಳ ಪುನಶ್ಚೇತನ)
* ಗನೈಟಿಂಗ್ (ಸೀಲಿಂಗ್‌ ಮತ್ತು ಗೋಡೆಗಳ ಮೇಲೆ ಕಾಂಕ್ರಿಟ್‌ ಸಿಂಪಡಿಸುವುದು)
* ಮೈಕ್ರೋ ಕಾಂಕ್ರೀಟಿಂಗ್ (ರಂಧ್ರಗಳ ಮೂಲಕ ಒತ್ತಡ ರಹಿತ ಕಾಂಕ್ರೀಟ್‌ ತುಂಬುವಿಕೆ)
* ಸ್ಯಾಂಡ್ ಬ್ಲಾಸ್ಟಿಂಗ್ (ಕಬ್ಬಿಣವನ್ನು ತುಕ್ಕು ಮುಕ್ತವಾಗಿಸುವುದು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT