ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸರಣಿ ಯಾರಿಗಾಗಿ...?

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಭಾರತ-ಲಂಕಾ ನಡುವೆ ತುರ್ತಾಗಿ ಆಯೋಜಿಸಲಾಗಿರುವ ಏಕದಿನ ಸರಣಿ ಹಲವು ಪ್ರಶ್ನೆಗಳನ್ನು ಮುಂದಿ­­ಟ್ಟಿದೆ. ವೇತನ ಸಮಸ್ಯೆ­ಯಿಂದಾಗಿ ವಿಂಡೀಸ್‌ ತಂಡದವರು ಸರಣಿ ಮಧ್ಯದಲ್ಲಿಯೇ ನಿರ್ಗಮಿಸಿ­ದ್ದರಿಂದ ಉಂಟಾದ ಆರ್ಥಿಕ ನಷ್ಟವನ್ನು ಭರಿಸಲು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಮತ್ತೊಂದೆಡೆ ಲಂಕಾ ಪಾಲಿಗೆ ‘ವೈದ್ಯ ಹೇಳಿದ್ದೂ ಹಾಲು ಅನ್ನ, ರೋಗಿ ಬಯಸಿದ್ದೂ ಹಾಲು ಅನ್ನ’ ಎಂಬಂತಾಗಿದೆ. ಆದರೆ, ನಿಜವಾಗಿಯೂ ಈ ಸರಣಿಯ ಹಿಂದಿನ ಉದ್ದೇಶವೇನು...?

ಇದು ಕ್ರಿಕೆಟ್‌ ಜಗತ್ತಿನಲ್ಲಿ ಬಿಸಿಸಿಐ ಹೊಂದಿರುವ ಪ್ರಭಾವಕ್ಕೊಂದು ಅತ್ಯುತ್ತಮ ಉದಾಹರಣೆೆ!
ಏಕೆಂದರೆ ವೇತನ ಸಮಸ್ಯೆಯಿಂದಾಗಿ ವೆಸ್ಟ್‌ಇಂಡೀಸ್‌ ತಂಡದವರು ಸರಣಿ ಮಧ್ಯದಲ್ಲಿಯೇ ನಿರ್ಗಮಿಸಿದ ಕೆಲವೇ ಗಂಟೆಗಳಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ನೆರೆಯ ಶ್ರೀಲಂಕಾದೊಂದಿಗೆ ಏಕದಿನ ಸರಣಿ ಆಡಲು ಒಪ್ಪಂದ ಕುದುರಿಸಿಯಾಗಿತ್ತು.
ಕೆಲ ದೇಶಗಳು ಕ್ರಿಕೆಟ್‌ ಆಡಲು ಭಾರತದವರ ಆಹ್ವಾನವನ್ನು ಬಾಯಿಬಿಟ್ಟುಕೊಂಡೇ ಎದುರು ನೋಡು ತ್ತಿರುವ ಕಾಲವಿದು. ಇನ್ನು ಆರ್ಥಿಕ ಪರಿಸ್ಥಿತಿ ಚಿಂತಾಜನಕ ವಾಗಿರುವ ಲಂಕಾ ಕ್ರಿಕೆಟ್‌ ಮಂಡಳಿಯು ಚಿನ್ನದಂಥ ಈ ಅವಕಾಶ ತಪ್ಪಿಸಿಕೊಳ್ಳುವುದೇ?  ಕ್ಷಣಮಾತ್ರದಲ್ಲಿ ಒಪ್ಪಿಗೆ ಸೂಚಿಸಿತು.

ಆದರೆ, ಇದ್ದಕ್ಕಿದ್ದಂತೆ ಸರಣಿಯಲ್ಲಿ ಆಡಲು ಒಪ್ಪಿಗೆ ಸೂಚಿಸಿರುವ ಲಂಕಾ ಕ್ರಿಕೆಟ್ ಮಂಡಳಿಯ ಕ್ರಮವನ್ನು ಆ ದೇಶದ ಹಿರಿಯ ಹಾಗೂ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರೇ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಸಾಮಾ ಜಿಕ ಜಾಲತಾಣಗಳಲ್ಲಿ ಕೂಡ ಟೀಕಾ ಪ್ರಹಾರ ಹರಿ ಯುತ್ತಿದೆ. ಬಿಸಿಸಿಐ ಕ್ರಮವೂ ಟೀಕೆಗೆ ಒಳಗಾಗಿದೆ.

ಇದಕ್ಕೆ ಕಾರಣ ಉಭಯ ದೇಶಗಳ ನಡುವೆ ಇತ್ತೀಚೆಗೆ ನಡೆದಿರುವ ವಿಪರೀತ ಸರಣಿಗಳು. ಇತ್ತೀಚೆಗೆ ಈ ಎರಡು ದೇಶಗಳ ನಡುವೆ ವರ್ಷಕ್ಕೆ 3-4 ಸರಣಿ ಖಚಿತ ಎನ್ನುವಂತಾಗಿದೆ. ಜೊತೆಗೆ ತ್ರಿಕೋನ ಸರಣಿ ಹಾಗೂ ಐಸಿಸಿ ಆಯೋಜಿಸುವ ವಿವಿಧ ಟೂರ್ನಿಗಳಲ್ಲಿ ಆಡುತ್ತಿವೆ. ಉಭಯ ದೇಶಗಳು ಪದೇ ಪದೇ ಮುಖಾಮುಖಿ ಯಾಗುತ್ತಿರುವುದು ಹೆಚ್ಚಿನ ಪ್ರೇಕ್ಷಕರಿಗೆ ಬೇಸರ ಉಂಟು ಮಾಡಿದೆ. ಇವೆಲ್ಲದರ ನಡುವೆ ಬರೋಬ್ಬರಿ ಎರಡು ತಿಂಗಳು ನಡೆಯುವ ಐಪಿಎಲ್‌ ಬೇರೆ.

‘ಭಾರತ ಹಾಗೂ ಲಂಕಾ ತಂಡಗಳಿಗೆ ತಿಂಗಳ ಪಾಸ್‌ ನೀಡುವುದೇ ಒಳ್ಳೆಯದು’, ‘ಮತ್ತೊಂದು ಬೋರು ಹೊಡೆಸುವ ಸರಣಿ’, ‘ಮತ್ತೊಮ್ಮೆ ರಿಪ್ಲೇ ಶುರು ವಾಯಿತಾ?’, ‘ಅದೇ ಪಿಚ್‌ಗಳು, ಅದೇ ತಂಡಗಳು’, ‘ಅದೇ ರಾಗ ಅದೇ ಹಾಡು...’ ಎಂಬಿತ್ಯಾದ ತಮಾಷೆಯ ಪ್ರತಿಕ್ರಿಯೆಗಳು ಟ್ವಿಟರ್‌, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.  ‘ಕೆಲವೇ ತಿಂಗಳಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌­ನಲ್ಲಿ ಏಕದಿನ ವಿಶ್ವಕಪ್‌ ಶುರುವಾಗಲಿದೆ. ಅದಕ್ಕಾಗಿ ನಾವೆಲ್ಲಾ ಆರು ವಾರಗಳ ಫಿಟ್‌ನೆಸ್‌ ಶಿಬಿರದಲ್ಲಿ ಪಾಲ್ಗೊಂಡಿದ್ದೇವೆ. ಇಂಥ ಸಮಯದಲ್ಲಿ ಈ ಸರಣಿ ಅಗತ್ಯವಿತ್ತೇ? ಏಕಾಏಕಿ ಶಿಬಿರವನ್ನು ಕೈಬಿಟ್ಟು ಸರಣಿ ಆಯೋಜಿಸಿದ್ದೇಕೆ?’ ಎಂದು ಸಂಗಕ್ಕಾರ ಪ್ರಶ್ನಿಸಿದ್ದಾರೆ.

ಇತ್ತ ಲಂಕಾ ಕ್ರಿಕೆಟ್‌ ಮಂಡಳಿ ತನ್ನ ಕ್ರಮವನ್ನು ಸಮ ರ್ಥಿಸಿಕೊಂಡಿದೆ. ‘ಇದು ಆಟದ ಹಿತದೃಷ್ಟಿ ಇಟ್ಟುಕೊಂಡು ತೆಗೆದುಕೊಂಡ ನಿರ್ಧಾರ’ ಎಂದು ಸಂಗಕ್ಕಾರ ಅವರಿಗೆ ತಿರುಗೇಟು ನೀಡಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಪದೇ ಪದೇ ಮುಖಾಮುಖಿಯಾಗುತ್ತಿರು ವುದರಿಂದ ಉಭಯ ದೇಶ­ಗಳ ನಡುವಿನ ಪೈಪೋಟಿ ಆಸಕ್ತಿ ಕಳೆದು­ಕೊಂಡಿರುವುದು ನಿಜ. ಜೊತೆಗೆ ಆಟಗಾರರನ್ನು ಹೈರಾಣಾಗಿಸಿದೆ.

ವಿಂಡೀಸ್‌ ತಂಡದವರು ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಿದ್ದರಿಂದ ಸುಮಾರು ₨400 ಕೋಟಿ ನಷ್ಟವಾಗಿದೆ ಎಂಬುದು ಬಿಸಿಸಿಐ ವಾದ. ಅದನ್ನು ಕೊಂಚವಾದರೂ ಸರಿದೂಗಿ­ಸಲು ಲಂಕಾ ಎದುರಿನ ಸರಣಿ ನೆರವಾಗಲಿದೆ ಎಂಬುದು ಮಂಡಳಿಯ ನಿಲುವು. ಆದರೆ, ಸತತ ಕ್ರಿಕೆಟ್‌ ಆಡಿ ದಣಿದಿರುವ ಆಟಗಾರರಿಗೆ ಈ ನೆಪದಲ್ಲಾದರೂ ವಿಶ್ರಾಂತಿ ನೀಡಬಹು ದಿತ್ತಲ್ಲವೇ ಎಂಬುದು ಕ್ರಿಕೆಟ್‌ ವಿಶ್ಲೇಷಕರ ವಾದ.

ಜೊತೆಗೆ ವೀಕ್ಷಕರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಕೆಳಮುಖವಾಗುತ್ತಿದೆ. ಐಪಿಎಲ್‌, ಚಾಂಪಿಯನ್ಸ್‌ ಲೀಗ್‌, ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ  ಟೂರ್ನಿಗಳನ್ನು ಆಸಕ್ತಿಯಿಂದ ವೀಕ್ಷಿಸುವ ಪ್ರೇಕ್ಷಕರು ಏಕದಿನ ಹಾಗೂ ಟೆಸ್ಟ್‌ ಸರಣಿಗಳತ್ತ ಗಮನ ಹರಿಸುವುದು ಕಡಿಮೆ. ಹಾಗಾಗಿ ಉಭಯ ದೇಶಗಳ ಸರಣಿ ವೇಳೆ ಕ್ರೀಡಾಂಗಣಗಳು ಖಾಲಿ ಖಾಲಿಯಾಗಿರುತ್ತವೆ. 2011ರಲ್ಲಿ 3.4 ಇದ್ದ ಟಿಆರ್‌ಪಿ ಈಗ 2.2ಕ್ಕೆ ಬಂದು ನಿಂತಿದೆ. ವೀಕ್ಷಕರ ಸಂಖ್ಯೆ ಬೆಳೆಯುತ್ತಿಲ್ಲ ಎಂಬುದಕ್ಕೆ ಇವೆಲ್ಲಾ ಉದಾಹರಣೆ ಅಷ್ಟೆ.

ಇತ್ತ ಭಾರತದಲ್ಲಿ ಏಕದಿನ ಸರಣಿ ಆಡಲು ಒಪ್ಪಿರುವ ಲಂಕಾ ಕ್ರಿಕೆಟ್‌ ಮಂಡಳಿ ಇದೊಂದು ಅದ್ಭುತ ಅವಕಾ ಶವೆಂದು ಷರತ್ತು ಕೂಡ ವಿಧಿಸಿದೆ. ಟೆಸ್ಟ್‌ ಸರಣಿ ಆಡಲು ಭಾರತದವರು ಮುಂದಿನ ಆಗಸ್ಟ್‌ನಲ್ಲಿ ಸ್ವದೇಶಕ್ಕೆ ಬರಬೇಕೆಂಬುದು ಆ ಷರತ್ತು. ಭಾರತದೊಂದಿಗೆ ಸರಣಿ ಆಡಿದರೆ ತನ್ನ ಬೊಕ್ಕಸಕ್ಕೆ ಹಣ ಸೇರಲಿದೆ ಎಂಬುದು ಆ ದೇಶದ ಕ್ರಿಕೆಟ್ ಮಂಡಳಿಯ ಲೆಕ್ಕಾಚಾರ. ಈ ಸರಣಿ ಯಿಂದ ₨50 ಕೋಟಿ ಹಣ ಬರಬಹುದು ಎಂದು ಅಂದಾ ಜಿಸಿದೆ. ಈ ಮೊದಲು ರೂಪಿಸಿದ ವೇಳಾಪಟ್ಟಿ ಪ್ರಕಾರ ಸಿಂಹಳೀಯ ಪಡೆ ಆ ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬರಬೇಕಿತ್ತು.

ಅದೇನೇ ಇರಲಿ, ಮುಂದಿನ ತಿಂಗಳು ನಡೆಯಲಿರುವ ಏಕದಿನ ಸರಣಿಯ ಬಗ್ಗೆ ಮಾತನಾಡೋಣ. ಈ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ನಾಯಕ ಮಹೇಂದ್ರ ಸಿಂಗ್‌ ದೋನಿ ಆಡುತ್ತಿಲ್ಲ. ಅವರ ಬದಲಿಗೆ ತಂಡವನ್ನು ವಿರಾಟ್‌ ಕೊಹ್ಲಿ ಮುನ್ನಡೆಸಲಿದ್ದಾರೆ. ವೇಗಿ ಭುವನೇಶ್ವರ್‌ ಕುಮಾರ್‌ ಅವರಿಗೂ ವಿಶ್ರಾಂತಿ ನೀಡಲಾಗಿದೆ.

ಈ ಸರಣಿಯ ಒಂದು ಪಂದ್ಯ ಕೋಲ್ಕತ್ತದಲ್ಲಿ ನಡೆಯು ತ್ತಿರುವುದು ವಿಶೇಷ. ಐಸಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣಕ್ಕೆ ಈಗ 150ನೇ ವರ್ಷದ ಸಂಭ್ರಮ. ಕ್ರಿಕೆಟ್‌ ಕ್ರೇಜ್‌ ನಗರಿ ಕೋಲ್ಕತ್ತದ ಈ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇನ್ನುಳಿದ ಪಂದ್ಯಗಳು ಕಟಕ್‌, ರಾಂಚಿ, ಅಹಮದಾಬಾದ್‌ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ.

ನವೆಂಬರ್‌ 1ರಿಂದ 15ರವರೆಗೆ ನಡೆಯಲಿರುವ ಈ ಸರಣಿಯಲ್ಲಿ ಆಡಲು ಲಂಕಾ ತಂಡ ಕೂಡ ಪ್ರಮುಖರ ಅನುಪಸ್ಥಿಯಲ್ಲಿ ಭಾರತಕ್ಕೆ ಬರುತ್ತಿದೆ. ಗಾಯದ ಸಮಸ್ಯೆಗೆ ಒಳಗಾಗಿರುವ ವೇಗಿ ಲಸಿತ್‌ ಮಾಲಿಂಗ ಆಡುತ್ತಿಲ್ಲ. ರಂಗನಾ ಹೆರಾತ್‌, ದಿನೇಶ್‌ ಚಾಂದಿಮಾಲ್‌ ಹಾಗೂ ಲಾಹಿರು ತಿರಿಮಾನೆ ಕೂಡ ಬರುತ್ತಿಲ್ಲ.

ಮುಂದಿನ ವರ್ಷ ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್‌ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಕೇವಲ ಮೂರೂವರೆ ತಿಂಗಳು ಬಾಕಿಯಿದೆ. ಹಾಲಿ ಚಾಂಪಿಯನ್‌ ಕೂಡ ಆಗಿರುವ ಭಾರತಕ್ಕೆ ಈಗ ಭಾರಿ ಸವಾಲು ಎದುರಿದೆ. ಈ ಟೂರ್ನಿಗೆ ತಂಡದ ಆಯ್ಕೆ ಪ್ರಕ್ರಿಯೆ ಇಲ್ಲಿಂದಲೇ ಶುರುವಾಗಬೇಕಿದೆ. ಆಟಗಾರರು ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ಕೂಡ ಮಹತ್ವದ್ದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT