ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲವೆನಲೂ ಬೇಕು, ಅಹುದೆನಿಸಲೂ ಬೇಕು...

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಇಲ್ಲ’ ಎನ್ನುವ ಪದ ಯಾರಿಗೂ ಇಷ್ಟವಾಗುವುದಿಲ್ಲ. ಹಾಗೆಂದು ಎಲ್ಲ ಸಮಯದಲ್ಲಿ, ಎಲ್ಲ ಮಾತುಗಳಿಗೂ, ಕೆಲಸಗಳಿಗೂ ‘ಎಸ್’ ಎನ್ನಲೂ ಆಗದು. ಎದುರಿಗಿದ್ದವರಿಗೆ ಬೇಸರವಾಗದಂತೆ ‘ನೋ’ಎನ್ನುವುದು ಹೇಗೆ ಹಾಗೂ ‘ಇಲ್ಲ’ ಎನ್ನುವ ಮಂದಿಯಿಂದ ‘ಎಸ್‌’ ಹೇಳಿಸುವುದು ಹೇಗೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

‘ಇಲ್ಲ’ ಎಂದು ಹೇಳುವುದು ನಮ್ಮ ದೇಶದಲ್ಲಿ ಸಾಂಸ್ಕೃತಿಕ ಸಮಸ್ಯೆ. ಹಿರಿಯರು ಏನೇ ಹೇಳಿದರೂ ಅದನ್ನು ಪಾಲಿಸಬೇಕು ಎಂದು ಜೀವನದುದ್ದಕ್ಕೂ ಹೇಳಿಕೊಡಲಾಗುತ್ತದೆ. ಇದರ ಪರಿಣಾಮ ಯಾರೇ, ಏನೇ ಹೇಳಿದರೂ ಅದಕ್ಕೆ ಇಲ್ಲ ಎಂದು ಹೇಳಲು ಸಾವಿರ ಬಾರಿ ಯೋಚಿಸುತ್ತೇವೆ.ಇಲ್ಲ ಎಂದು ಹೇಳುವುದು ಜೀವನದಲ್ಲಿ ಅತ್ಯಂತ ಕಷ್ಟದ ಕೆಲಸ. ಇದು ಕೆಲವೊಬ್ಬರ ಅಭಿಪ್ರಾಯವಲ್ಲ. ಯಾರಾದರೂ ಏನಾದರೂ ಕೇಳಿದಾಗ ಅಥವಾ ಯಾವುದಾದರೂ ಕೆಲಸ ಹೇಳಿದಾಗ ಇಲ್ಲ (no) ಎಂದು ಹೇಳಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಪ್ರತಿಯೊಬ್ಬರೂ ಜೀವನದ ಪ್ರತಿಯೊಂದು ಘಟ್ಟದಲ್ಲೂ ಹೆಜ್ಜೆ ಹೆಜ್ಜೆಗೂ ನಿತ್ಯ ಎದುರಾಗುವ ಅನೇಕ ಸವಾಲುಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಾರೆ ವಿನಃ ಇಲ್ಲ, ಆಗೋದಿಲ್ಲ, ಮಾಡೋದಿಲ್ಲ ಎಂದು ಹೇಳುವುದಿಲ್ಲ.

ಮನೆಯವರಿಗೆ, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ, ಅಕ್ಕಪಕ್ಕದವರಿಗೆ, ಕಚೇರಿಗಳಲ್ಲಿ ಬಾಸ್‌ಗಳಿಗೆ, ಶಾಲಾ ಕಾಲೇಜುಗಳಲ್ಲಿ ಉಪಾಧ್ಯಾಯರಿಗೆ ಯಾವ ಕಾರಣಕ್ಕೂ ಇಲ್ಲ ಎಂದು ಹೇಳುವುದೂ ಇಲ್ಲ. ಇಲ್ಲ ಎಂದು ಕೇಳಲೂ ಇಷ್ಟ ಪಡುವುದಿಲ್ಲ. ಆದರೆ ಎದುರಿನವರು ಹೇಳಿದ ವಿಷಯ ತಪ್ಪು, ಅವರು ಕೊಟ್ಟ ಕೆಲಸ ತನ್ನಿಂದ ಮಾಡಲು ಆಗೋದಿಲ್ಲ ಎಂದು ತಿಳಿದಿದ್ದರೂ ಆಗುವುದಿಲ್ಲ ಎಂದು ಹೇಳುವುದೇ ಇಲ್ಲ. ಇದು ದೊಡ್ಡ ತಪ್ಪು.

ಇಂತಹ ತಪ್ಪು ನಿರ್ಧಾರಗಳಿಂದ ಮುಂದೆ ಸಂಕಷ್ಟಕ್ಕೆ ಸಿಲುಕಿ ನಾವೇ ಅನುಭವಿಸಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಎದುರಿನವರಿಗೆ ನೋವಾಗದಂತೆ  ಇಲ್ಲ ಎನ್ನಲು ಕಲಿಯಬೇಕು. ಅವರನ್ನು ಅಲ್ಲಗಳೆಯುತ್ತಿಲ್ಲ ಎಂದೆನಿಸುವಂತೆ ನಿರಾಕರಿಸಿರಬೇಕು. ನಿರಾಕರಣೆಯಂತೆಯೇ ಸ್ವೀಕೃತಿಯೂ ಅತಿಮುಖ್ಯ. ಇನ್ನೊಬ್ಬರಿಂದ ಅಹುದಹುದು ಅಥವಾ ಹೌದು ಎನಿಸುವುದೂ ಒಂದು ಕಲೆ. ಹೆಚ್ಚಾಗಿ ಗೊಂದಲ ಅಥವಾ ಒತ್ತಡಕ್ಕೆ ಒಳಗಾಗುವುದು ಈ ‘ಇಲ್ಲ’ ಅಥವಾ ‘ಹೌದು’ಗಳಿಂದ. ಎರಡನ್ನೂ ಹೇಳುವುದು ಪರಿಸ್ಥಿತಿ ನಿಭಾಯಿಸಲು ಸರಳವಾಗುತ್ತವೆ. ಆದರೆ ಹಾಗೆ ಹೇಳುವುದರಿಂದಲೇ ಪರಿಸ್ಥಿತಿ ವಿಷಮಗೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಈ ತರಗತಿಗಳು.
ಅಸರ್ಟಿವ್‌ನೆಸ್‌ ಎನ್ನುವುದು ನಮ್ಮನ್ನೇ ಪ್ರತಿಷ್ಠಾಪಿಸುವ ಗುಣ. ಹಟ ಅಥವಾ ಮೊಂಡುತನವೆಂದೂ ಹೇಳಬಹುದು. ಆದರೆ ನಮಗೆ ಸರಿ ಎನಿಸಿದ್ದನ್ನೇ ಹೇಳುವ ಚಾಳಿ ಇದು. ಒಬ್ಬೊಬ್ಬರಲ್ಲಿಯೂ ಒಂದಷ್ಟು ಪ್ರಮಾಣದಲ್ಲಿರುತ್ತದೆ. ಯಾವ ಪ್ರಮಾಣದಲ್ಲಿದೆ ಎನ್ನುವುದರ ಮೌಲ್ಯಮಾಪನ ಮಾತ್ರ ಪರಿಣತರ ಬಳಿಯೇ ಆಗಬೇಕು. ಯಾವುದಕ್ಕೂ ಜಗ್ಗದೇ ಇಲ್ಲವೆನ್ನುವವರೂ, ವಿವೇಚಿಸದೇ ಹೌದೆನ್ನುವುದೂ, ಇಲ್ಲವೆನ್ನುವವರಿಗೆ ಹೌದೆನಿಸುವುದೂ, ದಾಕ್ಷಿಣ್ಯಕ್ಕೆ ಹೌದೆನ್ನುವ ಮುನ್ನ, ಇಲ್ಲವೆನ್ನಲು ಕಾರಣಗಳನ್ನು ಮನವರಿಕೆ ಮಾಡಿಕೊಡುವುದೂ ಈ ತರಬೇತಿಯ ಉದ್ದೇಶ. ಮಾತು ಬಲ್ಲವನಾಗುವ ಕೌಶಲವನ್ನು ಹೇಳಿಕೊಡಲಾಗುತ್ತದೆ ಇಲ್ಲಿ.

ಯಾವುದೇ ವಿಷಯವನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳುವವರಿಗೆ ಸಕಾರಾತ್ಮಕವಾಗಿ ಹೇಗೆ ಅರ್ಥ ಮಾಡಿಸಬೇಕು ಎಂದು ವಿಶ್ವಾಸಾತ್ಮಕ ಇರುವಿಕೆ (ಅಸರ್ಟೀವ್‌ನೆಸ್‌) ಕೌಶಲ ತರಬೇತಿಯಲ್ಲಿ ಕಲಿಸಲಾಗುತ್ತದೆ. ಕಾರ್ಯಾಗಾರಕ್ಕೆ ಮೊದಲು ಅಸರ್ಟಿವ್‌ನೆಸ್‌ ಪ್ರಮಾಣದ ಮೌಲ್ಯಮಾಪನ ಮಾಡುತ್ತಾರೆ. ಪ್ರಮಾಣಕ್ಕೆ ಅನುಸಾರವಾಗಿ ತರಬೇತಿ ನೀಡಲಾಗುತ್ತದೆ. 2 ದಿನಗಳ ತರಬೇತಿಯಲ್ಲಿ  ವ್ಯಕ್ತಿಯ ಮನೋಧೋರಣೆಯನ್ನು ಬದಲಿಸಲು ಪ್ರಯತ್ನಿಸಲಾಗುತ್ತದೆ. ನಂತರ ಆ ವ್ಯಕ್ತಿಗಳ ಹಳೆಯ ಅನುಭವಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡು ತರಗತಿಯಲ್ಲಿ ಅವುಗಳಿಗೆ ಸೂಕ್ತ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತದೆ ಎನ್ನುತ್ತಾರೆ ಶೇಷನ್‌ ಅಕಾಡೆಮಿ ಇನ್ಫಿನಿಟಿಯ ವ್ಯವಸ್ಥಾಪಕ ನಿರ್ದೇಶಕಿ ಸ್ವರ್ಣಲತಾ.

  ಸಾಕಷ್ಟು ಜನರಿಗೆ ಗೌರವ ಹಾಗೂ ಪ್ರೀತಿಯ ನಡುವಿನ ವ್ಯತ್ಯಾಸವೇ ತಿಳಿದಿರುವುದಿಲ್ಲ. ಪ್ರೀತಿ ಹಾಗೂ ಗೌರವ ಒಂದೇ ಎಂಬ ಗೊಂದಲದಲ್ಲಿರುತ್ತಾರೆ. ಇಲ್ಲ ಎಂದರೆ ನಮ್ಮ ಮೇಲಿನ ಪ್ರೀತಿ ಕಡಿಮೆಯಾಗುತ್ತದೆಯೋ ಎಂದು ಇಲ್ಲ ಎಂದು ಹೇಳುವುದೇ ಇಲ್ಲ.  ಆದರೆ ಕೆಲಸದ ವಿಷಯಕ್ಕೆ ಬಂದಾಗ ಪ್ರೀತಿಯೇ ಬೇರೆ, ಗೌರವವೇ ಬೇರೆಯಾಗುತ್ತದೆ. ನಮ್ಮಿಂದ ಮಾಡಲು ಸಾಧ್ಯವೆನಿಸಿದ ಕೆಲಸವನ್ನು ಮಾತ್ರ ಒಪ್ಪಿಕೊಳ್ಳಬೇಕು. ಇಲ್ಲವಾದಲ್ಲಿ ಆಗುವುದಿಲ್ಲ ಎಂದು ಸೌಮ್ಯವಾಗಿ, ನೇರವಾಗಿ ಹೇಳಬೇಕು. ಇದರಿಂದ ಗೌರವ ಹೆಚ್ಚುತ್ತದೆ. ಆದರೆ ಒಪ್ಪಿ ಕೆಲಸ ಮಾಡದಿದ್ದರೆ ಇರುವ ಗೌರವವನ್ನೂ ಕಳೆದು ಕೊಳ್ಳಬೇಕಾಗುತ್ತದೆ.

‘ಇಲ್ಲ’ ಹೇಳುವುದು ಹೇಗೆ?
ನೀವು ಮನೆಗೆ ಬೇಗ ಹೋಗಬೇಕು ಎಂದುಕೊಂಡ ದಿನವೇ ಸಂಜೆ ಹೆಚ್ಚುವರಿ ಕೆಲಸವನ್ನು ನಿಮ್ಮ ಮೇಲಧಿಕಾರಿಗಳು ಸೂಚಿಸಿದರೆ ಇಲ್ಲ ಎನ್ನುವುದು ಕಷ್ಟ. ಅವರಿಗೆ ಆ ಕೂಡಲೇ ಈಗ ಕೆಲಸ ಮಾಡಲಾಗದು ಎಂದು ಹೇಳಬಾರದು. ಹೇಳಿದಲ್ಲಿ  ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದೀರಿ ಎಂಬ ಭಾವ ಮೂಡುತ್ತದೆ. ಬದಲಾಗಿ ಅವರ ಬಳಿ ಹೋಗಿ  ‘ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕು. ಅದು ನನ್ನ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದು, ನೀವು ಈಗ ಬಿಡುವಾಗಿದ್ದರೆ ಮಾತನಾಡಬಹುದಾ?’ ಎಂದು ಕೇಳಬೇಕು. ನಂತರ ನಿಮ್ಮ ಸಮಸ್ಯೆಯನ್ನು ಸ್ಪಷ್ಟವಾಗಿ ವಿವರಿಸಿ, ‘ಆ ಕೆಲಸವನ್ನು ಬೆಳಿಗ್ಗೆ ಬೇಗನೆ ಬಂದು ಮುಗಿಸುವುದಾಗಿ’ ಹೇಳಿದರೆ, ನೀವು ಕೆಲಸದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ ಎನ್ನುವುದು ಅವರಿಗೆ ಮನವರಿಕೆಯಾಗುತ್ತದೆ. ಯಾರಿಗೇ ಆಗಲಿ, ನೋ ಅಥವಾ ಇಲ್ಲ ಎಂದು ಒಂದೇ ಪದದಲ್ಲಿ ಉತ್ತರ ನೀಡಬಾರದು. ಏರು ಧ್ವನಿಯಲ್ಲಿ ಮಾತನಾಡಲೇ ಬಾರದು. ಮನವಿ ಮಾಡುವಾಗ ಧ್ವನಿಯಲ್ಲಿನ ಏರಿಳಿತವನ್ನು ನಿಯಂತ್ರಿಸಬೇಕು. ಪ್ರತಿಬಾರಿಯೂ ನಮ್ಮದೇ ಮಾತು ಸರಿ ಹಾಗೂ ನಡೆಯಬೇಕು ಎಂದು ವಾದಿಸಬಾರದು.   

ಅತ್ತೆ ಮಾವ, ಸ್ನೇಹಿತರು, ಹಿರಿಯ ಸಹೋದ್ಯೋಗಿಗಳಿಗೆ ಇಲ್ಲ ಎಂದು ಹೇಳುವ ಮೊದಲು ಕಾರಣವನ್ನು ಮೆಲು ಧ್ವನಿಯಲ್ಲಿ ಅರ್ಥವಾಗುವಂತೆ ತಿಳಿಸಿ ಹೇಳಬೇಕು. ಮೊದಲ ಪ್ರಯತ್ನದಲ್ಲಿ ಅದು ಸಾಧ್ಯವಾಗದೇ ಹೋದಾಗ ಅದನ್ನು ತುಂಬಾ ಎಳೆಯಬಾರದು. ಕೆಲದಿನಗಳ ನಂತರ ಮತ್ತೆ ಬೇರೆ ರೀತಿಯಲ್ಲಿ ಪ್ರಯತ್ನಿಸಬೇಕು. ಪ್ರಯತ್ನಗಳು ಪರಿಸ್ಥಿತಿಗಳಿಗೆ ತಕ್ಕಂತೆ ಬದಲಾಗಬೇಕು. 
ಕೆಲವೊಂದು ಸಂದರ್ಭಗಳಲ್ಲಿ ತಿಳಿಯದ ವಿಷಯಗಳ ಬಗ್ಗೆ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದೇ ಬುದ್ಧಿವಂತಿಕೆ. ಸಂದರ್ಶನಗಳಲ್ಲಿ ತಿಳಿಯದ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂದೇ ಹೇಳಬೇಕು.  ಜತೆಗೆ ಅದರ ಬಗ್ಗೆ ತಿಳಿದುಕೊಂಡು  ಹೇಳುತ್ತೇನೆ ಎಂದೂ ಸೇರಿಸಬೇಕು. ತಪ್ಪು ಉತ್ತರ ನೀಡಿ, ಅವಕಾಶವನ್ನು ಕಳೆದುಕೊಳ್ಳವುದರ ಬದಲು, ಪ್ರಯತ್ನವಾದಿ ಎನಿಸಿಕೊಳ್ಳಬಹುದು.
ಮಾರ್ಕೆಟಿಂಗ್‌ನಲ್ಲಿರುವವರು ಗ್ರಾಹಕರಿಗೆ ಸತ್ಯವನ್ನೇ ಹೇಳಬೇಕು. ವ್ಯಾಪಾರ ವ್ಯವಹಾರ ನಡೆಯುವುದೇ ನಂಬಿಕೆ ಮೇಲೆ. ಅಲ್ಲಿ ಸುಳ್ಳು ಕಮಿಟ್‌ಮೆಂಟ್‌ ಕೊಟ್ಟು ನಂಬಿಕೆ ಹಾಳು ಮಾಡಿಕೊಳ್ಳುವುದಕ್ಕಿಂತ, ಸತ್ಯ ಹೇಳಿ ಒಳ್ಳೆಯವರಾದರೆ ಸಂಬಂಧ ಚೆನ್ನಾಗಿರುತ್ತದೆ.
ಯಾವುದೇ ವಿಷಯ ಪ್ರಾರಂಭಿಸುವಾಗ ನಾನು ಎನ್ನುವ ಪದ ಮೊದಲು ಬಳಸಬೇಕು. ನೀವು ಹೇಳಬೇಕಾದ ವಿಷಯವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಒಂದು ವೇಳೆ ಉತ್ತರ ಇಲ್ಲ ಎಂದು ಬಂದರೆ ಅದಕ್ಕೆ ಪ್ರತ್ಯುತ್ತರವಾಗಿ ಏನು ಹೇಳಬೇಕು ಎಂದು ತಯಾರಿ ಮಾಡಿಕೊಂಡೇ ಮಾತನಾಡಲು ಪ್ರಾರಂಭಿಸಬೇಕು.  

‘ಎಸ್‌’ ಹೇಳಲು ಅನುಸರಿಸಬೇಕಾದ ಕ್ರಮಗಳು: ನಾವು ಹೇಳಬೇಕಿರುವ ಮಾಹಿತಿಯನ್ನು ಸ್ಪಷ್ಟವಾಗಿ ಹೇಳಬೇಕು. ಸರಿಯಾದ ಸಮಯ ನೋಡಿ ಮಾತನಾಡ ಬೇಕು. ಏನಾದರೂ ಕೇಳಬೇಕಾದಾಗ ನಮಗೆ ಬೇಕಿರುವ ಉತ್ತರ ಏನೆಂಬುದನ್ನು ಅರಿತು, ಅದಕ್ಕೆ ತಕ್ಕಂತೆ ನಾವು ಮಾತನಾಡಬೇಕು. 

ಕಚೇರಿಗಳಲ್ಲಿ ಬಾಸ್‌ ಬಳಿ ಅಥವಾ ಶಾಲಾ ಕಾಲೇಜುಗಳಲ್ಲಿ ರಜೆ ಕೇಳುವಾಗ ಮಾತಿನ ಪ್ರಾರಂಭ ತುಂಬಾ ಸೂಕ್ಷ್ಮವಾಗಿರಬೇಕು. ಮಾತನಾಡುವ ಮೊದಲು ಅವರ ಮನಸ್ಥಿತಿ ಹಾಗೂ ಕೆಲಸದ ಒತ್ತಡ ಹೇಗಿದೆ ಎಂದು ತಿಳಿದು ಕೊಳ್ಳಬೇಕು. ಗಂಭೀರವಾದ ವಿಷಯಗಳನ್ನು ದೂರವಾಣಿ ಮೂಲಕ ಹೇಳುವುದಕ್ಕಿಂತ ಮುಖಾಮುಖಿಯಾಗಿ ತಿಳಿಸಿದರೆ ಉತ್ತಮ. ಮಾತನಾಡಲು ಸಮಯ ನಿಗದಿ ಮಾಡಿಕೊಳ್ಳುವಾಗ ಇಂದು ಅಥವಾ ನಾಳೆ ನೀವು ಫ್ರೀಯಾಗಿ ಇದ್ದೀರಾ ಎಂದು ಪರೋಕ್ಷವಾಗಿ ಕೇಳಬೇಕು. ಚರ್ಚಿಸಬೇಕಾದ ವಿಷಯದ ಬಗ್ಗೆ ಸ್ಪಷ್ಟ ಚಿತ್ರಣ ನೀಡಬೇಕು.  ಪ್ರತಿಬಾರಿಯೂ ನಮ್ಮ ಪ್ರಶ್ನೆಗೆ ನಾವು ಎದುರುನೋಡುವ ಉತ್ತರ ಬರುವಂತೆ ನಾವು ಪ್ರಶ್ನೆಗಳ್ನು ಕೇಳಬೇಕು. ಇದರಿಂದ ಯಾರ ಮನಸ್ಸು ಹಾಗೂ ಭಾವನೆಗಳಿಗೆ ನೋವಾಗುವುದೂ ಇಲ್ಲ, ಸಂಬಂಧವೂ ಹಾಳಾಗುವುದಿಲ್ಲ.
ಮಾಹಿತಿಗೆ: 88849 68398. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT