ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ತನೆ ಸರಿಯಲ್ಲ

Last Updated 9 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕೇಂದ್ರದ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐ ಸದಾ ಒಂದಿ­ಲ್ಲೊಂದು ವಿವಾದ ಸೃಷ್ಟಿಸುತ್ತಲೇ ಇದೆ. ಅದು ಸಾಮಾನ್ಯ­ವಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಂತೆ ವರ್ತಿಸು­ತ್ತದೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.  ಈಗ  ಸ್ವತಃ ಸಿಬಿಐ ಮುಖ್ಯಸ್ಥರೇ ವಿವಾದದಲ್ಲಿ ಸಿಲುಕಿದ್ದಾರೆ. ಇದರಿಂದಾಗಿ ಜನ ಈ ಸಂಸ್ಥೆಯನ್ನು ಮತ್ತಷ್ಟು ಅನುಮಾನದಿಂದ  ನೋಡುವಂತಾಗಿದೆ.  2ಜಿ ತರಂಗಾಂತರ, ಕಲ್ಲಿದ್ದಲು ಗಣಿ ಹಂಚಿಕೆಯಂತಹ ಭಾರಿ ಹಗರಣಗಳಲ್ಲಿ ಸಿಬಿಐ­­ನಿಂದ ತನಿಖೆ ಎದುರಿಸುತ್ತಿರುವ ಪ್ರಭಾವಿ ವ್ಯಕ್ತಿಗಳು, ಸಂಸ್ಥೆಯ ಮುಖ್ಯಸ್ಥ ರಂಜಿತ್‌ ಸಿನ್ಹಾ ಅವರ ಮನೆಗೆ ಆಗಿಂದಾಗ್ಗೆ ಎಡತಾಕುತ್ತಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಇದರ ಔಚಿತ್ಯ, ಪ್ರಶ್ನೆಗೆ ಒಳಗಾಗಿರುವುದು ಮಾತ್ರವಲ್ಲ  ನಿಷ್ಪಕ್ಷಪಾತ ತನಿಖೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.  ಸಿನ್ಹಾ ಅವರನ್ನು ಭೇಟಿ ಮಾಡಿದವರಲ್ಲಿ ಕೆಲವರು ಭ್ರಷ್ಟಾಚಾರಕ್ಕೆ ಸಂಬಂಧಿಸಿ­ದಂತೆ ತನಿಖೆಗೆ ಒಳಗಾದವರು, ಇನ್ನು ಕೆಲವರು ಹಣ ದುರುಪಯೋಗಕ್ಕಾಗಿ ಸಿಬಿಐನ ಕಟ್ಟೆಚ್ಚರದ ಪರಿಶೀಲನೆಗೆ ಒಳಗಾಗಿರುವ ಕಂಪೆನಿಗಳ ಏಜೆಂಟರು. ಇಂತಹ ಸಂದರ್ಶಕರ  ಹೆಸರುಗಳ ಪಟ್ಟಿ ಇರುವ ಪುಸ್ತಕವೊಂದನ್ನು  ಸೆಂಟರ್ ಫಾರ್‌ ಪಬ್ಲಿಕ್‌ ಇಂಟರೆಸ್‌್ಟ ಲಿಟಿಗೇಷನ್‌ (ಸಿಪಿಐಎಲ್‌) ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ.

ಈ ವಿಚಾರಕ್ಕೆ ಸಿನ್ಹಾ ಅವರು ನೀಡಿರುವ ಪ್ರತಿಕ್ರಿಯೆ ಸಹ ತೃಪ್ತಿದಾಯಕ­ವಾಗಿಲ್ಲ. ಮೊದಲಿಗೆ, ಅಂತಹದ್ದೊಂದು ಸಂದರ್ಶಕರ ಸಹಿಗಳಿರುವ
ಪುಸ್ತಕ­ವನ್ನು ಸೃಷ್ಟಿಸಲಾಗಿದೆ  ಎಂದು ಹೇಳಿದ್ದ ಸಿನ್ಹಾ, ನಂತರ ಅದರಲ್ಲಿ ಕೆಲವರ ಹೆಸರು ಮಾತ್ರ ಸರಿ ಇರಬಹುದು ಎಂದಿದ್ದರು. ಬಳಿಕ, ತಮ್ಮ ವಿರುದ್ಧ ಪಿತೂರಿ ನಡೆದಿದೆ ಎಂದು ದೂರಿದ್ದಾರೆ. ಸಿಪಿಐಎಲ್‌ ಮತ್ತು ಅದರ ಪ್ರಧಾನ ಕಾರ್ಯದರ್ಶಿ ಕಾಮಿನಿ ಜೈಸ್ವಾಲ್‌ ಅವರ ವಿರುದ್ಧ ‘ಸುಳ್ಳು ಸಾಕ್ಷ್ಯ’ದ ಮೊಕದ್ದಮೆಯನ್ನೂ ಅವರು ದಾಖಲಿಸಿ­ದ್ದಾರೆ. ಅಷ್ಟೇ ಅಲ್ಲ, ತಮಗೆ ಬೇಕಾದ ವ್ಯಕ್ತಿಗಳನ್ನು ಭೇಟಿ ಮಾಡಿದರೆ ತಪ್ಪೇನು ಎಂಬ ಉದ್ಧಟ­ತನದ ಪ್ರಶ್ನೆಯನ್ನೂ ಎತ್ತಿದ್ದಾರೆ.

ಸಂಪೂರ್ಣ ಪಾರ­ದ­ರ್ಶ­ಕತೆ ಕಾಯ್ದು­ಕೊಳ್ಳಬೇಕಾದ ತನಿಖಾ ಸಂಸ್ಥೆಯ ಮುಖ್ಯಸ್ಥರೊಬ್ಬರು ಹಗರಣ­ಗಳಲ್ಲಿ ಷಾಮೀಲಾದವರನ್ನು ಭೇಟಿ ಮಾಡಲು ತಮ್ಮ ಮನೆಯನ್ನೇ ವೇದಿಕೆ ಮಾಡಿ­ಕೊಂಡಿರುವುದು  ನಾಚಿಕೆಗೇಡು. ಅಂತಹವರನ್ನು ಭೇಟಿ ಮಾಡ­ಲೇ­ಬೇಕು ಎನ್ನುವುದಾದರೆ ಕಚೇರಿಯ ಆವರಣದಲ್ಲಿ ತನಿಖಾಧಿಕಾರಿಗಳ ಸಮ್ಮುಖ­ದಲ್ಲೇ ಅಧಿಕೃತವಾಗಿ ಆ ಕೆಲಸವನ್ನು ಅವರು ಮಾಡಬಹುದಿತ್ತು. ಹೇಳಿ-­ಕೇಳಿ ಅವರೊಬ್ಬ ಸರ್ಕಾರಿ ನೌಕರ. ಗಂಭೀರ ಆರೋಪ ಎದುರಿಸು­ತ್ತಿರುವ­ವರನ್ನು  ಭೇಟಿ ಮಾಡಿದ್ದಕ್ಕೆ ಸಿನ್ಹಾ  ಸ್ಪಷ್ಟನೆ ನೀಡಬೇಕಾಗುತ್ತದೆ.

​ಕಳಂಕಿತ ವ್ಯಕ್ತಿಗಳನ್ನು ಭೇಟಿ ಮಾಡಿದ ಕಾರಣಕ್ಕೇ ‘ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿ­ದಂತೆ’ ಆಗಿದೆ ಸಿನ್ಹಾ ಅವರ ಪರಿಸ್ಥಿತಿ ಎಂದು ಕನಿಕರ­ಪಡುವಂತೇನೂ ಇಲ್ಲ. ಏಕೆಂದರೆ ಸಿಬಿಐನಲ್ಲಿನ ಅವರ ಕಾರ್ಯವೈಖರಿಯೂ ವಿವಾದಗಳಿಂದ ಹೊರತಾ­ಗಿಲ್ಲ. ಎಲ್ಲ ವಿಷಯ­ಗಳಲ್ಲೂ ಮೂಗುತೂರಿಸುವ ಮೂಲಕ ಸಂಸ್ಥೆಯ ಕಾರ್ಯ­ನಿರ್ವಹಣೆಗೆ ಅಡ್ಡಿಪಡಿಸುತ್ತಾರೆ ಎಂಬ ಆರೋಪವೂ ಅವರ ಮೇಲಿದೆ. ಸಿನ್ಹಾ ಅವರನ್ನು ಸಿಬಿಐ ಮುಖ್ಯಸ್ಥ ಹುದ್ದೆ­ಯಿಂದ ಕೆಳಗಿಳಿಸಿ ಅವರ ವಿರುದ್ಧ  ವಿಶೇಷ ತನಿಖೆ ನಡೆಸಬೇಕು ಎಂಬ ಒತ್ತಡ ಈಗ ಕೇಳಿ­ಬರುತ್ತಿದೆ. ಇದಕ್ಕೆ ಪೂರಕವಾಗಿ  ಸಿನ್ಹಾ  ತಾವಾಗಿಯೇ ಮುಖ್ಯಸ್ಥ ಹುದ್ದೆ­ಯಿಂದ ಕೆಳಗಿಳಿಯಬೇಕು ಅಥವಾ ಸರ್ಕಾರ ತಕ್ಷಣವೇ ಅವರನ್ನು ವಜಾ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT