ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಸಂಕ್ರಾಂತಿ ವಿಶೇಷ

Last Updated 9 ಜನವರಿ 2015, 19:30 IST
ಅಕ್ಷರ ಗಾತ್ರ

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಇದು ಪ್ರೀತಿ ವಿಶ್ವಾಸಗಳನ್ನು ಬೆಳೆಸುವ ಹಬ್ಬ. ದುಡಿಮೆಯ ಶ್ರಮ ಫಲವಾಗಿ ಅರಳಿನಿಂತ ಹೊತ್ತಿದು. ದುಡಿದು ದಣಿದ ಮೈ, ಬಾಯಿಗೆ ಸಿಹಿಯುಣ್ಣಿಸುವ ಸಂಕ್ರಾಂತಿ  ‘ಎಳ್ಳು ತಿಂದು ಒಳ್ಳೆ ಮಾತಾಡು’ ಸಂದೇಶವನ್ನು ಹರಡುತ್ತದೆ. ಜಗತ್ತಿಗೆ ಬೆಳಕು ನೀಡುವ ಸೂರ್ಯನ ಚಲನೆಗೆ ಸಂಬಂಧಿಸಿದ ಹಬ್ಬವೇ ‘ಸಂಕ್ರಮಣ’ ಅಥವಾ ‘ಮಕರ ಸಂಕ್ರಾಂತಿ’. ಇದನ್ನು ಉತ್ತರಾಯಣ ಪುಣ್ಯ ಕಾಲ ಎಂದೂ ಕರೆಯುತ್ತಾರೆ. ರೈತರು ಬೆಳೆಗಳನ್ನು ಕೂಯ್ಲು ಮಾಡಿ ಕಣದಲ್ಲಿ ಹಾಕಿ ಶುದ್ಧ ಮಾಡಿ ದವಸ- ಧಾನ್ಯಗಳನ್ನು ರಾಶಿ ಹಾಕಿ ಪೂಜಿಸಿ ಭೂಮಿ ತಾಯಿಯ ಋಣ ಸ್ಮರಣೆ ಮಾಡುವ ಸಂಪ್ರದಾಯವಿದೆ.

ಅಂದು ಹೊಸ ಅಕ್ಕಿ, ಹೆಸರು ಬೇಳೆಯಿಂದ ಮಾಡುವ ಹುಗ್ಗಿ, ಹೊಸ ಹುಣಸೆ ಹಣ್ಣಿನಿಂದ ತಯಾರಿಸುವ ಹಸಿಹುಳಿ, ಸಿಹಿ ಪೊಂಗಲ್, ಹೊಸ ಹುಣಸೆಕಾಯಿ ತೊಕ್ಕು... ಮಾಡಿ ಮನೆ ಮಂದಿಯೆಲ್ಲ ಸಂತೋಷದಿಂದ ಊಟ ಮಾಡುವರು. ಆ ದಿನ ವಿಶೇಷ ಊಟ ಮಾಡಿ ಸಂತೋಷದಿಂದ ಆಚರಿಸೋಣ. ಸಂಕ್ರಾಂತಿಯ ವಿಶೇಷ ಅಡುಗೆ ತಯಾರಿಸುವ ವಿಧಾನದ ಮಾಹಿತಿ ಇಲ್ಲಿದೆ...

ಹುಗ್ಗಿ
ಸಾಮಗ್ರಿ: 4ಕಪ್ ಅಕ್ಕಿ, 2 ಕಪ್ ಹೆಸರು ಬೇಳೆ, 50 ಗ್ರಾಂ ಶೇಂಗಾ, ಕಾಲು ಚಮಚ ಅರಿಶಿಣ, 1ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ ಮೆಣಸಿನ ಕಾಳು, ಅರ್ಧ ಗಿಟಕು ತುರಿದ ಕೊಬ್ಬರಿ, 1 ಚಮಚ- ತುಪ್ಪ, ರುಚಿಗೆ ಉಪ್ಪು.

ವಿಧಾನ: ಮೆಣಸು, ಜೀರಿಗೆ, ಕೊಬ್ಬರಿಯನ್ನು ತುಪ್ಪದಲ್ಲಿ ಹುರಿದು ಪುಡಿಮಾಡಿಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 10 ಕಪ್ ನೀರು ಹಾಕಿ, ಅದರಲ್ಲಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ಹಾಕಿ, ಅರಿಶಿಣ, ಉಪ್ಪು, ಶೇಂಗಾ, ತಯಾರಿಸಿಟ್ಟುಕೊಂಡ ಪುಡಿಯನ್ನು ಹಾಕಿ, ಕುಕ್ಕರಿನಲ್ಲಿ ಇಟ್ಟು 4 ಸೀಟಿ ಕೂಗಿಸಿ. 5 ನಿಮಿಷದ ನಂತರ ತೆಗೆದು ಬೆಣ್ಣೆ ಹಾಕಿಕೊಂಡು ಪೌಷ್ಟಿಕವಾದ ಹುಗ್ಗಿಯನ್ನು ಸವಿಯಿರಿ.

ಶೇಂಗಾ ಹೋಳಿಗೆ

ಹಬ್ಬ ಎಂದ ಮೇಲೆ ಸಿಹಿತಿನಿಸು ಇರಲೇ ಬೇಕಲ್ಲ? ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ ಸಂಕ್ರಾಂತಿಯ ವಿಶೇಷ. ಒಂದು ವಾರವಾದರೂ ಕೆಡದಿರುವ ಇವುಗಳನ್ನು ಎರಡು ದಿನ ಮುಂಚಿತವಾಗಿಯೇ ಮಾಡಿಡುತ್ತಾರೆ.

ಸಾಮಗ್ರಿ: ಅರ್ಧ ಕೆ.ಜಿ ಹುರಿದ ಶೇಂಗಾ, ಸಮಪ್ರಮಾಣದ ಪುಡಿ ಮಾಡಿದ ಬೆಲ್ಲ, ಒಂದು ಪಾವು ಮೈದಾ ಹಿಟ್ಟು.
ವಿಧಾನ: ಎಳ್ಳು, ಶೇಂಗಾ, ಬೇರೆ ಬೇರೆಯಾಗಿ ಕೆಂಪಗೆ ಹುರಿದು, ಸಮ ಪ್ರಮಾಣದಲ್ಲಿ ಬೆಲ್ಲ ಹಾಕಿ ಸಣ್ಣಗೆ ಕುಟ್ಟಬೇಕು. ಮಿಕ್ಸಿಗೂ ಹಾಕಬಹುದು. ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಮೈದಾಹಿಟ್ಟಿನ ಕಣಕದಲ್ಲಿ ತುಂಬಿ ಲಟ್ಟಿಸಿ ತವಾದ ಮೇಲೆ ಬೇಯಿಸಿ ತೆಗೆದು ಆರಿದ ಮೇಲೆ ಮಕ್ಕಳಿಗೆ ತಿನ್ನಲು ಕೊಟ್ಟರೆ ಯಾವ ಬೇಕರಿ ತಿಂಡಿಯನ್ನೂ ಬಯಸಲಾರರು.

ಮಿಶ್ರ ತರಕಾರಿ ಪಲ್ಯ

ಸಂಕ್ರಾಂತಿಯಂದು ವಿಶೇಷವಾಗಿ ನೆಲದ ಕೆಳಭಾಗದಲ್ಲಿ ಬೆಳೆಯುವ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡುವ ಪಲ್ಯ ಎಲ್ಲರ ಮನೆಯಲ್ಲೂ ಕಡ್ಡಾಯವಾಗಿ ಇದ್ದೇ ಇರುತ್ತದೆ.

ಸಾಮಗ್ರಿ: ಗೆಣಸಿನ ಹೋಳು ಒಂದು ಬಟ್ಟಲು,ಗಜ್ಜರಿ ಹೋಳು ಒಂದು ಬಟ್ಟಲು, ಆಲುಗಡ್ಡೆ ಹೋಳು ಒಂದು ಬಟ್ಟಲು, ಮೂಲಂಗಿ ಹೋಳು ಒಂದು ಬಟ್ಟಲು, ಹಸಿ ಈರುಳ್ಳಿ ಹೋಳು ಒಂದು ಬಟ್ಟಲು, ಹಸಿ ಶೇಂಗಾ ಕಾಳು ಅರ್ಧ ಬಟ್ಟಲು, ಹಸಿ ಕಡಲೆ ಕಾಳು ಅರ್ಧ ಬಟ್ಟಲು, ಸಿಹಿ ಕುಂಬಳಕಾಯಿ ಹೋಳು ಒಂದು ಬಟ್ಟಲು.

ವಿಧಾನ: ಗೆಣಸು, ಗಜ್ಜರಿ, ಮೂಲಂಗಿ, ಹಸಿ ಶೇಂಗಾ ಕಾಳು, ಹಸಿ ಉಳ್ಳಾಗಡ್ಡಿ, ಜೊತೆಗೆ ಸಿಹಿಕುಂಬಳ ಕಾಯಿ, ಅವರೆಕಾಳು, ಹಸಿ ಕಡಲೆಕಾಳು, ಇವಿಷ್ಟನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಂಡು ಒಟ್ಟಾಗಿ ಬೇಯಿಸಬೇಕು. ಕುಕ್ಕರ್‌ನಲ್ಲಿ ಒಂದು ಸೀಟಿ ಕೂಗಿದರೂ ಸಾಕು, ಅದಕ್ಕೆ ಉಪ್ಪು, ಹಸಿಖಾರ (ರುಬ್ಬಿದ ಹಸಿಮೆಣಸಿನಕಾಯಿ) ಹಾಕಿ ಒಗ್ಗರಣೆ ಕೊಟ್ಟರೆ ರುಚಿಕರ, ಪೌಷ್ಠಿಕತೆಯಿಂದ ಕೂಡಿದ ಪಲ್ಯ ರೆಡಿ.


ಭರ್ತಿ ತರಕಾರಿಯ ಭರ್ತ 
ಸಾಮಗ್ರಿ:
ಗಜ್ಜರಿ: 4–5 ಮೆಂತ್ಯೆ ಸೊಪ್ಪು, 2 ಕಟ್ಟು ಈರುಳ್ಳಿ ಸೊಪ್ಪು:2–3ಕಟ್ಟು, ಹಸಿ ಕಡಲೆಕಾಳು, ಹಸಿ ಸೇಂಗಾ, ಅವರೆಕಾಳು,

ತೊಗರಿಕಾಳು:ಎಲ್ಲಾ ಕೂಡಿ ಕಾಲು ಕೆ.ಜಿಯಷ್ಟು. ಎಲ್ಲ್ಲ ಬಗೆಯ ತರಕಾರಿಗಳು (ಬೀನ್ಸು 10–12,  ಕೋಸು ಅರ್ಧ, ಡೊಣ್ಣೆಮೆಣಸಿನಕಾಯಿ,1 ಬದನೆಕಾಯಿ, 2ಸೌತೆಕಾಯಿ,2 ಬುಡಮಿಕಾಯಿ,ಅರ್ಧ  ತೊಂಡೆಕಾಯಿ... 3–4, ಗೆಣಸು–1), ಬೋರೆಹಣ್ಣು(ಚಿಕ್ಕದು):15–20, ಹುಣಸೆಹುಳಿ:ನಿಂಬೆಗಾತ್ರ, ಹಸಿ ಹುಣಸೆಕಾಯಿ: ಎರಡು, ಬಿಳಿಎಳ್ಳು ಪುಡಿ: ಒಂದು ಹಿಡಿ, ಕಡ್ಲೆಬೀಜದ ಪುಡಿ: ಒಂದು ಹಿಡಿ, ಹಸಿ ಮೆಣಸಿನಕಾಯಿ: ರುಚಿಗೆ ತಕ್ಕಷ್ಟು, ಬೆಲ್ಲ, ಉಪ್ಪು:ರುಚಿಗೆ ತಕ್ಕಷ್ಟು,  ಒಗ್ಗರಣೆಗೆ:ಸಾಸಿವೆ, ಜೀರಿಗೆ, ಕರಿವೆ ಸೊಪ್ಪು, ಕೊತ್ತಂಬರಿ ಸೊಪ್ಪು.

ವಿಧಾನ: ಎಲ್ಲ ತರಕಾರಿಗಳು (ಮೆಂತ್ಯೆ, ಈರುಳ್ಳಿ ಸೊಪ್ಪು ಬಿಟ್ಟು), ಕಾಳುಗಳು, ಹುಣಸೆಕಾಯಿ, ಬೋರೆಹಣ್ಣು ಕುಕ್ಕರಿನಲ್ಲಿ ಚೆನ್ನಗಿ ಬೇಯಿಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಕಾದನಂತರ ಸಾಸಿವೆ, ಜೀರಿಗೆ, ಕರಿವೆ ಸೊಪ್ಪು ಹಾಕಿದ ನಂತರ ಅರಿಶಿಣ ಪುಡಿ ಹಾಕಿ ನಂತರ ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪು, ಈರುಳ್ಳಿ ಸೊಪ್ಪು ಹಾಕಿ ಬಾಡಿಸಿಕೊಳ್ಳಬೇಕು. ಬೇಯಿಸಿದ ತರಕಾರಿಗಳನ್ನು ಸ್ವಲ್ಪ ಮಸೆದು ಒಗ್ಗರಣೆಯಲ್ಲಿ ಹಾಕಿ. ಹುಣಸೆ ರಸ ಹಿಂಡಿ, ಬೆಲ್ಲ, ಉಪ್ಪು ಹಾಕಿ ಕುದಿಯಲು ಇಡಿ. 5 ನಿಮಿಷದ ನಂತರ ಸೇಂಗಾ ಮತ್ತು ಎಳ್ಳು ಪುಡಿ ಹಾಕಿ. ಒಂದು ಕುದಿ ಬಂದ ಮೇಲೆ ಕೆಳಗಿಳಿಸಿ. ಈ ರುಚಿಕಟ್ಟಾದ ಭರ್ತವನ್ನು ಕಡಕ್ ಸಜ್ಜೆ ರೊಟ್ಟಿ ಜೊತೆ ಸವಿದು ನೋಡಿ.

ಪಚಡಿ
ಕ್ಯಾಲ್ಸಿಯಂ, ಹಿಮೋಗ್ಲೋಬಿನ್ ಕೊರತೆಯುಂಟಾದರೆ ಹಸಿ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಆದರೆ ಇಲ್ಲಿ ಹೆಚ್ಚು ಕಡಿಮೆ ದಿನವೂ ರೊಟ್ಟಿ, ಚಪಾತಿಗೆ ನೆಂಜಿಕೊಳ್ಳಲು ಪಚಡಿ ಬೇಕೇ ಬೇಕು.

ಸಾಮಗ್ರಿ: ಒಂದು ಕಟ್ಟು ಪಾಲಕ್‌ ಸೊಪ್ಪು, ಒಂದು ಕಟ್ಟು ಮೆಂತ್ಯೆ ಸೊಪ್ಪು, ಒಂದು ಹಿಡಿ ಹಕ್ಕರಕಿ ಸೊಪ್ಪು, ಒಂದು ಕಟ್ಟು ಮೂಲಂಗಿ ಸೊಪ್ಪು, ನಾಲ್ಕು ಟೀ ಚಮಚ ಹುರಿದ ಅಗಸೆ ಪುಡಿ, ನಾಲ್ಕು ಟೀ ಚಮಚ ಹುರಿದ ಗುರೆಳ್ಳು ಪುಡಿ, ಎರಡು ಟೀ ಚಮಚ ಖಾರದಪುಡಿ. ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮೆಂತ್ಯೆ, ಪಾಲಕ್, ಹಕ್ಕರಕಿ, ಮೂಲಂಗಿ, ಈರುಳ್ಳಿ ಸೊಪ್ಪು, 2 ಈರುಳ್ಳಿ ಎಲ್ಲಾ ಸೊಪ್ಪುಗಳನ್ನು ತೊಳೆದು ಹೆಚ್ಚಿ ಅದಕ್ಕೆ ಉಪ್ಪು, ಖಾರದ ಪುಡಿ, ಅಗಸೆ ಪುಡಿ, ಗುರೆಳ್ಳು ಪುಡಿ ಹಾಕಿ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿದರೆ ಆರೋಗ್ಯಕರ ಪಚಡಿ ಸಿದ್ಧ. ಇನ್ನು ಇವುಗಳ ಜೊತೆ ತಿನ್ನಲು ಸಂಕ್ರಾಂತಿಯಂದು ಧಪಾಟಿ ಮಾಡುತ್ತಾರೆ.

ಹುಣಸೆಕಾಯಿ ತೊಕ್ಕು

ಸಾಮಗ್ರಿ: 5ರಿಂದ 6 ಹುಣಸೆಕಾಯಿ, 10–15 ಕೆಂಪಾದ ಹಣ್ಣು ಮೆಣಸಿನಕಾಯಿ, 2 ಟೇಬಲ್ ಚಮಚ ಉಪ್ಪು, ಕಾಲು ಚಮಚ ಅರಿಶಿಣ, 1 ಟೀ ಚಮಚ ಜೀರಿಗೆ, ಸ್ವಲ್ಪ ಇಂಗು, 1 ಟೀ ಚಮಚ ಎಳ್ಳಿನ ಪುಡಿ.

ವಿಧಾನ: ಹುಣಸೆಕಾಯಿಯನ್ನು ನಾರು ತೆಗೆದು ಸಣ್ಣಗೆ ಹೆಚ್ಚಿ, ಮೆಣಸಿನಕಾಯಿ ತುಂಬು ತೆಗೆದು ಸಣ್ಣಗೆ ಹೆಚ್ಚಿ, ಸ್ವಲ್ಪ ಎಣ್ಣೆ ಹಾಕಿ ತಾಳಿಸಬೇಕು. ಇದಕ್ಕೆ ಜೀರಿಗೆ, ಅರಿಶಿಣ, ಉಪ್ಪು, ಇಂಗು ಹಾಕಿ ರುಬ್ಬಬೇಕು. ಮೇಲೆ ಒಗ್ಗರಣೆ ಹಾಕಿದರೆ ಘಂ ಎನ್ನುವ ಹುಣಸೆ ತೊಕ್ಕು ರೆಡಿ.

ಧಪಾಟಿ

ಸಾಮಗ್ರಿ: ಒಂದು ಪಾವು ಜೋಳದ ಹಿಟ್ಟು, ಸ್ವಲ್ಪ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಟೀ ಚಮಚ ಅರಿಶಿಣ ಪುಡಿ, ಒಂದು ಟೀ ಚಮಚ ಜೀರಿಗೆ.

ವಿಧಾನ: ಜೋಳದ ಹಿಟ್ಟಿಗೆ ಅರಿಶಿಣ ಉಪ್ಪು, ಖಾರದಪುಡಿ, ಜೀರಿಗೆ ಹಾಕಿ, ಕುದಿಯುವ ನೀರನ್ನು ಹಾಕಿ ಚೆನ್ನಾಗಿ ನಾದಬೇಕು. ನಂತರ ಕೈಯಿಂದ ತಟ್ಟಿ ತವಾದ ಮೇಲೆ ಒಂದು ಬದಿ ನೀರು ಹಚ್ಚಿ, ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಉಪ್ಪು, ಖಾರದ ರುಚಿಯಾದ ಧಪಾಟಿ ತಿನ್ನಲು ತಯಾರು.

ಹಸಿಹುಳಿ
ಸಾಮಗ್ರಿ: 50 ಗ್ರಾಂ ಹೊಸ ಹುಣಸೆ ಹಣ್ಣು, 100 ಗ್ರಾಂ ಬೆಲ್ಲ, 100 ಗ್ರಾಂ ಬಿಳಿ ಎಳ್ಳು (ಹುರಿದು ಪುಡಿ ಮಾಡಿದ್ದು), ಉಪ್ಪು ರುಚುಗೆ.

ವಿಧಾನ: ಹುಣಸೆಹಣ್ಣನ್ನು ನೆನೆಹಾಕಿ 2 ಬಟ್ಟಲಿನಷ್ಟು ಹುಣಸೆ ರಸವನ್ನ ತೆಗೆದಿಟ್ಟುಕೊಳ್ಳಬೇಕು. ಇದಕ್ಕೆ ಪುಡಿ ಮಾಡಿದ ಬೆಲ್ಲ ಮತ್ತು ಎಳ್ಳಿನ ಪುಡಿ, ಉಪ್ಪು ಹಾಕಿ ಕಲಸಿ, ಸಾಸಿವೆ, ಜೀರಿಗೆಯ ಒಗ್ಗರಣೆ ಕೊಡಬೇಕು. ಇದನ್ನು ಹುಗ್ಗಿಗೆ ಹಾಕಿಕೊಂಡು ತಿನ್ನಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT