ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರನ ಗಲ್ಲು ಶಿಕ್ಷೆಗೆ ‘ಸುಪ್ರೀಂ’ ತಡೆ

ದೆಹಲಿಯ ಕೆಂಪು ಕೋಟೆ ಮೇಲೆ ಗುಂಡಿನ ದಾಳಿ ಪ್ರಕರಣ
Last Updated 28 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೆಂಪು ಕೋಟೆ ಮೇಲೆ 2000­ನೇ ಇಸ್ವಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಅಪ­ರಾಧಿ ಲಷ್ಕರ್‌–ಎ–ತೈಯಬಾ (ಎಲ್‌ಇಟಿ) ಸಂಘ­ಟನೆ ಭಯೋತ್ಪಾದಕ  ಮೊಹ­ಮದ್‌­ ಆರಿಫ್‌ ಅಲಿಯಾಸ್‌ ಅಶ್ಫಾಕ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಸುಪ್ರೀಂ­ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಈ ಸಂಬಂಧ ಮುಖ್ಯ ನ್ಯಾಯ­ಮೂರ್ತಿ ಆರ್‌.ಎಂ. ಲೋಧಾ ಅವರ ನೇತೃ­ತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

‘13 ವರ್ಷಗಳಿಂದ ನಾನು ಜೈಲಿನಲ್ಲಿ ಇರುವು­ದ­ರಿಂದ ಇದು ಜೀವಾವಧಿ ಸೆರೆವಾಸಕ್ಕೆ ಸನಿಹದ ಶಿಕ್ಷೆಯೇ ಆಗಿದೆ. ಮತ್ತೆ ಮರಣದಂಡನೆ ಜಾರಿ ಮಾಡಿ­ದರೆ ಅದು ಒಂದೇ ಅಪರಾಧಕ್ಕೆ ಎರಡು ಸಾರಿ ಶಿಕ್ಷೆ ವಿಧಿಸಿ­ದಂತೆ ಆಗುತ್ತದೆ. ಆದ್ದ­ರಿಂದ ಗಲ್ಲು ಶಿಕ್ಷೆ ಜಾರಿ ಮಾಡ­ದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ­ ಅಶ್ಫಾಕ್‌ ‘ಸುಪ್ರೀಂ’ ಗೆ ಅರ್ಜಿ ಸಲ್ಲಿಸಿದ್ದ.

‘ಮಂದಗತಿಯಲ್ಲಿ ಸಾಗಿದ ನ್ಯಾಯಾಂಗ ಪ್ರಕ್ರಿಯೆ ಮತ್ತು ಗಲ್ಲು ಶಿಕ್ಷೆ ಜಾರಿ ಮಾಡಲು ಸರ್ಕಾರ­ದಿಂದಾದ ವಿಳಂಬದ ಕಾರಣ ಸುದೀರ್ಘ ಕಾಲದಿಂದ ಜೈಲಿನಲ್ಲಿದ್ದೇನೆ. ಇದರಿಂದ ದೈಹಿಕ ಮತ್ತು ಮಾನಸಿಕ ಅನಾ­ರೋಗ್ಯಕ್ಕೆ ತುತ್ತಾಗಿದ್ದೇನೆ’ ಎಂದೂ ಅಶ್ಫಾಕ್‌ ಅರ್ಜಿಯಲ್ಲಿ ವಿವರಿಸಿದ್ದಾನೆ.

ಹಿನ್ನೆಲೆ: ಕೆಂಪು ಕೋಟೆ ಮೇಲೆ 2000ರದ ಡಿ. 22­ರಂದು ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ­ದಂತೆ ಸೆಷನ್ಸ್‌ ನ್ಯಾಯಾಲಯ ಅಶ್ಫಾಕ್‌ಗೆ ಮರಣದಂಡನೆ ವಿಧಿಸಿತ್ತು. ಈ ದಾಳಿಯಲ್ಲಿ ಇಬ್ಬರು ಯೋಧರು ಮತ್ತು ಒಬ್ಬ ನಾಗರಿಕ ಸಾವನ್ನ­ಪ್ಪಿದ್ದರು.

ಸೆಷನ್ಸ್‌ ಕೋರ್ಟ್‌ ನೀಡಿದ ತೀರ್ಪನ್ನು ದೆಹಲಿ ಹೈ­ಕೋರ್ಟ್‌ 2007ರ ಸೆ. 13ರಂದು ದೃಢಪಡಿ­ಸಿತ್ತು. ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಅಶ್ಫಾಕ್‌ ಸಲ್ಲಿ­ಸಿದ್ದ ಅರ್ಜಿ­ಯನ್ನು 2011­ರ ಆ.10ರಂದು ವಜಾ ಮಾಡಿದ್ದ ಸುಪ್ರೀಂ ಕೋರ್ಟ್‌, ‘ಇದೊಂದು ಸೊಕ್ಕಿ­ನಿಂದ ಕೂಡಿದ ಭಂಡ­­ತ­­ನದ ಕೃತ್ಯ. ದೇಶದಲ್ಲಿ ಭೀತಿ ಹುಟ್ಟಿಸಲು ಪಾಕಿಸ್ತಾನ ದುಡ್ಡು­ಕೊಟ್ಟು ನಡೆಸಿದ ಹೇಯ ಕಾರ್ಯ. ಆದ್ದ­ರಿಂದ ಅಪರಾಧಿಗೆ ವಿಧಿಸಿರುವ ಗಲ್ಲು ಶಿಕ್ಷೆ ಸರಿಯಾಗಿಯೇ ಇದೆ’ ಎಂದು ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT