ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಧಾರಣೆ ಏರಿಳಿತವೂ ರಾಜಕೀಯ ಲಾಬಿಯೂ...

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈರುಳ್ಳಿ ಹಂಗಾಮು ಆರಂಭವಾಗಿದೆ. ಎಂದಿನಂತೆಯೇ ಬೆಲೆ ಸಿಗದೇ ಕಂಗಾಲಾದ ಬೆಳೆಗಾರರು ಬೀದಿಗೆ ಇಳಿದಿದ್ದಾರೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 30 ರೂಪಾಯಿ ಇದ್ದರೂ 500 ರೂಪಾಯಿಗೆ ಕ್ವಿಂಟಲ್‌ ಈರುಳ್ಳಿ ಮಾರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ರೈತನದ್ದು. ಸಮೃದ್ಧ ಫಸಲು ಕೈಗೆ ಬಂದರೂ ನ್ಯಾಯಯುತ ಬೆಲೆ ಸಿಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಪಕ್ಕದ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರಂತೆ  ರಾಜಕೀಯವಾಗಿ ಪ್ರಭಾವಿಯಲ್ಲದಿರುವುದು, ಫಸಲು ಹೆಚ್ಚು ದಿನ ಕೆಡದಂತೆ ಸಂರಕ್ಷಿಸಿಡಲು ಸಂಗ್ರಹಾ­ಗಾರಗಳ ಕೊರತೆ, ಇಲ್ಲಿ ಬೆಳೆಯುವ ತಳಿ, ಮಾರುಕಟ್ಟೆಯ ಹಾವು–ಏಣಿ ಆಟ, ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಗೆ ಸರ್ಕಾರದ ನಿರಾಸಕ್ತಿ ಇಲ್ಲಿನ ಬೆಳೆಗಾರರ ಕಣ್ಣೀರು ಹೆಚ್ಚಿಸಿದೆ.

ದೇಶದಲ್ಲಿ ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಕೃಷ್ಣಾ–ಗೋದಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಬೆಳೆಯಾಗಿರುವ ಈರುಳ್ಳಿ ದೇಶದ ಶೇ 33ರಷ್ಟು ಬೇಡಿಕೆಯನ್ನು ಪೂರೈಸುತ್ತಿದೆ. ಶೇ 19ರಷ್ಟು ಪಾಲು ಹೊಂದಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಬಹುತೇಕ ಮಳೆ ಆಶ್ರಿತ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಮುಂಗಾರು ಮಳೆಯ ಪ್ರಮಾಣ ಇಲ್ಲಿನ ಬೆಳೆ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ.

ಈರುಳ್ಳಿ ಹೆಚ್ಚು ಬೆಳೆಯುವ ಕಾರಣಕ್ಕೆ ಮಾರುಕಟ್ಟೆಯ ಎಲ್ಲ ಅವಕಾಶಗಳನ್ನೂ ತನ್ನ ಹಿತಾಸಕ್ತಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳುವ ಮಹಾರಾಷ್ಟ್ರ ಸರ್ಕಾರದ ಪ್ರವೃತ್ತಿ ಅಲ್ಲಿನ ಬೆಳೆಗಾರರ ಜೇಬು ತುಂಬಿಸುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳಿನಿಂದ ಆಗಸ್ಟ್‌ ಕೊನೆಯ ವರೆಗೂ ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಬೇರೆ ರಾಜ್ಯಗಳಲ್ಲಿ ಫಸಲು ಇರುವು ದಿಲ್ಲ. ದೇಶದ ಆಂತರಿಕ ಮಾರುಕಟ್ಟೆಗೂ ಅಲ್ಲಿಂದಲೇ ಈರುಳ್ಳಿ ಪೂರೈಕೆಯಾಗುತ್ತದೆ. ಈ ವೇಳೆ ಸಕ್ರಿಯವಾ ಗುವ ಅಲ್ಲಿನ ಈರುಳ್ಳಿ ಬೆಳೆಗಾರರ ಲಾಬಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿದೇಶಕ್ಕೆ ರಫ್ತು ಮಾಡುವ ಅವಕಾಶ ಪಡೆಯುತ್ತದೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೃಷಿ ಮಂತ್ರಿಯಾಗಿದ್ದ ಶರದ್‌ ಪವಾರ್ ಈ ಒತ್ತಡ ಗುಂಪಿನ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಬೆಳೆ ಕಟಾವು ಆರಂಭವಾಗುತ್ತಿದ್ದಂತೆಯೇ ರಫ್ತಿಗೆ ಅನುಮತಿ ಪಡೆದು ಆಗಸ್ಟ್‌ ಕೊನೆಯವರೆಗೂ ಅದು ಮುಂದುವರಿಯು ವಂತೆ ನೋಡಿಕೊಳ್ಳುತ್ತಿದ್ದರು. ಆ ವೇಳೆಗೆ ಮಹಾರಾಷ್ಟ್ರ ದಲ್ಲಿ ಹಂಗಾಮು ಮುಕ್ತಾಯ­ಗೊಳ್ಳುವುದರಿಂದ ಆಂತ ರಿಕ ಮಾರುಕಟ್ಟೆ­ಯಲ್ಲಿ ಈರುಳ್ಳಿ ಕೊರತೆಯುಂಟಾಗಿ ಬೆಲೆ ಆಕಾಶ­ಕ್ಕೇರುತ್ತದೆ. ಸಾರ್ವಜನಿಕ ವಲಯದಿಂದ ಪ್ರತಿಭಟನೆ ಎದುರಾಗುತ್ತಿದ್ದಂತೆಯೇ ರಫ್ತು ನಿಷೇಧಿಸ­ಲಾಗುತ್ತದೆ.  ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಇದ್ದ ಕಾರಣ ನರೇಂದ್ರ ಮೋದಿ ಸರ್ಕಾರ ಎಂದಿ­ನಂತೆಯೇ ಈ ಬಾರಿಯೂ ಈರುಳ್ಳಿ ರಫ್ತಿಗೆ ಅವಕಾಶ ಮುಂದು­ವರಿಸಿತ್ತು. ವಿಶೇಷವೆಂದರೆ, ಸೆಪ್ಟಂಬರ್ ಎರಡನೇ ವಾರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮುಂಗಾರು ಹಂಗಾಮಿನ ಈರುಳ್ಳಿ ಮಾರುಕಟ್ಟೆಗೆ ಬರಲಾರಂಭಿಸುತ್ತದೆ.

ಹುಬ್ಬಳ್ಳಿ ಮಾರುಕಟ್ಟೆಗೆ ಆವಕ ಹೆಚ್ಚಳ...

ಹುಬ್ಬಳ್ಳಿ ಎಪಿಎಂಸಿ ರಾಜ್ಯದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿದೆ. ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಬೆಳಗಾವಿ,ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಬೆಳೆಯುವ ಈರುಳ್ಳಿ ಮಾರಾಟಕ್ಕೆ ಹುಬ್ಬಳ್ಳಿ ಮಾರುಕಟ್ಟೆಯೇ ವೇದಿಕೆಯಾಗಿದೆ. ಗೋವಾ, ಕೇರಳ, ರಾಜ್ಯದ ಕರಾವಳಿ, ಮಲೆನಾಡು ಪ್ರದೇಶಕ್ಕೆ ಇಲ್ಲಿಂದಲೇ ಈರುಳ್ಳಿ ಪೂರೈಕೆಯಾಗುತ್ತಿದೆ. ಸ್ಥಳೀಯ ಈರುಳ್ಳಿಯೊಂದಿಗೆ ವಿಜಾಪುರ ಭಾಗದಲ್ಲಿ ಬೆಳೆಯುವ ತೆಲಗಿ ತಳಿ, ಮಹಾರಾಷ್ಟ್ರದಿಂದಲೂ ಅಲ್ಪ ಪ್ರಮಾಣದ ಈರುಳ್ಳಿ ಇಲ್ಲಿನ ಮಾರುಕಟ್ಟೆಗೆ ಬರುತ್ತದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಮಾರುಕಟ್ಟೆಗೆ ಆವಕಗೊಳ್ಳುತ್ತಿರುವ ಈರುಳ್ಳಿ ಪ್ರಮಾಣವೂ ಹೆಚ್ಚಾಗಿದೆ. 2010ರ ಸೆಪ್ಟೆಂಬರ್ 10ರಿಂದ ನವೆಂಬರ್‌ 10ರವರೆಗೆ ಹುಬ್ಬಳ್ಳಿ ಮಾರುಕಟ್ಟೆಗೆ 2.56 ಲಕ್ಷ ಕ್ವಿಂಟಲ್‌ ಈರುಳ್ಳಿ ಆವಕಗೊಂಡಿದ್ದರೆ, 2011ರಲ್ಲಿ 3.80 ಲಕ್ಷ ಕ್ವಿಂಟಲ್‌, 2012ರಲ್ಲಿ 2.79 ಲಕ್ಷ ಕ್ವಿಂಟಲ್‌, 2013ರಲ್ಲಿ ಈ ಪ್ರಮಾಣ 4.95 ಲಕ್ಷ ಕ್ವಿಂಟಲ್‌ ಇದ್ದರೆ, ಪ್ರಸಕ್ತ ವರ್ಷ ಈ ಪ್ರಮಾಣ 6.45 ಲಕ್ಷ ಕ್ವಿಂಟಲ್‌ಗೆ ಏರಿಕೆಯಾಗಿದೆ.

‘ಈರುಳ್ಳಿ ಆವಕದ ಏರುಗತಿಗೆ ಬೆಳೆ ಪ್ರದೇಶ ಹೆಚ್ಚಾಗಿರುವುದು ಕಾರಣವಾಗಿದೆ. ಹಂಗಾಮಿನಲ್ಲಿ ಪೂರೈಕೆ ಹೆಚ್ಚುವುದರಿಂದ ಬೇಡಿಕೆ ಕಡಿಮೆಯಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಇಲ್ಲಿನ ಫಸಲು ವಿದೇಶಗಳಿಗೆ ರಫ್ತಾಗುವಂತೆ ನೋಡಿಕೊಳ್ಳಲಿ’ ಎನ್ನುತ್ತಾರೆ ನವಲಗುಂದದ ರೈತ ಮುಖಂಡ ಫಕ್ಕೀರಪ್ಪ ಸುರಳೇಶ್ವರ.

ಉತ್ತರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳದಲ್ಲೂ ಈರುಳ್ಳಿ ಹಂಗಾಮು ಆರಂಭವಾಗುವುದರಿಂದ ಉತ್ತರಭಾರತದಿಂದಲೂ ಬೇಡಿಕೆ ಇಲ್ಲವಾಗುತ್ತದೆ. ಈ ಅವಧಿಯಲ್ಲಿ ರಫ್ತಿಗೆ ನಿಷೇಧ ಇರುವುದರಿಂದ ಬೆಲೆ ದಿಢೀರ್ ಕುಸಿಯಲು ಆರಂಭಿಸಿ ರೈತರ ಆಕ್ರೋಶ ಭುಗಿ ಲೇಳುತ್ತದೆ. ‘ಕೆಲವೊಮ್ಮೆ ರಫ್ತಿಗೆ ಅವಕಾಶ ಕೊಟ್ಟರೂ ಅದಕ್ಕೆ ನಿಗದಿಪಡಿಸುವ ಅರ್ಹತೆ ಗಳಿಸಲು ಸಾಧ್ಯವಾಗು ವುದಿಲ್ಲ. ಮಹಾರಾಷ್ಟ್ರದಲ್ಲಿ ಫಸಲು ಇದ್ದಾಗ ಕ್ವಿಂಟಲ್‌ಗೆ 200 ಡಾಲರ್ (₨12,300) ನಿಗದಿಗೊಳಿಸಿ ರಫ್ತಿಗೆ ಅವಕಾಶ ನೀಡುವ ಕೇಂದ್ರ ಸರ್ಕಾರ ಅದೇ ರಾಜ್ಯದಲ್ಲಿ ಫಸಲು ಇದ್ದ ಅವಧಿಯಲ್ಲಿ ಕ್ವಿಂಟಲ್‌ಗೆ 500 ಡಾಲರ್‌ನ(₨30,750) ಮಿತಿ ನಿಗದಿ ಮಾಡುತ್ತದೆ. ಆ ಗುಣಮಟ್ಟವೂ ಇಲ್ಲದೆ, ಬೆಲೆಯೂ ಸಿಗದೆ ರಫ್ತು ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಹುಬ್ಬಳ್ಳಿ ಎಪಿಎಂಸಿಯ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ಅಭಿಪ್ರಾಯ­ಪಡುತ್ತಾರೆ.

ಈ ವರ್ಷ ಪಾಕಿಸ್ತಾನ, ಬಾಂಗ್ಲಾದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ. ಉತ್ತರ ಭಾರತದ ವ್ಯಾಪಾರಿಗಳಿಗೆ ಇಲ್ಲಿಂದ ಈರುಳ್ಳಿ ಒಯ್ಯುವುದಕ್ಕಿಂತ ಅಲ್ಲಿಂದ ತರಿಸಿಕೊಳ್ಳು ವುದೇ ಸುಲಭ. ಹಾಗಾಗಿ ಪ್ರತಿ ವರ್ಷ ದೆಹಲಿ ಭಾಗದಿಂದ ಇರುತ್ತಿದ್ದ ಅಲ್ಪಸ್ವಲ್ಪ ಬೇಡಿಕೆ ಈ ಬಾರಿ ಇಲ್ಲದಂತಾಗಿದೆ ಎಂದು ಬ್ಯಾಹಟ್ಟಿ ಹೇಳುತ್ತಾರೆ.

ಅಕ್ಟೋಬರ್ ಮಧ್ಯಭಾಗದಿಂದ ಡಿಸೆಂಬರ್‌ವರೆಗೆ ಇಲ್ಲಿನ ಫಸಲು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವುದರಿಂದ ಈ ಅವಧಿಯಲ್ಲಾದರೂ ಇಲ್ಲಿನ ಈರುಳ್ಳಿಯ ಗುಣಮಟ್ಟಕ್ಕೆ ತಕ್ಕಂತೆ ‘ಅರ್ಹತೆ’ ನಿಗದಿ ಗೊಳಿಸಿ ರಫ್ತಿಗೆ ಅವಕಾಶ ನೀಡಲಿ ಎಂಬುದು ರಾಜ್ಯದ ರೈತರ ಬೇಡಿಕೆ. ಆದರೆ ಅದಕ್ಕೆ ‘ರಾಜಕೀಯ ಲಾಬಿ’ಯ ಒತ್ತಾಸೆ ಸಿಗದೇ ಬೀದಿಗಿಳಿಯುವುದು ಇತ್ತೀಚಿನ ವರ್ಷಗ ಳಲ್ಲಿ ಸಾಮಾನ್ಯವಾಗಿದೆ.

ಮಹಾರಾಷ್ಟ್ರದಲ್ಲಿ ಬೆಳೆಯುವ ಭೀಮಾ ತಳಿಯ (ಭೀಮಾ ಶಕ್ತಿ, ಭೀಮಾ ಗೋಲ್ಡ್) ಈರುಳ್ಳಿ ಕಂದು ಬಣ್ಣ ಹೊಂದಿದ್ದು, ದೊಡ್ಡ ಗಾತ್ರ ಹೊಂದಿದೆ. ತೇವಾಂಶ ಪ್ರಮಾಣ ಕಡಿಮೆ ಇರುವುದರಿಂದ ಚೆನ್ನಾಗಿ ಒಣಗಿಸಿದರೆ ಕನಿಷ್ಠ ಮೂರು ತಿಂಗಳು  ಕಾಲ ಕೆಡದಂತೆ ಸಂರಕ್ಷಿಸಿ ಇಡಬಹುದು. ಇದಕ್ಕೆ ಪೂರಕವಾಗಿ ಅಲ್ಲಿನ ಬೆಳೆಗಾರರೇ ಸಹಕಾರಿ ತತ್ವದ ಅಡಿ ವೈಜ್ಞಾನಿಕ ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಈ ಕೇಂದ್ರಗಳಿಗೆ ಸಹಾಯಧನ, ಭೂಮಿ ಉಚಿತವಾಗಿ ನೀಡಿರುವ ಅಲ್ಲಿನ ಸರ್ಕಾರ ಮುಂಬೈ ಸಮೀಪದ ರಸೆಲ್‌ಗಾಂವ್‌ ಬಳಿ ಅತ್ಯಾಧುನಿಕ ಈರುಳ್ಳಿ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿ ರೈತರಿಗೆ ನೆರವಾಗಿದೆ.

ಕರ್ನಾಟಕ, ಆಂಧ್ರಪ್ರದೇಶದಲ್ಲಿ ಅರ್ಕಾ ಕಲ್ಯಾಣ, ಅರ್ಕಾ ಕೇತನ್, ಪೂಸಾ ಮಾಧವಿ, ಬಳ್ಳಾರಿ ರೆಡ್, ಬಸವಂತ–780, ಲೈನ್‌–28 ತಳಿಯ ಈರುಳ್ಳಿ ಬೆಳೆಯಲಾಗುತ್ತಿದೆ. ಮುಂಗಾರು ಹಂಗಾಮಿನ ಪೀಕು ಆಗಿರುವುದರಿಂದ ಗಡ್ಡೆಯಲ್ಲಿ ತೇವಾಂಶದ ಪ್ರಮಾಣವೂ ಹೆಚ್ಚಿರುತ್ತದೆ. ಈ ತಳಿಗಳ ಈರುಳ್ಳಿಯನ್ನು 15 ದಿನ ಮಾತ್ರ ಕೆಡದಂತೆ ಸಂರಕ್ಷಿಸಿಡಬಹುದಾಗಿದೆ. ಮುಂಗಾರೋತ್ತರ ಅವಧಿಯಾದ್ದರಿಂದ ಕೊಯ್ಲಿನ ಸಂದರ್ಭದಲ್ಲಿ ಮಳೆ ಸಾಮಾನ್ಯ. ಇದರಿಂದ ಫಸಲು ಕೊಳೆಯುವುದು ಸಾಮಾನ್ಯ.  ದೀರ್ಘ ಕಾಲ ಈರುಳ್ಳಿ ಸಂರಕ್ಷಿಸಿಡಲು ವೈಜ್ಞಾನಿಕ ಸಂಗ್ರಹಾಗಾರಗಳು ಇಲ್ಲ. ಕೊಯ್ದ ಮೇಲೆ ಸಂಗ್ರಹಿಸಿಡುವ ಹವ್ಯಾಸವೂ ಇಲ್ಲಿನ ರೈತರಲ್ಲಿ ಇಲ್ಲ. ಹೊಲದಿಂದ ನೇರ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಬೇಕಾದ ಒತ್ತಡ ಅವರದ್ದು ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ಪ್ರಾಂಗಣ­ದಲ್ಲಿ ಇರುವ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಹಾಯಕ ನಿರ್ದೇಶಕ ಅಲೋಕ್‌ಕುಮಾರ್ ಸಿಂಗ್.

ಬೆಳೆಗಾರರ ಈ ದೌರ್ಬಲ್ಯ ಬಳಸಿಕೊಳ್ಳುವ ವರ್ತಕರು ಬಾಯಿಗೆ ಬಂದಷ್ಟು ಬೆಲೆ ನಿಗದಿ ಮಾಡುತ್ತಾರೆ. ಇನ್ನು ಈರುಳ್ಳಿ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗದಿಗೊಳಿಸಲಾಗುತ್ತದೆ. ಇದಕ್ಕೂ ಯಾವುದೇ ವೈಜ್ಞಾನಿಕ ಮಾನದಂಡ ಇಲ್ಲ. ದಲ್ಲಾಳಿ ಹಾಗೂ ಖರೀದಿದಾರರ ಮೂಗಿನ ನೇರಕ್ಕೆ ಬೆಲೆ ನಿಗದಿ ಮಾಡಲಾಗುತ್ತದೆ. ಈ ಅಸಹಾಯಕತೆ ಬೆಳೆಗಾರರಲ್ಲಿ ಹತಾಶೆ ಸೃಷ್ಟಿಸಿ ಪದೇ ಪದೇ ಗದ್ದಲಕ್ಕೆ ದಾರಿಯಾಗುತ್ತಿದೆ.

ಬೆಂಬಲ ಬೆಲೆಗೆ ಮೀನಾಮೇಷ...
ಪ್ರತಿ ವರ್ಷ ಈರುಳ್ಳಿ ಬೆಲೆ ಕುಸಿದಾಗ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸುತ್ತಿದ್ದ ಸರ್ಕಾರ ಈ ಬಾರಿ ಮೀನಾಮೇಷ ಎಣಿಸುತ್ತಿದೆ. ಈ ವರ್ಷ ಅತಿವೃಷ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾಳಾಗಿದ್ದು, ಖರೀದಿ ಕೇಂದ್ರ ತೆರೆಯುವುದರಿಂದ ಉಪಯೋಗ­ವಿಲ್ಲ. ಬದಲಿಗೆ ಹಾನಿಯಾದ ಬೆಳೆಗೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ ಎಂಬುದು ಸರ್ಕಾರದ ನಿಲುವಾಗಿದೆ. ಈಗಾಗಲೇ ಬೆಂಬಲ ಬೆಲೆಯಲ್ಲಿ ಟೊಮೆಟೊ ಖರೀದಿಸಿ ಕೈ ಸುಟ್ಟು­ಕೊಂಡಿ­ರುವ ಸರ್ಕಾರ ಈರುಳ್ಳಿ ಖರೀದಿಗೆ ಮುಂದಾ­ಗುತ್ತಿಲ್ಲ. ದಾಸ್ತಾನು ಕೇಂದ್ರಗಳ ಕೊರತೆ­ಯಿಂದ ನಾಳೆ ರೈತರಿಂದ ಖರೀದಿಸಿದ ಈರುಳ್ಳಿಯನ್ನು ತಿಪ್ಪೆಗೆ ಸುರಿಯ­ಬೇಕಾದೀತು ಎಂದು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂಬುದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಅಭಿಮತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT