ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗುಳುಬುಟ್ಟಿ

ಕಥೆ
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಇಂದೋ ನಾಳೆಯೋ ಎಂದು ಸಾಯುವ ದಿನವನ್ನು ಎಣಿಸುತ್ತಿರುವ ಮ್ಯಾಲಿನ ಓಣಿ ದೊಡ್ಡಫಕ್ಕೀರಪ್ಪನ ಮಾತು ಮಾತ್ರ ಎಂದೂ ಹುಸಿಹೋದ ಉದಾಹರಣೆಯಿಲ್ಲ. ಈ ಕ್ಷಣಕ್ಕೆ ಸಾಯುವನೋ ಇನ್ನೊಂದು ಕ್ಷಣಕ್ಕೆ ಸಾಯುವನೋ ಎನ್ನುವಂತೆ ತೀರ ಬಡಕಲಾಗಿರುವ ಅವನ ಎದೆ ಗಸಗ್ಗನೆ ಒಡೆಯುವ ರೀತಿಯಲ್ಲಿ ಏರಿಳಿಯುತ್ತಿದ್ದರೂ ನೋಡಿದರೆ ಹೆದರಿಕೆ ಹುಟ್ಟುವಂತಿರುವ ಕಣ್ಣುಗಳು ಮೇಲೆ ಕೆಳಗೆ ಆಗುತ್ತಿದ್ದರೂ ಒಣಗಿದ ದಂಟುಗಳಂತಾಗಿರುವ ಕಾಲುಗಳು ಅವುಗಳ ಮೇಲಿನ ಸತ್ತ ಬಿಳಿರೋಮಗಳಂತೆ ನಿಶ್ಚೇಷ್ಟಿತವಾಗಿದ್ದರೂ ಬಾಯಿಯಿಂದ ಹೊರಬರುವ ನುಡಿಗಳು ಅಬಡಜಬಡಾಗಿ ಅರ್ಥಹೀನವಾಗಿದ್ದರೂ ಅವನು ಹೇಳುವುದನ್ನು ಕೇಳಿದರೆ ಎಲ್ಲರೂ ದುಸರಾ ಮಾತಾಡದೆ ನಂಬಿಬಿಡಬೇಕು.

ಆದರೆ ಸುತ್ತಮುತ್ತ ಕುಳಿತಿದ್ದವರು ಮೂರ್ನಾಲ್ಕು ತಿಂಗಳಿಂದ ಸಾಮಾನ್ಯವಾಗಿ ಎತ್ತುತ್ತಿದ್ದ ಆಕ್ಷೇಪವೆಂದರೆ ಮುದುಕನ ಬಚ್ಚಬಾಯಿಯ ಸಲ್ಲಾಪದಲ್ಲಿ ಅವನ ಮಾತಿಗಿಂತ ಉಗುಳೇ ಜಾಸ್ತಿಯಿರುವುದು ಮತ್ತು ಬಚ್ಚಲದ ಜರಡಿಯಿಂದ ನೀರು ಧಾರಾಕಾರ ಸಿಡಿದಂತೆ ಅವನ ಜೊಲ್ಲು ನೂರೆಂಟು ಹನಿಗಳ ಟಿಸಿಲುಗಳಾಗಿ ಕೇಳುವವರ ಕಣ್ಣು, ಕಿವಿ, ಮೂಗು, ನಾಲಿಗೆಯೆನ್ನದೆ ಎಲ್ಲಿ ಬೇಕಾದಲ್ಲಿ ಸಿಡಿಯುತ್ತಿರುವುದು. ಅಷ್ಟಾದರೂ ಚೂರೇಚೂರು ಕೋಪಿಸಿಕೊಂಡವರಾಗಲಿ, ಮೌನವಾಗಿ ಅವನನ್ನು ಶಪಿಸಿದವರಾಗಲಿ ಯಾರೂ ಅಲ್ಲಿರಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಹನ್ನೊಂದು ತಾಸು ಈ ಮುದುಕನ ರಗಳೆಯನ್ನು ಸಹಿಸಿಕೊಂಡಿರುವಾಗ ಇನ್ನೊಂದು ತಾಸಿಗೆ ವೃಥಾ ಯಾಕೆ ಹೆಸರು ಕೆಡಿಸಿಕೊಳ್ಳಬೇಕು ಎಂಬುದೇ ಆಗಿತ್ತು. ಅದೂ ಅಲ್ಲದೆ ಈ ಮುದುಕನಷ್ಟು ಹಿರಿಯನಾದ ವ್ಯಕ್ತಿ ಸುತ್ತಲಿನ ಮೂವತ್ತು ಹಳ್ಳಿಗಳಲ್ಲಿ ಯಾರೂ ಇರಲಿಲ್ಲ.

ಮನೆಯವರು ಅವನಿಗೆ ನೂರಾ ಐವತ್ತು ವರ್ಷ ಆಗಿದೆಯೆಂದು ವಾದ ಮಾಡಿದರೆ ಹೊರಗಿನವರು ‘ಇಲ್ಲ, ಅಷ್ಟು ಆಗಿರಲಿಕ್ಕಿಲ್ಲ. ಅಬ್ಬಬ್ಬಾ ಅಂದ್ರ ನೂರಾಇಪ್ಪತ್ತು’ ಎನ್ನುತ್ತಿದ್ದರು. ಆಂಧ್ರದ ಕಡೆಯಿಂದ ಬಂದಿದ್ದ ಒಬ್ಬ ಜ್ಯೋತಿಷಿ ‘ಈ ಅಜ್ಜ ಏನಿಲ್ಲವೆಂದರೂ ನೂರಾ ಐವತ್ತು ವರ್ಷ ಆಗದೀ ಆರಾಮ ಬದಕ್ತಾನ’ ಎಂದಿದ್ದನಂತೆ. ಅದಕ್ಕಾಗಿ ‘ನೀವಿನ್ನೂ ಈ ಅಜ್ಜಂದು ಸುಮಾರು ಮೂವತ್ತು ವರ್ಷ ಸೇವಾ ಮಾಡಬೇಕಾಗಬಹುದು’ ಎಂದು ಕೆಲವರು ಇವರ ಎದೆ ಒಡೆಯುವ ಮಾತು ಹೇಳುತ್ತಿದ್ದರು. ಈ ಮುದುಕನ ಪುಣ್ಯದ ದೆಸೆಯಿಂದ ಎಂದೋ ಬೇರೆಯಾಗಬೇಕಾಗಿದ್ದ ಈ ಮನೆತನದ ಅಣ್ಣ-ತಮ್ಮಂದಿರು ಬೇರೆಯಾಗಿಲ್ಲವೆಂಬುದು, ತಲೆ-ತಲಾಂತರಗಳಿಂದ ಹೊಲ-ಮನೆಗಳು ಹಂಚಿಕೆಯಾಗಿಲ್ಲವೆಂಬುದು ಕೂಡ ಎತ್ತಿಗೆ ಕೋಡು ಇರುವಂತೆ ಊರಿಗೆ ಒಂದು ಹೆಮ್ಮೆಯ ಸಂಗತಿಯಾಗಿತ್ತು.

ಅವರವರ ನಡುವೆ ಬಗೆಹರಿಯಲಾರದ ಎಷ್ಟೋ ಜಗಳಗಳಿದ್ದವು. ಇಷ್ಟು ದೊಡ್ಡ ಮನೆತನದ ಗೌರವವನ್ನು ಕಾಪಾಡುವ ಜವಾಬ್ದಾರಿ ತಮ್ಮ ಮೇಲಿದೆ ಎಂಬಂತೆ ಈಗ ಅವರೂ ಮುದುಕರಾಗಿರುವ ಹಿರಿಮಗ, ಹಿರಿಮಗಳಿಂದ ಹಿಡಿದು ಮೊಮ್ಮಕ್ಕಳು, ಮರಿಮಕ್ಕಳು, ಮರಿಮೊಮ್ಮಕ್ಕಳು ಶತಮಾನಗಳ ಭಾರ ಹೊತ್ತವರಂತೆ ಅಜ್ಜನಿಗೆ ಮುಂಜಾನೆ ಬಾಗಿ ಮತ್ತೆ ಸಂಜೆ ಬಾಗಿ ಬೆನ್ನು ಬಾಗಿಸಿಕೊಂಡಿದ್ದರು. ಇನ್ನೂ ಒಂದು ಮುಖ್ಯ ವಿಷಯವೆಂದರೆ ದೊಡ್ಡಫಕ್ಕೀರಪ್ಪನ ತಮ್ಮ ಸಣ್ಣಫಕ್ಕೀರಪ್ಪ ಅಣ್ಣನ ಸೇವೆಯೇ ತನ್ನ ಜೀವನದ ಪರಮಗುರಿ ಎಂಬಂತೆ ಹಗಲಿರುಳು ದುಡಿದು ಇತ್ತೀಚೆಗೆ ತೀರಿಕೊಂಡಿದ್ದ. ಅಣ್ಣ ಹೊಲಕ್ಕೆ ಹೋಗದಂತಾದ ಮೇಲೆ, ಕುದುರೆ ಹತ್ತದಂತಾದ ಮೇಲೆ, ಗಿರಣಿಯನ್ನು ನಡೆಸದಂತಾದ ಮೇಲೆ, ಟ್ರಾಕ್ಟರ್ ಹೊಡೆಯದಂತಾದ ಮೇಲೆ ಸಣ್ಣಫಕ್ಕೀರಪ್ಪನೆ ಹೊಲಕ್ಕೆ ಹೋಗಿ, ಗಿರಣಿ ಚಾಲೂ ಮಾಡಿ, ಟ್ರ್ಯಾಕ್ಟರ್ ನಡೆಸಿ, ಆಳುಗಳ ದೇಖ-ರೇಖಿ ನೋಡಿಕೊಳ್ಳುತ್ತಿದ್ದ. ಅಣ್ಣನ ಶಕ್ತಿ ಸೋರಿಹೋಗಿ ಹೆಜ್ಜೆ ಇಡದಂತಾದ ಮೇಲೆ ತಮ್ಮನೆ ಪಂಚಾಯತಿಗೆ ಹೋಗಿ ಹಿರಿಯರ ಮಧ್ಯೆ ಕುಳಿತುಬರುತ್ತಿದ್ದ. ಇವರು ಜೀವಂತವಿರುವತನಕ ಯಾವುದೇ ಇಲೆಕ್ಸನ್ ಮಾಡಬಾರದೆಂದು ಒಬ್ಬ ಸದಸ್ಯ ಠರಾವು ಮಂಡಿಸಿದ. ಹಾಗೆ ಮಾಡುವುದು ತಪ್ಪಾಗುತ್ತದೆಯೆಂದು ಪಂಚಾಯತಿ ಕಾರ್ಯದರ್ಶಿ ಮತ್ತು ಊರ ತಲಾಠಿ ಹೇಳಿದ ಮೇಲೆ ಮಹತ್ವದ ಮೀಟಿಂಗ್‌ಗಳಿಗೆ ದೊಡ್ಡಫಕ್ಕೀರಪ್ಪನನ್ನು ತಪ್ಪದೆ ಕರೆಯುತ್ತಿದ್ದರು. ಅವನು ಹೂಂ ಅಂದ ಮೇಲೆ ಠರಾವು ಪಾಸು ಮಾಡುತ್ತಿದ್ದರು.

ಕುದುರೆಯ ಮೇಲೆ ಕುಳಿತು ಅಜ್ಜ ಹೋಗುತ್ತಿದ್ದರೆ ಅದರ ಮುಖಕ್ಕೆ ಕಟ್ಟಿದ ಹಗ್ಗ ಹಿಡಿದು ನಂಬಿಗಸ್ಥ ಆಳು ಹೋಗುತ್ತಿದ್ದ. ಅಜ್ಜ ಸಭೆ ಮುಗಿಸಿ ಬರುವತನಕ ಓಡಿಹೋಗಲು ಯತ್ನಿಸುವ ಕುದುರೆಯ ಬೆನ್ನು ಸವರುತ್ತ ಆಳು ಪಂಚಾಯತಿ ಸುತ್ತ ಅದನ್ನು ಹತ್ತಾರು ರೌಂಡ್ ಹಾಕಿಸುವನು. ಒಮ್ಮೊಮ್ಮೆ ಕುದುರೆಯ ಬೆನ್ನ ಮೇಲೆ ಸಣ್ಣ ಹುಡುಗರನ್ನು ಕೂಡ್ರಿಸಿ ಹೊತ್ತುಗಳೆಯುವನು. ಪಂಚಾಯತಿಯ ಮೀಟಿಂಗ್‌ನಲ್ಲಿ ಕೊಡುತ್ತಿದ್ದ ಮೈಸೂರು ಪಾಕು, ಉಪ್ಪಿಟ್ಟು, ಖಾರಾ, ಪಾರ್ಲೆ ಬಿಸ್ಕೀಟುಗಳನ್ನು ಕೆಲವು ಸಲ ಅಟೆಂಡರ್‌ನಲ್ಲಿ ಕಾಡಿ ಬೇಡಿ ಹೆಚ್ಚಿಗೆ ಇಸಿದುಕೊಂಡು ಯೂರಿಯಾ ಗೊಬ್ಬರದ ಪ್ಲಾಸ್ಟಿಕ್ ಚೀಲದಲ್ಲಿ ಜತನದಿಂದ ಮನೆಗೆ ತರುವುದು ಅಜ್ಜನ ಪ್ರಿಯವಾದ ಹವ್ಯಾಸಗಳಲ್ಲೊಂದಾಗಿತ್ತು.

ಅಜ್ಜ ಕುದುರೆ ಹತ್ತಿ ಪಂಚಾಯತಿಗೆ ಹೊರಟಿದ್ದಾನೆಂದರೆ ಇಂದು ತಮಗೆ ಮಿಠಾಯಿ ಗ್ಯಾರಂಟಿಯೆಂದು ಮೊಮ್ಮಕ್ಕಳು ಕುದುರೆ ತಿರುಗಿಬರುವ ಖುರಪುಟದ ಸದ್ದನ್ನು ಕಾಯುತ್ತ ಕುಳಿತಿರುತ್ತಿದ್ದರು. ಎತ್ತರದ ಪಡಸಾಲೆಯಲ್ಲಿ ಗೋಡೆಗೆ ಅಜ್ಜ ಆತುಕೊಂಡನೆಂದರೆ ಬೆಲ್ಲಕ್ಕೆ ಇರುವೆ ಮುತ್ತಿಕ್ಕಿದಂತೆ ಹುಡುಗರು ನಾ ಮುಂದು ನೀ ಮುಂದು ಎಂದು ಅವನ ಮೇಲೆ ಬೀಳುತ್ತಿದ್ದವು. ಹುಡುಗರಿಗೆ ಹಂಚಿದ ಮೇಲೆ ಓದು-ಬರಹ ಬಲ್ಲ ದೊಡ್ಡ ಬಾಲಕನೊಬ್ಬನನ್ನು ಕರೆದು ಒಂದೆರಡು ಮೈಸೂರು ಪಾಕು, ಬಿಸ್ಕೀಟ್ ಪಾಕೀಟು ಕೊಟ್ಟು ಅಪ್ಪ-ಕಾಕಂದಿರಿಗೆ, ಅವ್ವ-ಚಿಗವ್ವರಿಗೆ ಸಮನಾಗಿ ಹಂಚಲು ಹೇಳುವನು. ಇನ್ನೊಂದು ಹುಡುಗಿಯ ಕೈಯಲ್ಲಿ ಕುದುರೆ ಕಾಯ್ದ ನಂಬಿಗಸ್ಥ ಆಳಿಗೆಂದು ಅರ್ಧ ಬಿಸ್ಕೀಟ್ ಕೊಟ್ಟು ಕಳುಹಿಸುವನು. ಅದಕ್ಕಾಗಿಯೇ ಹೊರಗೆ ಕಟ್ಟೆಯ ಮೇಲೆ ಕುಳಿತಿದ್ದ ಅವನು ತೃಪ್ತಿಯಿಂದ ಈಗ ಮನೆಯ ಹಾದಿ ಹಿಡಿಯುವನು. ಮಿಠಾಯಿ ಹಂಚುವ ಕಾರ್ಯ ಅಷ್ಟಕ್ಕೆ ಮುಗಿಯುತ್ತಿರಲಿಲ್ಲ.

ತಮ್ಮ ಗಂಡಂದಿರುಗಳಿಗೆ ಸೊಸೆಯಿಂದಿರು ಊಟಕ್ಕೆ ನೀಡುವಾಗ ಮನೆಯೊಡತಿ ಪದವಿಯನ್ನು ಬಿಟ್ಟುಕೊಡಲಾಗದ ಬೆನ್ನು ಬಾಗಿದ ಮುದುಕಿ, ಮುತ್ತಿನಂತಹ ಮುತ್ತವ್ವ ಅಡಿಗೆಮನೆಯ ಕಟ್ಟೆಯನ್ನು ಸಾವಕಾಶವಾಗಿ ಇಳಿದು ಸೊಂಟದ ಮೇಲೆ ಕೈಯಿಟ್ಟುಕೊಂಡು ಮುದುಕನ ಹತ್ತಿರ ಬರುವಳು. ಆತ ಉಂಡ ತಾಟನ್ನು ಒಯ್ಯುವ ನೆಪದಲ್ಲಿ ಎರಡು ನಿಮಿಷ ಅವನ ಕಾಲು ಒತ್ತುತ್ತ ಅಲ್ಲಿಯೇ ಕೂಡುವಳು. ವಯಸ್ಸಿಗೆ ಬಂದ ಮಕ್ಕಳಿದ್ದರೂ ಆಗಲೆ ಕೂದಲು ಬಿಳಿಯಾಗಿದ್ದರೂ ಈ ಮುದುಕ ತನ್ನನ್ನು ಮದುವೆಯಾದ. ಮುದುಕನ ಮೂವತ್ತು ಎಕರೆ ಹೊಲ ನೋಡಿ ಅಪ್ಪ ಬೆರಗಾಗಿದ್ದ. ‘ಮುತ್ತವ್ವ ಇನ್ನ ಮ್ಯಾಲ ನಿನ್ನ ಮನೀ ಮುತ್ತು’ ಎಂದಿದ್ದರು ಹಿರಿಯರು ಈ ವರನಿಗೆ. ‘ನಿನ್ನ ಮೊಲೆಕಟ್ಟಿನ ಮಾಯಕ್ಕೆ ಮರುಳಾದೆ ನಾ, ಮನಿ ಮಾರ ಜಿಂದಿಗಿ ಇಂದಿಗಿ ಹಾಳಾಗಲಿ’ ಎಂದು ಲಾವಣಿ ಹಾಡುತ್ತ ರಾತ್ರಿಯನ್ನು ಹಗಲು ಮಾಡಿದ್ದರ ನೆನಪು ಮುದುಕಿಗೆ ನಿನ್ನೆ ಮೊನ್ನೆ ನಡೆದಂತೆ ಅನಿಸಿತು.

ಕೋಲಾಟ ಕಲಿಯುತ್ತಿರುವ ಅಗಸಿ ಓಣಿಯ ಹುಡುಗರ ತಾಲೀಮಿನ ಮುಂದೆ ಹೋಗಿ ಈಗಲೂ ಕುಳಿತಿರುತ್ತಾನೆ. ಅವರು ತಪ್ಪಿದರೆ ಬಚ್ಚಬಾಯಿಯಲ್ಲಿ ಅಚ್ಚರೀತಿಯಲ್ಲಿ ಹೇಳುವನು: ಛಣಕ ಫಣಕ ಏನ ಕನಕ ಕಾಲುಂಗರ... ಅಜ್ಜ ತನ್ನ ತಲೆಯ ಹಿಂದಿನ ಕಪಾಟಿನ ಬಾಗಿಲು ತೆಗೆದು ಇಡಿಯಾದ ಮೈಸೂರು ಪಾಕೊಂದನ್ನು ಅವಳಿಗೆ ನೀಡಲು ಆಕೆ ಅದನ್ನು ತನ್ನ ಮಸರಾಯಿ ಸೀರೆಯ ಉಡಿಯಲ್ಲಿ ಸುತ್ತುವಳು. ಈ ಮೂಳ ಮುದುಕ ತನಗೆ ಸಿಹಿ ಕೊಡುವನೊ ಇಲ್ಲವೊ ಎಂದು ಚಿಂತಾಕ್ರಾಂತಳಾಗಿದ್ದ ಅವಳ ಮನಸ್ಸು ಈಗ ಹಗುರವಾದಂತಾಗಿ ಇಬ್ಬರೂ ಸ್ವಲ್ಪ ಹೊತ್ತು ಕುಶಲೋಪರಿ ನಡೆಸುವರು. ಅಕಸ್ಮಾತ್ ಈಕಿ ಈ ಮುದುಕನ ಮೊದಲನೆ ಹೇಂತಿ ಆಗಿದ್ರ ನಮ್ಮನ್ನ ಇನ್ನೂ ಎಷ್ಟ ಉರಸತಿದ್ಲೊ ಏನೋ? ಪಾಪ, ಮೊದಲಿನ ಇಬ್ರೂ ಅತ್ತ್ಯಾರು ಕೆಲಸ ಮಾಡಿ ಮಾಡಿ ಸತ್ತರಂತ.

ಅವರು ದುಡೀಲಿಲ್ಲಂದ್ರ ಇಷ್ಟ ದೊಡ್ಡ ಮನಿಯಾದ್ರೂ ಎಲ್ಲಿ ಆಗತಿತ್ತು? ಹೊಲ ಆದ್ರೂ ಹೆಂಗಾಗುತ್ತಿತ್ತು.? ಅವರು ತಾಂವಽ ಸತ್ತರೋ ಇಲ್ಲಾ ಈ ಮುದುಕ ಕೊಂದನೋ ಯಾರಿಗ್ಗೊತ್ತು? ಎಲ್ಲ ಮುಗಿದ ಕಾಲಕ್ಕ ಈಕಿ ಬಂದ್ಲು. ತಾನೂ ಸುಖ ಕಾಣಲಿಲ್ಲ. ನಮ್ಮನ್ನೂ ಸುಖದಿಂದ ಇಡಾಕ ಬಿಡವೊಳ್ಳು. ಸ್ವಲ್ಪ ಗಟ್ಟಿಯಾಗಿದ್ದ ಮೂರನೆ ಸೊಸೆ ಮಲ್ಲವ್ವ ಅತ್ತೆಗೆ ಕೇಳಿಸುವಂತೆಯೇ ಹೇಳಿ ದಟ್ಟ ಹೊಗೆಗೆ ಕರ್ರಗಾದ ಅಡಿಗೆಮನೆಯಲ್ಲಿ ನಗುವಿನ ಕೋಲ್ಮಿಂಚು ಹರಿಸುವಳು.

‘ಮುದುಕ ಈಕಿನ್ನ ತೆರ ಕೊಟ್ಟ ತಂದನಂತ. ಕಾಲು ಹರೀತಾವ ಅಂತ ಆಕಿ ಮಲಕೊಂಡ್ರ ಆಕಿ ಕಾಲು ಒತ್ತತಿದ್ನಂತ. ನಡ ನೋಯ್ತೇತಿ ಅಂದ್ರ ಆಕೀ ನಡು ಹಿಚಕತಿದ್ನಂತ. ಅದಕ್ಕ ಆಕಿ ಇಷ್ಟು ಚಾಡಿ ಹೇಳ್ತಾಳು. ಆದರ ಅವನ ಸೇವಾಕ್ಕ ಆಗಲಿ, ಇಲ್ಲಾ ತನ್ನ ಬೆನ್ನ ಒತ್ತಾಕ ಆಗ್ಲಿ ಹಗಲು-ರಾತ್ರಿಯೆನ್ನದ ಈಗ ನಮ್ಮನ್ನ ಕರೀತಾಳು. ತಾ ಮಾತ್ರ ಎಂದಾದ್ರೂ ಮುದುಕನ ಹೇಲ-ಉಚ್ಚಿ ಬಳದಾಳೇನ? ಇನ್ನೊಬ್ಬಳು ಸೊಸೆ ತುತ್ತಿನಲ್ಲಿ ಹಳ್ಳ ಕಡಿದು ಉಗಳುವಳು. ಪಾಪ! ಆಕಿಗೆ ಮುದುಕಂದು ನೋಡಾಕ ನಾಚಿಗೆ ಬರ್ತದ ಅಂತ... ಕಿರಿಸೊಸೆ ಕೆಂಪಗೇರುತ್ತ ಹೇಳಿದ ಕೂಡಲೆ ಎಲ್ಲರೂ ನಕ್ಕು ನಕ್ಕು ಕಣ್ಣಲ್ಲಿ ನೀರು ಬಂದು ಸುಮ್ಮನಾಗುವರು.

ರೊಕ್ಕದ ಕಪಾಟಿನ ಕೀಲಿಕೈ ಮುದುಕನ ಕಡೆ ಇದ್ದರೆ ಹಿಟ್ಟು-ಕಾಳಿನ ಕೀಲಿಕೈ ಮುದುಕಿಯ ಕಡೆ ಇದ್ದಿರುತ್ತಿತ್ತು. ಸೈಕಲ್ ರಿಪೇರಿಯಾಗಲಿ, ದನಗಳಿಗೆ ಹಿಮ್ಮಡ ಕಟ್ಟಿಸುವುದಾಗಲಿ, ಪಂಪ್‌ಸೆಟ್-ಪೈಪು ಖರೀದಿಯಾಗಲಿ, ಹುಡುಗರಿಗೆ ಕಟಿಂಗ್ ಮಾಡಿಸುವುದಾಗಲಿ ಎಲ್ಲದಕ್ಕೂ ಮುದುಕನಿಗೆ ಹೇಳಿ ಒಪ್ಪಿಗೆ ಪಡೆಯಬೇಕಾಗಿತ್ತು. ಕ್ರಾಪು ಬಿಡಲು ಈ ನಾಯಿಂದ ಕೂಡ ತಮ್ಮ ಅಜ್ಜನಂತೆ ಎಷ್ಟು ಕಲ್ಲುಹೃದಯದವನು ಎಂದು ಹುಡುಗರು ಮತ್ತೆ ಕೂದಲು ಬೆಳೆಯುವತನಕ ರೊಯ್ಯಂತ ಅಳುತ್ತಿದ್ದರು. ಕಾಲೇಜು ಕಲಿಯುತ್ತಿದ್ದ ಮುದುಕನ ಕಿರಿಯ ಮಗ ರಾಜಣ್ಣನಿಗೆ ಕ್ರಾಪು ಮಾಡಿದ ಕಾರಣಕ್ಕೆ ಅಜ್ಜ ರೊಕ್ಕವನ್ನೇ ಕೊಡಲಿಲ್ಲ. ‘ಈ ಮುದುಕ ತಿರುಗಿ ನನಗೆ ಹಜಾಮತಿ ಮಾಡಿದ!’ ಬಾಬಣ್ಣ ಎಲ್ಲರ ಮುಂದೆ ಹೇಳಿಕೊಂಡ. ಫಕ್ಕೀರಪ್ಪಜ್ಜ ಸುಮ್ಮನೆ ಕೂಡ್ರುವ ಚಾಳಿಯವನೆ? ಆ ಬಾಬ್ಯಾಗ ಮನಸ್ಸಿದ್ರ ಮಾಡು ಅಂತ ಹೇಳ್ರಿ. ಇಲ್ಲಾಂದ್ರ ಹರತಂದ ಒಂದು ಕತ್ತಿ ತಂದು ಎಲ್ಲಾ ಹುಡುಗರಿಗೂ ನಾನಽ ನುಣ್ಣಗ ಮಾಡ್ತೇನಿ.

ನಾಯಿಂದರ ಬಾಬಣ್ಣ, ಗಾಣಿಗೇರ ಗುರುಪಣ್ಣ, ಕುಂಬಾರ ವಿರುಪಣ್ಣ, ಕಂಬಾರ ಚಂದ್ರಣ್ಣ, ಶೆಟ್ಟರ ಚನ್ನಬಸಣ್ಣ ಎಲ್ಲರೂ ಫಕ್ಕೀರಪ್ಪಜ್ಜನ ವ್ಯವಹಾರ ಚತುರತೆಯನ್ನು ಸಾವಕಾಶವಾಗಿ ಅರಿತುಕೊಂಡರು. ಕಾಕಾ, ಈಗಿನ ಕಾಲದಾಗ ಉದ್ರಿ ಹೆಂಗಾದೀತು? ಒಂದ ಕಾಲ ಇತ್ತು. ನೀ ಹೇಳತಿದ್ದಿ. ನಾವು ನಂಬತಿದ್ವಿ. ನೀ ಕೊಡ್ತೀನಿ ಅಂತಿದ್ದಿ. ನಾವು ತಡ ಆದ್ರೂ ಚಿಂತಿಯಿಲ್ಲ, ಇಸಕೋತಿದ್ವಿ. ಆದರ ಈಗ ಹಂಗ ಇಲ್ಲ. ನಮ್ಮ ನಮ್ಮ ಮನೆತನ ನಡೆಯೋದು ಕಷ್ಟ ಆಗೇತಿ. ನೀ ನಾಳೆ ನಾಳೆ ಅಂದ ಮುಂದ ಹಾಕಿದರ ನಾವ್ಹೆಂಗ ಮಾಡೋಣು ಹೇಳು? ಹಳೆ ಮಾತು, ಹಳೆ ಪ್ರತಿಮೆ, ಹಳೆ ರೂಪಕ ಮತ್ತು ಹಳೆ ಮನುಷ್ಯರನ್ನು ಹಳತಾಗುವಷ್ಟು ಸಲ ನೋಡಿದ್ದ ಅವರು ಅಜ್ಜನ ಗುರಾಣಿಯನ್ನು ಬಲುಬೇಗನೆ ಹೊಡೆಯಬಲ್ಲವರಾಗಿದ್ದರು.

ಅದೂ ಅಲ್ಲದೆ ಇವರ ಹೊಸ ಭಾಷೆ, ಹುಗಿದಿಟ್ಟ ಅರ್ಥ, ಸಾಂಕೇತಿಕ ಲಿಪಿ-ಚಹರೆಗಳು ಅಜ್ಜನಿಗೆ ಅಪರಿಚಿತವಾಗಿದ್ದವು. ರುಮಾಲು ಹೋಗಿ ಟೊಪ್ಪಿಗಿ ಬಂದಿತ್ತು. ಧೋತರ ಹೋಗಿ ಪಾಯಿಜಾಮ ಬಂದಿತ್ತು. ಚಪ್ಪಲಿ ಬದಲಿಗಿ ಕೆಲವರು ಬೂಟು ಹಾಕುತ್ತಿದ್ದರು. ಹಿರಿಯರ ಸಮಕ್ಷಮದಲ್ಲಿಯೆ ಅಪ್ಪ-ಮಕ್ಕಳ ಜಗಳ ನಡೆಯುತ್ತಿತ್ತು. ಮುದುಕಿ ವಟಗುಟ್ಟುತ್ತ ಎಲ್ಲರಿಗೂ ತೋಯಿಸಿದ ಚುರುಮುರಿ ಮತ್ತು ಚಹಾ ಮಾಡಿದಳು. ಸೊಸೆಯಂದಿರು ಚಹಾ ಮಾಡುತ್ತೇನೆಂದರೂ ಅವಲಕ್ಕಿ ಹಚ್ಚುತ್ತೇನೆಂದರೂ ಒಂದು ದಿನವೂ ಆಕೆ ಬಿಟ್ಟುಕೊಟ್ಟವಳಲ್ಲ. ಅಡಿಗೆಮನೆಯ ಸುಪರ್ದಿಯನ್ನು ಅದೂ ತಿಂಡಿ-ತಿನಿಸು, ಚಹಾ-ಕಾಫಿ, ವಗ್ಗರಣಿ-ತಾಲಪಟ್ಟಿ ಮುಂತಾದ ಎಣ್ಣೆಯಲ್ಲಿ ಕರೆಯುವ ಪಡಿಪದಾರ್ಥಗಳನ್ನು ತನ್ನ ವಶದಲ್ಲಿಯೆ ಇಟ್ಟುಕೊಂಡಿರುತ್ತಿದ್ದಳು. ಅವರು ಮಾಡಿದರೂ ಉರಿಯುವ ಒಲೆಯ ಮುಂದೆ ಕುಳಿತು ಅಷ್ಟು ಸಾಕು, ಇಷ್ಟು ಹಾಕು, ಎಣ್ಣೆ ಹೆಚ್ಚಾಯಿತು, ಉರಿ ಕಡಿಮೆಯಾಯಿತು, ಸಕ್ಕರೆ ಜಾಸ್ತಿಯಾಯಿತು, ಉಪ್ಪು ಇನ್ನಷ್ಟು ಹಾಕಬೇಕಿತ್ತು ಎನ್ನುತ್ತ ಅವರಿಗೆಲ್ಲ ಒಂದು ರೀತಿಯಲ್ಲಿ ಜೀವದ ಕುತ್ತು ಆಗಿದ್ದಳು. ಅಮಾವಾಸ್ಯೆ, ಹುಣ್ಣಿಮೆ ಬಂತೆಂದರೆ ತಾನೇ ಹೋಳಿಗೆ ಮಾಡುವೆನೆನ್ನುತ್ತ, ಹೋಳಿಗೆ ಮಾಡುವ ವಿದ್ಯೆಯನ್ನು ಬೇರೆ ಯಾರಾದರೂ ಕಲಿತುಗಿಲಿತಾರೆಂದು ನಡುರಾತ್ರಿಯಲ್ಲಿಯೆ ಎದ್ದು ಕಡಲೆಬೇಳೆಯನ್ನು ಕುದಿಯಲಿಕ್ಕೆ ಇಡುವಳು.

‘ಮುಪ್ಪಾನುಮುಪ್ಪ ಮುದುಕಿ ನಸುಕಲೆ ಎದ್ದು ಅಡಿಗೆ ಮಾಡ್ತಾಯಿದ್ರ ಸೊಸೆಯಿಂದ್ರು ಗಂಡರನ್ನ ಅಗದಿ ತೆಕ್ಕಿಬಡದ ಇನ್ನೂ ಮಕ್ಕೊಂಡಾರು. ಹೀಂಗಾದ್ರ ಮನಿ ಹೆಂಗ ಉದ್ಧಾರ ಆದೀತು, ಸಾಲ ಹೆಂಗ ಕಡಿಮಿ ಆದೀತು...’ ಎಂದು ಮುದುಕಿ ಸುಪ್ರಭಾತವನ್ನು ಊರಿಗೆ ಕೇಳುವಂತೆ ಹೇಳುವಳು. ಅಜ್ಜ ಸಹಕಲಾವಿದನಂತೆ ನಡುನಡುವೆ ದನಿಗೂಡಿಸುವನು.
ಧಗಧಗ ಉರಿಯುತ್ತಿರುವ ಕೊಳ್ಳಿಯನ್ನು ಈ ಮುದುಕಿಯ ಬಾಯಿಗಿಟ್ಟು ತಾನು ಮತ್ತೆ ಮಲಗಬೇಕು ಎಂದು ನೌಕರಿ ಮಗನ ಹೆಂಡತಿ, ಮುದುಕಿಯೆ ಖುದ್ದಾಗಿ ಆರಿಸಿ ತಂದಿದ್ದ ಲಲಿತವ್ವ ತನ್ನ ವಾರಿಗಿತ್ತಿಯರ ಮುಂದೆ ಕೋಪ ತೋಡಿಕೊಂಡಳು.

‘ಸುಮ್ಮನಿರಽ ಯವ್ವಾ, ಎಷ್ಟ ಜೋರ ಮಾತಾಡ್ತಿ? ಆಕಿ ಹೊಳ್ಳಿ ನಿನಗಽ ಉರಿ ಹಚ್ಚೋವಂಗೆ ಅದಾಳು. ನಿನ್ನ ಗಂಡ ನೋಡು ಹೆಂಗ ಅವ್ವನ್ನ ನೋಡಿದ ಕೂಡಲೇ ಬೆಕ್ಕ ಕಂಡ ಇಲಿಯಂಗ ಗಪ್ಪಗಾರ ಆಗ್ತಾನು.’ ಮುಂದೆ ಸ್ವಲ್ಪ ದಿನಗಳಲ್ಲಿಯೆ ಲಲಿತಕ್ಕ ಬಾಯಿ ಮಾಡದೆ ದೊಡ್ಡದನ್ನೆ ಸಾಧಿಸಿದಳು. ರಾಜಣ್ಣನನ್ನು ಈ ಮನೆ ಬಿಡಿಸುವಲ್ಲಿ ಯಶಸ್ವಿಯಾದಳು. ಆ ದಿನವಂತೂ ಮನೆಯಲ್ಲಿ ಅಷ್ಟೇ ಅಲ್ಲ, ಇಡೀ ಊರಲ್ಲಿಯೆ ಅಲ್ಲೋಲ ಕಲ್ಲೋಲವಾಗಿತ್ತು. ಹಿರಿಯರು ಕೂಡಿದ್ದರು.

‘ಹೊಲ ಮನಿ ಮಾರಿ, ನಮ್ಮ ಜೀವ ತೇದು ಇಂವನ್ನ ಕಲಿಸಿದ್ವಿ. ನೌಕರಿ ಕೊಡಿಸಿದ್ವಿ. ಆದರ ತಂದಿ-ತಾಯಿ ಕೊರಳ ಕೊಯ್ಯುವಂಗ ಆಗ್ತಾನು ಅಂದಕೊಂಡಿರಲಿಲ್ಲ. ಅಣ್ಣ-ತಮ್ಮರನ್ನು ನಡುನೀರಾಗ ಕೈಬಿಟ್ಟು ಹೊಂಟಾನ. ಹೇಂತಿ ಹೇಳಿದಂಗ ಕುಣೀಲಿಕ್ಕೆ ಹತ್ತ್ಯಾನು.’
ಯಾರ್ಯಾರೊ ಏನೇನೋ ಅನ್ನುತ್ತಿದ್ದರು. ಅವನು ಬೇರೆಯಾಗುವ ಪ್ರಸ್ತಾಪಕ್ಕಂತೂ ಎಲ್ಲ ಹಿರಿಯರದು ಒಂದೇ ಉತ್ತರ : ’ಮುದುಕ-ಮುದುಕಿ ಇರುವವರೆಗೂ ಯಾರೂ ಬೇರೆ-ಬೇರೆಯಾಗುವ, ಮನೆ ಒಡೆಯುವ ಮಾತು ಎತ್ತಬಾರದು.’ ಮುದುಕ ಕೂಡುತ್ತಿದ್ದ ಗೋಡೆಗೆ ನೇತುಹಾಕಲಾಗಿದ್ದ ಕಪ್ಪು-ಬಿಳುಪಿನ ದೊಡ್ಡ ಫೋಟೋವನ್ನು ಎಲ್ಲ ಮಕ್ಕಳ-ಸೊಸೆಯಂದಿರ-ಮೊಮ್ಮಕ್ಕಳ ಗಮನಕ್ಕೆ ತರಲಾಯಿತು.

ಸುತ್ತಮುತ್ತಲ ಹಳ್ಳಿಗಳಲ್ಲಿಯೇ ಪ್ರಸಿದ್ಧವಾಗಿದ್ದ ಫಕ್ಕೀರಪ್ಪಜ್ಜನ ಮನೆತನದ ಅವಿಭಕ್ತ ಕುಟುಂಬದ ಚಿತ್ರ ಅದು. ಅಜ್ಜ-ಅಜ್ಜಿ ಕಲಾತ್ಮಕ ತೇಗಿನ ಖುರ್ಚಿಗಳಲ್ಲಿ ಕುಳಿತಿದ್ದಾರೆ. ಗಂಡುಮಕ್ಕಳು ಹಾಗೂ ಅವರ ಹೆಂಡಂದಿರು, ಹೆಣ್ಣುಮಕ್ಕಳು ಮತ್ತು ಅವರ ಗಂಡಂದಿರು ಆ ಕಡೆ ಈ ಕಡೆ ಸಾಲಾಗಿ ನಿಂತಿದ್ದಾರೆ. ಮೊಮ್ಮಕ್ಕಳು ನೆಲದ ಮೇಲೆ ನಗುತ್ತ ಕುಳಿತಿದ್ದಾರೆ. ಮೊನ್ನೆ ಮೊನ್ನೆ ಸತ್ತುಹೋದ ಬ್ರಹ್ಮಚಾರಿ ತಮ್ಮ ಸಣ್ಣಫಕ್ಕೀರಪ್ಪ ಅಣ್ಣನ ಹಿಂದೆ ಬೆಂಗಾವಲಿನಂತೆ ನಿಂತಿದ್ದಾನೆ. ಒಂದು ಸಲ ಪೇಪರದಲ್ಲಿ ಆ ಫೋಟೋ ಬಂದು ಈ ಮನೆತನವನ್ನು ಎಲ್ಲರೂ ಹೊಗಳಿದ್ದರು. ರೇಡಿಯೋ-ಟಿವಿಯವರು ಸಂದರ್ಶನ ಮಾಡಿದ ಮೇಲಂತೂ ಮುದುಕನ ಮನೆತನವನ್ನು ನೋಡಿ ಕಲಿಯಿರಿ ಎಂದೇ ಎಲ್ಲರೂ ಹೇಳುತ್ತಿದ್ದರು. ಮೊನ್ನೆ ಮೊನ್ನೆ ಇದ್ದ ಕುದುರೆ ಎಲ್ಲಿ ಹೋಯಿತು? ಕುದುರಿ ಮ್ಯಾಲ ಬರಾಕ ಇಂವೇನು ದೊಡ್ಡ ರಾಜ ಏನು? ಕುದುರೀನೂ ಇಂವನಂಗ ಬಡಕಲಾಗೇತಿ. ಇನ್ನಷ್ಟ ದಿನಕ್ಕ ಇಂವಾದ್ರೂ ಕುದುರಿ ತಿಂತಾನು. ಇಲ್ಲಾಂದ್ರ ಕುದರೀಯಾದ್ರೂ ಇಂವನ್ನ ಮುರದ ತಿಂತೇತಿ.

ಮನುಷ್ಯರು ಬೇರೆಬೇರೆಯಾಗುವ, ಸಂಬಂಧಗಳು ಹರಿಯುವ, ಕಾಲ ಗೊತ್ತಾಗದಂತೆ ಚಲಿಸುವ ಇಂತಹ ಕಠಿಣವಾದ, ಕಠೋರವಾದ, ಕ್ರೂರವಾದ ಘಳಿಗೆಗಳು ಯಾಕೆ ಬರುತ್ತವೆಯೆಂದು ರಾಜಣ್ಣನ ಕಣ್ಣುಗಳು ಹನಿಯಾದವು. ಎಲ್ಲರೂ ಕೂಡಿ ನಗುತ್ತಿರುವ ಆ ಫೋಟೋ ತನಗೆ ಸಂಬಂಧಿಸಿದ್ದಲ್ಲವೆಂದು ಅವನು ಹೇಗೆ ತಿಳಿದಾನು? ಮನೆ ಬಿಡುವುದು ಅಷ್ಟು ಸುಲಭದ ಕೆಲಸವಲ್ಲವೆಂದು ಲಲಿತಾಳಿಗೂ ಮನವರಿಕೆಯಾಗುತ್ತಿತ್ತು. ರಾಜಣ್ಣ-ಲಲಿತರಿಗೆ ನೆರವಾಗುವ ಮನಸ್ಸು ಒಬ್ಬ ಪುಣ್ಯಾತ್ಮ ಹಿರಿಯನಿಗೆ ಬಂತೆಂದು ಕಾಣುತ್ತದೆ. ಅವನು ತೀರ್ಪು ಕೊಟ್ಟ: ರಾಜಣ್ಣ ಬ್ಯಾರೆ ಊರಾಗ ನೌಕರಿ ಮಾಡಾಂವ. ಅಂವದ ಕಷ್ಟನೂ ನಾವು ಅರ್ಥ ಮಾಡ್ಕೊಬೇಕಾಗತೇತಿ. ಅದಕ್ಕ ಆಂವ ತನ್ನ ಹೇಂತಿ, ಮಕ್ಕಳ ಜೋಡಿ ಅಲ್ಲೇ ಇರಲಿ. ಆದರ ತಿಂಗಳಿಗೊಮ್ಮೆ ಹಳ್ಳಿಗೆ ಬಂದು ಮುದುಕ-ಮುದುಕಿ ಹೆಂಗ ಅದಾರು, ಅಣ್ಣ-ತಮ್ಮರ ಕಷ್ಟ-ಸುಖ ಏನು, ಅವನ ಮೂರೂ ಅಣ್ಣಂದಿರ ಒಬ್ಬೊಬ್ಬ ಮಗನ್ನ ಇಲ್ಲಾ ಮಗಳನ್ನ ಪಟ್ಟಣದಾಗ ಇಟ್ಟು ಸಾಲಿ ಕಲಿಸಬೇಕು.

ಅಡಿಗೆಪೂರ್ತೆಕ ಅಷ್ಟಽ ಬ್ಯಾರೆ ಇದ್ದಂಗ. ಹೊಲ ಮನಿ ಏನೂ ಬ್ಯಾರೆ ಇಲ್ಲ. ಕಾಮಣ್ಣವರ ಶಿವಪುತ್ರಪ್ಪನ ಮಾತಿಗೆ ಅಲ್ಲಿದ್ದ ಎಲ್ಲರೂ ಚಪ್ಪಾಳೆ ಹೊಡೆದರು. ರಾಜಣ್ಣನು ತಲೆದೂಗಿದ. ಮನಸಾರೆ ಒಪ್ಪಿಕೊಂಡ. ಆ ರಾತ್ರಿ ಲಲಿತಾಳಿಗೆ ಯಾವುದಕ್ಕೂ ಮನಸ್ಸಿಲ್ಲ. ಮುನಿಸಿನಲ್ಲಿ ಅವಳೆಂದಳು: ತ್ವಾಳದ ಬಾಯಾಗಿಂದ ಹುಲಿಬಾಯಿಗೆ ಬಿದ್ದಂಗಾತು. ಹಂಗಂದ್ರ ಇಲ್ಲೇ ಇರೋದಽ ಚುಲೋ ಇತ್ತಲ್ಲ. ಮುಖ ತಿರುವಿದ ಅವಳನ್ನು ತನ್ನೆಡೆಗೆ ತಿರುಗಿಸಿದ: ‘ಹುಟ್ಟಿದ ಮನಿಗೆ ಅಷ್ಟೂ ಮಾಡಲಿಲ್ಲಂದ್ರ ಹೆಂಗ?’ ರಾಜಣ್ಣ ಪ್ರೀತಿಯಿಂದ ಅವಳನ್ನು ಎಲ್ಲಿ ಬೇಕಾದಲ್ಲಿ ತಡವುತ್ತಿದ್ದರೆ ಬಾಯಿ ತಪ್ಪಿಯೊ ಇಲ್ಲಾ ಹಲ್ಲು ತಪ್ಪಿಯೊ ಇಲ್ಲಾ ಬೇರೆ ಹೋಗುತ್ತಿರುವ ಖುಶಿಗೋ ಇಲ್ಲಾ ಅಷ್ಟು ಮಕ್ಕಳನ್ನು ಇಟ್ಟುಕೊಂಡು ಸಾಕಬೇಕೆಂಬ ಬೇಸರವೋ ಲಲಿತಾ ಗಂಡನ ತುಟಿಯನ್ನು ತನ್ನ ಹಲ್ಲು ನಾಟುವಂತೆ ಬಲವಾಗಿ ಕಚ್ಚಿದಳು. ಅವನು ಅಯ್ಯೋ ಎಂದದ್ದು ನಡುಮನೆಯಲ್ಲಿ ಮಲಗಿದ್ದ ಎಲ್ಲರಿಗೂ ಕೇಳಿಸಿತು.
* * *

ತಾವು ಕಂಪಿಸಿದ್ದು, ಕನವರಿಸಿದ್ದು, ಮುನಿಸಿಕೊಂಡಿದ್ದು, ಮುಲುಗುಟ್ಟಿದ್ದು ಎಲ್ಲವೂ ಒಬ್ಬರಿಗೊಬ್ಬರಿಗೆ ಕೇಳುವಷ್ಟು ಇಕ್ಕಟ್ಟಿನ ಮನೆಯಲ್ಲಿ ತಾವು ಅಷ್ಟು ವರ್ಷ ಅದ್ಹೇಗೆ ಇದ್ದೆವು ಎಂದು ಲಲಿತಾ ಸೋಜಿಗದಲ್ಲಿ ಕಣ್ಣರಳಿಸುವಳು. ಕತ್ತಲಾಗುವುದಕ್ಕೆ ತಾವೆಷ್ಟು ಕಾಯುತ್ತಿದ್ದೆವು! ಅಷ್ಟಾದರೂ ತೂತುಬಿದ್ದಿರುವ, ಸೀಳಿರುವ, ಬಿದ್ದುಹೋಗಿರುವ ಮಣ್ಣಗೋಡೆಗಳ ಪಾರದರ್ಶಕ ಮನೆಯಲ್ಲಿ ಗೌಪ್ಯತೆಯೆಂಬುದು ಎಲ್ಲಿತ್ತು? ಬೇಕಾದಷ್ಟು ಗೌಪ್ಯವಾಗಿ ಮತ್ತು ಬೇಕಾದಷ್ಟು ಬಹಿರಂಗವಾಗಿರಲು ಈ ನಗರದಲ್ಲಿ ಎಷ್ಟೊಂದು ಜಾಗವಿದೆಯೆಂದು ಲಲಿತಾ ಬಾಡಿಗೆಮನೆಗೆ ಇನ್ನೂ ಸ್ವಲ್ಪ ಮೊದಲೆ ಬಾರದಿರುವುದಕ್ಕೆ ವ್ಯಥೆ ಪಡುವಳು.

ಅಕಸ್ಮಾತ್ ತಾನು ಒತ್ತಾಯ ಮಾಡದಿರುತ್ತಿದ್ದರೆ ಇನ್ನೂ ಆ ನರಕದಲ್ಲಿಯೆ ಬಿದ್ದಿರಬೇಕಾಗಿತ್ತೆಂದು ಗಂಡನ ಕಿವಿ ಜಗ್ಗುವಳು. ಕಲ್ಲಿನಲ್ಲಿಯೆ ಕೊರೆದಂತಿರುವ ಈ ಸವದತ್ತಿ ಶಹರದಲ್ಲಿ ಸಲೀಸಾಗಿ ಉಸಿರಾಡತೊಡಗಿದ ಮೇಲೆ ಅವರು ಇಲ್ಲಿಯವರೆ ಆಗಿಬಿಟ್ಟಿದ್ದಾರೆ. ಊರಿಗೆ ಹೋಗುವುದೆಂದರೆ ಆಕೆಯ ಮೈಯಿಗೆ ಮುಳ್ಳು ಚುಚ್ಚಿದಂತಾಗುತ್ತದೆ. ರಾಜಣ್ಣ ಮಾತ್ರ ಆಗಾಗ ಹೋಗಲೇಬೇಕು. ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ ಸಂತೆ-ಸರಂಜಾಮುಗಳೊಂದಿಗೆ, ಅಪ್ಪ-ಅವ್ವನ ಔಷಧಿ ಬಾಟಲಿಗಳೊಂದಿಗೆ ಆತ ತಪ್ಪದೆ ಹಾಜರಾಗುತ್ತಾನೆ. ರಾಜಣ್ಣ ಬರುತ್ತಿದ್ದಂತೆ ಡೊಳ್ಳುಹೊಟ್ಟೆಯ ಹಿರಿಯಣ್ಣನೊ ಕೈಕಾಲು ಬಿದ್ದಿರುವ ಕಿರಿತಮ್ಮನೊ ಅಂಗಳಕ್ಕೆ ಬಂದು ತಮ್ಮ ಹೊತ್ತು ತಂದಿದ್ದ ಒಜ್ಜೆಯನ್ನು ಇಳಿಸುವರು. ’ಸುಳ್ಳಿ ಹೋಳಿಗೆ-ಕರ್ಚಿಕಾಯಿ ನಾತ ಬರಾಕ ಹತ್ತೇತಿ’ ಎಂದು ಹೆಂಗಸರು-ಹುಡುಗರು ಕೂಡಿಯೆ ಆ ಗಂಟಿಗೆ ಮುಕುರುವರು. ’ಲಲಿತಕ್ಕ ಇಲ್ಲಿ ಕಲಿತದ್ದನ್ನು ಪ್ಯಾಟಿಗೆ ಹೋದ್ರೂ ಬಿಟ್ಟಿಲ್ಲ’.

ಆಕೆಯನ್ನು ನೆನೆಸುತ್ತ ಎಲ್ಲರೂ ಬಾಯಿ ಸಿಹಿ ಮಾಡಿಕೊಳ್ಳುವರು. ಇಷ್ಟು ಹಗುರವಾಗಿರುವ, ಹೂವಿನಂತಿರುವ ಉಂಡಿ-ಚಕ್ಕಲಿಯನ್ನು ಲಲಿತವ್ವ ಹೇಗೆ ತುಪ್ಪದಲ್ಲಿ ತಯಾರಿಸಿದ್ದಾಳು ಎಂದು ಹಿರಿಸೊಸೆ ಮಲ್ಲವ್ವ ಹಿಗ್ಗಿ ಹೀರೆಕಾಯಿಯಾಗುತ್ತ, ಆ ಕಂಪನ್ನು ಮೂಗಿಗೆ ಎಷ್ಟೋ ಹೊತ್ತು ಹಿಡಿಯುತ್ತ, ಒಂದೆರಡು ಉಂಡಿಗಳನ್ನು ಹಿರಿಮಗಳ ಪಾಠಿಚೀಲದೊಳಗೆ ತುರುಕಿದಳು. ‘ತಿಂದು ಸ್ವಲ್ಪ ಮೈ ಕೈ ತುಂಬಿಕೊಳ್ಳಲಿ, ಯಾವನಾದರೂ ನೌಕರಿಯವನು ಒಲಿದು ಬಂದಾನು.’ ತಾಯಿಯೊಬ್ಬಳ ಅವ್ಯಕ್ತ ಆಸೆ ಪುಟಿದೇಳುವುದು. ಅಣ್ಣ-ತಮ್ಮಂದಿರ ಹೋಳಿಗೆಯಂತಹ ಸಿಹಿಸಿಹಿ ಮಾತು ರಾಜಣ್ಣ ಬಂದ ಮೊದಲ ದಿನ ಮಾತ್ರ ಇರುತ್ತಿತ್ತು. ಮರುದಿನ ಅವನು ಹೊರಟು ನಿಂತಾಗ ಅಲ್ಲಿ ಸಮಸ್ಯೆಗಳ ಗುಡ್ಡವೆ ಎದ್ದು ನಿಲ್ಲುವುದು.

ಮಳೆಯಿಲ್ಲದೆ ಬೆಳೆ ಬರಲಿಕ್ಕೆ ಇದೇನು ಸರಕಾರಿ ನೌಕರಿಯಲ್ಲವೆಂದೂ, ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬಂದು ಹೋದರೆ ಇಲ್ಲಿ ಇದ್ದಂತೆ ಅಲ್ಲವೆಂದೂ ಮುದುಕ-ಮುದುಕಿಯ ಬಗ್ಗೆ ಅಷ್ಟು ಕಾಳಜಿಯಿದ್ದರೆ ಅವರನ್ನು ಅವನಿದ್ದಲ್ಲಿಗೆ ಕರೆದುಕೊಂಡು ಹೋಗಬಹುದೆಂದೂ ಹಿರಿಯರು ಬಿಸಿ ವಗ್ಗರಣಿ ಅವಲಕ್ಕಿಯನ್ನು ಮೆಲ್ಲುತ್ತ ನಗುನಗುತ್ತಲೆ ಹೇಳುತ್ತಾರೆ. ತನ್ನ ಕುಶಲವನ್ನು ಕೇಳಲು ಬಂದವರು ಕೊರಳಿಗೆ ಕೊಡಲಿಯೇಟು ಬೀಳುವಂತಹ ಮಾತುಗಳನ್ನು ಆಡುತ್ತಿದ್ದಾರೆ. ಮುದುಕ-ಮುದುಕಿಯರೂ ಅವರ ಕಡೆಗೆಯೆ. ಹೊಲಕ್ಕೆ ಬೋರ್ ಹೊಡೆಸಿದ್ದ ಆಫೀಸಿನ ಸಾಲದ ರೊಕ್ಕ ಕೇಳಬೇಕೆಂದು ರಾಜಣ್ಣ ಮನಸ್ಸು ಮಾಡುವಷ್ಟರಲ್ಲಿ ನಡುವಿನಮನಿ ನಾಗಪ್ಪ ಬಾಯಲ್ಲಿಯ ಎಲೆ ಅಡಿಕೆ ಉಗುಳಿ ಬಂದು ಅಂದ: ‘ರಾಜಣ್ಣ, ಭೂಮ್ಯಾಗ ಹಾಕಿದ ರೈತರ ರೊಕ್ಕ ಆಗಿಂದಾಗ ಮಣ್ಣಾಗಿ, ಕಲ್ಲಾಗಿ ಪರಿವರ್ತನಾ ಹೊಂದತೇತಿ. ಈಗ ನಿನ್ನ ರೊಕ್ಕ ಕೊಡಂದ್ರ ಅವರು ಕೊಳವಿಬಾವಿ ಪೈಪು ಕಿತ್ತ ಕೊಡಬೇಕು ಅಷ್ಟಽ. ನಿಂದೂ ಹೊಲ ಐತಿ. ಮ್ಯಾಲಾಗಿ ನಿನ್ನ ಪಾಲಿಗೆ ಬಂದ ಹೊಲದಾಗನಽ ಬೋರ್ ಐತಿ. ಅದೆಲ್ಲೂ ಹೋಗೋದಿಲ್ಲ. ಇನ್ನೊಂದೆರಡ ವರ್ಷ ತಡಕೋ.’

ಹೀಗೆ ಅಂದು ಅಂದು ಆಗಲೇ ಹತ್ತಾರು ವರ್ಷಗಳು ಕಳೆದೆವೆಂದು ಮನಸ್ಸಿನೊಳಗಡೆ ತಾಪದಿಂದ ಉದಯಿಸಿದ ಮಾತು ಇನ್ನೇನು ನಾಲಿಗೆ ದಾಟಿತೆನ್ನುವಾಗ ರಾಜಣ್ಣ ಅದನ್ನು ಕಷ್ಟಪಟ್ಟು ತಡೆದ. ತನ್ನ ಈ ಮುದಿ ಅಪ್ಪ ಎಂದು ಸಾಯುವನೋ, ಎಂದು ತನ್ನ ಕೈಗೆ ಆಸ್ತಿ ಬರುವುದೋ ಎಂದು ತನ್ನ ಮಕ್ಕಳ ಆಸೆಯನ್ನು ಈಡೇರಿಸಿಯೇನೋ ಎನ್ನುವ ಭಾವ ಅವನಲ್ಲಿ ಬತ್ತಿಹೋಗುತ್ತಿತ್ತು. ಸರೀಕದವರ ಎದುರು ತಾನು ಹಾಗೆಲ್ಲ ಮಾತನಾಡಬಾರದೆಂದು ಮನಸ್ಸು ಎಚ್ಚರಿಸುತ್ತಿತ್ತು. ಕಲಿತವನೇ ಹೀಗಾಡಿದರೆ ಮಣ್ಣಿನ ಮಕ್ಕಳಾದ ಅವರಿಂದ ತಾನು ಏನು ನಿರೀಕ್ಷಿಸಬಹುದು. ಅಷ್ಟಾದರೂ ಅವನ ಹೆಂಡತಿ ತುಂಬ ಆಸೆಪಟ್ಟಿದ್ದ ವಸ್ತುವೊಂದನ್ನು ತನ್ನ ಕೂಡುಮನೆಯಿಂದ ತರಲಾರದಕ್ಕೆ ಅವನು ಮನೆಗೆ ಬಂದು ಬಿಕ್ಕಳಿಸಿ ಅತ್ತುಬಿಟ್ಟ. ‘ಹೋಗಲಿ ಬಿಡ್ರಿ. ಅದೇನು ಬಂಗಾರಬುಟ್ಟಿ ಅಲ್ಲ’ ಎಂದು ಲಲಿತಾ ಕೂಡ ಕಣ್ಣೊರೆಸಿಕೊಂಡಳು.

ಅಂದು ಆದದ್ದು ಇಷ್ಟು: ಲಲಿತಾರ ತವರುಮನೆಯವರು ಅವಳಿಗೆ ಮದುವೆಯಲ್ಲಿ ಕೊಟ್ಟಿದ್ದ ಹಿತ್ತಾಳೆ ಬುಟ್ಟಿಯನ್ನು ಊರಿನಿಂದ ತರಲು ಹೇಳಿದ್ದಳು. ತಾವು ಬೇರೆಯಾದ ಮೇಲೆ ಉಪಯೋಗಿಸಿದರಾಯಿತೆಂದು ಎಲ್ಲ ಸೊಸೆಯಂದಿರು ತಮಗೆ ಅಮೂಲ್ಯವೆನಿಸಿದ್ದ ಏನೇನೋ ವಸ್ತುಗಳನ್ನು ತಮ್ಮ ತಮ್ಮ ಸಂದುಕದಲ್ಲಿ ಇಟ್ಟುಕೊಂಡಿದ್ದರು. ಕೆಲವು ಕಿಲುಬುಗಟ್ಟಿ, ಕೆಲವು ತುಕ್ಕು ಹಿಡಿದು ಹೋದ ಉದಾಹರಣೆಗಳೂ ಇದ್ದವು. ಬಾಡಿಗೆ ಮನೆಯಲ್ಲಿ ನೀರು ಕಾಯಿಸಲು ಹೊಸ ಹರವಿಯೊಂದನ್ನು ಲಲಿತ ಸಂತೆಯ ದಿನ ಖರೀದಿಸಿದ್ದಳು. ಅದಕ್ಕೆ ಸುಣ್ಣ ಬಳಿದು ಇಟ್ಟಿದ್ದರೂ ತಟಕ್ ತಟಕ್ ಎಂದು ಸೋರುತ್ತಿತ್ತು. ಅದರಿಂದ ಹಿತ್ತಾಳೆ ಬುಟ್ಟಿಯ ನೆನಪಾದದ್ದು. ಹತ್ತುಕಿಲೋ ತೂಗುತ್ತಿದ್ದ ಅದು ಅಪ್ಪಟ ಹಿತ್ತಾಳೆ ಲೋಹದಿಂದ ಮಿರುಗುತ್ತಿತ್ತು, ಮಿಂಚುತ್ತಿತ್ತು. ಕೊಡ ನೀರು ಹಿಡಿಯುವ ಅದು ತಮಗೆ ಒಳ್ಳೆಯ ಸಂದರ್ಭದಲ್ಲಿ ಉಪಯೋಗಕ್ಕೆ ಬಂತೆಂದು ಗಂಡನಿಗೆ ಮರೆಯದೆ ತರಲು ಹೇಳಿದ್ದಳು. ರಾಜಣ್ಣ ಒಳಗಿನ ಖೋಲೆಗೆ ಹೋಗಿ ತಾಸುಗಟ್ಟಲೆ ಹುಡುಕಿದ್ದ. ಹಿರಿಯತ್ತಿಗೆ ಮಲ್ಲವ್ವ ಬಂದು ಹುಡುಕಿಕೊಟ್ಟಳು. ದೂಳು ಬಡಿದು ಹೊಲಸಾಗಿದ್ದ ಬುಟ್ಟಿಯನ್ನು ಮಲ್ಲವ್ವ ಅಂಗಳದಲ್ಲಿ ಹುಣಿಸೇಹಣ್ಣು ಹಚ್ಚಿ ಥಳಥಳ ಹೊಳೆಯುವಂತೆ ತೊಳೆದಳು. ಕಣಕಣ ಬಿಸಿಲಿಗೆ ಹಿಡಿದಳು. ಇದೇನಽ ಯವ್ವಾ, ಮೈದುನ ಹೊಸಾ ಬುಟ್ಟಿ ತಂದಾನೇನು? ವೈನಿಯ ಭಾಗ್ಯ ತೆರೀತುಬಿಡು. ಎಲ್ಲರೂ ಬಂದು ಕೇಳುವವರೆ. ಬುಟ್ಟಿಯನ್ನು ಮುಟ್ಟುವವರೆ.

‘ಇನ್ನ ಮ್ಯಾಲ ಯಾಕ ತರ್ತಾನಽ ಯವ್ವಾ? ಇನ್ನೇನಿದ್ರೂ ಇಲ್ಲಿಂದ ತಗೊಂಡು ಹೋಗೋದು!’ ಅತ್ತಿಗೆಯ ಆಂಗಿಕ ಭಾವದಲ್ಲಿ ಶತಮಾನಗಳ ತಿರಸ್ಕಾರವಿತ್ತು. ನಿನ್ನೆಯಷ್ಟೆ ತಾನು ಅಕ್ಕಿಯ ಚೀಲವನ್ನು ಹೆಗಲ ಮೇಲೆ ತಾನು ಹೊತ್ತು ತಂದಿದ್ದೆ! ಲಲಿತಾ ಮಾಡಿದ ಕರ್ಚಿಕಾಯಿ, ಸುರುಳಿಹೋಳಿಗೆ ಚೀಲದಲ್ಲಿ ತುಂಬಿತಂದಿದ್ದೆ! ಹೊಲಕ್ಕೆ ಕೊಳವೆ ಬಾವಿಯ ಹೆಣಭಾರದ ಹಸಿರು ಪೈಪನ್ನು ಹೊತ್ತು ತಂದಿದ್ದೆ! ಈ ಮನೆಯ ಸಲುವಾಗಿ ತನ್ನ ಹೆಗಲು ಜೋತುಬಿದ್ದವು. ತೋಳುಗಳ ಶಕ್ತಿ ಸೋರಿಹೋಯಿತು. ಹಣೆ ಸುಕ್ಕುಗಟ್ಟಿತು. ಆದರೂ ತಾನು ಎಷ್ಟು ಬೇಗ ಹೊರಗಿನವನಾಗಿಬಿಟ್ಟೆ! ರಾಜಣ್ಣ ಕಟಕಟ ಹಲ್ಲು ಕಡಿದ. ಈ ಹಳ್ಳಿಯಲ್ಲಿ ಏನು ಕೂಡದಿದ್ದರೂ ಮಂದಿ ಮಾತ್ರ ಕ್ಷಣಾರ್ಧದಲ್ಲಿ ಕೂಡುತ್ತಾರೆ ಎನಿಸಿತವನಿಗೆ. ಈ ಇಡೀ ಮನೆಯ ಐಶ್ವರ್ಯ ಒಯ್ಯುತ್ತಿದ್ದಾನೆ ಎನ್ನುವ ಹಾಗೆ ಎಲ್ಲರೂ ಬಂದು ಅವನ ಹೆಗಲಿಗೇರಬೇಕಾಗಿದ್ದ ಹಿತ್ತಾಳೆಯ ಬುಟ್ಟಿಯನ್ನು ನೋಡುವವರೆ! ಹಿರಿಯರೂ ಅಷ್ಟರಲ್ಲಿ ಕೊಳವೆಬಾವಿಯ ಸಾಲದ ಸಂಬಂಧ ಚರ್ಚೆಗೆ ಸುರು ಮಾಡಿದರು. ತನ್ನ ಅಣ್ಣಂದಿರು ಸಾಲದ ಹೊರೆಯಿಂದ ಮಾತಿಲ್ಲದೆ ಕುಳಿತಿದ್ದರು. ಜನ್ಮಜನ್ಮಾಂತರ ಅವರು ಸಾಲದಲ್ಲಿಯೆ ಮುಳುಗಿರುವವರ ಹಾಗೆ ಅವರ ಮುಖಗಳು ಕಪ್ಪಾಗಿದ್ದವು.

‘ಇಂದಲ್ಲ, ನಾಳೆ ಸಾಲ ತೀರೀತು ನಿಮ್ಮ ಮಕ್ಕಳು ಓದುತ್ತಿದ್ದಾರೆ’ ಎಂದು ಅವರಿಗೆ ರಾಜಣ್ಣನೆ ಧೈರ್ಯ ಹೇಳಿದ. ಅಷ್ಟರಲ್ಲಿ ಎಂಥ ಮನೆಯನ್ನು ಎಂಥದನ್ನಾಗಿ ಮಾಡಿದಿರಲ್ಲೋ ಎಂದು ಮುದುಕ ಎಲ್ಲರನ್ನು ಬೈಯ್ಯತೊಡಗಿದ. ಅವನಿಗೆ ಅಸಾಧ್ಯ ಕೆಮ್ಮು ಬಂತು. ಇದ್ದಕ್ಕಿದ್ದಂತೆ ಅಜ್ಜ ವಾ, ವಾ ಎಂದು ವಾಂತಿ ಮಾಡಿಕೊಳ್ಳುವ ಹಾಗೆ ಕಾರತೊಡಗಿದ. ‘ಮುದುಕನ್ನ ಹಿತ್ತಲಿಗೆ ಕರ್ಕೊಂಡು ಹೋಗ್ರಿ’ ಎಂದು ಒಬ್ಬರೆಂದರೆ ‘ಮನಿಮುಂದಿನ ಕಟ್ಟಿಮ್ಯಾಲ ಕುಂಡರಿಸ್ರಿ. ಅಲ್ಲೆ ವಾಂತಿ ಮಾಡಿಕೊಳ್ಳಲಿ. ಇಷ್ಟ ವಯಸ್ಸಾದ್ರೂ ಭಜಿ, ಚುರುಮುರಿ ತಿನ್ನೋದು ಬಿಡಂಗಿಲ್ಲ’ ಎಂದು ಮತ್ತೊಬ್ಬರೆಂದರು. ಇನ್ನೇನು ಹಾಸಿಗೆಯಲ್ಲಿಯೆ ಅಜ್ಜ ವಾಂತಿ ಮಾಡಿಕೊಂಡ ಎನ್ನುವಾಗ ಹಿರಿಸೊಸೆ ಓಡಿಬಂದು ಅಲ್ಲಿಯೆ ಪಡಸಾಲೆಯಲ್ಲಿದ್ದ, ಥಳಥಳ ಹೊಳೆಯುತ್ತಿದ್ದ, ಎಲ್ಲರ ಕಣ್ಣು ಕುಕ್ಕುತ್ತಿದ್ದ ಹಿತ್ತಾಳೆಯ ಬುಟ್ಟಿಯನ್ನು ಮಾವನ ಬಾಯಿಗೆ ಹಿಡಿದಳು. ನಾನಾ ಕ್ಷಾರ-ಕಲ್ಮಶಗಳು, ಅಜೀರ್ಣ ಪದಾರ್ಥಗಳು, ಕಲ್ಲು-ಕಬ್ಬಿಣದ ತಂತಿಗಳು, ಹುಳೀತೇಗು, ಆಮ್ಲಗಳು, ಕೆಂಪು-ಕರ್ರಗಿನ ದ್ರವಗಳು ಕ್ಷಣಾರ್ಧದಲ್ಲಿ ಆ ಬುಟ್ಟಿಯನ್ನು ದೊಡ್ಡ ಸರೋವರದಂತೆ ತುಂಬಿಕೊಂಡವು.

‘ನಿನ್ನ ಪಾಲಿನ ಹೊಲ-ಮನಿ ಬೇಕು ಅಂತಿದ್ದೆಲ್ಲಪಾ ತಗೋ; ತಗೊಂಡ್ಹೋಗು’ ನಡುವಿನಮನಿ ನಾಗಪ್ಪನ ಮಾತಿಗೆ ಅಲ್ಲಿರುವ ಎಲ್ಲರೂ ಇಡೀ ಮನೆ ಹಾರಿಹೋಗುವಂತೆ ನಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT